ADVERTISEMENT

ಸ್ಯಾನಿಟೈಸರ್‌ನಿಂದ ಒಣ ಚರ್ಮ ಸಮಸ್ಯೆಯೇ?

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:30 IST
Last Updated 14 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ಒಂದು ವರ್ಷದಿಂದ ನೀವು ಎಷ್ಟು ಸಲ ಕೈಗೆ ಸ್ಯಾನಿಟೈಸರ್‌, ಸೋಪ್‌ ಹಾಕಿ ಉಜ್ಜಿ ಉಜ್ಜಿ ತೊಳೆದಿರಬಹುದು? ನೂರಾರು ಅಲ್ಲ, ಸಾವಿರಾರು ಸಲ ಇರಬಹುದು ಅಲ್ಲವೇ? ಈ ಕೋವಿಡ್‌ ಸಂದರ್ಭದಲ್ಲಿ ವೈರಸ್‌ ಅನ್ನು ದೂರ ಇಡಲು ಪದೇ ಪದೇ ಕೈ ತೊಳೆದು ಸ್ವಚ್ಛತೆ ಕಾಪಾಡುವುದೇನೋ ಸರಿ. ಆದರೆ ಅಂಗೈ ಚರ್ಮ ಒಣಗಿಕೊಂಡು ಹುರುಪೆ ಏಳುವುದು, ದೊರಗಾಗುವುದು, ಕೆಂಪಗಾಗುವುದು, ಸಣ್ಣ ಬಿರುಕು ಕಾಣಿಸುವಂತಹ ಸಮಸ್ಯೆಗಳು ಹಲವರಲ್ಲಿ ಉದ್ಭವಿಸಿವೆ. ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ ಬಳಸಿದರಂತೂ ಇಂತಹ ಸಮಸ್ಯೆಗಳು ಹೆಚ್ಚು ಎನ್ನುತ್ತಾರೆ ತಜ್ಞರು.

ಕೈಗಳಿಗೆ ಅಂಟಿಕೊಳ್ಳಬಹುದಾದ ಕೊರೊನಾ ವೈರಸ್‌ ಅನ್ನು ತೊಲಗಿಸಲು ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ ಸೂಕ್ತ. ಆದರೆ ಇದು ಅಂಗೈ ಚರ್ಮದಲ್ಲಿರುವ ತೇವಾಂಶವನ್ನು ಕೂಡ ಕಡಿಮೆ ಮಾಡಿ ಒಣಗಿಸಿಬಿಡುತ್ತದೆ. ಇದರಿಂದ ಅಂಗೈನಲ್ಲಿ ತುರಿಕೆ ಕೂಡ ಕಾಣಿಸಿಕೊಳ್ಳಬಹುದು. ಸೋಪ್‌ ಬಳಸಿ ಕೈಗಳನ್ನು ಪದೇ ಪದೇ ತೊಳೆದಾಗ ಕೂಡ ಇಂತಹ ಅನುಭವವಾಗುವುದು ಸಹಜ.

ಹಾಗಂತ ಕೈ ತೊಳೆಯುವುದನ್ನು ನಿಲ್ಲಿಸುವುದು ಆರೋಗ್ಯದ ದೃಷ್ಟಿಯಿಂದ ಈ ಸಂದರ್ಭದಲ್ಲಂತೂ ಒಳ್ಳೆಯದಲ್ಲ. ಕೈ ತೊಳೆದ ನಂತರ ಕೆಲವು ವಿಧಾನಗಳನ್ನು ಅನುಸರಿಸಿದರೆ ಒಣ ಚರ್ಮ, ತುರಿಕೆಯಂತಹ ಕಿರಿಕಿರಿಯಿಂದ ಪಾರಾಗಬಹುದು.

ADVERTISEMENT

ಪ್ರತಿ ಸಲ ಕೈ ತೊಳೆದಾಗಲೂ ಉತ್ತಮ ಮಾಯಿಶ್ಚರೈಸರ್‌ ಬಳಸಿ. ಅಂಗೈ ಮೇಲೆ ಒಂದಿಷ್ಟು ಮಾಯಿಶ್ಚರೈಸರ್‌ ಸುರುವಿಕೊಂಡು ಚೆನ್ನಾಗಿ ಎರಡೂ ಕೈಗಳನ್ನು ಸೇರಿಸಿ ಉಜ್ಜಿಕೊಳ್ಳಿ. ಬೆರಳಿಗೆ ಮುಂಗೈಗೆ ಕೂಡ ಲೇಪಿಸಿಕೊಳ್ಳಿ. ಹೆಚ್ಚು ರಾಸಾಯನಿಕಗಳಿಲ್ಲದ ಹರ್ಬಲ್‌ ಮಾಯಿಶ್ಚರೈಸರ್‌ ಬಳಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಹಾಗೆಯೇ ಪೆಟ್ರೋಲಿಯಂ ಜೆಲ್ಲಿಯನ್ನೂ ಬಳಸಬಹುದು.

ಈ ಸಮಸ್ಯೆ ನಿವಾರಣೆಗೆ ಸಾಕಷ್ಟು ಮನೆ ಮದ್ದುಗಳಿವೆ.

ಲೋಳೆಸರ ಇದಕ್ಕೆ ಉತ್ತಮವಾದ ಪರಿಹಾರ. ಮನೆಯಲ್ಲೇ ಲೋಳೆಸರದ ಗಿಡವಿದ್ದರೆ ಅದರ ಜೆಲ್‌ ತೆಗೆದು ಕೈಗಳಿಗೆ ಲೇಪಿಸಿಕೊಳ್ಳಿ. ಅದಿಲ್ಲದಿದ್ದರೆ ಅಂಗಡಿಯಿಂದ ಜೆಲ್‌ ತಂದು ಬಳಸಬಹುದು.

ಕೊಬ್ಬರಿ ಎಣ್ಣೆಯನ್ನು ಕೈಗೆ ಲೇಪಿಸುವುದರಿಂದ ಒಣ ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಬಹುದು. ಸ್ಯಾನಿಟೈಸರ್‌ ಅಥವಾ ಸೋಪ್‌ನಿಂದ ಕೈ ತೊಳೆದ ತಕ್ಷಣ ಟವೆಲ್‌ನಿಂದ ಒರೆಸಿಕೊಂಡು ಕೊಬ್ಬರಿ ಎಣ್ಣೆ ಸವರಿಕೊಳ್ಳಿ. ಇದೇ ರೀತಿ ಆಲಿವ್‌ ಎಣ್ಣೆಯನ್ನೂ ಬಳಸಬಹುದು.

ಓಟ್ಸ್‌ ಅನ್ನು ಚೆನ್ನಾಗಿ ಪುಡಿ ಮಾಡಿ ಕೊಬ್ಬರಿ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆ ಜೊತೆ ಸೇರಿಸಿ ಬಾಟಲ್‌ನಲ್ಲಿ ತುಂಬಿಸಿಟ್ಟುಕೊಳ್ಳಿ. ಇದನ್ನು ಆಗಾಗ ಕೈಗಳಿಗೆ ಲೇಪಿಸಿಕೊಂಡರೆ ತೇವಾಂಶ ಜಾಸ್ತಿಯಾಗುತ್ತದೆ.

ಅರ್ಧ ಚಮಚ ಲಿಂಬೆರಸಕ್ಕೆ ಒಂದೆರಡು ಹನಿ ಜೇನುತುಪ್ಪ ಸೇರಿಸಿ ಕೈಗಳಿಗೆ ಹಚ್ಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.