ಪ್ರಾತಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ನವದೆಹಲಿ: ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುವ ಸೆಮಾಗ್ಲುಟೈಡ್ ಔಷಧವು ಮಧುಮೇಹದಿಂದ ಎದುರಾಗಬಹುದಾದ ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಶೇ 14ರಷ್ಟು ತಗ್ಗಿಸಲಿದೆ ಎಂದು ಅಧ್ಯಯನವೊಂದು ಹೇಳಿದೆ.
ದೇಹದ ತೂಕ ತಗ್ಗಿಸುವಲ್ಲೂ ಸೆಮಾಗ್ಲುಟೈಡ್ ಪರಿಣಾಮಕಾರಿಯಾಗಿದ್ದು, ಸ್ಥೂಲಕಾಯ ನಿಯಂತ್ರಕವಾಗಿಯೂ ಇದು ಕೆಲಸ ಮಾಡಲಿದೆ ಎಂದು ಇದರ ಅಧ್ಯಯನ ನಡೆಸಿರುವ ಅಮೆರಿಕದ ನಾರ್ಥ್ ಕ್ಯಾರೊಲಿನಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
‘ಟೈಪ್–2 ಮಧುಮೇಹ ಹೊಂದಿರುವವರ ಹೃದಯದ ಅಪಧಮನಿಗಳಲ್ಲಿ ಶೇಖರಗೊಳ್ಳುವ ಕೊಬ್ಬಿನಂಶದಿಂದ ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮೂತ್ರಪಿಂಡ ಕಾಯಿಲೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಮಧುಮೇಹ ನಿಯಂತ್ರಣದಲ್ಲಿಲ್ಲದಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದರೆ ಸೆಮಾಗ್ಲುಟೈಡ್‌ನಿಂದ ಮಧುಮೇಹ ನಿಯಂತ್ರಣದ ಜತೆಗೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆ ಎದುರಾಗದಂತೆ ತಡೆಯಲು ಸಾಧ್ಯ’ ಎಂದು ಸಂಶೋಧಕ ಬೂಸ್ ಹೇಳಿದ್ದಾರೆ.
ಟೈಪ್–2 ಮಧುಮೇಹ ಹೊಂದಿರುವ 50 ವರ್ಷ ಮೇಲಿನ 9,650 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಹೃದಯ ಸಂಬಂಧಿತ ಹಾಗೂ ಮೂತ್ರಪಿಂಡ ಸಮಸ್ಯೆ ಹೊಂದಿರುವವರೂ ಇದ್ದರು. ಸೆಮಾಗ್ಲುಟೈಡ್ (14 ಮಿ.ಗ್ರಾಂ) ಅಥವಾ ಪ್ಲಾಸೆಬೊ ಅನ್ನು ದಿನಕ್ಕೊಂದರಂತೆ ಸೇವಿಸಲು ತಿಳಿಸಲಾಗಿತ್ತು.
‘ಪ್ಲಾಸೆಬೊಗೆ ಹೋಲಿಸಿದಲ್ಲಿ ಸೆಮಾಗ್ಲುಟೈಡ್ ಔಷಧ ಸೇವಿಸಿದವರಲ್ಲಿ ಮಧುಮೇಹ ನಿಯಂತ್ರಣದ ಜತೆಗೆ, ಮಾರಣಾಂತಿಕವಲ್ಲದ ಮಯೊಕಾರ್ಡಿಯಲ್ ಇನ್‌ಫ್ರಾಕ್ಷನ್ ಅಥವಾ ಹೃದಯಾಘಾತ ಪ್ರಮಾಣ ಇಳಿಮುಖವಾಗಿರುವುದು ದಾಖಲಾಗಿದೆ’ ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.