
ಚಿತ್ರ: ಗೆಟ್ಟಿ
ಹಲ್ಲು ನೋವಿಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಹಲ್ಲಿನ ಕುಳಿ ಅಥವಾ ಕ್ಯಾರೀಸ್ ಕಾರಣವಾಗಿದೆ. ಸಕ್ಕರೆ ಹಾಗೂ ಆಮ್ಲೀಯ ಆಹಾರಗಳು ಹಲ್ಲಿನ ಮೇಲ್ಪದರವನ್ನು ಕ್ಷೀಣಿಸಿ ಕುಳಿಗಳನ್ನು ಸೃಷ್ಟಿಸುತ್ತವೆ. ಇದರಿಂದಾಗಿ ಹಲ್ಲಿನ ಆಳವಾದ ನೋವು ಮತ್ತು ಸೋಂಕಿಗೆ ಕಾರಣವಾಗುತ್ತದೆ. ಹಾಗಾದರೆ ಹಲ್ಲು ನೋವಿಗೆ ಕಾರಣವೇನು, ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿಯೋಣ.
ಒಸಡುಗಳಿಗೆ ಸಂಬಂಧಿಸಿದಂತೆ ಜಿಂಜಿವಿಟಿಸ್ ಮತ್ತು ಪಿರಿಯೊಡಾಂಟೈಟಿಸ್ ಕಾಯಿಲೆಗಳು ಕೂಡ ತೀವ್ರ ಹಲ್ಲು ನೋವನ್ನು ಉಂಟು ಮಾಡುತ್ತವೆ. ಹಲ್ಲಿನ ನರಗಳಲ್ಲಿ ಕೀವು ಸಂಗ್ರಹವಾದಾಗ ಊತ ಸೃಷ್ಟಿಯಾಗಿ ನೋವು ಉಂಟಾಗುತ್ತದೆ. ಹಲ್ಲುಗಳು ಜುಮ್ಮೆನ್ನುವುದಕ್ಕೂ ಕಾರಣವಾಗಬಹುದು.
ತಾತ್ಕಾಲಿಕ ಮನೆಮದ್ದುಗಳು:
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ. ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಕರಗಿಸಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಬಾಯಿಯನ್ನು ಸ್ವಚ್ಛಗೊಳಿಸಿ. ಇದು ಸೋಂಕನ್ನು ಕಡಿಮೆ ಮಾಡಿ ನೋವನ್ನು ಶಮನಗೊಳಿಸುತ್ತದೆ.
ಲವಂಗ ತೈಲ ನೈಸರ್ಗಿಕ ನೋವು ನಿವಾರಕವಾಗಿದೆ. ಹತ್ತಿಯಲ್ಲಿ ಲವಂಗದ ತೈಲವನ್ನು ಹದ್ದಿಕೊಂಡು ನೋವಿರುವ ಹಲ್ಲಿನ ಮೇಲೆ ಇಡಬೇಕು. ತುಳಸಿ ಎಲೆಗಳ ರಸವನ್ನು ಕೂಡ ಬಳಸಬಹುದಾಗಿದೆ.
ಐಬುಪ್ರೋಫಿನ್ ಅಥವಾ ಪ್ಯಾರಸಿಟಮಾಲ್ ಮಾತ್ರೆಗಳು ತಾತ್ಕಾಲಿಕ ಪರಿಹಾರ ನೀಡುತ್ತವೆ. ಐಸ್ ಪ್ಯಾಕ್ ಅನ್ನು ಕೆನ್ನೆಯ ಮೇಲೆ ಹಚ್ಚುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ.
ವೈದ್ಯಕೀಯ ಚಿಕಿತ್ಸೆ ಮತ್ತು ಕ್ರಮಗಳು:
ನೋವು ನಿರಂತರವಾಗಿದ್ದರೆ ದಂತ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ. ಕುಳಿಗಳಿಗೆ ಫಿಲ್ಲಿಂಗ್ ಚಿಕಿತ್ಸೆ ನೀಡಲಾಗುತ್ತದೆ. ಕ್ಷೀಣಗೊಂಡ ಹಲ್ಲುಗಳಿಗೆ ಕ್ರೌನ್ ಅಥವಾ ಕ್ಯಾಪ್ ಅಳವಡಿಸಲಾಗುತ್ತದೆ. ಹಲ್ಲಿನ ಬೇರಿನ ಸೋಂಕಿಗೆ ರೂಟ್ ಕೆನಾಲ್ ಚಿಕಿತ್ಸೆ ಮಾಡಿಸಬಹುದು. ಈ ಪ್ರಕ್ರಿಯೆಯಲ್ಲಿ ಸೋಂಕಿತ ನರಗಳನ್ನು ತೆಗೆದು ಹಲ್ಲನ್ನು ಸಂರಕ್ಷಿಸಲಾಗುತ್ತದೆ.
ತೀವ್ರ ನೋವಿನ ಸಂದರ್ಭಗಳಲ್ಲಿ ಹಲ್ಲು ಕಿತ್ತು ಹಾಕುವುದು ಅನಿವಾರ್ಯ. ಒಸಡುಗಳ ಕಾಯಿಲೆಗಳಿಗೆ ಸ್ಕೇಲಿಂಗ್ ಮತ್ತು ರೂಟ್ ಪ್ಲಾನಿಂಗ್ ಚಿಕಿತ್ಸೆ ಮಾಡಬೇಕು.
ತಡೆಗಟ್ಟುವ ಕ್ರಮಗಳು:
ದಿನಕ್ಕೆ ಎರಡು ಬಾರಿ ಹಲ್ಲು ಹುಜ್ಜುವುದು ಅಗತ್ಯ.
ಫ್ಲೋರೈಡ್ ಇರುವ ಟೂತ್ ಪೇಸ್ಟ್ ಬಳಸಬೇಕು.
ಹಲ್ಲುಗಳ ನಡುವೆ ಆಹಾರ ಕಣಗಳು ಸಿಕ್ಕಿಕೊಂಡರೆ ಅದನ್ನು ತ್ವರಿತವಾಗಿ ಸ್ವಚ್ಛಗೊಳಿಸಬೇಕು.
ಸಕ್ಕರೆ ಮತ್ತು ಆಮ್ಲೀಯ ಪದಾರ್ಥಗಳ ಸೇವನೆ ಕಡಿಮೆ ಮಾಡಿ.
ಹಾಲು, ಚೀಸ್, ಹಸಿರು ತರಕಾರಿಗಳು ಹಲ್ಲುಗಳಿಗೆ ಬಲ ನೀಡುತ್ತವೆ. ಧೂಮಪಾನ ಮತ್ತು ತಂಬಾಕು ಸೇವನೆ ತ್ಯಜಿಸಿ.
ಹಲ್ಲಿನ ಆರೋಗ್ಯವು ದೇಹದ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಸರಿಯಾದ ಹಲ್ಲಿನ ಕಾಳಜಿ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಹಲ್ಲು ನೋವಿಗೆ ಶಾಶ್ವತ ಪರಿಹಾರ ಪಡೆಯಬಹುದಾಗಿದೆ.
(ಡಾ. ಅಶ್ವಿನ್ ಸಂತೋಷ್ ಶೆಟ್ಟಿ, ಕನ್ಸಲ್ಟೆಂಟ್, ಆಫ್ತಾಲ್ಮಾಲಜಿ, ಅಸ್ಟರ್, ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.