ADVERTISEMENT

ಗರ್ಭಧಾರಣೆಗೆ ಯಾವ ಸಮಯದಲ್ಲಿ ಲೈಂಗಿಕ ಸಂಪರ್ಕ ಸೂಕ್ತ?

ಡಾ.ವೀಣಾ ಎಸ್‌ ಭಟ್ಟ‌
Published 13 ಆಗಸ್ಟ್ 2021, 19:30 IST
Last Updated 13 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

*ಯಾವ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡಿದರೆ ಗರ್ಭಧಾರಣೆ ಆಗುವುದು ಹೇಳಿ ಮೇಡಂ?

– ಕೃಷ್ಣ, ಊರು ತಿಳಿಸಿಲ್ಲ

ಉತ್ತರ: ಗರ್ಭಧಾರಣೆಯಾಗಬೇಕಾದರೆ ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡುವುದು ಸೂಕ್ತ ಕಾಲ. ಪತ್ನಿಯ ಅಂಡಾಣು ಪತಿಯ ವೀರ್ಯಾಣುವಿನ ಜೊತೆ ಸಮಾಗಮವಾಗಿ ಗರ್ಭ ಫಲಿಸಬೇಕಾದರೆ ಅಂಡಾಣು ಬಿಡುಗಡೆಯಾದ 12ರಿಂದ 24 ತಾಸಿನೊಳಗಾಗಿ ಲೈಂಗಿಕ ಸಂಪರ್ಕ ಆಗಬೇಕು. ಯಾವುದೇ ಗರ್ಭನಿರೋಧಕಗಳನ್ನು ಬಳಸದೇ ಇದ್ದಾಗ ಅಂಡಾಣು ವೀರ್ಯಾಣು ಜೊತೆ ಫಲಿತವಾಗುತ್ತದೆ. ಲೈಂಗಿಕ ಸಂಪರ್ಕದಿಂದ ಹೆಣ್ಣಿನ ಗರ್ಭದೊಳಗೆ ಸೇರಿದ ವೀರ್ಯಾಣು 3-4 ದಿನ ಜೀವಂತವಾಗಿರುತ್ತದೆ. ಅಂಡಾಣು ಬಿಡುಗಡೆಯನ್ನು ಹೆಣ್ಣಿನಲ್ಲಿ ಹೇಗೆ ಗುರುತಿಸಬೇಕೆಂಬುದು ನಿಮ್ಮ ಮುಂದಿನ ಪ್ರಶ್ನೆ ಇರಬಹುದಲ್ಲವೇ? ಪ್ರತಿ ಮಹಿಳೆಗೂ ತಿಂಗಳ ಮುಟ್ಟು ಆರಂಭವಾಗುವ 14 ದಿನದ ಮೊದಲು ಅಂಡಾಣು ಬಿಡುಗಡೆಯಾಗುತ್ತದೆ ಉದಾಹರಣೆಗೆ: ಹೆಣ್ಣಿನ ಋತುಚಕ್ರ 30 ದಿನಕ್ಕೊಮ್ಮೆ ಆಗುತ್ತಿದ್ದರೆ ಅಂಡಾಣು ಬಿಡುಗಡೆ 16ನೇ ದಿನ ಆಗುತ್ತದೆ. 24 ದಿನದ ಋತುಚಕ್ರ ಆದರೆ 10ನೇ ದಿನಕ್ಕೆ ಅಂಡೋತ್ಪತ್ತಿ ಆಗುವುದು. ಅಂಡಾಣು ಬಿಡುಗಡೆ ಒಂದೆರಡು ದಿನ ಮೊದಲೇ ಇಲ್ಲವೇ ಅಂಡಾಣೋತ್ಪತ್ತಿಯ ದಿನದಂದೇ ಲೈಂಗಿಕ ಸಂಪರ್ಕವಾದಾಗ ಗರ್ಭನಿಲ್ಲುತ್ತದೆ (ಗರ್ಭನಾಳ ಸರಿಯಾಗಿದ್ದು ಗರ್ಭಕೋಶದಲ್ಲಿನ ವಾತಾವರಣ, ವೀರ್ಯಾಣು ಸಂಖ್ಯೆ ಹಾಗೂ ವೀರ್ಯಾಣುಗಳ ಗುಣಮಟ್ಟ ಎಲ್ಲವೂ ಸರಿಯಾಗಿದ್ದರೆ ಮಾತ್ರ). ಕೆಲವು ಮಹಿಳೆಯರಿಗೆ ಅಂಡಾಣು ಬಿಡುಗಡೆ ಆಗುವಾಗ ಸಣ್ಣದಾಗಿ ಹೊಟ್ಟೆನೋವು, ಸ್ವಲ್ಪಲೋಳೆಯಂತಹ ಯೋನಿಸ್ರಾವ ಉಂಟಾಗುತ್ತದೆ. ಈಗ ಅಂಡಾಣು ಬಿಡುಗಡೆ ತಿಳಿಸುವ ಕಿಟ್‌ ಕೂಡಾ ಲಭ್ಯವಿದೆ. ಅಂರ್ತಜಾಲದಲ್ಲಿ ಅಂಡೋತ್ಪತ್ತಿ ಕ್ಯಾಲೆಂಡರ್ ಕೂಡ ಲಭ್ಯವಿದೆ. ಜೊತೆಗೆ ನಿಮ್ಮಲ್ಲಿ ವೀರ್ಯಾಣುಗಳ ಸಂಖ್ಯೆ, ಗುಣಮಟ್ಟ ಸರಿಯಾಗಿರಬೇಕಾದರೆ ನೀವು ದುಶ್ಚಟಗಳಿಂದ ದೂರವಿದ್ದು ಸಮತೋಲಿತ ಪೌಷ್ಟಿಕ ಆಹಾರ ಸೇವನೆ ಮಾಡಿ.

ADVERTISEMENT

* ವಯಸ್ಸು 22, ವಿದ್ಯಾರ್ಥಿನಿ. ನನಗೆ ಹೈಪರ್‌ಥೈರಾಯಿಡ್ ಸಮಸ್ಯೆ ಇದೆ ಎಂದು ಡಾಕ್ಟರ್‌ ತಿಳಿಸಿ 2 ವರ್ಷವಾಯಿತು. ಇದಕ್ಕೆ ಪರಿಹಾರವೇನು? ಆಯುರ್ವೇದ ಚಿಕಿತ್ಸೆಯಿಂದ ಹೈಪರ್‌ಥೈರಾಯಿಡ್ ವಾಸಿಯಾಗುತ್ತದೆಯೇ? ಇದರಿಂದ ತೂಕ ಬಹಳ ಕಡಿಮೆ ಆಗಿದೆ. ವೈದ್ಯರು ಈ ಹಾರ್ಮೋನ್‌ ಅಸಮತೋಲನ ಜೀವನ ಪರ್ಯಂತ ಇರುತದೆತೆ ಎಂದು ಹೇಳಿದ್ದಾರೆ. ಇದು ನಿಜವೇ? ಇಷ್ಟು ಚಿಕ್ಕವಯಸ್ಸಿಗೆ ಹೀಗೆ ಆಯಿತಲ್ಲ ಎಂದು ಬೇಸರವಾಗುತ್ತದೆ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮಗೆ ಹೈಪರ್‌ಥೈರಾಡಿಸಂ ಇದೆ ಎಂದರೆ ನಿಮ್ಮ ಥೈರಾಯಿಡ್ ಗ್ರಂಥಿಕಾರ್ಯ ಹೆಚ್ಚಾಗಿ ಥೈರಾಯಿಡ್ ಹಾರ್ಮೋನು ಹೆಚ್ಚಾಗಿ ಸ್ರವಿಸಲ್ಪಡುತ್ತಿದೆ ಎಂದರ್ಥ. ಇದಕ್ಕೆ ಕಾರಣ ಥೈರಾಯಿಡ್‌ಗ್ರಂಥಿಯ ಸಮಸ್ಯೆಯಾಗಿರಬಹುದು, ಕೆಲವು ಹೃದ್ರೋಗದಲ್ಲಿ ಉಪಯೋಗಿಸುವ ಅಮಿಡೆರೋನ್, ಮಾನಸಿಕ ಕಾಯಿಲೆಯಲ್ಲಿ ಉಪಯೋಗಿಸುವ ಲಿಥಿಯಂ ಇತ್ಯಾದಿ ಮಾತ್ರೆಗಳು ಥೈರಾಯಿಡ್ ಸ್ರಾವ ಹೆಚ್ಚಿಸಬಹುದು. ಥೈರಾಕ್ಸಿನ್‌ಗ್ರಂಥಿಯ ಸ್ರಾವ ನಿಯಂತ್ರಿಸುವ ಪಿಟ್ಯೂಟರಿ ಗ್ರಂಥಿಯ ಟ್ಯೂಮರ್‌ ಕೂಡಾ ಥೈರಾಕ್ಸಿನ ಸ್ರಾವ ಹೆಚ್ಚಿಸಬಹುದು. ಹೈಪರ್‌ಥೈರಾಯಿಡ್‌ಯಿಸಂನಲ್ಲಿ ಚಯಾಪಚಯ ಕ್ರಿಯೆಗಳ ದರ ಹೆಚ್ಚಾಗಿ ತೂಕ ಕಡಿಮೆ, ನಿದ್ರಾಹೀನತೆ, ಎದೆಬಡಿತ, ಕೈಬೆರಳುಗಳ ನಡುಕ, ಆತಂಕ, ಪದೇಪದೇ ಭೇದಿ, ಉಷ್ಣತೆ ತಡೆಯಲು ಸಾಧ್ಯವಾಗದೇ ಇರುವುದು, ಮಾಂಸಖಂಡಗಳ ಕ್ಷೀಣಿಸುವಿಕೆ ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ. ನಿಮಗೆ ತೂಕ ಕಡಿಮೆ ಆಗಿ ಮುಟ್ಟಿನ ತೊಂದರೆ ಆಗಿರುವುದು ಹೈಪರ್‌ಥೈರಾಡಿಸಂನ ಕಾರಣಕ್ಕೆ ಇರಬಹುದು. ಯಾವುದಕ್ಕೂ ನೀವು ತಜ್ಞವೈದ್ಯರ ಸಲಹೆ ಪ್ರಕಾರ ಸರಿಯಾಗಿ ಚಿಕಿತ್ಸೆ ಪಡೆಯಿರಿ ಹೈಪರ್‌ಥೈರಾಯಿಡಸಂನ ಕಾರಣ ತಿಳಿದು ಚಿಕಿತ್ಸೆ ಕೊಟ್ಟರೆ ಕಾಯಿಲೆ ನಿಯಂತ್ರಣಕ್ಕೆ ಬಂದು ಸಹಜ ಜೀವನ ನಡೆಸುವ ಹಾಗಾಗುತ್ತದೆ. ನನಗೆ ಆಯುರ್ವೇದ ಚಿಕಿತ್ಸೆಯ ಬಗ್ಗೆ ಪರಿಣತಿ / ಅನುಭವವಿಲ್ಲ. ಆದರೆ ಅಲೋಪಥಿಯಲ್ಲಿ ಮತ್ತಿಮಝೋ಼ಲ್ ಇತ್ಯಾದಿ ಮಾತ್ರೆಗಳು, ರೇಡಿಯೋ ಆಕ್ಟೀವ್ ಅಯೋಡಿನ್ ಥೆರಫಿ, ಅವಶ್ಯವಿದ್ದಾಗ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಉತ್ತಮ ಚಿಕಿತ್ಸಾ ವಿಧಾನಗಳು ಇವೆ. ನಿಮಗೆ ವಯಸ್ಸು ಚಿಕ್ಕದಿರಬಹುದು. ಆದರೆ ಯಾವ ವಯಸ್ಸಿನಲ್ಲಾದರೂ ಕಾಯಿಲೆ ಬಂದಾಗ ಧೈರ್ಯವಾಗಿ ಎದುರಿಸುವುದೇ ಜೀವನದಲ್ಲಿ ಬಹುಮುಖ್ಯ ಸಂಗತಿ.

* ಸಿಜೇರಿಯನ್ ಆಗಿ ಒಂದು ವರ್ಷ ಆಯಿತು. ಇನ್ನೂ ಮುಟ್ಟು ಆಗಿಲ್ಲ ಏನಾದರೂ ತೊಂದರೆ ಇದೆಯಾ?

ಹೆಸರು, ಊರು ತಿಳಿಸಿಲ್ಲ.

ಉತ್ತರ: ಕೆಲವರಿಗೆ ಹೆರಿಗೆಯ ನಂತರ ಎದೆಹಾಲುಣಿಸುತ್ತಿರುವಾಗ ವರ್ಷಗಟ್ಟಲೆ ಋತುಚಕ್ರ ಆರಂಭವಾಗುವುದೇ ಇಲ್ಲ. ಏನೂ ತೊಂದರೆ ಇಲ್ಲ. ಆದರೆ ನೀವು ಬೇಗನೆ ಇನ್ನೊಂದು ಸಾರಿ ಗರ್ಭಧಾರಣೆ ಆಗದ ಹಾಗೆ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ನಿಮಗೆ ಎಷ್ಟೋ ಬಾರಿ ಋತುಚಕ್ರ ಪುನರಾರಂಭವಾಗದೆಯೇ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಆರಂಭವಾಗಿ ಮತ್ತೆ ಗರ್ಭನಿಂತ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ಗರ್ಭಧಾರಣೆಯಾಗದ ಹಾಗೆ ಜಾಗರೂಕತೆ ವಹಿಸಬೇಕು. ಜೊತೆಗೆ ಪೌಷ್ಟಿಕ ಸಮತೋಲನ ಆಹಾರದ ಜೊತೆಗೆ ಕಬ್ಬಿಣಾಂಶ ಮತ್ತು ಕ್ಯಾಲ್ಶಿಯಂಯುಕ್ತ ಆಹಾರಗಳನ್ನು ಸೇವಿಸುವುದರಿಂದ ನಿಮಗೂ ಹಾಗೂ ನಿಮ್ಮ ಎದೆಹಾಲುಣ್ಣುತ್ತಿರುವ ನಿಮ್ಮ ಮಗುವಿಗೂ ಒಳ್ಳೆಯದು.

* ನನ್ನ ಹೆಂಡತಿಗೆ 20 ವರ್ಷ. ಮದುವೆಯಾಗಿ ಮೂರು ತಿಂಗಳಾಗಿದೆ. ಅವಳಿಗೆ ಕೊರೋನಾ ಲಸಿಕೆ ಹಾಕಿಸಬೇಕೆಂದಿರುವೆ. ಇದರಿಂದ ಮಗು ಪಡೆಯಲು ಏನಾದರೂ ಸಮಸ್ಯೆ ಆಗಬಹುದಾ ನನ್ನ ವಯಸ್ಸು 28.

ತಿಪ್ಪಣ್ಣ, ಊರು ತಿಳಿಸಿಲ್ಲ.

ಉತ್ತರ: ನೀವು ಮಕ್ಕಳನ್ನು ಪಡೆಯಬೇಕೆಂದಿದ್ದಲ್ಲಿ ಯಾವುದೇ ಅಡ್ಡಿಆತಂಕವಿಲ್ಲದೆ ಕೋವಿಡ್‌ ಲಸಿಕೆಯನ್ನು ಹಾಕಿಸಬಹುದು. ಯಾವುದೇ ತೊಂದರೆ ಇಲ್ಲ. ಈಗ ಗರ್ಭಿಣಿಯರಿಗೂ, ಎದೆಹಾಲುಣಿಸುವ ತಾಯಂದಿರ ಸಹಿತವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆಯನ್ನು ಅನುಮೋದಿಸಲಾಗಿದೆ. ಯಾವುದೇ ಭಯ ಆತಂಕವಿಲ್ಲದೆ ಲಸಿಕೆ ಹಾಕಿಸಿ.

* ಸಿಜೇರಿಯನ್ ಆಗಿದೆ. ಗರ್ಭಕೋಶದಲ್ಲಿ ಟ್ಯೂಬ್ ಕಾಣುತ್ತಿಲ್ಲ ಅಂತ ಹೇಳಿದ್ದಾರೆ. ಹೆರಿಗೆ ಸಮಯದಲ್ಲಿ ಮಕ್ಕಳಾಗದ ಹಾಗೆ ಆಪರೇಷನ್ ಮಾಡಿಸಬೇಕು. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿ?

ಕವಿತಾ ಬೆಂಗಳೂರು.

ಉತ್ತರ: ಕವಿತಾರವರೇ ಸಿಜೇರಿಯನ್ ಸಮಯದಲ್ಲೇ ನಿಮ್ಮ ಗರ್ಭನಾಳ ಕಾಣಿಸಲಿಲ್ಲವೆಂದರೆ ಏನಾದರೂ ಟ್ಯೂಬ್ ಪರಸ್ಪರ ಮೆತ್ತಿಕೊಂಡ ಹಾಗಿರಬಹುದು (ಅಡೇಷನ್ಸ್). ಆದ್ದರಿಂದ ನಿಮಗೆ ಮಿನಿಲ್ಯಾಪ್ ಆಪರೇಷನ್‌ನಲ್ಲಿ ಅಥವಾ ಉದರದರ್ಶಕ ಚಿಕಿತ್ಸೆಯ ಮೂಲಕ ಟ್ಯೂಬ್ ಸಿಗುವುದು ಕಷ್ಟವಾಗಬಹುದು. ಆದುದರಿಂದ ನಿಮ್ಮ ಪತಿ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲಿ. ಇಲ್ಲವಾದರೆ ನೀವು ಇನ್ನಿತರ ಸಂತಾನ ನಿರೋಧಕ ಕ್ರಮಗಳಾದ ಕಾಪರ್ಟಿ ಇಲ್ಲವೇ ಲೈಂಗಿಕ ಸಂಪರ್ಕದ ಸಮಯದಲ್ಲಿ ನಿರೋಧ್ ಬಳಸುವುದು ಇತ್ಯಾದಿ ಅನುಸರಿಸಬಹುದು.

* ಸಿಜೇರಿಯನ್ ಹೆರಿಗೆಯಾಗಿ 6 ತಿಂಗಳಾಗಿದೆ. ಎಷ್ಟು ತಿಂಗಳಿಗೆ ಸೇರಬಹುದು. ಇಲ್ಲಿಯವರೆಗೆ ನಾನು ಮುಟ್ಟಾಗಿಲ್ಲ. ಸೇರಿದರೆ ಏನಾದರೂ ತೊಂದರೆಯಿದೆಯೇ?

ಹೆಸರಿಲ್ಲ, ಊರಿಲ್ಲ.

ಉತ್ತರ: ನಿಮಗೆ 2 ಮಕ್ಕಳ ನಡುವೆ ಕನಿಷ್ಠ 2-3 ವರ್ಷ ಅಂತರವಿರಬೇಕು. ಅಂತರವಿದ್ದರೆ ತಾಯಿ ಹಾಗೂ ಮಗು ಇಬ್ಬರ ಆರೋಗ್ಯವೂ ಚೆನ್ನಾಗಿರುತ್ತದೆ. ಆದ್ದರಿಂದ ನಿಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕವಾದರೆ ಮತ್ತೆ ಗರ್ಭಧಾರಣೆ ಆಗುವ ಸಂಭವವಿರುವುದರಿಂದ ಸೂಕ್ತ ಸಂತಾನ ನಿಯಂತ್ರಣ ಕ್ರಮಗಳನ್ನು (ಕಾಪರ್ಟಿ, ನಿರೋಧ್‌, ಇತ್ಯಾದಿ) ಬಳಸಿ ಪರಸ್ಪರ ಸೇರಬಹುದು.

* ನನಗೆ ಒಂದು ಮಗುವಿದೆ. ಇನ್ನೊಂದು ಮಗುವನ್ನು ಪಡೆಯಬೇಕೆಂದುಕೊಂಡಿದ್ದೇನೆ. ಮೊದಲನೇ ಮಗುವಿಗೆ 7 ವರ್ಷ, ನನಗೆ 35 ವರ್ಷ, ನನಗೆ ನಿಯಮಿತ ಋತುಚಕ್ರವಾಗುತ್ತಿದೆ. ಮಗುವಾಗಬಹುದೇ?

ಹೆಸರಿಲ್ಲ, ಊರಿಲ್ಲ.

ಉತ್ತರ: ಖಂಡಿತವಾಗಿಯೂ ಮಗುವಾಗುತ್ತದೆ. ಆದಷ್ಟು ಬೇಗನೆ ಇನ್ನೊಂದು ಮಗುವನ್ನು ಪಡೆಯಿರಿ. ಯಾಕೆಂದರೆ ಇನ್ನೂ ತಡವಾಗುತ್ತಾ ಹೋದರೆ ತಡವಾದ ತಾಯ್ತನದಿಂದ ಉಂಟಾಗಬಹುದಾದ ಗರ್ಭಿಣಿಯರಲ್ಲಿ ಮಧುಮೇಹ, ಏರುರಕ್ತದೊತ್ತಡ, ಮಗುವಿನ ಬೆಳವಣಿಗೆ ಕುಂಠಿತವಾಗುವುದು, ಹೆರಿಗೆ ಕಷ್ಟವಾಗಿ ಸಿಜೇರಿಯನ್ ಸಂಭವ ಹೆಚ್ಚಾಗುವುದು, ಸ್ತನ್ಯಪಾನದಲ್ಲಿ ವೈಫಲ್ಯತೆ ಇತ್ಯಾದಿ ಉಂಟಾಗಬಹುದು ಹಾಗಾಗಿ ತಡ ಮಾಡಬೇಡಿ.

* ನನಗೆ 27 ವರ್ಷ. ಮದುವೆಯಾಗಿ ಒಂದು ತಿಂಗಳು ಆಗಿದೆ , ಆದರೆ ಐಎಎಸ್‌ ತಯಾರಿ ನಡೆಸುತ್ತಿರುವುದರಿಂದ ಎರಡು ವರ್ಷಗಳ ಕಾಲ ಮಗು ಬೇಡವೇಂದು ನಿರ್ಧರಿಸಿರುವೆ. ಇದರಿಂದ ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ ಆಗುತ್ತದೆಯೇ? ದಯವಿಟ್ಟು ತಿಳಿಸಿಕೊಡಿ.

ದೀಪಿಕಾ , ಊರಿನ ಹೆಸರಿಲ್ಲ

ಉತ್ತರ: ನೀವು ಐ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದು ಸಂತೋಷದ ಸಂಗತಿ. ಆದರೆ ಈ ಮೇಲೆ ತಿಳಿಸಿರುವ ಹಾಗೇ ತಡವಾದ ತಾಯ್ತನದಿಂದ ಹಲವು ಸಮಸ್ಯೆಗಳಾಗಬಹುದು. ಆದ್ದರಿಂದ ಆದಷ್ಟು ಬೇಗನೆ ಮಗುವನ್ನು ಪಡೆಯುವುದು ಒಳ್ಳೆಯ ನಿರ್ಣಯ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.