ADVERTISEMENT

‘ಅಡ್ಡ ಪರಿಣಾಮ: ಲಸಿಕೆಯ ಕಾರ್ಯನಿರ್ವಹಣೆ ಕುರುಹು’

ಹರಟೆ ಕಟ್ಟೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
ಡಾ.ವೈ.ಸಿ. ಯೋಗಾನಂದ ರೆಡ್ಡಿ ಹಾಗೂ ಡಾ.ಪಿ. ಜಗದೀಶ್ ಕುಮಾರ್
ಡಾ.ವೈ.ಸಿ. ಯೋಗಾನಂದ ರೆಡ್ಡಿ ಹಾಗೂ ಡಾ.ಪಿ. ಜಗದೀಶ್ ಕುಮಾರ್   

ಬೆಂಗಳೂರು: ‘ಯಾವುದೇ ಲಸಿಕೆ ಪಡೆದು ಕೊಂಡರೂ ಕೆಲವರಿಗೆ ನೆಗಡಿ, ಜ್ವರ, ತಲೆನೋವು, ಚುಚ್ಚು ಮದ್ದು ನೀಡಿದ ಜಾಗದಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತವೆ. ಇವನ್ನು ಲಸಿಕೆಯ ಅಡ್ಡ ಪರಿಣಾಮಗಳು ಎನ್ನಲು ಸಾಧ್ಯವಿಲ್ಲ. ಬದಲಾಗಿ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದರ ಕುರುಹು’ ಎಂದು ಡಾ.ವೈ.ಸಿ. ಯೋಗಾನಂದ ರೆಡ್ಡಿ ಹಾಗೂ ಡಾ.ಪಿ. ಜಗದೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಜಾವಾಣಿ’ ಕನ್ನಡ ಧ್ವನಿ ಪಾಡ್‌ಕಾಸ್ಟ್‌ ಚಾನಲ್‌ನ ‘ಹರಟೆ ಕಟ್ಟೆ’ಯಲ್ಲಿ ‘ಕೋವಿಡ್ ಲಸಿಕೆಯ ಅಪಾಯ: ಸುಳ್ಳೆಷ್ಟು? ನಿಜವೆಷ್ಟು’ ಎಂಬ ವಿಷಯ ಕುರಿತ ಚರ್ಚೆಯಲ್ಲಿ ಲಸಿಕೆ ಕುರಿತ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಅಡ್ಡ ಪರಿಣಾಮವಲ್ಲ, ಊಹಿಸಿದ ಪರಿಣಾಮ’

ADVERTISEMENT

ಮಕ್ಕಳಿಗೆ ಡಿಪಿಟಿ ಲಸಿಕೆ ನೀಡಿದಾಗ ಜ್ವರ, ನೆಗಡಿ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಅಡ್ಡ ಪರಿಣಾಮಗಳು ಎನ್ನಲು ಸಾಧ್ಯವಿಲ್ಲ. ಅವು ಮೊದಲೇ ಊಹಿಸಿರುವ ಲಸಿಕೆಯ ಪರಿಣಾಮ. ಕೋವಿಡ್‌ ಲಸಿಕೆ ಕೂಡ ಇದೇ ರೀತಿ. ನರಗಳ ಮೇಲೆ ಪರಿಣಾಮ ಕಾಣಿಸಿಕೊಂಡಲ್ಲಿ ಅದನ್ನು ನಿಜವಾದ ಅಡ್ಡ ಪರಿಣಾಮ ಎನ್ನಬೇಕಾಗುತ್ತದೆ. ಈ ರೀತಿ ಪ್ರಕರಣಗಳು ಲಸಿಕೆ ‍ಪಡೆದ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಪ್ರಪಂಚದ ಎಲ್ಲರಿಗೂ ಕೋವಿಡ್ ಲಸಿಕೆ ಸಿಗಬೇಕಾದರೆ ಅತ್ಯಂತ ಕಡಿಮೆ ಸಮಯ ಎಂದರೂ 2023 ಆಗುತ್ತದೆ. ಎಲ್ಲರಿಗೂ ಹಂತ ಹಂತವಾಗಿ ಆದ್ಯತೆಯ ಮೇಲೆ ಲಸಿಕೆ ನೀಡಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಕೋವಿಡ್‌ಗೆ ಸಂಧಿಸಿದಂತೆ ಸುಮಾರು 10 ಸಾವಿರ ವೈಜ್ಞಾನಿಕ ವರದಿಗಳು ಪ್ರಕಟವಾಗಿವೆ. ಅಷ್ಟೊಂದು ವೇಗವಾಗಿ ವೈದ್ಯರು ಮತ್ತು ವಿಜ್ಞಾನಿಗಳು ಕೋವಿಡ್ ಮತ್ತು ಲಸಿಕೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದಾರೆ. 2023ರ ವೇಳೆಗೆ ಎಲ್ಲರೂ ಲಸಿಕೆ ಪಡೆಯಬೇಕಾ ಎಂಬ ಪ್ರಶ್ನೆ ಬರುವುದಿಲ್ಲ. ಬದಲಾಗಿ ನನ್ನನ್ನು ಏಕೆ ಬಿಟ್ಟಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಲಿವೆ.

ಗರ್ಭಿಣಿಯರು, ಬಾಣಂತಿಯರು, 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಿಡ್‌ ಲಸಿಕೆಯ ಅಧ್ಯಯನ ನಡೆದಿಲ್ಲ. ಹಾಗಾಗಿ ಈ ವರ್ಗದವರಿಗೆ ನಿಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರ ಮೇಲೆ ಕೂಡ ಪ್ರಯೋಗ ನಡೆಸಿ, ನೀಡಲಾಗುತ್ತದೆ. ಮಧುಮೇಹ ಇರುವವರು ಲಸಿಕೆಯನ್ನು ಪಡೆದುಕೊಳ್ಳಬಹುದು. ರಕ್ತ ಗಟ್ಟಿಯಾಗದಂತೆ (ಬ್ಲಡ್‌ ಥಿನ್ನರ್) ನೀಡುವ ಮಾತ್ರೆಗಳನ್ನು ತೆಗೆದುಕೊಳ್ಳುವವರು ಲಸಿಕೆ ಪಡೆಯುವ ಮೊದಲು 5ರಿಂದ 6 ದಿನಗಳು ಮಾತ್ರೆ ಪಡೆಯುವುದನ್ನು ನಿಲ್ಲಿಸಬೇಕಾಗುತ್ತದೆ. ಮದ್ಯಪಾನಕ್ಕೂ ಲಸಿಕೆಗೂ ಸಂಬಂಧವಿಲ್ಲ.

-ಡಾ.ವೈ.ಸಿ. ಯೋಗಾನಂದ ರೆಡ್ಡಿ, ಬಳ್ಳಾರಿಯ ಪೃಥ್ವಿ ಮಕ್ಕಳ ಆಸ್ಪತ್ರೆ ವೈದ್ಯರು

***

‘ವಾಸಿಯಾದವರಿಗೂ ಲಸಿಕೆ ಅಗತ್ಯ’

ಸಾಮಾಜಿಕ ಜಾಲತಾಣದಲ್ಲಿ ಲಸಿಕೆಯ ಬಗ್ಗೆ ತಪ್ಪು ಸಂದೇಶಗಳನ್ನು ಹರಿಬಿಡುತ್ತಿರುವ ಕಾರಣ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಯಾವುದೇ ಲಸಿಕೆ ಪಡೆದರೂ ಸಣ್ಣ ಪ್ರಮಾಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸೀರಂ ಇನ್‌ಸ್ಟಿಟ್ಯೂಟ್‌ ಕಂಪನಿಯು ‘ಕೋವಿಶೀಲ್ಡ್‌’ ಲಸಿಕೆ ತಯಾರಿಸಿದ ಬಳಿಕ ಹಾಗೂ ಭಾರತ್ ಬಯೋಟೆಕ್ ಕಂಪನಿಯು ‘ಕೋವಾಕ್ಸಿನ್’ ಲಸಿಕೆಯನ್ನು ಸಂಶೋಧಿಸಲ್ಪಟ್ಟ ಬಳಿಕ ಯಾವುದು ಅಡ್ಡ ಪರಿಣಾಮ, ಯಾವುದು ಅಡ್ಡ ಪರಿಣಾಮಗಳಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿವೆ. ಆದರೆ, ಆ ವಿಷಯಗಳು ಜನರನ್ನು ಸಮರ್ಪಕವಾಗಿ ತಲುಪಿಲ್ಲ. ಈ ಕಾರಣ ಕೆಲವರು ಅನಗತ್ಯವಾಗಿ ಭಯಕ್ಕೆ ಒಳಗಾಗುತ್ತಿದ್ದಾರೆ.

ಕೋವಿಡ್‌ ಕಾಯಿಲೆಯಿಂದ ಗುಣಮುಖರಾದ ಎಲ್ಲರಲ್ಲಿಯೂ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದಿಲ್ಲ. ನಾವು ಕಾಯಿಲೆಯಿಂದ ಚೇತರಿಸಿಕೊಂಡವರ ಮೇಲೆ ಅಧ್ಯಯನ ಮಾಡುತ್ತಿದ್ದೇವೆ. ಶೇ 40ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ಅಭಿವೃದ್ಧಿ ಹೊಂದಿಲ್ಲ ಎನ್ನುವುದು ತಿಳಿದುಬಂದಿದೆ. ಗುಣಮುಖರಲ್ಲಿ ಅಭಿವೃದ್ಧಿಯಾಗಿರುವ ಪ್ರತಿಕಾಯಗಳೂ ದೀರ್ಘಾವಧಿ ಇರುವುದಿಲ್ಲ. ಕಾಯಿಲೆಯಿಂದ ಚೇತರಿಸಿಕೊಂಡವರು 4ರಿಂದ 5 ವಾರಗಳ ಬಳಿಕ ಲಸಿಕೆ ಪಡೆದುಕೊಳ್ಳಬಹುದು. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆ ಇರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರು ಕೂಡ ಲಸಿಕೆಯನ್ನು ಪಡೆದುಕೊಳ್ಳಬೇಕು. ಇಷ್ಟು ದಿನ ಲಸಿಕೆ ಯಾವಾಗ ಬರುತ್ತದೆ ಎಂದು ಕೇಳಲಾಗುತ್ತಿತ್ತು. ಲಸಿಕೆ ಬಂದಾಗ ಅದನ್ನು ಪಡೆಯಲು ಹಿಂದೇಟು ಹಾಕಲಾಗುತ್ತಿದೆ. ಅದು ಸರಿಯಲ್ಲ.

-ಡಾ.ಪಿ. ಜಗದೀಶ್ ಕುಮಾರ್,ಶ್ವಾಸಕೋಶ ತಜ್ಞರು, ಅಪೊಲೊ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.