ADVERTISEMENT

ನಿದ್ರೆ.. ಇದು ಆತ್ಮದ ಮೌನ ತೀರ್ಥಯಾತ್ರೆ..!

ನಿದ್ರೆಯು ನಮ್ಮ ಅಸ್ತಿತ್ವವನ್ನು ಉನ್ನತ ಪ್ರಜ್ಞೆಯತ್ತ ಪರಿವರ್ತಿಸುವ, ಪರಿಶುದ್ಧಗೊಳಿಸುವ ಮತ್ತು ವಿಕಸನಗೊಳಿಸುವ ಮೌನಪ್ರಯಾಣವನ್ನು ಪ್ರತಿನಿಧಿಸುತ್ತದೆ.

ಪ್ರಜಾವಾಣಿ ವಿಶೇಷ
Published 25 ಮಾರ್ಚ್ 2025, 0:58 IST
Last Updated 25 ಮಾರ್ಚ್ 2025, 0:58 IST
   

ನಮ್ಮ ಎಲ್ಲ ನೋವುಗಳಿಗೂ ಉಪಶಮನಕಾರಿಯಾಗಿರುವ ನಿದ್ರೆಯು ಜೀವನದ ಅತಿದೊಡ್ಡ ರಹಸ್ಯಗಳಲ್ಲಿ ಒಂದು. ಇದರ ಆಳವನ್ನು ನಾವು ಇನ್ನೂ ಸಂಪೂರ್ಣವಾಗಿ ಗ್ರಹಿಸಲಾಗಿಲ್ಲ. ಪ್ರತಿಯೊಂದು ಜೀವಿಯೂ ಈ ಅತ್ಯಗತ್ಯ ಚಟುವಟಿಕೆಯಲ್ಲಿ ತೊಡಗುತ್ತದೆ. ಆದರೆ, ನಿದ್ರೆ ಕೇವಲ ವಿಶ್ರಾಂತಿಯ ಕ್ರಿಯೆ ಅಷ್ಟೆ ಅಲ್ಲ. ನಿದ್ರೆಯ ವಿಧಿಯು ದೈಹಿಕ ವಿಶ್ರಾಂತಿಗಿಂತ ಹೆಚ್ಚು ಮಹತ್ವವನ್ನು ಪಡೆದಿದೆ. ನಿದ್ರೆಯು ನಮ್ಮ ಅಸ್ತಿತ್ವವನ್ನು ಉನ್ನತ ಪ್ರಜ್ಞೆಯತ್ತ ಪರಿವರ್ತಿಸುವ, ಪರಿಶುದ್ಧಗೊಳಿಸುವ ಮತ್ತು ವಿಕಸನಗೊಳಿಸುವ ಮೌನಪ್ರಯಾಣವನ್ನು ಪ್ರತಿನಿಧಿಸುತ್ತದೆ.

ನಿದ್ರೆ ಪವಿತ್ರವಾದುದು. ಇದು ಬದುಕಿನ ಆಗುಹೋಗುಗಳ ಮೂಲಕ ರೂಪುಗೊಂಡಿರುವ ನಮ್ಮ ಬುದ್ಧಿಯ ಬಲೆ ಮತ್ತು ಅಹಂಗಳಿಂದ ನಮ್ಮನ್ನು ಬಿಡುಗಡೆಗೊಳಿಸುತ್ತದೆ; ನಮ್ಮ ಅಂತರಂಗದ ಚೈತನ್ಯವನ್ನು ಎಚ್ಚರಗೊಳಿಸುತ್ತದೆ ಮತ್ತು ಅದರ ಆನಂದವನ್ನು ಸವಿಯಲು ನಮ್ಮನ್ನು ಸಿದ್ಧಮಾಡುತ್ತದೆ. ನಿದ್ರಾವಸ್ಥೆಯಲ್ಲಿ ನಮ್ಮ ಆತ್ಮವು ತನ್ನ ಅಂತರಂಗದ ಯಾತ್ರೆಯನ್ನು ಕೈಗೊಂಡು, ನಮ್ಮನ್ನು ಆಧ್ಯಾತ್ಮಿಕ ಜಾಗೃತಿಯತ್ತ ಒಯ್ಯಲು ಸಹಕರಿಸುತ್ತದೆ.

ನಿದ್ರೆಯು ನಮ್ಮ ಶರೀರದ ಕ್ಷೀಣಿಸಿದ ಶಕ್ತಿಯನ್ನು ಪುನಃಸ್ಥಾಪಿಸುತ್ತದೆ; ಮಿದುಳನ್ನು ಚುರುಕುಗೊಳಿಸುತ್ತದೆ ಮತ್ತು ನೆನಪುಗಳನ್ನು ಸ್ಥಿರಗೊಳಿಸುತ್ತದೆ. ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಗಾಢವಾದ ನಿದ್ರೆಯು ಅತ್ಯಗತ್ಯ ಎಂದು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸುತ್ತವೆ. ಇದು ದೈಹಿಕ ಪುನರುಜ್ಜೀವನವನ್ನು ಮೀರಿ ಆಳವಾದ ಆಧ್ಯಾತ್ಮಿಕ ಪರಿವರ್ತನೆಗೆ ಪೂರಕವಾದ ಅತೀಂದ್ರಿಯ ಚಟುವಟಿಕೆಗಳ ತಾಣವಾಗಿದೆ. ನಿದ್ರೆಯು ಸುಪ್ತಪ್ರಜ್ಞೆಯ ಮನಸ್ಸನ್ನು ಜೀವನದ ಅತ್ಯುನ್ನತ ಉದ್ದೇಶದೊಂದಿಗೆ ಬೆಸೆಯಲು ಅನುವು ಮಾಡಿಕೊಡುತ್ತದೆ. ಅನೇಕ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಮಲಗುವ ಮುನ್ನ ಪ್ರಾರ್ಥನೆಗಳನ್ನು ಕೈಗೊಳ್ಳಲಾಗುತ್ತದೆ. ಈ ಪ್ರಾರ್ಥನೆಗಳ ಸಾರಾಂಶವೆಂದರೆ: ‘ದೇವರೇ! ನನಗೆ ನೀನು ಯಾರೆಂದು ತಿಳಿದಿಲ್ಲ; ನೀನು ಹೇಗಿರುವಿ, ಅಥವಾ ನೀನು ಇದ್ದೀಯೆಂಬುದೂ ನನಗೆ ತಿಳಿದಿಲ್ಲ. ದಯವಿಟ್ಟು ನಿನ್ನ ಇರುವಿಕೆಯನ್ನು ನನಗೆ ಮನವರಿಕೆ ಮಾಡಿಕೊಡು’. 

ADVERTISEMENT

ನಮ್ಮ ಅಹಂನಿಂದ ಉಂಟಾಗಿರುವ ರಾಗ–ದ್ವೇಷಗಳು ನಿದ್ರೆಯಲ್ಲಿ ಕರಗಿಬಿಡುತ್ತವೆ. ಆದರೆ, ಈ ನಿದ್ರೆಗೆ ನಮ್ಮ ವಿನಯ ಮತ್ತು ಶರಣಾಗತಿ ಭಾವಗಳು ಮುಖ್ಯವಾಗುತ್ತವೆ. ಪ್ರಜ್ಞೆಯು ಒಳಮುಖವಾಗುತ್ತಿದ್ದಂತೆ, ನಮ್ಮ ಮೋಹಗಳು ಸಡಿಲಗೊಳ್ಳುತ್ತವೆ. ಆಗ ಆಧ್ಯಾತ್ಮಿಕ ಮಾರ್ಗವೊಂದು ಕಾಣಿಸಲು ಸಾಧ್ಯವಾಗುತ್ತದೆ. ಜೀವನದ ನಿಜವಾದ ಅರ್ಥ ಏನು? ಎಂದು ತಿಳಿಯಲು ನಿದ್ರೆಯೇ ಒಂದು ಸಾಧನವಾಗಿದೆ ಎಂಬ ವಿನಯದೊಂದಿಗೆ ನಿದ್ರೆಯ ವಿಧಿಯಲ್ಲಿ ಲೀನವಾದಾಗ ನಮ್ಮ ಸುಪ್ತಪ್ರಜ್ಞೆ ಎಚ್ಚರಗೊಳ್ಳುತ್ತದೆ. ನಿದ್ರೆ ನಮ್ಮಲ್ಲಿರಬಹುದಾದ ಕಲ್ಮಷಗಳನ್ನು ಮತ್ತು ಸಂಕಟಗಳನ್ನು ಗುರುತಿಸಬಲ್ಲದು. ಹೀಗಾಗಿ ನಿದ್ರೆಯನ್ನು ಒಂದು ಮೌನ ಶುದ್ಧೀಕರಣ ಪ್ರಕ್ರಿಯೆ ಎನ್ನಬಹುದು. ನಮ್ಮಲ್ಲಿರುವ ದೈಹಿಕ ಹಾಗೂ ಮಾನಸಿಕ ಹೊರೆಗಳಿಂದ ಅದು ಬಿಡುಗಡೆ ಮಾಡುತ್ತದೆ; ಜೊತೆಗೆ ಆಧ್ಯಾತ್ಮಿಕ ಸಾಧನೆಯನ್ನೂ ಉತ್ತೇಜಿಸುತ್ತದೆ. ನಿದ್ರೆಯಲ್ಲಿಯ ಅಂತರಂಗ ಶಾಂತ ಪ್ರಕ್ರಿಯೆಯು ನಮ್ಮ ಪ್ರಜ್ಞೆಯನ್ನು ವಿಶಾಲವಾದ ಬ್ರಹ್ಮಾಂಡದ ಜೊತೆಗೆ ಬೆಸೆಯಬಲ್ಲದು. ಹೀಗೆ ನಿದ್ರೆಯನ್ನು ರಾತ್ರಿಕಾಲದ ಪ್ರಾರ್ಥನೆಯೆಂದೇ ಕರೆಯಬಹುದು. ನಿದ್ರೆ ಧ್ಯಾನ ಮತ್ತು ಆಧ್ಯಾತ್ಮಿಕ ಕ್ರಿಯೆಗಳೇ ಹೌದು. ಪ್ರಾಚೀನ ವಿವೇಕದ ಜೊತೆಗೆ ಆಧುನಿಕ ನರವಿಜ್ಞಾನ ಕೂಡ ನಿದ್ರೆಯ ಹಲವು ಉಪಯೋಗಗಳ ಬಗ್ಗೆ ಬೆಳಕನ್ನು ಚೆಲ್ಲುತ್ತಿದೆ. ಆಧ್ಯಾತ್ಮಿಕ ಸಾಧನೆಗಳ ಮೂಲಕ ನಿದ್ರೆಯ ಸ್ಥಿತಿಗಳನ್ನು ಪರೀಕ್ಷಿಸುವುದರಿಂದ ಪ್ರಜ್ಞೆಯ ಸೂಕ್ಷ್ಮ ಸ್ತರಗಳ ಬಗ್ಗೆ ಹಲವು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ನಿದ್ರೆಯು ನಮ್ಮ ಪ್ರಾಪಂಚಿಕ ಜೀವನ ಮತ್ತು ಆಂತರಿಕಲೋಕಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ; ಇದು ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ಒಗ್ಗೂಡುವಿಕೆಯಾಗಿದೆ.ಹೀಗೆ ನಿದ್ರೆಯು ಪ್ರತಿಯೊಂದು ರಾತ್ರಿಯೂ ನಮ್ಮ ಆಂತರಿಕ ಹಾಗೂ ದೈಹಿಕ ಪರಿವರ್ತನೆಗೆ ಅವಕಾಶವನ್ನು ನೀಡುತ್ತದೆ. ಇದು ಸೂಕ್ಷ್ಮಸ್ತರದಲ್ಲಿ ಧ್ಯಾನಕ್ಕೆ ಮತ್ತು ಆಧ್ಯಾತ್ಮಿಕ ಜಾಗೃತಿಗೆ ಪ್ರಬಲವಾದ ವೇಗವರ್ಧಕವೂ ಆಗಿದೆ. ಮಲಗುವ ಸಮಯದ ಶಿಸ್ತನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಳ್ಳಬೇಕು. ಇಂಥ ಅಭ್ಯಾಸವು ನಿದ್ರೆಯನ್ನು ಕೇವಲ ಶಾರೀರಿಕ ವಿಶ್ರಾಂತಿಯ ಹಂತವನ್ನಾಗಿಸದೆ, ಅದು ನಮ್ಮ ಆಂತರಿಕ ಜೀವನವನ್ನು ಮರುರೂಪಿಸುವ ಅರ್ಥಪೂರ್ಣ ಆಧ್ಯಾತ್ಮಿಕ ಅಭ್ಯಾಸವಾಗಿ ಪರಿವರ್ತಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.