ಸಾಮಾಜಿಕ ಜಾಲತಾಣಗಳು ಈಗ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಅದು ಕೆಲಮಟ್ಟಿಗೆ ಅನಿವಾರ್ಯವೂ ಹೌದು. ಸ್ನೇಹಿತರು, ಸಹೋದ್ಯೋಗಿಗಳು ಅಪ್ಲೋಡ್ ಮಾಡಿದ ಫೋಟೊಗಳನ್ನು ಲೈಕ್ ಮಾಡುವುದರಿಂದ ಹಿಡಿದು ಚರ್ಚೆ, ಆನ್‌ಲೈನ್ ಮೀಟಿಂಗ್, ಅಡುಗೆ ರೆಸಿಪಿ, ಆಹ್ವಾನಗಳು ಕೊನೆಗೆ ಒಬ್ಬರನ್ನೊಬ್ಬರು ದೂಷಿಸುವವರೆಗೂ ನಾವು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಿದ್ದೇವೆ. ದೇಶ-ವಿದೇಶಗಳ ಸುದ್ದಿ, ಮನೋರಂಜನೆ-ಕ್ರೀಡೆಗಳ ಸುದ್ದಿಗಳ ಜೊತೆಗೆ ಅನೇಕ ಗಾಳಿಸುದ್ದಿಗಳೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದಾದ್ಯಂತ ಕ್ಷಣಮಾತ್ರದಲ್ಲಿ ಪ್ರಸಾರಗೊಳ್ಳುತ್ತಿವೆ. ಇದರ ಜೊತೆಗೆ ಆನ್‌ಲೈನ್ ಮೋಸ-ವಂಚನೆ, ಗೋಪ್ಯತೆಯ ಸೋರುವಿಕೆ, ತೇಜೋವಧೆ ಮತ್ತು ಮತೀಯ ಸೌಹಾರ್ದತೆಗೆ ಧಕ್ಕೆ ತರುವ ಕೆಲ ಅನಿಷ್ಟಗಳ ಮೂಟೆಯನ್ನೂ ಸಾಮಾಜಿಕ ಜಾಲತಾಣಗಳು ನಮ್ಮೆದುರಿಗೆ ತೆರೆದಿಟ್ಟಿವೆ.
ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬರುವ ಮತ್ತೊಂದು ಪ್ರಮುಖ ವಿಷಯವೆಂದರೆ ಆರೋಗ್ಯಸಂಬಂಧಿ ವಿಷಯಗಳ ಚರ್ಚೆ. ಆರೋಗ್ಯದ ಕಾಳಜಿ ಎಲ್ಲರಿಗೂ ಇದ್ದೇ ಇರುತ್ತದೆ. ಅದೇ ರೀತಿ ತಮಗೆ ಅಥವಾ ತಮ್ಮ ಕುಟುಂಬದಲ್ಲಿ ಉಂಟಾದ ಅನಾರೋಗ್ಯದ ಬಗ್ಗೆ ಇತರರಲ್ಲಿ ಚರ್ಚಿಸುವುದು ತುಂಬಾ ಸಾಮಾನ್ಯ ವಿಷಯ. ಮೊದಲು ಜಗಲಿಯ ಹರಟೆಗೆ ಸೀಮಿತವಾಗಿದ್ದ ಚರ್ಚೆ, ಬಳಿಕ ದೂರವಾಣಿ ಮೂಲಕ ದೂರದ ಊರಿನವರೊಡನೆಯೂ ಪ್ರಾರಂಭವಾಗಿ ಈಗ ಫೇಸ್‌ಬುಕ್, ವಾಟ್ಸ್ ಆ್ಯಪ್‌ನಂಥ ಜಾಲತಾಣಗಳಲ್ಲಿ ಹಂಚಿಕೊಳ್ಳುವರೆಗೆ ಬಂದಿದೆ. ಇನ್ನೊಬ್ಬರೊಡನೆ ಆರೋಗ್ಯ ತೊಂದರೆಗಳನ್ನು ಹಂಚಿಕೊಳ್ಳುವುದು, ಸಹಾಯ ಕೇಳುವುದು ಉತ್ತಮವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಷಯ ಹಂಚಿಕೊಳ್ಳುವಾಗ ಕೊಂಚ ಜಾಗರೂಕರಾಗಿರುವುದು ಉತ್ತಮ.
ಉದಾಹರಣೆಗೆ, ‘ನಮ್ಮತ್ತೆಗೆ ಕೆಲ ದಿನಗಳಿಂದ ಕೀಲುನೋವಿದೆ, ಯಾವ ಡಾಕ್ಟ್ರು ಉತ್ತಮ?’ ಎಂದು ನೀವು ನಿಮ್ಮ ಪರಿಚಯದ ಗುಂಪಿನಲ್ಲಿ ಪೋಸ್ಟ್ ಮಾಡಿದಿರೋ ಅದಕ್ಕೆ ಹಲವಾರು ಪ್ರತ್ಯುತ್ತರಗಳು ದೊರಕುತ್ತವೆ. ‘ಅಯ್ಯೋ, ಅದಕ್ಕೆಲ್ಲ ಡಾಕ್ಟ್ರೆ ಬೇಕಾ? ಇಂಥ ಎಣ್ಣೆಯನ್ನು ಉಜ್ಜಿ, ಒಂದೇ ವಾರದಲ್ಲಿ ನೋವು ಹೊರಟೋಗುತ್ತೆ ನೋಡಿ! ನಾನು ಮನೇಲಿ ಅದನ್ನೇ ಮಾಡಿದ್ದು’ ಎಂತಲೋ, ಅಥವಾ ‘ಆ ಡಾಕ್ಟ್ರು ಚೆನ್ನಾಗಿದ್ದಾರೆ’ ಎಂತಲೋ ಸಲಹೆಗಳಂತೂ ತುಂಬ ಸಿಗುತ್ತವೆ. ಕೆಲವರು ಅದಕ್ಕೆ ಮತ್ತೆ, ‘ಅಯ್ಯೋ, ಆ ಡಾಕ್ಟರ್ ಕಡೆ ಹೋಗಬೇಡಿ, ಕಾಲೇ ಕುಯ್ದುಬಿಟ್ಟಾರು’ ಎಂಬಂಥ ಸಲಹೆಗಳನ್ನೂ ನೀಡುತ್ತಾರೆ. ಮುಖ್ಯವಾಗಿ ಎಲ್ಲರ ಕೀಲುನೋವಿನ ಮೂಲ ಒಂದೇ ಇರಬೇಕಂತಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ಚಿಕಿತ್ಸೆಯನ್ನು ಸೂಚಿಸಲಾಗುವುದಿಲ್ಲ. ಇಲ್ಲಿ ಕೂಲಂಕಷವಾಗಿ ರೋಗಿಯನ್ನು ಪರೀಕ್ಷಿಸದೇ ಚಿಕಿತ್ಸೆ ನೀಡುವುದು ಸಮರ್ಪಕವಾಗುವುದಿಲ್ಲ. ಯಾವುದೋ ಎಣ್ಣೆಯನ್ನು ಹಚ್ಚಿ ನೋವು ಉಲ್ಬಣವಾದರೆ ಯಾರು ಹೊಣೆ? ಅಲ್ಲದೇ ಆ ವೈದ್ಯ ಬೇರೊಂದು ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಏಕೆ ಮಾಡಿದ್ದ ಎನ್ನುವುದನ್ನು ತಿಳಿದುಕೊಳ್ಳದೆ ಟೀಕಿಸುವುದು ಆತನ ತೇಜೋವಧೆಯನ್ನು ಮಾಡಿದಂತೆಯೂ ಆಗುತ್ತದೆ.
ಕೆಲವೊಮ್ಮೆ ರೋಗಿಯ ಚಿತ್ರಗಳನ್ನು, ತಪಾಸಣೆಯ ವಿವರಗಳನ್ನೂ ಜನರು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಗುಂಪಿನಲ್ಲಿರೋ ಎಲ್ಲರಿಗೂ ಇವು ಕಾಣುವುದರಿಂದ ಕೆಲವು ಬಾರಿ ಇಂಥ ವಿವರಗಳ ದುರುಪಯೋಗವೂ ಆಗಬಹುದು. ಆದ್ದರಿಂದ ವೈಯುಕ್ತಿಕವಾದ ವಿಚಾರಗಳನ್ನು, ವಿವರಗಳನ್ನು ಜಾಲತಾಣಗಳಲ್ಲಿ ತೆರೆದಿಡುವುದು ಜಾಣತನವಲ್ಲ. ಹಲವು ಬಾರಿ ಜಾಹೀರಾತುದಾರರು ಕೂಡ ಈ ವಿವರಗಳನ್ನು ಶೋಧಿಸಿ ತಮ್ಮ ಸರಕನ್ನು ಖರೀದಿಸುವಂತೆ ನಮಗೆ ದುಂಬಾಲು ಬೀಳುತ್ತಾರೆ.
ವೈದ್ಯರ ಭೇಟಿಗಾಗಿಯೇ ಕೆಲವು ಆ್ಯಪ್‌ಗಳು ಇರುತ್ತವೆ. ವೈದ್ಯರ ಅರ್ಹತೆ, ಸಮಯ ಹಾಗೂ ಸಂದರ್ಶನದ ದರಗಳೂ ಇಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ನಮಗೆ ಬೇಕಾದ ವೈದ್ಯರ ಜೊತೆ ಸಮಾಲೋಚನೆಗಾಗಿ ವೇಳೆಯನ್ನು ನಿಗದಿ ಪಡಿಸಬಹುದು. ಆದರೆ ಎಲ್ಲ ಆ್ಯಪ್‌ಗಳೂ ಪಾರದರ್ಶಕವಾಗಿ ಕೆಲಸ ಮಾಡುತ್ತವೆ ಎಂದು ಹೇಳುವಂತಿಲ್ಲ. ಕೆಲ ವೈದ್ಯರೂ ಆ್ಯಪ್‌ಗಳಿಗೆ ಹೆಚ್ಚಿನ ದುಡ್ಡನ್ನು ನೀಡಿ ತಮ್ಮ ಹೆಸರೇ ಮುಖ್ಯವಾಗಿ ಕಾಣುವಂತೆ ಮಾಡುತ್ತಾರೆ.
ಅನೇಕರು ಗೂಗಲ್‌ನಲ್ಲಿ ಅರೋಗ್ಯ-ಅನಾರೋಗ್ಯದ ವಿವರಗಳ ಬಗ್ಗೆ ಹುಡುಕಾಟವನ್ನು ನಡೆಸುತ್ತಾರೆ. ಗೂಗಲ್ ತುಂಬ ಜನಪ್ರಿಯ ಕೂಡ. ಆದರೆ ಇಲ್ಲಿ ಕೂಡ ಈಗಾಗಲೇ ತಿಳಿಸಿದಂತೆ ಗೋಪ್ಯತೆಯ ಸೋರಿಕೆ ಆಗಬಹುದು. ಜೊತೆಗೆ ಸಾಗರದಷ್ಟು ಮಾಹಿತಿ ಒಮ್ಮೆಲೇ ದೊರಕುವುದರಿಂದ ಯಾವುದು ಉಪಯೋಗಿ, ಯಾವುದು ನಿರುಪಯುಕ್ತ ಎಂಬ ಗೊಂದಲ ಮೂಡುತ್ತದೆ.
ಈಗ ಜಾಲತಾಣಗಳಲ್ಲಿ ‘ಎಐ’ (AI) ಎಂಬ ನವತಾರೆಯ ಉಗಮವಾಗಿದೆ. ಕ್ಯಾಲ್ಕ್ಯುಲೇಟರ್ ಮತ್ತು ಕಂಪ್ಯೂಟರ್‌ಗಳನ್ನು ಬಳಸುವವರಿಗೆ ಎಐನ ಸರಳರೂಪದ ಅನುಭವ ಆಗೇ ಆಗಿರುತ್ತದೆ. ಆದರಿದು ಅವೆಲ್ಲಕ್ಕಿಂತ ಮಿಗಿಲಾದ ಬುದ್ಧಿಮತ್ತೆಯ ಹುಡುಕಾಟದ ಸಂಗಾತಿ. ನಮ್ಮ ವೈದ್ಯಕೀಯದ ವಿವರಗಳನ್ನು ಎಐಗೆ ನೀಡಿದಾಗ ಅದು ಕ್ಷಣಾರ್ಧದಲ್ಲಿ ಸಾವಿರಾರು ಸಾಧ್ಯತೆಗಳನ್ನು ಹುಡುಕಿ ನಮ್ಮ ವಿವರಗಳಿಗೆ ಸರಿಹೊಂದುವ ಮಾಹಿತಿಯನ್ನು ನೀಡುತ್ತದೆ. ಆದರೆ ಇದಕ್ಕೂ ಆದರದ್ದೇ ಆದ ಇತಿಮಿತಿಗಳಿವೆ. ಡೇಟಾ ಸೋರಿಕೆ ಬಹುಮುಖ್ಯ ವಿಷಯ. ಇದರೊಂದಿಗೆ ತನ್ನಳೊಗೆ ಈಗಾಗಲೇ ಇರದೇ ಇದ್ದ ವಿಷಯದ ಮಾಹಿತಿ ನೀಡುವ ಬಗ್ಗೆ ಇನ್ನೂ ಗೊಂದಲಗಳಿವೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಎಐ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಬಹುದಾದ ಸಾಧ್ಯತೆಗಳಿವೆ.
ಜಾಲತಾಣಗಳು ಅಥವಾ ಆ್ಳಪ್‌ಗಳನ್ನು ಸಂಪರ್ಕಿಸಿ, ಸಲಹೆಗಳನ್ನು ಪಡೆಯುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ಮತ್ತು ಆದಷ್ಟೂ ವೈಯುಕ್ತಿಕ ವಿವರಗಳನ್ನು ನೀಡದೇ ಸಲಹೆಗಳನ್ನು ಪಡೆಯುವುದು ಸೂಕ್ತ. ಆದರೆ ಮುಖಾಮುಖಿಯಾಗಿ ಸಮಾಲೋಚನೆ ನಡೆಸುವ, ವೈದ್ಯ-ರೋಗಿಯ ಪವಿತ್ರ ಸಂಬಂಧವನ್ನು ಕಾಪಾಡುವ ಗುಣಗಳು ಇಲ್ಲಿಲ್ಲವೆಂಬುದೇ ಒಂದು ದುರದೃಷ್ಟದ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.