ADVERTISEMENT

Stress and Fertility: ಅತಿಯಾದ ಒತ್ತಡವೂ ಬಂಜೆತನಕ್ಕೆ ಕಾರಣವಾಗಬಹುದು, ಎಚ್ಚರ!

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:01 IST
Last Updated 10 ಏಪ್ರಿಲ್ 2025, 13:01 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಿಂದೆಲ್ಲಾ ಮನೆ ತುಂಬಾ ಮಕ್ಕಳಿರಬೇಕಯ್ಯ ಎನ್ನುತ್ತಿದ್ದರು. ಆದರೆ ಇಂದು ಮನೆಗೊಂದು ಮಗು ಮಾಡಿಕೊಳ್ಳುವುದೇ ದೊಡ್ಡ ಸಾಧನೆಯಾಗಿದೆ. ಏಕೆಂದರೆ, ಇಂದಿನ ಜೀವನಶೈಲಿಯಿಂದ ಸಾಕಷ್ಟು ಜನರಿಗೆ ಮಕ್ಕಳ ಭಾಗ್ಯವೇ ದೊರೆಯುತ್ತಿಲ್ಲ. ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುವುದರಿಂದ ಕೆಲಸ ಹಾಗೂ ಕುಟುಂಬ ಎರಡೂ ಕಡೆಯಿಂದಲೂ ಒತ್ತಡ ಹೆಚ್ಚಾಗುತ್ತಿದ್ದು, ಒತ್ತಡದಿಂದಲೂ ಗರ್ಭಧಾರಣೆ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ಹಲವು ಅಧ್ಯಯನಗಳು ಹೇಳಿವೆ. ಹೌದು, ಮಕ್ಕಳು ಮಾಡಿಕೊಳ್ಳಲು ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ.

ಒತ್ತಡದಿಂದಲೂ ಮಕ್ಕಳಾಗದಿರಬಹುದು...

ADVERTISEMENT

ಸಾಕಷ್ಟು ಜನರಿಗೆ ದೈಹಿಕ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಅವರಿಗೆ ಮಕ್ಕಳಾಗುವುದಿಲ್ಲ. ಇದಕ್ಕೆ ಅವರ ಮಾನಸಿಕ ಆರೋಗ್ಯ ಕಾರಣವಾಗಿರಬಹುದು. ಈ ಕಾಲದಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ದುಡಿಯುತ್ತಿರುವುದರಿಂದ ಕೆಲಸದ ಒತ್ತಡ ಇಬ್ಬರಲ್ಲೂ ಸಮಾನವಾಗಿರಬಹುದು. ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾಗುತ್ತಿದ್ದರೆ, ನಿಮ್ಮಲ್ಲಿನ ಹಾರ್ಮೋನ್‌ಗಳು ಸ್ಥಿರತೆ ಕಳೆದುಕೊಂಡು, ಅಸಮತೋಲನಗೊಳ್ಳಬಹುದು. ಇದರಿಂದಾಗಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಏರುವ ಮೂಲಕ, ಅಂಡಾಣುಗಳ ಗುಣಮಟ್ಟವನ್ನು ಸಂಪೂರ್ಣವಾಗಿ ಕುಗ್ಗಿಸಬಹುದು ಅಥವಾ ಕಡಿಮೆ ಪ್ರಮಾಣದಲ್ಲಿ ಅಂಡೋತ್ಪತ್ತಿ ಆಗಬಹುದು. ಹೀಗೆ ಗುಣಮಟ್ಟವಿಲ್ಲದ ಅಂಡಾಣು ಉತ್ಪತ್ತಿಯಿಂದ ಫಲವತ್ತತೆ ಹೊಂದುವುದು ಸಾಧ್ಯವಾಗುವುದಿಲ್ಲ.

ದೀರ್ಘಕಾಲದ ಒತ್ತಡದಿಂದ ಬಂಜೆತನ...

ಇನ್ನು ಕೆಲವರು ದೀರ್ಘಕಾಲದ ಒತ್ತಡದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾರಾದರೂ ಈ ಸಮಸ್ಯೆ ಬಂಜೆತನಕ್ಕೂ ಕಾರಣವಾಗಬಹುದು ಎಂದು ಊಹಿಸಿರುವುದಿಲ್ಲ. ಪ್ರತೀ ವಿಚಾರಕ್ಕೂ ಕೊರಗುವುದು, ಕೋಪಗೊಳ್ಳುವುದು, ಟೆನ್ಷನ್‌, ಅತಿಯಾದ ಯೋಚನೆ, ಮಾನಸಿಕ ಒತ್ತಡ ಈ ಎಲ್ಲವೂ ದೀರ್ಘಕಾಲದ ಒತ್ತಡಕ್ಕೆ ಕಾರಣವಾಗಲಿದೆ. ದೀರ್ಘಕಾಲದ ಒತ್ತಡದಿಂದ ಅವರಲ್ಲಿನ ಲೈಂಗಿಕ ಆಸಕ್ತಿಯೇ ಕುಂಠಿತಗೊಳ್ಳಬಹುದು, ಸಂಗಾತಿಯೊಂದಿಗೆ ಪ್ರೀತಿಯಿಂದ ಖಾಸಗಿ ಸಮಯ ಕಳೆಯಲು ಸಹ ಸಾಧ್ಯವಾಗುವುದಿಲ್ಲ. ಲೈಂಗಿಕತೆಯಲ್ಲಿ ಆಸಕ್ತಿ ಕಳೆದುಕೊಂಡು ಕೇವಲ ಮಕ್ಕಳಾಗಬೇಕೆಂಬ ಕಾರಣಕ್ಕೆ ದೈಹಿಕ ಸಂಪರ್ಕ ಹೊಂದುತ್ತಿದ್ದರೂ ಫಲವತ್ತತೆಯ ವೀರ್ಯಗಳು ಬಿಡುಗಡೆಯಾಗುವುದಿಲ್ಲ. ವಿಶೇಷವಾಗಿ ಪುರುಷರಲ್ಲಿ ಟೆಸ್ಟೋಸ್ಟೆರಾನ್‌ ಮತ್ತು ಎಫ್‌ಎಸ್‌ಎಚ್‌/ಎಲ್‌ಎಚ್‌ ಹಾರ್ಮೋನ್‌ಗಳ ಮೂಲಕ ಸತ್ವಹೀನ ವೀರ್ಯ ಬಿಡುಗಡೆಯಾಗಬಹುದು.

ಒತ್ತಡ ನಿವಾರಣೆ ಹೇಗೆ?

ಈ ಕಾಲದಲ್ಲಿ ಒತ್ತಡವಿಲ್ಲದೆ ಜೀವನ ನಡೆಸುವುದು ಅಸಾಧ್ಯದ ಕೆಲಸವೇ ಸರಿ. ಆದರೂ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಿತದೃಷ್ಟಿಯಿಂದ ಒತ್ತಡ ನಿವಾರಿಸಿ, ಕುಟುಂಬ ಬೆಳೆಸುವತ್ತ ಗಮನ ಹರಿಸಲೇಬೇಕು. ಇದಕ್ಕಾಗಿ ದಂಪತಿಗಳು ಮೊದಲು ಈ ಬಗ್ಗೆ ಸೂಕ್ತ ನಿರ್ಣಯಕ್ಕೆ ಬರಬೇಕು. ಮಾನಸಿಕ ಆರೋಗ್ಯ ಸುಧಾರಣೆಗೆ ಇಬ್ಬರ ಮಧ್ಯೆ ಒಲವು ಅತಿಮುಖ್ಯ. ನೀವು ದೈಹಿಕ ಸಂಪರ್ಕ ಹೊಂದುವ ಸಂದರ್ಭದಲ್ಲಿ ಯಾವುದೇ ಚಿಂತೆಗಳಿದ್ದರೂ ದೂರಸರಿಸಿ, ಸಂಗಾತಿಯೊಂದಿಗೆ ಏಕಾಂತದಿಂದ ಸಮಯ ಕಳೆಯಿರಿ. ಈ ವೇಳೆ ನಿಮ್ಮಲ್ಲಿರುವ ಒತ್ತಡದ ಹಾರ್ಮೋನ್‌‌ಗಳ ಸ್ರಾವ ಕಡಿಮೆಯಾಗಿ, ಗುಣಮಟ್ಟದ ವೀರ್ಯ ಬಿಡುಗಡೆಗೆ ಸಹಕಾರಿಯಾಗಲಿದೆ. ಮಾನಸಿಕ ಆರೋಗ್ಯಕ್ಕಾಗಿ ವೈದ್ಯರೊಂದಿಗೆ ಸಮಾಲೋಚನೆಯನ್ನೂ ಪಡೆದುಕೊಳ್ಳಿ. ದೈಹಿಕ ಸಮಸ್ಯೆ ಇದ್ದಲ್ಲಿ, ಐವಿಎಫ್‌‌ನಂತಹ ಇತರೆ ಮಾರ್ಗವನ್ನು ಆಯ್ದುಕೊಳ್ಳಿ. ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸುವುದನ್ನು ಕಲಿತಾಗ ಒತ್ತಡ ಮುಕ್ತರಾಗಿ ಬದುಕಲು ಸಾಧ್ಯ.

ಉತ್ತಮ ಆರೋಗ್ಯಾಭ್ಯಾಸ ರೂಢಿಸಿಕೊಳ್ಳಿ

ಮತ್ತೊಂದೆಡೆ, ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವತ್ತ ಒಂದಷ್ಟು ಸಮಯ ಮೀಸಲಿಡಿ. ಧ್ಯಾನ, ಯೋಗ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಉತ್ತಮ ಆಹಾರ ಸೇವನೆ, ಧೂಮಪಾನ-ಮದ್ಯಪಾನದಂತಹ ಚಟಗಳಿಂದ ದೂರವಿರಬೇಕು, ಯಾಕೆಂದರೆ ಅವು ಹಾರ್ಮೋನ್‌ಗಳನ್ನು ಅಸಮತೋಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಈ ಎಲ್ಲಾ ಕೆಟ್ಟ ಚಟಗಳಿಂದ ದೂರವಿದ್ದು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ. ಪ್ರಮುಖವಾಗಿ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿರಿ. ಇದರಿಂದ ಕೇವಲ ಫಲವತ್ತತೆ ಅಲ್ಲದೆ ಬಹುತೇಕ ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ.

ಲೇಖಕರು: ಉಪ ವೈದ್ಯಕೀಯ ನಿರ್ದೇಶಕರು, ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.