ADVERTISEMENT

ಎಸಿ ಬಳಸ್ತೀರಾ? ಕಣ್ಣು ಜೋಪಾನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:45 IST
Last Updated 30 ಏಪ್ರಿಲ್ 2019, 19:45 IST
.
.   

ಏ ರ್ ಕಂಡೀಷನ್ (ಎಸಿ) ಬಳಸುತ್ತಿರುವಿರಾದರೆ ನಿಮ್ಮ ಕಣ್ಣುಗಳು ಜೋಪಾನ ಅನ್ನುತ್ತಾರೆ ನೇತ್ರತಜ್ಞರು.

ದೇಹ ಮತ್ತು ತಾವಿರುವ ವಾತಾವರಣ ಒಂದೇ ತಾಪಮಾನದಲ್ಲಿರಲಿ ಎಂದು ಎಸಿ ಮೊರೆ ಹೋಗುವವರಲ್ಲಿ ಒಣಕಣ್ಣುಗಳ (ಡ್ರೈ ಐಸ್‌) ಸಮಸ್ಯೆ ಎದುರಾಗುತ್ತದೆ ಅನ್ನುತ್ತಾರೆ ನೇತ್ರ ವೈದ್ಯರು.

ಯಂತ್ರದ ಮೂಲಕ ಬೀಸುವ ಕೃತಕ ಗಾಳಿ ಮತ್ತು ತಾಪಮಾನ ಕಣ್ಣುಗಳಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಕಣ್ಣುಗಳಲ್ಲಿ ಸಾಕಾಗುವಷ್ಟು ಗುಣಮಟ್ಟದ ಮತ್ತು ಅಗತ್ಯ ಪ್ರಮಾಣದ ನೀರಿನ ಕೊರತೆಯಾಗುತ್ತದೆ. ಏರ್ ಕಂಡೀಷನ್ಡ್‌ ಅಥವಾ ಹವಾ ನಿಯಂತ್ರಿತ ಕೊಠಡಿಲ್ಲಿ ತಾಪಮಾನ ಕಡಿಮೆ ಇರುವುದರಿಂದ ತೇವಾಂಶ ನಷ್ಟವಾಗುತ್ತದೆ. ಇಂಥ ವಾತಾವರಣದಲ್ಲಿ ದೀರ್ಘಾವಧಿಗೆ ಕಣ್ಣುಗಳನ್ನು ಒಡ್ಡುವುದರಿಂದ ಕಣ್ಣೀರಿನ ಗುಣಮಟ್ಟ, ಪ್ರಮಾಣದಲ್ಲಿ ಬದಲಾವಣೆಯಾಗಿ ಒಣ ಕಣ್ಣುಗಳ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಗಂಭೀರ ಸ್ವರೂಪದ ಸಮಸ್ಯೆಗಳಿಗೂ ಕಾರಣವಾಗಬಲ್ಲದು.

ADVERTISEMENT

‘ಏರ್ ಕಂಡೀಷನಿಂಗ್‌ನಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸುಲಭವಾಗಿ ಹರಡಬಲ್ಲವು. ಎಸಿಯಲ್ಲಿ ಸೋಂಕಿಗೆ ಪೂರಕವಾದ ಗುಣಗಳಿರುವುದರಿಂದ ಕಣ್ಣುಗಳಲ್ಲಿ ಉರಿ ಮತ್ತು ಸೋಂಕು ಕಾಣಿಸಿಕೊಳ್ಳಬಲ್ಲದು’ ಎಂದು ವಿವರಿಸುತ್ತಾರೆ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತ್ರಜ್ಞೆ ಡಾ.ಲಾವಣ್ಯ ಮರಿನೇನಿ.

ಡ್ರೈ ಐಗೆ ಇತರೆ ಪ್ರಮುಖ ಕಾರಣಗಳು

* ಮಹಿಳೆಯರಲ್ಲಿ ಋತುಬಂಧ

* ಮಧುಮೇಹ, ಥೈರಾಯ್ಡ್ ಏರುಪೇರು, ವಿಟಮಿನ್ ಎ ಕೊರತೆ

* ಖಿನ್ನತೆ ಶಮನಕ್ಕೆ ಬಳಸುವ ಔಷಧಿ

* ವಾಯುಮಾಲಿನ್ಯ

ಲಕ್ಷಣಗಳು

* ಕಣ್ಣುಗಳಲ್ಲಿ ಉರಿಯುಂಟಾಗುವುದು

* ಕಣ್ಣುಗಳು ಒಣಗಿದಂತಾಗುವುದು

* ಕಣ್ಣಿನೊಳಗೆ ಏನೋ ಬಿದ್ದಂತಾಗಿ ತುರಿಕೆಯುಂಟಾಗುವದು

* ಕಣ್ಣಿಗಳಲ್ಲಿ ಆಯಾಸ, ಭಾರವಾದಂತೆ ಭಾಸವಾಗುವುದು

* ಕಣ್ಣುಗಳಲ್ಲಿ ನೀರು ತುಂಬಿಕೊಂಡಂತಾಗುವುದು, ದೃಷ್ಟಿ ಮಸುಕಾದಂತಾಗುವುದು.

ಪ‌ರಿಹಾರವೇನು?

ಸತತವಾಗಿ ಏರ್ ಕಂಡೀಷರ್‌ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕಣ್ಣುಗಳು ಒಣಗಿದಂತಾಗುವುದು ಸಹಜ. ಇದನ್ನು ತಡೆಗಟ್ಟಲು ಕೃತಕ ಲ್ಯೂಬ್ರಿಕೆಂಟ್ಸ್‌ ಬಳಸಬೇಕು. ಪ್ರತಿ ನಾಲ್ಕು ಗಂಟೆಗೊಮ್ಮೆ ಒಂದೊಂದು ತೊಟ್ಟು ಹಾಕಿಕೊಳ್ಳಬೇಕು. ವೈದ್ಯರ ಸಲಹೆ ಪಡೆದೇ ಇದನ್ನು ಬಳಸಬೇಕು.

ಡ್ರೈ ಐ ತಡೆಯಲು ಸಲಹೆಗಳು

* ಎಸಿಯ ತಾಪಮಾನವನ್ನು 23 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಸೆಟ್ ಮಾಡುವುದು

* ಪ್ರತಿದಿನ ಸಾಕಷ್ಟು ದ್ರವರೂಪದ ಪಾನೀಯ ಸೇವನೆ

* ಕಂಪ್ಯೂಟರ್, ಮೊಬೈಲ್ ಬಳಸುವಾಗ ಕಾಲಕಾಲಕ್ಕೆ ರೆಪ್ಪೆ ಬಡಿಯುವುದು

* ಪ್ರತಿ ಗಂಟಗೆ ಮೂರು ಬಾರಿ ಅರ್ಧನಿಮಿಷದಷ್ಟು ವಿಶ್ರಾಂತಿ

* ನಿತ್ಯ ಕನಿಷ್ಠ 7ರಿಂದ 8 ಗಂಟೆ ನಿದ್ದೆ

* ಬೇಸಿಗೆಯಲ್ಲಿ ಸನ್ ಗ್ಲಾಸ್ ಅಥವಾ ಸುರಕ್ಷತಾ ಕನ್ನಡಕ ಬಳಕೆ

* ವೈದ್ಯರು ನೀಡುವ ಸಲಹೆ, ಶಿಫಾರಸು ಪಾಲನೆ

ಕಂಪ್ಯೂಟರ್ ವಿಷನ್ ಸಿಂಡ್ರೋಮ್

‘ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಇಲ್ಲೂ ಕಣ್ಣುಗಳಲ್ಲಿ ತೇವಾಂಶದ ಕೊರತೆ ಕಂಡು ಬರುತ್ತದೆ. 20–20–20 ವ್ಯಾಯಾಮ ಮಾಡಬೇಕು. ಪ್ರತಿ 20 ನಿಮಿಷಗಳಿಗೆ 20 ಸೆಕೆಂಡ್‌ಗಳ ಕಾಲ 20 ಫೀಟ್ ದೂರದಲ್ಲಿರುವ ಒಂದು ವಸ್ತುವನ್ನು ನೋಡಬೇಕು. ಹತ್ತಿರದಲ್ಲಿ ನೋಡಿ ಕಣ್ಣಿ್ಗೆ ಆಯಾಸವಾಗಿರುತ್ತದೆ. ಕೆಲವೊಮ್ಮೆ ತಲೆನೋವು ಬಂದು ದೃಷ್ಟಿಗೂ ಸಮಸ್ಯೆಯಾಗಬಹುದು’ ಎನ್ನುತ್ತಾರೆಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಬಿ.ಎಲ್. ಸುಜಾತ ರಾಥೋಡ್.

ಕಂಪ್ಯೂಟರ್ ವಿಷನ್ ಸಿಂಡ್ರೋಮ್‌ನಲ್ಲಿ ಕಣ್ಣಿನ ಸ್ನಾಯುಗಳು ಬರೀ ಹತ್ತಿರದ ವಸ್ತುಗಳನ್ನು ನೋಡಿ ದಣಿದಿರುತ್ತವೆ. ಹಾಗಾಗಿ, 20 ಅಡಿಗಳಷ್ಟು ದೂರದ ಯಾವುದಾದರೊಂದು ವಸ್ತುವನ್ನು ನೋಡಿದರೆ ಕಣ್ಣಿನ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಸಿರು ನೋಡಿದರೆ ಒಳಿತು.

ಇದರಿಂದ ಕಂಪ್ಯೂಟರ್‌ನಿಂದ ಹೊರಹೊಮ್ಮುವ ಹಾನಿಕಾರಕ ರೇಡಿಯಷನ್‌ಗಳನ್ನು ತಡೆಗಟ್ಟಬಹುದು. ಸಂಶೋಧನೆಗಳ ಪ್ರಕಾರ 25 ಡಿಗ್ರಿಯಲ್ಲಿ ಎಸಿ ಅನ್ನು ಸೆಟ್ ಮಾಡಿಕೊಂಡು ಫ್ಯಾನ್ ಕೂಡಾ ಹಾಕಿಕೊಂಡರೆ ದೇಹದ ಉಷ್ಣಾಂಶವನ್ನು ಕಾಪಾಡುವಷ್ಟು ಕೊಠಡಿಯ ತಾಪಮಾನ ರೂಪುಗೊಳ್ಳುತ್ತದೆ. ತುಂಬಾ ಕೂಲಿಂಗ್ ಎಫೆಕ್ಟ್ ಆಗದೇ, ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಬಹುದು ಅನ್ನುವುದು ಅವರ ಸಲಹೆ.

ಬೇಸಿಗೆಯಲ್ಲಿ ಕಣ್ಣಿನ ಸಮಸ್ಯೆ

ಬೇಸಿಗೆಯಲ್ಲಿ ದೂಳು ಮತ್ತು ಪರಿಸರ ಮಾಲಿನ್ಯವೂ ಜಾಸ್ತಿ ಇರುತ್ತದೆ. ಇದರಿಂದಾಗಿ ಕಣ್ಣುಗಳಿಗೆ ಹಾನಿಯಾಗಬಹುದು. ಕಣ್ಣುರಿ ಬರಬಹುದು. ಇಂಥವರು ವೈದ್ಯರ ಸಲಹೆ ಮೇರೆಗೆ ಟಿಯರ್ ಡ್ರಾಪ್ಸ್‌ ಉಪಯೋಗಿಸಬಹುದು. ಒಮ್ಮೆ ಡ್ರಾಪ್ಸ್ ಓಪನ್ ಮಾಡಿದರೆ ಆ ತಿಂಗಳಲ್ಲಿ ಮಾತ್ರ ಉಪಯೋಗಿಬಹುದು. ಬಳಸಿದ ನಂತರ ಫ್ರಿಜ್‌ನಲ್ಲಿ ಇಡಬೇಕು. ಬೇಸಿಗೆಯಲ್ಲಿ ಡ್ರೈನೆಸ್ ಕೋಲ್ಯಾಜಿನ್ ವ್ಯಾಸುಲರ್ ಡಿಸೀಸ್ ಕೂಡಾ ಬರುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಕೂಡಾ ಕೆಲವೊಮ್ಮೆ ಕಣ್ಣಿನ ಕಡಿತಕ್ಕೆ ಕಾರಣವಾಗಬಹುದು.

ಮಾವಿನಹಣ್ಣು ತಿನ್ನುವಾಗ ಹುಷಾರ್!

ಬೇಸಿಗೆ ಮಾವಿನಹಣ್ಣಿನ ಸೀಸನ್. ಬೇಗ ಹಣ್ಣಾಗಲೆಂದು ರಾಸಾಯನಿಕ ಸಿಂಪಡಿಸಿರುತ್ತಾರೆ. ಇದು ಕಣ್ಣಿನ ಸಂಪರ್ಕಕ್ಕೆ ಬಂದರೆ ಸೋಂಕು ತಗಲುತ್ತದೆ. ಅಂತೆಯೇ ವಾತಾವರಣದಲ್ಲಿ ದೂಳಿನಿಂದಾಗಿ ಕಣ್ಣುಗಳಲ್ಲಿ ಅಲರ್ಜಿ, ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ.

ಕಾಡಿಗೆ ಹಚ್ಚುವಾಗ ಜೋಕೆ

ಕಣ್ಣಿಗೆ ಕಾಡಿಗೆ ಇಲ್ಲವೆ ಐಲ್ಯಾಷ್ ಮತ್ತಿತರರ ಕಾಸ್ಮೆಟಿಕ್ಸ್ ಬಳಸುವಾಗ ಎಚ್ಚರದಿಂದಿರಬೇಕು. ಕಾಡಿಗೆಯಲ್ಲಿ ಕಾರ್ಬನ್ ಅಂಶ ಹೆಚ್ಚಿರುತ್ತದೆ. ಒಂದೇ ಕಾಜಲ್ ಸ್ಟಿಕ್ ಅಥವಾ ಡಬ್ಬಿಯನ್ನು ವರ್ಷಾನುಗಟ್ಟಲೆ ಬಳಸದಿರಿ. ಕಾಂಟ್ಯಾಕ್ಟ್‌ ಲೆನ್ಸ್ ಹಾಕಿಕೊಂಡ ಬಳಿಕವೇ ಕಾಡಿಗೆ ಹಚ್ಚುವುದು ಸುರಕ್ಷಿತ.

ಮಿಂಟೊದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

ಬೇಸಿಗೆ ಕಾಲಕ್ಕೂ ಮಿಂಟೋ ಆಸ್ಪತ್ರೆಗೂ ಒಂಥರಾ ನಂಟು. ಬಹುತೇಕರು ಬೇಸಿಗೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸೋಂಕು ತಗಲುವುದಿಲ್ಲ, ನೋವು ಕೂಡಾ ಕಮ್ಮಿ ಇರುತ್ತದೆ ಅನ್ನುವ ಕಾರಣಕ್ಕೆ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ ಎನ್ನುತ್ತಾರೆಎನ್ನುತ್ತಾರೆ ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಬಿ.ಎಲ್. ಸುಜಾತ ರಾಥೋಡ್.

ಇನ್ನು ಮಕ್ಕಳಿಗೆ ಕಣ್ಣಿನ ತೊಂದರೆಗಳಿದ್ದರೆ, ಪೋಷಕರು ಬೇಸಿಗೆ ರಜೆಯಲ್ಲೇ ಚಿಕಿತ್ಸೆ ಕೊಡಿಸಲು ಆಸಕ್ತಿ ತೋರುತ್ತಾರೆ. ಸಾಮಾನ್ಯವಾಗಿ ಇಲ್ಲಿ ಮಾಲುಗಣ್ಣು, ದೃಷ್ಟಿದೋಷ, ರೆಟಿನೊ ಬ್ಲ್ಯಾಸ್ಟೋಮಾ ತೊಂದರೆ ಇರುವಂಥವರು ಬರುತ್ತಾರೆ.

ಬೇಸಿಗೆಯಲ್ಲಿ ಶಾಲೆಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲೇ ಹೆಚ್ಚು ಹೊತ್ತು ಇರುತ್ತಾರೆ. ಇಂಥ ಸಮಯದಲ್ಲಿ ಪೋಷಕರು ಮಕ್ಕಳ ಚಲನವಲನಗಳನ್ನು ಗಮನಿಸುವುದು ಹೆಚ್ಚು. ಬಹುತೇಕ ದೃಷ್ಟಿದೋಷಗಳು ಈ ಸಮಯದಲ್ಲೇ ಪೋಷಕರ ಗಮನಕ್ಕೆ ಬರುತ್ತವೆ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ವ್ಯವಸಾಯದ ಕೆಲಸ ಕಡಿಮೆ ಇರುವುದರಿಂದ ವಯಸ್ಸಾದವರ ದೃಷ್ಟಿದೋಷ ಸಮಸ್ಯೆಗಳನ್ನೂ ಮನೆಯವರು ಗುರುತಿಸುತ್ತಾರೆ. ಕಣ್ಣಿನ ಪೊರೆ, ಗ್ಲಾಕೋಮಾ, ಕ್ಯಾಟ್ರಾಕ್ಟ್‌ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.