ಬೇಸಿಗೆಯ ಬೇಗೆಗೆ ಆಹಾರದ ಬಗೆ
ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ , ತೇವಾಂಶ ಬದಲಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕಾದರೆ ಹೆಚ್ಚಿನ ಶಕ್ತಿಯ ಉತ್ಪಾದನೆ ಆಗಬೇಕು. ಅದಕ್ಕಾಗಿ ಹೆಚ್ಚಿನ ಆಹಾರವನ್ನು ದೇಹ ಬಯಸುತ್ತದೆ. ಬೇಸಿಗೆ ಕಾಲದಲ್ಲಿ, ದೇಹ ಹೊಂದಿಕೊಳ್ಳಲು ಒದ್ದಾಡುತ್ತದೆ. ಇತರ ಪ್ರಾಣಿಗಳಂತೆ ಮನುಷ್ಯ ತಂಪು ಇರುವ ಜಾಗಕ್ಕೆ ಹೋಗಲಾರ, ತಾನಿರುವ ಸ್ಥಳವನ್ನೇ ತಂಪಾಗಿರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚಿನ ಶಕ್ತಿಯ ಉತ್ಪತ್ತಿ ಆಗಬೇಕಾದ ಅವಶ್ಯಕತೆ ಇರುವುದಿಲ್ಲ. ಹಾಗೆಂದು ಆಹಾರ ಸೇವಿಸದೆ ಇರಲಾರೆವು. ಜೀರ್ಣಕ್ರಿಯೆಯಲ್ಲಿ ದೇಹದ ನೀರಿನ ಅಂಶದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ದೇಹದ ಒಳಗಡೆ ತಂಪಾಗಿರಲು ಮುಂಜಾಗರೂಕತೆ ವಹಿಸಬೇಕಾಗುತ್ತದೆ. ಅದು ನಾವು ಸೇವಿಸುವ ಆಹಾರದ ಮೂಲಕವೇ ಮಾಡಬೇಕಾಗುತ್ತದೆ.
ದೇಹದ ಉಷ್ಣತೆಯನ್ನು ಕಾಪಾಡಲು, ಬೆವರು ಉತ್ಪತ್ತಿ ಆಗುವ ಮೂಲಕ ಶರೀರದಿಂದ ನೀರಿನ ಮತ್ತು ಲವಣದ ಅಂಶ ಹೆಚ್ಚಾಗಿ ಹೊರ ಹೋಗುತ್ತದೆ. ಹೀಗೆ ಶರೀರದಿಂದ ನೀರಿನ ಅಂಶ ಹೊರಹೋದಾಗ ಬಾಯಾರಿಕೆ ಉಂಟಾಗುತ್ತದೆ. ಅದರ ಉಪಶಮನಕ್ಕಾಗಿ ಸಿಕ್ಕಸಿಕ್ಕಲ್ಲಿ ನೀರು ಕುಡಿದು, ಬ್ಯಾಕ್ಟೀರಿಯಾ, ವೈರಾಣುಗಳಿಂದ ಭೇದಿ, ಅಮೀಬಿಯಾಸಿಸ್ ಕಾಯಿಲೆಗಳಿಗೆ ಒಳಗಾಗಬಹುದು. ಹಾಗೆಂದು ಶರೀರವನ್ನು ತಂಪುಗೊಳಿಸುವ ಉದ್ದೇಶದಿಂದ ಕುಡಿದ ತಂಪು ಪಾನೀಯಗಳು, ಗಂಟಲಿನಲ್ಲಿನ ಸಹಜ ಉಷ್ಣತೆಗಿಂತ ಕಡಿಮೆಯಾದಾಗ ನಿಶ್ಚಲ ಸ್ಥಿತಿಯಲ್ಲಿದ್ದ ಬ್ಯಾಕ್ಟೀರಿಯಾಗಳು ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಬೆಳೆದು ಗಂಟಲಿನ ನಂಜಿಗೆ ಕಾರಣವಾಗಿ ಗಂಟಲು ನೋವು ಕಾಡಬಹುದು.
ಬೆವರಿನ ಮೂಲಕ ಲವಣ ಮತ್ತು ನೀರು ಹೊರಹೋಗುತ್ತವೆ. ಬರೀ ನೀರು ಕುಡಿಯುವುದರಿಂದ ಲವಣದ ಸಾಂದ್ರತೆ ದೇಹದಲ್ಲಿ ಕಡಿಮೆಯಾಗಿ, ನರಗಳ/ ಮಾಂಸ ಖಂಡಗಳ ಕಾರ್ಯವೈಖರಿಗೆ ತೊಂದರೆ ಉಂಟಾಗಬಹುದು. ಸೋಡಿಯಂ 135 meqಗಳಿಗಿಂತ ಕಡಿಮೆಯಾದಾಗ, ತಲೆ ಸುತ್ತು, ಗಲಿಬಿಲಿ, ವಾಂತಿ, ಮಾಂಸ ತಂಡಗಳಲ್ಲಿ ನಿಶ್ಶಕ್ತಿಯು ಕಾಣಿಸಿಕೊಳ್ಳಬಹುದು
ಬೇಸಿಗೆಯ ಕಾಲದಲ್ಲಿ ಮೂಗಿನಿಂದ ರಕ್ತಸ್ರಾವ, ಕಣ್ಣುಗಳಲ್ಲಿ ಉರಿ ,ತಲೆಸುತ್ತು ,ಮೂತ್ರ ಉರಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಯಾವ ತರದ ಆಹಾರದ ಸೇವಿಸುವುದರ ಮೂಲಕ ಈ ತೊಂದರೆಗಳಿಂದ ಪಾರಾಗಬಹುದು. ದೇಹದಲ್ಲಿ ಉಂಟು ಮಾಡುವ ಪರಿಣಾಮಗಳನ್ನು ಗಮನಿಸಿ ಆಹಾರವನ್ನು ಮೂರು ಬಗೆಯಾಗಿ ವಿಂಗಡಿಸಲಾಗಿದೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.
ಸಾತ್ವಿಕ ಆಹಾರ: ಯಾವ ಆಹಾರ ರಸಭರಿತವಾಗಿದ್ದು, ಸ್ವಲ್ಪ ಜಿಡ್ಡಿನಿಂದ ಕೂಡಿದ್ದು, ಬಹಳ ಕಾಲದವರೆಗೆ ಕೆಡದೆ ಸ್ಥಿರವಾಗಿ ಇರುವಂತದ್ದು. ರಕ್ತ, ಮಾಂಸಗಳಲ್ಲಿ ಸುಲಭವಾಗಿ ಬೆರೆತುಕೊಳ್ಳುವಂತಹದ್ದು , ಹೃದಯಕ್ಕೆ ಬಲ ಕೊಡುತ್ತದೋ, ಅದು ಸಾತ್ವಿಕ ಆಹಾರ.
ಉದಾಹರಣೆಗೆ ತಾಜಾ ಹಣ್ಣುಗಳು ತರಕಾರಿಗಳು ಧಾನ್ಯಗಳು ಬೀಜಗಳು ಗಿಡಮೂಲಿಕೆಗಳು ಸಸ್ಯಾಧಾರಿತ ತೈಲಗಳು
ರಾಜಸಿಕ ಆಹಾರ: ಅತಿಖಾರ, ಕಟು ಕುಳಿ ಉಪ್ಪಿನಿಂದ ಕೂಡಿರುವುದು, ಅತಿ ಬಿಸಿಯಾಗಿರುವುದು, ಉರಿಯನ್ನು ಉಂಟುಮಾಡುವಂತದ್ದು.
ಮೊಳಕೆ ಬರಿಸದ ಕಾಳುಗಳು, ಬೆಳ್ಳುಳ್ಳಿ, ಮೆಣಸು , ಕರಿ ಮೆಣಸೂ, ಮಾಂಸ.
ತಾಮಸಿಕ ಆಹಾರ: ತಯಾರಿಸಿ ಮೂರು ನಾಲ್ಕು ಗಂಟೆಗಳ ಕಾಲ ಕಳೆದ ಆಹಾರ, ಅರ್ಧ ಬೆಂದ, ರಸವನ್ನು ಇಂಗಿಸಿದ ,ದುರ್ಗಂಧ ಯುಕ್ತವಾದ , ಹಳಸಿದ ಆಹಾರ.
ಜಂಕ್ ಫುಡ್ ಎಂದು ಕರೆಯುವ ಎಲ್ಲವೂ ಈ ಗುಂಪಿಗೆ ಸೇರುತ್ತದೆ. ಹಾಗೆಯೇ ನಿನ್ನ ತಯಾರು ಮಾಡಿದ ಆಹಾರ, ತಂಗಳನ್ನ , ಮಾಂಸ ಇತ್ಯಾದಿ.
ಬೇಸಿಗೆ ತಾಪಮಾನದಲ್ಲಿ ಶರೀರದಲ್ಲಿ ಆಗುವ ಬದಲಾವಣೆಗಳಿಗೆ ಪ್ರತಿಯಾಗಿ, ಹೆಚ್ಚು ನೀರಿನ ಅಂಶವಿರುವ, ಸುಲಭವಾಗಿ ಜೀರ್ಣವಾಗುವ, ಕಡಿಮೆ ಕ್ಯಾಲರಿ ಒದಗಿಸುವ, ಖನಿಜಾಂಶ, ಪೋಷಕಾಂಶಗಳನ್ನು ಒದಗಿಸುವ, ಹೆಚ್ಚು ಸಿಹಿ ಅಲ್ಲದ ಖಾರವಲ್ಲದ , ಮಸಾಲೆ ಇಲ್ಲದ ಆಹಾರಗಳನ್ನು ಸೇವಿಸಬೇಕು.
ದೇಹದ ಅಗತ್ಯತೆಗೆ ಹೊಂದಿಕೊಂಡು ನೀರು ಕುಡಿಯುವುದು, ಅವರವರ ವಯಸ್ಸಿಗೆ ದೇಹದ ತೂಕಕ್ಕೆ ಹೊಂದಿಕೊಂಡು ನೀರು ಸೇವಿಸುವುದು ಒಳ್ಳೆಯದು. 2 ರಿಂದ 3 ಲೀಟರ್ ಕುಡಿಯಬಹುದು. ಮೂತ್ರ ವಿಸರ್ಜಿಸುವಾಗ ಅದರ ಬಣ್ಣವನ್ನು ಗಮನಿಸಿ. ಬಣ್ಣರಹಿತವಾಗಿ, ತೆಳು ಹಳದಿ ಬಣ್ಣವಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದು ಅರ್ಥ.
ತೆಂಗಿನ ನೀರು, ಎಳನೀರು: ಜೀವಸತ್ವ ಖನಿಜ, ಪೋಷಕಾಂಶಗಳನ್ನು ಹೊಂದಿದ್ದು, ನೈಸರ್ಗಿಕವಾಗಿ ಸಿಗುವಂತದ್ದು. ಧಾರಾಳವಾಗಿ ಸೇವಿಸಬಹುದು.
ಹಣ್ಣುಗಳು: ನಿಂಬೆ, ಕಿತ್ತಳೆ, ಮೂಸಂಬಿ , ನೆಲ್ಲಿಕಾಯಿ, ಅನನಾಸು, ಕಲ್ಲಂಗಡಿ, ಬಾಳೆಹಣ್ಣು, ಪೇರಳೆ, ಪಪ್ಪಾಯ ಇವುಗಳನ್ನು ಸೇವಿಸುವುದು ಒಳ್ಳೆಯದು.
ಇವುಗಳಲ್ಲಿ ವಿಟಮಿನ್ ಸಿ , ಬಿ ಕಾಂಪ್ಲೆಕ್ಸ್ ಜೊತೆಗೆ ರಸಭರಿತವಾಗಿರುವುದರಿಂದ ಶರೀರಕ್ಕೆ ನೀರಿನ ಅಂಶವನ್ನು ಕೊಡುತ್ತದೆ
ತರಕಾರಿಗಳು: ಎಳೆ ಸೌತೆಕಾಯಿ, ಸೌತೆಕಾಯಿ ಸೋರೆಕಾಯಿ, ಕುಂಬಳಕಾಯಿ, ಹಸಿರು ಎಲೆ ತರಕಾರಿಗಳು, ಪುದಿನ ಸೊಪ್ಪು ಇವುಗಳಲ್ಲಿ ಕಡಿಮೆ ಕ್ಯಾಲರಿ ಯ ಜತೆಗೆ ನೈಸರ್ಗಿಕವಾಗಿ ನೀರಿನ ಅಂಶ ಹಾಗೂ ನಾರಿನ ಅಂಶ ಒಳ್ಳೆಯ ಪ್ರಮಾಣದಲ್ಲಿ ಇದೆ. ಅದೂ ಅಲ್ಲದೆ ಜೊತೆಗೆ ಹೊಟ್ಟೆ ತುಂಬಿಸುವ ಭಾವವನ್ನು ಕೊಡುತ್ತದೆ.
ಈರುಳ್ಳಿ: ತರಕಾರಿಗಳ ಜೊತೆಗೆ ಸಲಾಡ್ ಮಾಡುವ ಮೂಲಕ ಇದನ್ನು ಬಳಸುವುದರಿಂದ ಜೀರ್ಣಕ್ರಿಯೆಗೂ ಆಹಾರವನ್ನು ರುಚಿ ಹೆಚ್ಚಿಸಲು ಸಹಕರಿಸುತ್ತದೆ
ಮೊಸರು, ಮಜ್ಜಿಗೆ , ಆಹಾರದ ಜೀರ್ಣಕ್ರಿಯೆ ಸಹಕರಿಸುವುದರ ಜೊತೆಗೆ, ದೇಹವನ್ನು ತಂಪಾಗಿಡುತ್ತದೆ.
ಯಾವ ಆಹಾರ ತಿನ್ನುವುದು ಬೇಡ?
ಆಗಾಗ ಕಾಫಿ ಟೀ , ಎಣ್ಣೆಯಲ್ಲಿ ಹುರಿದ ತಿಂಡಿಗಳು, ಸಂಸ್ಕರಿಸಿದ್ದ ಪ್ಯಾಕ್ ಮಾಡಿದ ತಿಂಡಿಗಳು, ಸಕ್ಕರೆ ಪಾನೀಯಗಳು, ಮಸಾಲೆಯುಕ್ತ ಆಹಾರ, ಆಲೂಗಡ್ಡೆ, ಬ್ರೆಡ್, ಜಂಕ್ ಫುಡ್, ಮಾಂಸ ಇತ್ಯಾದಿ
ಬೇಸಿಗೆಯಲ್ಲಿ ಆಹಾರ ಬೇಗ ಕೆಡುವುದರಿಂದ ಹೊಟ್ಟೆ ಕೆಡುವ ಸಾಧ್ಯತೆಗಳು ಇರುವುದರಿಂದ ಜಾಗರೂಕತೆ ವಹಿಸುವುದು ಅಗತ್ಯ. ಕೈಗಳನ್ನು ಸರಿಯಾಗಿ ತೊಳೆದುಕೊಂಡು ಆಹಾರ ಸೇವಿಸಬೇಕು. ಸರಿಯಾದ ತಾಪಮಾನದಲ್ಲಿ ಆಹಾರ ಸಂಗ್ರಹಿಸಿ ಇಡಬೇಕು. ಅವಧಿಗೂ ಮೀರಿದ ಆಹಾರ ಸೇವಿಸಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.