ADVERTISEMENT

ಕ್ಷೇಮ–ಕುಶಲ: ಟೀನೇಜ್ ತಲ್ಲಣಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 19:31 IST
Last Updated 9 ಡಿಸೆಂಬರ್ 2024, 19:31 IST
   

ಜೀವನದ ಕಾಲಘಟ್ಟಗಳಲ್ಲಿ ಯೌವನವೂ ಒಂದು. ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿದ್ದಂತೆ ಆ ವ್ಯಕ್ತಿಯಲ್ಲಿ ಅನೇಕ ಬದಲಾವಣೆಗಳು ಕಾಣಬರುತ್ತವೆ. ಯೌವನದ ಆರಂಭಿಕ ಹಂತವೇ ಹದಿಹರೆಯ. ಸುಮಾರು ಹದಿಮೂರರಿಂದ ಹತ್ತೊಂಬತ್ತು ವರ್ಷದವರನ್ನು ಈ ಗುಂಪಿಗೆ ಸೇರಿಸಬಹುದು. ಇದೇ ‘ಟೀನ್’ ಏಜ್ (ಆಂಗ್ಲಭಾಷೆಯ ಥರ್ಟೀನ್, ಫೊರ್ಟಿನ್….. ಲೆಕ್ಕದಲ್ಲಿ) ಕೂಡ. ಎಲ್ಲ ಕಾಲಘಟ್ಟಗಳೂ ಒಂದು ರೀತಿಯಲ್ಲಿ ಚೆಂದವೇ. ಅವಕ್ಕೆ ಅದರದೇ ಒಂದು ಸೊಬಗಿದೆ. ಬಾಲ್ಯ–ಯೌವನದಲ್ಲಿ ಆಟ-ಹುಡುಗಾಟ ಪ್ರಾಮುಖ್ಯವನ್ನು ಪಡೆದರೆ, ಗೃಹಸ್ಥ-ವೃದ್ದಾಪ್ಯಗಳು ಜವಾಬ್ದಾರಿ ಮತ್ತು ಅನುಭವಗಳ ಮೂಸೆಯಾಗಿರುತ್ತವೆ. ಒಂದು ಘಟ್ಟದಲ್ಲಿನ ಆಗುಹೋಗುಗಳನ್ನು ತೃಪ್ತಿಕರವಾಗಿ ಅನುಭವಿಸಿ ಮುಂದಿನ ಘಟ್ಟಕ್ಕೆ ತಯಾರಾಗುವುದೇ ಜೀವನದ ದೊಡ್ಡ ಪಾಠ.

ಕೆಲವೊಮ್ಮೆ ಘಟ್ಟಗಳ ದಾಟುವಿಕೆ ಅಷ್ಟೊಂದು ಸುಲಲಿತವಾಗಿ ಸಾಗುವುದಿಲ್ಲ. ಅದರಲ್ಲೂ ಹದಿಹರೆಯದವರ ತಲ್ಲಣಗಳು ಕೆಲವೊಮ್ಮೆ ಅವರನ್ನೂ ಅವರ ಕುಟುಂಬದವರನ್ನೂ ಆತಂಕಕ್ಕೀಡುಮಾಡುತ್ತವೆ. ಈ ವಯೋಮಾನದವರ ದುಃಖ-ದುಮ್ಮಾನಗಳನ್ನು ಅರಿತುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಿರಿಯರ ಜವಾಬ್ದಾರಿ. ಅಂತಹ ಕೆಲ ತಲ್ಲಣಗಳ ಬಗ್ಗೆ ನಾವೆಲ್ಲರೂ ತಿಳಿದುಕೊಂಡಿರುವುದು ಉತ್ತಮ.

ಮೊದಲನೆಯದಾಗಿ, ಟೀನೇಜ್‌ನಲ್ಲಿರುವವರು ಚಿಕ್ಕಮಕ್ಕಳಾಗಿಯೂ ಉಳಿದಿರುವುಲ್ಲ; ಹೀಗೆಂದು ಹಿರಿಯರ ವ್ಯಕ್ತಿತ್ವವೂ ಮೂಡಿರುವುದಿಲ್ಲ. ಮನೆಮಂದಿ ಕೂಡ ಅವರನ್ನು ಕೆಲವೊಮ್ಮೆ ಚಿಕ್ಕಮಕ್ಕಳಂತೆ ನೋಡಿದರೆ, ಕೆಲವೊಮ್ಮೆ ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಅಪೇಕ್ಷಿಸುತ್ತಾರೆ. ಹಾಗಾಗಿ ತಮ್ಮ ವ್ಯಕ್ತಿತ್ವದ ಬಗ್ಗೆಯೇ ಒಂದು ರೀತಿಯ ಕೀಳರಿಮೆಯನ್ನು ಇವರು ಬೆಳೆಸಿಕೊಂಡುಬಿಟ್ಟಿರುತ್ತಾರೆ. ತಾವು ಯಾವ ಗುಂಪಿಗೂ ಸೇರದವರು ಎಂಬ ಖಿನ್ನತೆ ಕೂಡ ಈ ಗುಂಪಿನವರಲ್ಲಿ ಮನೆಮಾಡಿರುತ್ತದೆ.

ADVERTISEMENT

ಈ ಸಂದರ್ಭದಲ್ಲಿ ದೇಹದಲ್ಲಿ ಹಾರ್ಮೋನುಗಳ ಸ್ರವಿಸುವಿಕೆ ಕೂಡ ಕೊಂಚ ಬದಲಾಗಿರುತ್ತದೆ. ದೇಹದಲ್ಲಾಗುತ್ತಿರುವ ಬದಲಾವಣೆಗಳು ‘ನಾನು ಹೆಣ್ಣು’, ‘ನಾನು ಗಂಡು’ ಎಂಬ ತಿಳಿವಳಿಕೆಯನ್ನೂ ನೀಡುತ್ತವೆ. ಜೊತೆಗೆ ತಮ್ಮ ಸಹಪಾಠಿಗಳು ನಡೆಸುವ ಜೀವನಶೈಲಿಯನ್ನೂ ಗಮನಿಸತೊಡಗುತ್ತಾರೆ. ತಮಗೂ ಅದೇ ರೀತಿಯ ಡ್ರೆಸ್, ಮೇಕಪ್ ಬೇಕು. ಅದೇ ತರಹದ ಮೊಬೈಲ್, ಬೈಕು ಬೇಕೆನಿಸುತ್ತದೆ. ಕೆಲವೊಮ್ಮೆ ಸ್ನೇಹಿತರ ನಡುವೆ ‘ಕೂಲ್’ ಎನ್ನಿಸಿಕೊಳ್ಳಲು ಸಿಗರೆಟ್, ಕುಡಿತ ಅಥವಾ ಮಾದಕವಸ್ತುಗಳ ಚಟವನ್ನೂ ಹತ್ತಿಸಿಕೊಳ್ಳುತ್ತಾರೆ. ಇಂಥ ಅನುಕರಣೆ (‘ಪೀರ್ ಪ್ರೆಷರ್’) ಕೂಡ ಒಂದು ರೀತಿಯ ಒತ್ತಡವೇ. ಈ ಒತ್ತಡ ಒಮ್ಮೊಮ್ಮೆ ಅತಿರೇಕಕ್ಕೂ ಹೋಗುತ್ತದೆ.

ಈಗಿನ ಬಹುತೇಕ ಟೀನೇಜ್ ಮಕ್ಕಳ ಹತ್ತಿರ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಮಕ್ಕಳ ಯೋಗಕ್ಷೇಮ ಕುರಿತು ವಿಚಾರಿಸಲು ಪಾಲಕರಿಗೆ ಇದು ತುಂಬಾ ಉಪಯುಕ್ತವಾದರೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಸನ ಕೂಡ ದೊಡ್ಡ ತಲೆನೋವಾಗಿದೆ. ಅದರಲ್ಲಿ ತೋರಿಸುವ ರೀಲ್ಸ್, ವಿಡಿಯೋ ಆಟಗಳಿಗೆ ಮಕ್ಕಳು ದಾಸರಾಗಿಬಿಟ್ಟಿದ್ದಾರೆ. ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅದನ್ನು ಉಳಿದವರು ಮೆಚ್ಚಿ ಹೆಚ್ಚೆಚ್ಚು ‘ಲೈಕ್ಸ್’ ಬರಲಿ ಎಂಬ ಗೀಳು ಸಾಕಷ್ಟಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಸ್ಟ್ ಗಳಿಗೆ ಬರುವ ಕೆಟ್ಟ ಕಾಮೆಂಟುಗಳು, ಅವಹೇಳನಗಳು ಸಂವೇದನಾಶೀಲ ಮಕ್ಕಳಿಗೆ ದೊಡ್ಡ ಆಘಾತವನ್ನೇ ಉಂಟುಮಾಡುತ್ತವೆ. ವೆಬ್ ಸಿರೀಸ್, ಆನ್ಲೈನ್ ಗೇಮಿಂಗ್ ಇತ್ಯಾದಿಗಳಿಂದ ಮಕ್ಕಳಲ್ಲಿ ಅಪರಾಧ, ಕ್ರೌರ್ಯದ ಮನೋಭಾವನೆ ಹೆಚ್ಚುತ್ತಿದೆ. ಅನೇಕ ಮಕ್ಕಳು ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ ಕೂಡ. ಆದ್ದರಿಂದ ಮಕ್ಕಳಿಗೆ ಮೊಬೈಲ್ ನೀಡುವಾಗ ಸೇಫ್ ಮೋಡ್, ಪಾಲಕರ ನಿಯಂತ್ರಣ ಇತ್ಯಾದಿ ಸುರಕ್ಷಾನೀತಿಗಳನ್ನು ಸಕ್ರೀಯಗೊಳಿಸಿಯೇ ಕೊಡಬೇಕು. ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಈಗ ಹದಿನಾರು ವರ್ಷದ ಒಳಗಿನ ಮಕ್ಕಳ ಕೈಲಿ ಮೊಬೈಲ್ ನೀಡಬಾರದೆಂಬ ನಿಯಮವನ್ನೇ ರೂಪಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಈ ಟೀನೇಜ್ ಮಕ್ಕಳನ್ನು ಕಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ಸ್ಪರ್ಧಾಪರೀಕ್ಷೆಗಳ ಒತ್ತಡ. NEET, JEE ಅಥವಾ CETಯಂತಹ ಅನೇಕ ಪರೀಕ್ಷೆಗಳಲ್ಲಿ ಇಂದಿನ ಮಕ್ಕಳು ಸ್ಪರ್ಧಿಸಬೇಕಿದೆ. ಅನೇಕರಿಗೆ ಇದು ಅನಿವಾರ್ಯ ಕೂಡ. ಮಕ್ಕಳಿಗೆ ಒಳ್ಳೆ ರ‍್ಯಾಂಕ್ ಬರಲಿ ಎಂದು ಪಾಲಕರು ಮತ್ತು ಕಾಲೇಜು ಶಿಕ್ಷಕರು ಒಟ್ಟಿಗೆ ಒತ್ತಡ ಹಾಕುವುದರಿಂದ ಮಕ್ಕಳ ಶೈಕ್ಷಣಿಕ ಜೀವನವು ಕಾದ ಬಾಣಲೆಯಂತಾಗುತ್ತಿದೆ. ವಿಧವಿಧದ ಕೋಚಿಂಗುಗಳು, ಹಾಸ್ಟೆಲ್ ವಾಸಗಳು ಎಳೆಮನಸ್ಸುಗಳ ಮೇಲೆ ಇನ್ನಿಲ್ಲದಂತೆ ಒತ್ತಡಗಳನ್ನು ಸೃಷ್ಟಿಸಿ ಅವರ ನೈಜ ಸಾಮರ್ಥ್ಯವನ್ನೇ ಕೆಲವೊಮ್ಮೆ ಕಸಿದುಬಿಡುತ್ತವೆ. ಮಕ್ಕಳನ್ನು ಎಲ್ಲ ಸ್ಪರ್ಧಾಪರೀಕ್ಷೆಗಳಿಗೆ ನೂಕುವ ಮುನ್ನ ಅವರ ಆಸಕ್ತಿಯೇನು? ಅವರ ನೈಜ ಸಾಮರ್ಥ್ಯ ಯಾವುದರಲ್ಲಿದೆ? ಎಂದು ಪಾಲಕರು ಮನದಟ್ಟು ಮಾಡಿಕೊಳ್ಳುವುದು ಬಹುಮುಖ್ಯ. ಶಿಕ್ಷಣದ ಉದ್ದೇಶ ಎಲ್ಲರಲ್ಲೂ ಅಡಗಿರುವ ಸುಪ್ತಪ್ರತಿಭೆಯನ್ನು ಅನಾವರಣಗೊಳಿಸುವುದೇ ಅಲ್ಲವೇ? ಸಂಗೀತವೋ ಚಿತ್ರಕಲೆಯಲ್ಲೋ – ಅದ್ಭುತ ಪ್ರತಿಭೆಯನ್ನು ತೋರುವ ಮಗುವಿಗೆ ಬಲವಂತವಾಗಿ ಎಂಜಿನಿಯರೋ ಡಾಕ್ಟರೋ ಲಾಯರೋ ಮಾಡಲು ಹೋದರೆ ಆ ಮಗುವಿನ ಭವಿಷ್ಯವೇ ಹಾಳಾಗುವ ಸಾಧ್ಯತೆ ಇರುತ್ತದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಿಲ್ಲವೆಂತಲ್ಲ; ಪರಿಹಾರ ಖಂಡಿತ ಇದೆ. ಮುಖ್ಯವಾಗಿ ಟೀನೇಜ್ ಮಕ್ಕಳ ಪಾಲಕರು ತಾವೂ ‘ಆ ಘಟ್ಟವನ್ನು ದಾಟಿ ಬಂದಿದ್ದೇವೆ, ಈಗ ನಮ್ಮ ಮಕ್ಕಳ ಸರದಿ’ ಎಂದು ಧೈರ್ಯ ತಂದುಕೊಳ್ಳಬೇಕು. ಸುಭಾಷಿತದಲ್ಲೇ ಉಲ್ಲೇಖಿಸಿರುವಂತೆ ಷೋಡಶ (ಹದಿನಾರು) ವರ್ಷದ ನಂತರ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ತಪ್ಪು ಮಾಡಿದಾಗ ಗದರುವುದು, ಹೊಡಿಯುವುದು ಮಾಡದೇ ಸಾವಧಾನವಾಗಿ ಅವರನ್ನು ಕೂಡ್ರಿಸಿಕೊಂಡು ತಿಳಿಹೇಳಬೇಕು. ಆದರೆ ನಾವೇ ಗಾಬರಿಯಾಗಿ ಅವರನ್ನು ಯದ್ವಾತದ್ವಾ ಬೈಯ್ಯುವುದರಿಂದ ಅವರಲ್ಲಿ ಸಿಡಿದೇಳುವ (‘ರೆಬೆಲ್’) ಮನೋಭಾವ ಮೂಡುತ್ತದೆ. ತಂದೆ–ತಾಯಿಗಳು ಎಂದರೆ ಇಷ್ಟೇ – ಎಂಬ ಅಸಡ್ಡೆ ಅವರ ಮನದಲ್ಲಿ ಚಿಗಿತು ಆಳವಾಗಿ ಬೇರೂರುತ್ತದೆ. ಈಗಾಗಲೇ ಕೊಂಚ ಖಿನ್ನರಾಗಿರುವುದರಿಂದ ಸಮಾಧಾನದಿಂದ ಬೆನ್ನು ತಟ್ಟಿ ತಿಳಿಹೇಳಿದರೆ ಅವರು ಮತ್ತೆ ಸಂತಸದ ಚಿಲುಮೆಯಾಗುತ್ತಾರೆ. ಅವರ ಮುಗುಳ್ನಗೆ ಮತ್ತೆ ಮರಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.