ADVERTISEMENT

ಕ್ಷೇಮ ಕುಶಲ | ಆರೋಗ್ಯವಿಲ್ಲದ ನಾಲಿಗೆ...

ಡಾ.ವಿನಯ ಶ್ರೀನಿವಾಸ್
Published 18 ಜುಲೈ 2022, 19:45 IST
Last Updated 18 ಜುಲೈ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದರು ಪುರಂದರ ದಾಸರು. ನಾವು ಆಡುವ ಮಾತಿನಲ್ಲಿ ನಾಲಿಗೆಯ ಪಾತ್ರ ಹಾಗೂ ಪ್ರಾಮುಖ್ಯವನ್ನು ಹೇಳುವ ಸಾಲುಗಳು ಅವು. ಅದೇ ನಾಲಿಗೆಯು ನಮ್ಮ ಶರೀರದ ಹಲವಾರು ಅನಾರೋಗ್ಯ ಸ್ಥಿತಿಗಳಿಗೂ ಕೈಗನ್ನಡಿಯಾಗಬಲ್ಲದು ಎಂಬುದನ್ನು ಪ್ರತಿಯೊಬ್ಬರೂ ಅರಿತಿದ್ದರೆ ಶಮನ ಸುಲಭ. ಕನ್ನಡಿಯಲ್ಲಿ ಮುಖವನ್ನು ನೋಡುವಾಗ ಒಮ್ಮೆ ಬಾಯಿ ತೆರೆದು ನಾಲಿಗೆಯನ್ನೂ ಹೊರ ಚಾಚಿ ನೋಡಿಕೊಂಡರೆ ನಮ್ಮ ಆರೋಗ್ಯಸ್ಥಿತಿಯನ್ನು ತಿಳಿಯುವುದು ಸಾಧ್ಯ.

ಬಹಳಷ್ಟು ಮಂದಿ ಪ್ರತಿದಿನ ಹಲ್ಲುಗಳ ಜೊತೆ ನಾಲಿಗೆಯನ್ನೂ ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುವುದನ್ನು ಕಡೆಗಣಿಸುತ್ತಾರೆ. ಬಾಯಿಯ ಆರೋಗ್ಯ ಸಂರಕ್ಷಣೆಗೆ ನಾಲಿಗೆಯ ಸ್ವಚ್ಛತೆಯೂ ಮುಖ್ಯ. ಹಾಗಾಗಿಯೇ ದಿನವೂ ಹಲ್ಲುಜ್ಜುವ ಸಮಯದಲ್ಲಿ ನಾಲಿಗೆಯನ್ನೂ ಕಡ್ಡಾಯವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಇತ್ತೀಚಿಗೆ ಮಾರುಕಟ್ಟೆಗೆ ಬರುತ್ತಿರುವ ಹಲ್ಲುಜ್ಜುವ ಬ್ರಷ್‍ಗಳ ಹಿಂಭಾಗವನ್ನು ಅದಕ್ಕಾಗಿಯೇ ವಿನ್ಯಾಸಗೊಳಿಸಿರುತ್ತಾರೆ.

ಸಾಮಾನ್ಯವಾಗಿ ನಾಲಿಗೆಯು ಗುಲಾಬಿ ಬಣ್ಣದ್ದಾಗಿದ್ದು ಮೇಲ್ಮೈನಲ್ಲಿ ಸಣ್ಣ ಸಣ್ಣ ಉಬ್ಬುಗಳಿರುತ್ತವೆ. ದೇಹದ ಹಲವು ಆಂತರಿಕ ಸಮಸ್ಯೆಗಳಲ್ಲಿ ನಾಲಿಗೆಯ ಬಣ್ಣ ಮತ್ತು ಮೇಲ್ಮೈನಲ್ಲಿ ವ್ಯತ್ಯಾಸ ಕಂಡು ಬರುವುದರಿಂದ ಆಗಾಗ್ಗೆ ನಾಲಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುದು ಬಹಳವೇ ಮುಖ್ಯ.

ADVERTISEMENT

ನಾಲಿಗೆಯ ಮೇಲ್ಮೈನಲ್ಲಿ ಬಿಳಿ ಬಣ್ಣದ, ಮೊಸರಿನಂತಹ ತೇಪೆಗಳಾಗುವುದು ಅನೇಕ ಕಾರಣಗಳಿಂದಾಗಿ. ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಮುಖ್ಯ ಕಾರಣವಾದರೆ, ಶಿಲೀಂಧ್ರದ ಸೋಂಕು, ದೀರ್ಘಕಾಲದವರೆಗೆ ಆ್ಯಂಟಿಬಯೋಟಿಕ್ ಬಳಕೆ, ಬಾಯಿಯ ಸ್ನೇಹಪರ ಸೂಕ್ಷ್ಮಾಣುಗಳಲ್ಲಿನ ಅಸಮತೋಲನ ಮೊದಲಾದುವು ಇತರ ಕಾರಣಗಳು. ಶರೀರದ ರಕ್ಷಣಾವ್ಯವಸ್ಥೆಯ ದೋಷದಿಂದ ಉಂಟಾಗುವ ಮುಖ್ಯವಾಗಿ ಚರ್ಮವನ್ನು ಬಾಧಿಸುವ ಲೈಕನ್ ಪ್ಲೇನಸ್ ಎಂಬ ಕಾಯಿಲೆಯಲ್ಲಿಯೂ ಒಮ್ಮೊಮ್ಮೆ ಬಿಳಿ ಮೊಸರಿನಂತಹ ತೇಪೆಗಳು ನಾಲಿಗೆಯ ಮೇಲೆ ಕಾಣಿಸಿಕೊಳ್ಳಬಹುದು.

ಕೆಲವು ವೈರಾಣುಗಳ ಸೋಂಕಿನಲ್ಲಿ. ಉದಾಹರಣೆಗೆ, ‘ಎಪ್ಸ್ಟಿನ್ ಬಾರ್ ವೈರಸ್’ ಅಥವಾ ’ಎಚ್. ಐ. ವಿ.‘ ಸೋಂಕಿನಲ್ಲಿ ನಾಲಿಗೆಯು ಕಪ್ಪು ಅಥವಾ ಕಂದುಬಣ್ಣಕ್ಕೆ ತಿರುಗಿ ಮೇಲ್ಮೈನಲ್ಲಿ ಸಣ್ಣ ರೋಮಗಳು ಇರುವಂತೆ ತೋರಬಹುದು. ಈ ರೋಮಗಳಲ್ಲಿ ಮುಖ್ಯವಾಗಿ ಪ್ರೊಟೀನ್ ಅಂಶವಿದ್ದು, ಅದರ ಮೇಲೆ ಸೂಕ್ಷ್ಮಾಣುಗಳು ಹಾಗೂ ಆಹಾರಕಣಗಳು ಕುಳಿತಾಗ ಅವು ಎದ್ದುಕಾಣುತ್ತವೆ. ವೈರಾಣು ಸೋಂಕು ನಿಯಂತ್ರಣದೊಂದಿಗೆ ನಾಲಿಗೆಯೂ ಸಾಮಾನ್ಯ ಬಣ್ಣಕ್ಕೆ ತಿರುಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಹುಳಿತೇಗು ಮತ್ತು ಎದೆ ಉರಿ (ಗ್ಯಾಸ್ಟ್ರೈಟಿಸ್ ಸಮಸ್ಯೆ) ಶಮನಕ್ಕಾಗಿ ಸೇವಿಸುವ ಔಷಧದಲ್ಲಿ ಬಳಸುವ ‘ಬಿಸ್‌ಮತ್’ ಎಂಬ ರಾಸಾಯನಿಕ ವಸ್ತುವು ಜೊಲ್ಲು ರಸದೊಂದಿಗೆ ಬೆರೆತಾಗಲೂ ನಾಲಿಗೆ ಕಪ್ಪುಬಣ್ಣಕ್ಕೆ ತಿರುಗಬಹುದು. ಔಷಧದ ಬಳಕೆಯನ್ನು ನಿಲ್ಲಿಸುತ್ತಲೂ ನಾಲಿಗೆ ಮೊದಲಿನಂತಾಗುವುದು.

ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ3 (ನಿಯಾಸಿನ್) ಕೊರತೆಯಾದಾಗ ವ್ಯಕ್ತಿಯ ನಾಲಿಗೆಯು ಕಡು ಗುಲಾಬಿಬಣ್ಣಕ್ಕೆ ತಿರುಗಿ ವಿಪರೀತ ನುಣುಪಾಗುವುದು. ಜೊತೆಯಲ್ಲಿ ನಾಲಿಗೆಯಲ್ಲಿ ನೋವು ಕಾಣಿಸಿಕೊಳ್ಳುವುದಲ್ಲದೆ, ಯಾವುದೇ ಪದಾರ್ಥದ ಸಂಪರ್ಕ ಬಂದಾಗಲೂ (ಉದಾಹರಣೆಗೆ: ಟೂತ್ ಪೇಸ್ಟ್, ಅನಾನಸ್ ಹಣ್ಣು, ಖಾರ ಹಾಗೂ ಮಸಾಲೆ ಪದಾರ್ಥಗಳು) ಉರಿ ಹೆಚ್ಚಾಗಬಹುದು. ನಿಯಾಸಿನ್ ಹೇರಳವಾಗಿರುವ ಆಹಾರಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದೇ ಇದಕ್ಕೆ ಪರಿಹಾರ. ಹಸಿರುಬಟಾಣಿ, ಗೋಧಿ, ಶೇಂಗಾಬೀಜ, ಕೆಂಪುಅಕ್ಕಿ, ಬೆಣ್ಣೆಹಣ್ಣು, ಕೋಳಿಮಾಂಸದಲ್ಲಿ ನಿಯಾಸಿನ್ ಇರುತ್ತದೆ.

ಆಹಾರದಲ್ಲಿ ವಿಟಮಿನ್ ಬಿ-12, ಫೋಲಿಕ್ ಆ್ಯಸಿಡ್ ಮತ್ತು ಕಬ್ಬಿಣಾಂಶದ ಕೊರತೆಯಾದಾಗ ನಾಲಿಗೆಯ ಸಾಮಾನ್ಯ ಉಬ್ಬುಗಳು ಮರೆಯಾಗಿ ನಾಲಿಗೆಯು ಕಡು ಕೆಂಪಗಾಗಿ ಹೊಳೆಯಬಹುದು (ಗ್ಲ್ಯಾಸಿ ಟಂಗ್). ಪೂರಕ ಔಷಧಗಳನ್ನು ಮತ್ತು ಆಹಾರದಲ್ಲಿ ಯಥೇಚ್ಛವಾಗಿ ಸತ್ವಯುತ ಆಹಾರ ಪದಾರ್ಥಗಳಾದ ಸೇಬು, ಪಾಲಕ್ ಸೊಪ್ಪು, ದಾಳಿಂಬೆಹಣ್ಣು, ಹಾಲು, ಮೊಟ್ಟೆ, ಮಾಂಸ, ಒಣದ್ರಾಕ್ಷಿ ಮೊದಲಾದುವುದನ್ನು ನಿಯಮಿತವಾಗಿ ಸೇವಿಸಿದಾಗ ಸಮಸ್ಯೆ ನಿವಾರಣೆಯಾಗುವುದು.

ಭೌಗೋಳಿಕ ನಾಲಿಗೆ ಎಂದೇ ಕರೆಯಲ್ಪಡುವ ಈ ಸ್ಥಿತಿಯಲ್ಲಿ ಉಬ್ಬುಗಳ ಮಧ್ಯೆ ನುಣುಪಾದ ವಿವಿಧ ಆಕಾರದ ತೇಪೆಗಳು ಮತ್ತು ಕಲೆಗಳು ಕಾಣಿಸಿಕೊಂಡು ನಾಲಿಗೆಯು ವಿಶ್ವದ ಭೂಪಟದಂತೆ ತೋರುವುದು. ಇದು ‘ಲೈಕನ್ ಪ್ಲೇನಸ್’ ಎಂಬ ಚರ್ಮರೋಗದಲ್ಲಿ ಕಾಣಬಹುದು. ನಾಲಿಗೆಯ ಉಬ್ಬುಗಳು ಉರಿಯೂತಕ್ಕೊಳಗಾದಾಗ ಅತಿ ನೋವಿನಿಂದ ಕೂಡಿದ ಒಂದೇ ಒಂದು ಕೆಂಪುಬಣ್ಣದ ಗುಳ್ಳೆಯು ನಾಲಿಗೆಯ ತುದಿಯ ಕೆಳಭಾಗದಲ್ಲಿ ಕಂಡು ಬರುವುದು. ಇದು ವ್ಯಕ್ತಿಗೆ ಆಹಾರ ಸೇವಿಸುವಾಗ, ಅಗಿಯುವಾಗ ಮತ್ತು ನುಂಗುವಾಗ ನೋವನ್ನು ಉಂಟುಮಾಡಬಲ್ಲದು. ನೋವು ನಿವಾರಕ ಮುಲಾಮುಗಳ ಬಳಕೆಯಿಂದ ಇದು ಕಡಿಮೆಯಾಗುತ್ತದೆ.

ಬಾಯಿಯ ಅಳತೆಗೆ ಸರಿಹೊಂದದ ಗಾತ್ರದಲ್ಲಿ ಸಾಮಾನ್ಯಕ್ಕಿಂತಲೂ ದೊಡ್ಡದಾದ ನಾಲಿಗೆಯನ್ನು ಅಲರ್ಜಿ, ಥೈರಾಯ್ಡ್ ಸಮಸ್ಯೆ ಮತ್ತು ಡೌನ್ಸ್ ಸಿಂಡ್ರೋಮ್ ಎಂಬ ವರ್ಣತಂತುಗಳ ದೋಷದ ಕಾಯಿಲೆಯಲ್ಲಿ ನೋಡಬಹುದು. ಅಲರ್ಜಿಗೆ ಸೂಕ್ತವಾದ ಔಷಧದ ಬಳಕೆಯಿಂದ ನಾಲಿಗೆ ಸಾಮಾನ್ಯ ಸ್ಥಿತಿಗೆ ಮರುಳುವುದು ಸಾಧ್ಯ. ನಾಲಿಗೆಯ ಮೇಲ್ಮೈಯಲ್ಲಿ ಸಣ್ಣ ತೋಡುಗಳಂತಾಗುವುದನ್ನು ‘ಸೋರಿಯಾಸಿಸ್’ ಎಂಬ ಚರ್ಮದ ಸಮಸ್ಯೆಯಲ್ಲಿ ಕಾಣಬಹುದು. ಮೂಲಕಾಯಿಲೆಗೆ ಸೂಕ್ತ ಚಿಕಿತ್ಸೆಯೇ ಇದಕ್ಕೆ ಪರಿಹಾರ.

ದೇಹದ ಇತರ ಅಂಗಗಳಂತೆ ನಾಲಿಗೆಗೂ ಕ್ಯಾನ್ಸರ್ ತಗುಲಬಹುದು. ನಾಲಿಗೆಯ ಯಾವುದೇ ಭಾಗದಲ್ಲಿ ನೋವಿಲ್ಲದ ಬಿಳಿ ಅಥವಾ ಕೆಂಪುಬಣ್ಣದ ಕಲೆ, ತೇಪೆ, ಗಡ್ಡೆ ಅಥವಾ ಗಾಯ ಕಂಡು ಬಂದಾಗ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಅದು ಬಾಯಿಯ ಕ್ಯಾನ್ಸರ್‌ನ ಲಕ್ಷಣವಿರಬಹುದು. ಆರಂಭಿಕ ಹಂತಗಳಲ್ಲಿಯೇ ಜೀವಾಂಶ (ಬಯಾಪ್ಸಿ) ತೆಗೆದು ಪ್ರಯೋಗಾಲಯದಲ್ಲಿ ಪರೀಕ್ಷೆಯನ್ನು ಮಾಡಿಸುವುದರಿಂದ ಕ್ಯಾನ್ಸರ್ ಹೌದೋ ಅಲ್ಲವೋ ಎಂಬುದನ್ನು ತಿಳಿಯುವುದು ಸಾಧ್ಯ. ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಮುಂದಿನ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.