ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಸಂತೋಷವನ್ನು ಕೊಡುವುದು ಮಾತ್ರವಲ್ಲ, ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನವನ್ನು ಕಾಪಾಡಲು ಕೂಡ ಪ್ರವಾಸಗಳು ನೆರವಾಗುತ್ತವೆ. ಆದರೆ ಪ್ರವಾಸದ ಸಂದರ್ಭದಲ್ಲಿ, ಪ್ರವಾಸಿಗಳ ತಂಡದಲ್ಲಿರುವ ಯಾರಾದರೂ ಒಬ್ಬ ವ್ಯಕ್ತಿಯ ಆರೋಗ್ಯ ಕೈಕೊಟ್ಟರೂ ನಮ್ಮ ಪ್ರವಾಸದ ಮಜಾ ಹಾಳಾಗಿಬಿಡುತ್ತದೆ. ತಮ್ಮ ಊರಿನಿಂದ ಮತ್ತು ವೈದ್ಯರಿಂದ ದೂರದ ಅಪರಿಚಿತ ವಾತಾವರಣದಲ್ಲಿರುವುದು ರೋಗಿಗಳಿಗೆ ಹೆಚ್ಚಿನ ಆತಂಕವನ್ನೂ ನೀಡಬಹುದು. ಈ ಕಾರಣಗಳಿಂದ ಪ್ರವಾಸಕ್ಕೆ ಹೋಗುವವರು ತಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ತೀವ್ರವಾದ ಕಾಯಿಲೆಯಿಂದ ಬಳಲುತ್ತಿರುವವರು ತಾವು ಪ್ರವಾಸ ಕೈಗೊಳ್ಳುವ ಪ್ರದೇಶದಲ್ಲಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಕಲೆಹಾಕುವುದು ಕೂಡ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಾದ ಕ್ರಮವಾಗಿದೆ.
ಪ್ರವಾಸಿಗರಲ್ಲಿ ಕಂಡುಬರುವ ಹೆಚ್ಚಿನ ಕಾಯಿಲೆಗಳು ಶುಚಿಯಿಲ್ಲದ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಬರುತ್ತವೆ. ಪ್ರವಾಸಿಗರು ಹೆಚ್ಚಿನ ಸಂದರ್ಭದಲ್ಲಿ ಉಪಾಹಾರಗೃಹಗಳ ಮೇಲೆ ತಮ್ಮ ಊಟೋಪಚಾರವನ್ನು ಅವಲಂಬಿಸಿರುತ್ತಾರೆ. ಅಲ್ಲಿಯ ಊಟ–ತಿಂಡಿಗಳು ಶುದ್ಧವಾಗಿಲ್ಲದಿದ್ದರೆ ಅಥವಾ ಹೊಂದಾಣಿಕೆ ಆಗದಿದ್ದರೆ ಆಗ ವಾಂತಿ, ಅತಿಸಾರ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆಹಾರದ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚು ಜಾಗರೂಕರಾಗಿ
ರುವುದರಿಂದ ಆಹಾರ ಮತ್ತು ನೀರಿನಿಂದ ಉಂಟಾಗುವ ಸೋಂಕುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಕುದಿಸಿ ಆರಿಸಿದ ನೀರು ಅಥವಾ ‘ಫಿಲ್ಟರ್’ ಮೂಲಕ ಶುದ್ಧೀಕರಣ ಮಾಡಿದ ನೀರನ್ನು ಬಳಸಬೇಕು. ಸರಿಯಾಗಿ ಬೇಯಿಸದ ಆಹಾರಗಳನ್ನು ಮತ್ತು ರಸ್ತೆಬದಿಯಲ್ಲಿ ನೊಣಗಳಿಂದ ಮುತ್ತಿಕೊಂಡಿರುವ ತಿಂಡಿಪದಾರ್ಥಗಳಿಂದ ಸದಾ ದೂರವಿರಬೇಕು. ತಮ್ಮ ದೇಹ ಪ್ರಕೃತಿಗೆ ಹೊಂದಿಕೊಳ್ಳದ ಆಹಾರವನ್ನು ಸೇವಿಸದಿರುವುದು ಉತ್ತಮ. ನಮಗೆ ‘ಅಲರ್ಜಿ’ ಇರುವ ಪದಾರ್ಥಗಳಿಂದ ದೂರ ಉಳಿಯುವುದು ಒಳಿತು. ಪ್ರವಾಸದ ವೇಳೆಯಲ್ಲಿ ದಿನಕ್ಕೆ ಕನಿಷ್ಠ ಎರಡು–ಮೂರು ಲೀಟರಿನಷ್ಟು ನೀರನ್ನು ಕುಡಿಯುವುದರಿಂದ ದೇಹವು ನಿರ್ಜಲೀಕರಣವಾಗುವುದನ್ನು ತಡೆಯಬಹುದು.
ವಿವಿಧ ಪ್ರದೇಶಗಳ ಹವಾಗುಣವು ವಿಭಿನ್ನವಾ ಗಿರುವುದರಿಂದ ಅಲ್ಲಿಯ ಹವಾಮಾನ ಮತ್ತು ವಾತಾವರಣಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಬೇಕು. ಕೆಲವು ಪ್ರದೇಶದಲ್ಲಿ ಹವಾಮಾನದ ಕಾರಣದಿಂದ ಸೊಳ್ಳೆಗಳು ಮತ್ತು ಕೀಟಗಳಿಂದ ಹರಡುವ ಕಾಯಿಲೆಗಳು ಜಾಸ್ತಿಯಿರುತ್ತವೆ. ಆ ಕುರಿತು ಸೂಕ್ತ ಎಚ್ಚರಿಕೆಗಳನ್ನು ವಹಿಸಬೇಕು. ಬೆಟ್ಟಗುಡ್ಡ
ಗಳತ್ತ ಚಾರಣ ಹೊರಟವರು ಕಾಡಿನ ಕೀಟಗಳಿಂದ ಬರುವ ‘ರಿಕೆಟ್ಸಿಯಾ’ ಮುಂತಾದ ಕಾಯಿಲೆಗಳ ಕುರಿತು ಎಚ್ಚರವನ್ನು ವಹಿಸಬೇಕು. ಬಿಸಿಲು ಜಾಸ್ತಿಯಿರುವ ಕಡೆ ಹೋದಾಗ ತ್ವಚೆಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ದಕ್ಷಿಣ ಭಾರತದಿಂದ ಉತ್ತರ ಭಾರತದ ಕಡೆಗೆ ಪ್ರವಾಸ ಹೋಗುವವರು ಅಲ್ಲಿನ ಹವಾಮಾನದ ಕುರಿತು ಅರಿತುಕೊಳ್ಳುವುದು ಅತ್ಯಗತ್ಯ. ಅಲ್ಲಿ ಚಳಿಗಾಲದಲ್ಲಿ ತಾಪಮಾನ ಶೂನ್ಯ ಡಿಗ್ರಿಯ ತನಕ ಇಳಿಯುವುದು ಮತ್ತು ಬೇಸಿಗೆಯಲ್ಲಿ ವಿಪರೀತ ಸೆಕೆಯಿರುವುದು ಸಾಮಾನ್ಯ. ಅದಕ್ಕೆ ಅನುಗುಣವಾಗಿ ಧರಿಸಲು ಸೂಕ್ತ ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಕು.
ಘಟ್ಟಪ್ರದೇಶದಲ್ಲಿ ಪ್ರಯಾಣ ಮಾಡುವಾಗ ಕೆಲವರಿಗೆ ತಲೆಸುತ್ತ ಬರುವುದು ಮತ್ತು ವಾಂತಿ ಆಗುವ ಸಮಸ್ಯೆಯಿರುತ್ತದೆ. ಪ್ರಯಾಣದ ಮೊದಲು ಸೂಕ್ತ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುವವರು ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರಕ್ರಮವನ್ನು ಪಾಲಿಸುವುದು ಅತ್ಯಗತ್ಯ. ಪ್ರಯಾಣದ ವೇಳೆಯಲ್ಲಿ ತಾವು ಸೇವಿಸುವ ಆಹಾರ ದಲ್ಲಿರುವ ಕ್ಯಾಲರಿಯ ಬಗ್ಗೆ ಗಮನ ಹರಿಸಬೇಕು. ಸಿಹಿತಿಂಡಿಗಳಿಂದ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಹೃದಯ ಮತ್ತು ಮಿದುಳುಸಂಬಂಧಿ ಕಾಯಿಲೆಗಳಿಂದ ಬಳಲುವವರು ತಮ್ಮ ವೈದ್ಯಕೀಯ ದಾಖಲೆಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಉತ್ತಮ. ಒಂದು ವೇಳೆ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಅಂಥವರನ್ನು ಆಗ ಹೊಸದಾಗಿ ನೋಡುವ ತಜ್ಞ
ವೈದ್ಯರಿಗೆ ಅಗತ್ಯ ಮಾಹಿತಿ ಕೂಡಲೇ ಸಿಗುತ್ತದೆ. ಹೀಗಾಗಿ ರೋಗಿಯ ಸಮಸ್ಯೆಯನ್ನು ಗ್ರಹಿಸಲು ಮತ್ತು ಸೂಕ್ತ ಚಿಕಿತ್ಸೆಯನ್ನು ಆರಂಭಿಸಲು ತಡವಾಗದು.
ಇಂದಿನ ದಿನಗಳಲ್ಲಿ ಬಹಳ ಭಾರತೀಯರು ವಿದೇಶ ಪ್ರಯಣವನ್ನು ಮಾಡುತ್ತಿದ್ದಾರೆ. ಆಫ್ರಿಕಾ ಮುಂತಾದ ದೇಶಗಳಲ್ಲಿ ಭಾರತದಲ್ಲಿ ಇರದ ಹಲವು ಸೋಂಕುಗಳಿವೆ. ಹಾಗಾಗಿ ‘ಎಲ್ಲೋ ಫೀವರ್’ (yellow fever) ಮುಂತಾದ ಕಾಯಿಲೆಗಳಿಗೆ ಲಸಿಕೆಯನ್ನು ಪಡೆಯಬೇಕಾಗಿ ಬರುತ್ತದೆ. ಭಾರತದಲ್ಲಿ ಟೈಫಾಯ್ಡ್ ಕಾಯಿಲೆ ಹೆಚ್ಚಾಗಿರುವುದರಿಂದ ಇಲ್ಲಿಗೆ ಬರುವ ವಿದೇಶಿಗರು ಆಹಾರದ ಬಗ್ಗೆ ಎಚ್ಚರವನ್ನು ವಹಿಸುವ ಜೊತೆಗೆ ಟೈಫಾಯ್ಡ್ ಲಸಿಕೆಯನ್ನೂ ಪಡೆಯುತ್ತಾರೆ. ವಿದೇಶಗಳಲ್ಲಿ ಮತ್ತು ಭಾರತದೊಳಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿರುವುದರಿಂದ ಆರೋಗ್ಯ ವಿಮೆಯ ಬಗ್ಗೆಯೂ ಪ್ರವಾಸ ಹೋಗುವವರು ಗಮನ ಹರಿಸಬೇಕಿದೆ.
ಒಟ್ಟಿನಲ್ಲಿ, ನಮ್ಮ ಪ್ರವಾಸದ ಸಂತೋಷಕ್ಕೆ ತೊಂದರೆ ಎದುರಾಗದಿರಲು ಕೆಲವೊಂದು ಎಚ್ಚರಿಕೆಗಳನ್ನು ವಹಿಸಬೇಕು. ನಾವು ಹೋಗುತ್ತಿರುವ ಸ್ಥಳದ ಬಗ್ಗೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಅಲ್ಲಿ ಎದುರಾಗಬಹುದಾದ ತೊಂದರೆಗಳನ್ನು ಗ್ರಹಿಸಿ, ಅದಕ್ಕೆ ತಕ್ಕ ಉಪಾಯಗಳನ್ನು ಮಾಡಿಕೊಳ್ಳಬೇಕು. ನಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ನಮಗೆ ಮೊದಲು ಚೆನ್ನಾಗಿ ತಿಳಿದಿರಬೇಕು; ನಮ್ಮ ಹತ್ತಿರದವರಿಗೂ ತಿಳಿದಿದ್ದರೆ ಒಳ್ಳೆಯದು. ಮಕ್ಕಳ ಮತ್ತು ವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ನಮ್ಮ ಆರೋಗ್ಯಕ್ಕೆ ತೊಂದರೆಯಾಗಬಹುದಾದ ಯಾವುದೇ ರೀತಿಯ ಚಟುವಟಿಕೆಯಲ್ಲೂ ಪ್ರವಾಸದ ವೇಳೆ ತೊಡಗಲೇಬಾರದು.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.