ಎಷ್ಟು ಕಾಲವಾದರೂ ‘ಕ್ಷಯ’ವಾಗದ ಕ್ಷಯ..! ಡಾ. ಕುಶ್ವಂತ್ ಕೋಳಿಬೈಲು ಲೇಖನ
ಮನುಕುಲದ ಅಳಿವು ಮತ್ತು ಉಳಿವನ್ನು ಪ್ಲೇಗ್, ಸಿಡುಬು, ಕಾಲರಾ ಮುಂತಾದ ರೋಗಗಳು ಒಂದು ಕಾಲದಲ್ಲಿ ಪ್ರಶ್ನಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಬಂದ ಕೋವಿಡ್ ಕೂಡ ದೊಡ್ಡ ಮಟ್ಟದ ಭಯವನ್ನು ಹುಟ್ಟಿಸಿತ್ತು. ಆದರೆ ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಲಸಿಕೆ ಮತ್ತು ಆಧುನಿಕ ಆವಿಷ್ಕಾರದ ಕಾರಣಗಳಿಂದ ನಾವು ಇಂತಹ ಹಲವು ಮಾರಕರೋಗಗಳನ್ನು ಮೆಟ್ಟಿ ನಿಂತಿದ್ದೇವೆ. ಕಳೆದ ಶತಮಾನದಲ್ಲಿ ಬೆಳಕಿಗೆ ಬಂದ ಏಡ್ಸ್ ಕಾಯಿಲೆಯನ್ನೂ ಹತೋಟಿಯಲ್ಲಿಡಲು ಔಷಧಗಳಿವೆ. ಆದರೆ ಸಹಸ್ರಾರು ವರ್ಷಗಳಿಂದ ಮನುಕುಲಕ್ಕೆ ಮಾರಕವಾಗಿರುವ ಕ್ಷಯರೋಗವನ್ನು ನಿರ್ಮೂಲನೆ ಮಾಡುವಲ್ಲಿ ಹೆಚ್ಚಿನ ದೇಶಗಳು ಸೋತಿವೆ.
ಈಜಿಪ್ಟಿನ ಮಮ್ಮಿಗಳ ದೇಹದಿಂದಲೂ ಕ್ಷಯರೋಗವನ್ನು ಉಂಟುಮಾಡುವ ಮೈಕೊಬ್ಯಾಕ್ಟೀರಿಯಮ್ ಟುಬರ್ಕುಲೋಸಿಸ್ ಕಂಡುಬರುವ ಕಾರಣ ಈ ಕ್ಷಯರೋಗವು ಮನುಕುಲವನ್ನು ಹಲವು ಶತಮಾನಗಳಿಂದ ಕಾಡುತ್ತಲಿದೆ. ವೈಜ್ಞಾನಿಕ ತಂತ್ರಜ್ಞಾನ ಮುಂದುವರಿದರೂ ಕ್ಷಯರೋಗವನ್ನು ಮಾತ್ರ ನಿರ್ಮೂಲನೆ ಮಾಡುವಲ್ಲಿ ಭಾರತ ಸಹಿತ ಹಲವು ದೇಶಗಳು ಸಫಲವಾಗಿಲ್ಲ.
2025ನೇ ಇಸವಿಗೆ ಭಾರತವನ್ನು ಕ್ಷಯಮುಕ್ತ ಮಾಡುತ್ತೇವೆಂಬ ಪಣವನ್ನು ತೊಟ್ಟಿದ್ದರೂ ಭಾರತದಲ್ಲಿ ಪ್ರತಿ ವರ್ಷ ಸುಮಾರು ಐದು ಲಕ್ಷ ರೋಗಿಗಳು ಕ್ಷಯರೋಗದಿಂದ ಮರಣಹೊಂದುತ್ತಿದ್ದಾರೆ. ಪ್ರಪಂಚದಲ್ಲಿರುವ ಇಪ್ಪತ್ತೈದು ಪ್ರತಿಶತ ಕ್ಷಯರೋಗಿಗಳು ನಮ್ಮ ದೇಶದಲ್ಲಿದ್ದಾರೆ. ಪ್ರತಿ ವರ್ಷ ಸುಮಾರು ಮೂವತ್ತು ಲಕ್ಷ ಹೊಸ ಕ್ಷಯರೋಗಿಗಳನ್ನು ಭಾರತದಲ್ಲಿ ಪತ್ತೆ ಹಚ್ಚಲಾಗುತ್ತದೆ.
‘ಮೈಕೊಬ್ಯಾಕ್ಟೀರಿಯಾ ಟುಬರ್ಕುಲೋಸಿಸ್’ ಬಹಳ ನಿಧಾನವಾಗಿ ಬೆಳೆಯುವ ಬ್ಯಾಕ್ಟೀರಿಯಾವಾಗಿದೆ. ರೋಗನಿರೋಧಕ ಶಕ್ತಿ ಚೆನ್ನಾಗಿರುವವರಲ್ಲಿ ಇದು ಕ್ಷಯರೋಗವನ್ನು ಉಂಟುಮಾಡಲಾರದು. ಅಪೌಷ್ಟಿಕತೆಯಿಂದ ಬಳಲುವವರಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವ ಏಡ್ಸ್ ರೋಗಿಗಳಲ್ಲಿ, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಲ್ಲಿ ಈ ಬ್ಯಾಕ್ಟೀರಿಯಾ ಕ್ಷಯರೋಗವನ್ನು ಉಂಟುಮಾಡುತ್ತದೆ.
ಹೆಚ್ಚಿನವರು ಕ್ಷಯರೋಗವು ಶ್ವಾಸಕೋಶವನ್ನು ಮಾತ್ರ ಆವರಿಸುತ್ತದೆಯೆಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಮನುಷ್ಯನ ಮಿದುಳು, ಕರುಳು, ಎಲುಬು – ಹೀಗೆ ಕ್ಷಯದ ಸೋಂಕಿಗೆ ಬಲಿಯಾಗದ ಯಾವುದೇ ಅಂಗಾಂಗಗಳಿಲ್ಲ. ಕ್ಷಯರೋಗವು ಉಳಿದ ಮಾರಕ ಸೋಂಕುಗಳಂತೆ ರೋಗಿಯನ್ನು ಕೆಲವೇ ದಿನಗಳಲ್ಲಿ ಬಲಿ ಪಡೆಯುವುದಿಲ್ಲ; ಬದಲಿಗೆ ನಿಧಾನವಾಗಿ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಆವರಿಸಿಕೊಳ್ಳುತ್ತದೆ. ಶ್ವಾಸಕೋಶದ ಕ್ಷಯರೋಗ ಬಂದಿರುವವರು ಉಸಿರಾಡುವಾಗ ಅವರ ಉಸಿರಿನಲ್ಲಿ ಕ್ಷಯದ ಕೀಟಾಣುಗಳು ಸುತ್ತ ಮುತ್ತ ಹರಡುತ್ತವೆ. ಅವರು ಕ್ಷಯರೋಗದ ಪಸರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಸಂಜೆಯ ಸಮಯದಲ್ಲಿ ಕಾಣಿಸಿಕೊಳ್ಳುವ ಜ್ವರ, ನಿತ್ರಾಣ, ಒಣಕೆಮ್ಮು, ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಗಿವೆ. ಎರಡು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮ ಬರುತ್ತಿದ್ದರೆ ಶ್ವಾಸಕೋಶದ ಕ್ಷಯರೋಗದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಕರುಳಿನ ಕ್ಷಯರೋಗವಿದ್ದಲ್ಲಿ ತೂಕ ಕಳೆದುಕೊಳ್ಳುವುದರ ಜೊತೆಗೆ ಅಪೌಷ್ಟಿಕತೆಯೂ ಕಾಡಬಹುದು. ಮಿದುಳಿನ ಕ್ಷಯರೋಗವು ಮೂರ್ಛೆರೋಗದ ಮೂಲಕ ವ್ಯಕ್ತವಾಗಬಹುದು. ಕ್ಷಯರೋಗವು ತ್ವಚೆಯ ಮೇಲೆ ಕಜ್ಜಿಯಾಗಿಯೂ ಕಾಣಿಸಿಕೊಳ್ಳಬಹುದು.
ಕಫದ ಪರೀಕ್ಷೆ ಮತ್ತು ಶ್ವಾಸಕೋಶದ ಎಕ್ಸರೇ ಮಾಡುವ ಮೂಲಕ ಕ್ಷಯರೋಗವನ್ನು ಹಿಂದಿನ ದಶಕಗಳಲ್ಲಿ ಪತ್ತೆ ಹಚ್ಚುತ್ತಿದ್ದರು. ಭಾರತದ ಗ್ರಾಮೀಣ ಭಾಗಗಳಲ್ಲಿ ಈಗಲೂ ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಇದರಿಂದಾಗಿ ಕ್ಷಯರೋಗವನ್ನು ಪತ್ತೆ ಹಚ್ಚುವಲ್ಲಿ ತಡವಾಗುತ್ತದೆ ಮತ್ತು ನಿಖರವಾಗಿ ಎಲ್ಲ ರೋಗಿಗಳನ್ನು ಪತ್ತೆ ಹಚ್ಚಲಾಗುವುದಿಲ್ಲ. ಪತ್ತೆಹಚ್ಚಲಾಗದ ರೋಗಿಗಳು ರೋಗವನ್ನು ಹೆಚ್ಚು ಜನರಿಗೆ ಹರಡುತ್ತಾರೆ.
ಕ್ಷಯರೋಗಕ್ಕೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವ ಅಗತ್ಯವಿರುತ್ತದೆ. ಕ್ಷಯರೋಗಕ್ಕೆ ಚಿಕಿತ್ಸೆ ನೀಡಲು ಹತ್ತಾರು ಔಷಧಗಳನ್ನು ಸೇವಿಸಬೇಕಾಗುತ್ತದೆ. ಅಜ್ಞಾನ ಮತ್ತು ಮೂಢ ನಂಬಿಕೆಗಳ ಕಾರಣದಿಂದಾಗಿ ಗ್ರಾಮೀಣ ಭಾಗಗಳಲ್ಲಿ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಮುಂದಿನ ಬಾರಿ ಕ್ಷಯದ ಚಿಕಿತ್ಸೆ ಪ್ರಾರಂಭಿಸಿದಾಗ ಹಿಂದಿನ ಔಷಧಗಳಿಗೆ ರೋಗಿ ಸ್ಪಂದಿಸದ ಕಾರಣ ಹೊಸ ಔಷಧಗಳನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಮೈಕೊಬ್ಯಾಕ್ಟೀರಿಯಾ ಕೀಟಾಣು ಕ್ಷಯರೋಗಕ್ಕೆ ನೀಡಲಾಗುವ ಔಷಧಗಳ ವಿರುದ್ಧ ತನ್ನ ಪ್ರತಿರೋಧವನ್ನು ಹೆಚ್ಚಿಸಿಕೊಳ್ಳುತ್ತದೆ.
‘ಸಿಬಿನ್ಯಾಟ್’ ಎಂಬ ಪರೀಕ್ಷೆಯಿಂದ ರೋಗಿಯ ದೇಹದೊಳಗಿರುವ ಮೈಕೋಬ್ಯಾಕ್ಟಿರಿಯಾ ರೋಗಾಣು ಯಾವ ಕ್ಷಯರೋಗದ ಔಷಧಗಳಿಗೆ ಹೆಚ್ಚು ಉತ್ತಮವಾಗಿ ಸ್ಪಂದಿಸುತ್ತದೆ ಎಂಬ ಮಾಹಿತಿ ಮೊದಲೇ ಲಭ್ಯವಾಗುತ್ತದೆ. ಸ್ಪಂದಿಸದಿರುವ ಔಷಧಗಳನ್ನು ರೋಗಿಯ ಚಿಕಿತ್ಸೆಯಲ್ಲಿ ಬಳಸದಿರುವ ಸೌಲಭ್ಯವೂ ಈಗ ವೈದ್ಯರ ಕೈಯಲ್ಲಿದೆ. ಈ ಮೇಲಿನ ಕಾರಣಗಳಿಂದ ಕ್ಷಯರೋಗದ ಚಿಕಿತ್ಸೆಯು ಹೆಚ್ಚು ವೈಜ್ಞಾನಿಕವಾಗಿ ರೂಪುಗೊಂಡಿದೆ. ಕ್ಷಯರೋಗವು ನಮ್ಮ ದೇಶವನ್ನು ತೀವ್ರವಾಗಿ ಬಾಧಿಸುವ ಕಾಯಿಲೆಯಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಕ್ಷಯರೋಗವನ್ನು ಒಂದು ವಿಷಯವಾಗಿ ಓದಿ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರೂ ಇದ್ದಾರೆ.
ಕ್ಷಯರೋಗಿಗಳನ್ನು ಇಂದಿಗೂ ನಮ್ಮ ಸಮಾಜ ವಕ್ರದೃಷ್ಟಿಯಿಂದ ನೋಡುವುದರಿಂದ ಕ್ಷಯದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಶುಚಿತ್ವ ಮತ್ತು ಉತ್ತಮವಾದ ಪೌಷ್ಟಿಕ ಆಹಾರವು ಕ್ಷಯರೋಗದ ನಿರ್ಮುಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜನರ ಜೀವನಮಟ್ಟ ಸುಧಾರಿಸುವುದರಿಂದ ಕ್ಷಯನಿರ್ಮೂಲನೆ ಮಾಡಬಹುದೆಂಬುದನ್ನು ಪಾಶ್ಚಾತ್ಯ ದೇಶಗಳು ತೋರಿಸಿಕೊಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.