ADVERTISEMENT

ತುಳಸೀಪೂಜೆಯ ಜೊತೆಗೆ ನೆಲ್ಲಿಯ ಅಡುಗೆ

ಡಾ.ಗೀತಾ ಸತ್ಯ
Published 16 ನವೆಂಬರ್ 2018, 19:30 IST
Last Updated 16 ನವೆಂಬರ್ 2018, 19:30 IST
   

ಸೂಪಶಾಸ್ತ್ರದ ರಚನೆಯ ಕಾಲದಲ್ಲಿ ಇಂದಿನಂತೆ ನೂರಾರು ಬಗೆಯ ತರಕಾರಿಗಳ ಹಂಗಿರಲಿಲ್ಲ. ಮಂಗರಸನು ಪರಿಚಯಿಸಿದ ಕೆಲವು ಹತ್ತಾರು ತರಕಾರಿಗಳಲ್ಲಿ ನೆಲ್ಲಿ ಕೂಡ ಒಂದು. ಅದಕ್ಕೂ ಪೂರ್ವಯುಗವಿತ್ತು. ವಚನಕಾರ ಅಲ್ಲಮ ಬೆಟ್ಟದ ನೆಲ್ಲಿಯ ಕಾಯಿಗೆ ಸಮುದ್ರದ ಉಪ್ಪು ಕೂಡಿಸಿದರು. ನೆಲ್ಲಿಯ ಉಪ್ಪಿನ ಕಾಯಿ ಮಾಡುವ ಎತ್ತಣಿಂದೆತ್ತ ಸಂಬಂಧದ ಅತಿ ಸರಳ ಉಪಮೆ ನೀಡಿದರು. ಹೀಗೆ ಜನಮಾನಸದಲ್ಲಿ ಮಾತ್ರ ಅಲ್ಲ, ದಿನಬಳಕೆಯಲ್ಲಿ ಸಹ ನೆಲ್ಲಿಯು ಮನೆ ಮನೆಯ ಮಾತಾಗಿತ್ತು. ಹಾಗೆ ಪ್ರಚಲಿತವಾಗಿದ್ದ ಬೆಟ್ಟದ ನೆಲ್ಲಿಯ ಅಡುಗೆಪ್ರಕಾರಗಳು ಮಂಗರಸನ ಕೃತಿಯಲ್ಲಿ ಸೇರಿಕೊಂಡದ್ದು ಸಹಜ.

ಆಮಲಕ ಚೂರ್ಣ

ಆಮಲಕ ಎಂದರೆ ನೆಲ್ಲಿಕಾಯಿ. ಶಂಕರ ಭಗವತ್ಪಾದರ ಶಿಷ್ಯರೊಬ್ಬರ ಹೆಸರು ಹಸ್ತಾಮಲಕ. ಸದಾ ಅಂಗೈಯಲ್ಲಿ ನೆಲ್ಲಿಕಾಯಿ ಹಿಡಿದವರೆಂದು ಅರ್ಥೈಸಬಹುದು. ಅಂತಹ ಸಾರ್ವತ್ರಿಕ ಉಪಯೋಗ ನೆಲ್ಲಿಯದು. ಹಸಿವೆ ನೀರಡಿಕೆ ನೀಗುವ ಸಂಜೀವಿನಿ ಇದು. ದಪ್ಪನೆಯ ಬೆಟ್ಟದ ನೆಲ್ಲಿಯ ಕಾಯಿಯನ್ನು ಕತ್ತರಿಸಿಕೊಳ್ಳಿರಿ. ವಿಭೂತಿ ಸುಣ್ಣ ಅಂದರೆ ತಿನ್ನುವ ಸುಣ್ಣದ ಪುಡಿಯ ನೀರಿನಲ್ಲಿ ಕೊಂಚ ಹೊತ್ತು ನೆನೆ ಹಾಕಿರಿ. ಅನಂತರ ಅದನ್ನು ಪಾತ್ರೆಯಲ್ಲಿ ಬೇಯಿಸಿ ಇಟ್ಟುಕೊಳ್ಳಿರಿ. ಕಡಲೆಯ ಸಾದಾ ಹಿಟ್ಟಿಗೆ ಒಣಗಿದ ಸಂಪಿಗೆ, ಕೇದಿಗೆಯ ಹೂವುಗಳ ಪುಡಿಯ ಸುವಾಸನೆ ಹದವಾಗಿ ಬೆರೆಸಿರಿ. ಮೊದಲೇ ತೆಗೆದಿರಿಸಿದ ಬೆಂದ ನೆಲ್ಲಿಯ ಕಾಯಿಯ ಮೇಲೆ ಸುವಾಸಿತ ಕಡಲೆಯ ಹಿಟ್ಟು ಉದುರಿಸಿರಿ. ಇಂತಹ ಮಿಶ್ರಣವನ್ನು ಹಸಿಯ ಅರಿಸಿನದ ಎಲೆಯ ಕೊಟ್ಟೆಯಲ್ಲಿ ತುಂಬಿ ಪೊಟ್ಟಣವನ್ನು ಮಾಡಿರಿ. ಅಂತಹ ಪೊಟ್ಟಣಗಳನ್ನು ಇಡ್ಲಿ ಪಾತ್ರೆಯ ಹಬೆ ಮೂಲಕ ಬಿಸಿ ಮಾಡಿಕೊಳ್ಳಿರಿ. ಅದನ್ನು ಆಮಲಕಚೂರ್ಣ ಎಂಬ ಅಡುಗೆಯೆಂಬರು. ಸ್ವತಂತ್ರ ತಿಂಡಿಯಾಗಿ ಅಥವಾ ಅನ್ನದ ಸಂಗಡ ಕಲಸಲು ಇದು ಯೋಗ್ಯವಾದುದು.

ADVERTISEMENT

ಹಾಲೊಡೆ(ಪನೀರ್)ನೆಲ್ಲಿ

ಸಣ್ಣಗೆ ಕತ್ತರಿಸಿದ ನೆಲ್ಲಿಯ ಸಂಗಡ ಹಸಿಮೆಣಸು ಕಾಯಿ, ಈರುಳ್ಳಿ ಚೂರುಗಳನ್ನು ಕೂಡಿಸಿರಿ. ಹಸಿ ಶುಂಠಿ, ಉಪ್ಪು ಸಂಗಡ ಧಾರಾಳ ತುಪ್ಪ ಬಿಟ್ಟು ಹುರಿದುಕೊಳ್ಳಿರಿ. ಅನಂತರ ಹಾಲೊಡೆಯ ಚೂರುಗಳನ್ನು ಸೇರಿಸಿ ಹುರಿಯಿರಿ. ತುಪ್ಪದಲ್ಲಿ ಒಗ್ಗರಿಸಿದ ನೆಲ್ಲಿಯ ಖಾರದ ಖಾದ್ಯ ಬಲು ರುಚಿ. ಹಾಲೊಡೆಯ ಬದಲಿಗೆ ರವೆ ಮತ್ತು ಸಕ್ಕರೆ ಕೂಡಿಸಿದ ಹಸಿಮೆಣಸು, ಶುಂಠಿ ಇಲ್ಲದ ನೆಲ್ಲಿಯ ಸಿಹಿ ಅಡುಗೆ ಕೂಡ ಹೀಗೇ ಮಾಡಲು ಸಾಧ್ಯವಿದೆ.

ನೆಲ್ಲಿಯ ಉಂಡಲಿಗೆ

ಹಾಲಿನ ಸಂಗಡ ನೆಲ್ಲಿಯ ಚೂರು ಹಾಕಿ ಕಾಸಿದಾಗ ಹಾಲೊಡೆಯುತ್ತದೆ. ಅದರ ಘನಭಾಗವನ್ನು ಒಣಗಿದ ನೆಲ್ಲಿಯ ಪುಡಿ ಸಂಗಡ ಚೆನ್ನಾಗಿ ಕಲಿಸಿ ಉಂಡೆ ಮಾಡಿಟ್ಟುಕೊಳ್ಳಿರಿ. ಹಾಲು, ನೆನೆದ ಅಕ್ಕಿ ಮತ್ತು ಉದ್ದಿನಬೇಳೆ ಹಾಗೂ ತೆಂಗಿನ ಕಾಯಿಗಳನ್ನು ಚೆನ್ನಾಗಿ ಅರೆದಿರಿಸಿದ ದ್ರವರೂಪದ ಸಂಪಳೆ(ಹಿಟ್ಟು)ಯನ್ನು ತಯಾರಿಸಿಟ್ಟುಕೊಳ್ಳಿರಿ. ಅಗಲದ ಬಾಣಲೆಯಲ್ಲಿ ಅದನ್ನು ಕುದಿಯಲು ಸಾದಾ ಉರಿಯಲ್ಲಿಡಿರಿ. ಮೊದಲಿಗೆ ಸಿದ್ಧಪಡಿಸಿದ ನೆಲ್ಲಿಯ ಉಂಡೆಗಳನ್ನು ಹಾಕಿ ಪಾಕ ಮಾಡಿರಿ. ಇದು ನೆಲ್ಲಿಯ ಖಾರದ ಉಂಡಲಿಗೆ ಅಡಿಗೆ. ರುಬ್ಬಿದ ತೆಂಗಿನಕಾಯಿಯ ಖಾರದ ಕೊಣಬು(ದ್ರವರೂಪದ ರಸ) ಕುದಿಯಲಿಟ್ಟು ನೆಲ್ಲಿಯುಂಡೆಯ ಹದ ಪಾಕ ಸಿದ್ಧಪಡಿಸಲಾದೀತು. ಅರೆದ ಹುರುಳಿಯ ದ್ರವ(ಹಾಲು)ದಲ್ಲಿ ಇದೇ ಉಂಡಲಿಗೆ ಪಾಕ ಸಿದ್ಧಪಡಿಸಲೂ ಸಾಧ್ಯವಿದೆ. ಬೆಲ್ಲದ ಪಾಕದಲ್ಲಿ ಇದೇ ಉಂಡಲಿಗೆ ಹಾಕಿ ತಿಂದರೆ ಅದು ನೆಲ್ಲಿಯ ಸಿಹಿ ಉಂಡಲಿಗೆ.

ಗುಡಾಮಲಕ ಯೋಗ

ಎಳೆಯ ಮಗುವಿಗೂ ಚ್ಯವನಪ್ರಾಶದ ಹೆಸರು ಇಂದು ಗೊತ್ತು. ಅಂತಹ ಲೇಹದ ಮೂಲವಸ್ತು ನೆಲ್ಲಿ. ಹೊಸ ಬೆಲ್ಲದ ಲೇಹ ಅಂದರೆ ಎಳೆ ಎಳೆಯಾದ ತಂತು ಪಾಕ ಮಾಡಿರಿ. ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ಬಲಿತ ನೆಲ್ಲಿಯ ಕಾಯಿಯ ಹೋಳುಗಳನ್ನು ಲೇಹ ಪಾಕ ಮಾಡಿದ ಬೆಲ್ಲದಲ್ಲಿ ಹಾಕಿಡಿ. ಬೇಕೆಂದಾಗ ನೆಲ್ಲಿಕಾಯಿ ತಿನ್ನಲಾದೀತು. ಅಬಾಲ ವೃದ್ಧರಿಗೆ ಇದು ಸದಾ ಕಾಲ ಸಂಜೀವಿನಿ.

ಸಿತಾಮಲಕ ಯೋಗ

ಸಕ್ಕರೆನೆಲ್ಲಿ ಎಂಬ ಸಿಹಿ ಅಡುಗೆ ಇನ್ನೊಂದುಬಗೆಯದು. ಹೊಸ ಬೆಲ್ಲದ ಬದಲಿಗೆ ಸಕ್ಕರೆ ಪಾಕದಲ್ಲಿ ಬೆಂದ ಬೆಟ್ಟದ ನೆಲ್ಲಿಯ ಹೋಳು
ಗಳು ಸಿತಾಮಲಕ ಎಂಬ ಸಿಹಿಯಡುಗೆ. ಇದಲ್ಲದೆ ಆಯಾ ವಸ್ತುಗಳ ಸಂಗಡ ನೆಲ್ಲಿಯನ್ನು ಕೂಡಿಸಿ ಅಡುಗೆ ಮಾಡುವ ವಿಧಾನಗಳಿವೆ. ಮರಿಚಾಮಲಕ (ಕಾಳುಮೆಣಸು ನೆಲ್ಲಿ), ದಧ್ಯಾ
ಮಲಕ (ಮೊಸರು ನೆಲ್ಲಿ), ಸರ್ಷಪಾಮಲಕ (ಸಾಸಿವೆನೆನಲ್ಲಿ), ತಿಂತ್ರಿಣ್ಯಾಮಲಕ (ಹುಣಿಸೆನೆಲ್ಲಿ), ತಕ್ರಾಮಲಕ (ಮಜ್ಜಿಗೆ ನೆಲ್ಲಿ) ಎಂಬ ಯೋಗಗಳಿವೆ. ಆಯಾ ವಸ್ತು ಸಂಗಡ ಪಾಕಗೊಂಡ ಮೂಲವಸ್ತು ನೆಲ್ಲಿಯೇ ಆಗಿದೆ.

ನೆಲ್ಲಿಯ ತಾಳಿದಗಳು

ಬಲಿತ ನೆಲ್ಲಿಯ ಕಾಯಿಗಳನ್ನು ನೀರಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿರಿ. ಬೀಜ ಬೇರ್ಪಡಿಸಿಕೊಳ್ಳಿರಿ. ಹದವರಿತು ಉಪ್ಪು ಮೆಂತೆ, ಸಾಸಿವೆ ಮತ್ತು ಅರಿಸಿನದ ಮಿಶ್ರಣವನ್ನು ಅರೆದುಕೊಂಡು ಮಸಾಲೆಯ ರೂಪದಲ್ಲಿ ಸಿದ್ಧಪಡಿಸಿರಿ. ಅಡುಗೆಯ ಎಣ್ಣೆಯಲ್ಲಿ ನೆಲ್ಲಿಯ ಸಹಿತ ತಾಳಿಸಿಕೊಂಡು ಸಿದ್ಧ ಪಡಿಸಿರಿ. ಅನ್ನದ ಸಂಗಡ ತಿನ್ನಲು ರುಚಿಯಾಗುತ್ತದೆ. ಬಲಿತ ನೆಲ್ಲಿಯನ್ನು ಸುಣ್ಣದ ತಿಳಿನೀರಿನಲ್ಲಿ ಬೇಯಿಸಿಕೊಳ್ಳಿರಿ. ಅದರಿಂದ ಹುಳಿ ಮತ್ತು ಒಗರು ಮಾಯ. ಬಳಿಕ ಬಾಣಲೆಯ ತುಪ್ಪದಲ್ಲಿ ಚೆನ್ನಾಗಿ ತಾಳಿಸಿಕೊಳ್ಳಿರಿ. ಬಗೆಬಗೆಯ ಮಸಾಲೆ ಸಂಭಾರಗಳೊಂದಿಗೆ ಪರಿಮಿಳಿಸಿರಿ. (ಧನಿಯ, ಮೆಂತೆ, ಉದ್ದು, ಜೀರಿಗೆ, ಸಾಸಿವೆ, ಚಕ್ಕೆ, ಲವಂಗ, ಜಾಕಾಯಿ) ಅನ್ನದ ಜೊತೆಗೆ ಉಣ್ಣಲು ತಾಳಿದ ಸಿದ್ಧ.

ನೆಲ್ಲಿಯ ಬೋನ

ಕರಿದ ನೆಲ್ಲಿಯ ಸಂಡಿಗೆಗೆ ನಿಂಬೆರಸವನ್ನು ಹಿಂಡಿಕೊಳ್ಳಿರಿ. ಶುಂಠಿ, ಈರುಳ್ಳಿ, ಇಂಗು, ಎಣ್ಣೆ ಸಂಗಡ ಉಳಿದ ಸಂಭಾರಗಳನ್ನಿಕ್ಕಿರಿ. ಹದವರಿತ ಉಪ್ಪು ಹಾಕಿದ ನೆಲ್ಲಿಯ ಬೋನವು ಅನ್ನದ ಸಂಗಡ ಕಲಸಿ ತಿನ್ನುವ ನೆಲ್ಲಿಯ ಅಡುಗೆ.

ನೆಲ್ಲಿಯ ಸಂಡಿಗೆ

ಬೀಜ ತೆಗೆದ ಬಲಿತ ನೆಲ್ಲಿಯ ಕಾಯಿಯನ್ನು ನೀರಿನ ಸಂಗಡ ಬೇಯಿಸಿರಿ. ಬೆಂದ ನೆಲ್ಲಿಗೆ ಈರುಳ್ಳಿ, ಬೆಳ್ಳುಳ್ಳಿ, ಕಾರಗೆಣಸು(ಕಾಡು ಶುಂಠಿ), ಜೀರಿಗೆ, ಮೆಂತೆಕಾಳು, ಇಂಗು, ಉಪ್ಪು, ಕರಿಬೇವು, ಕೊತ್ತಂಬರಿಗಳನ್ನು ಹದವರಿತು ಕೂಡಿಸಿರಿ. ಚೆನ್ನಾಗಿ ಅರೆದುಕೊಳ್ಳಿರಿ. ಆ ಹಿಟ್ಟಿನಲ್ಲಿ ಸಂಡಿಗೆ ಮಾಡಿ ಬಿಸಿಲಲ್ಲಿ ಒಣಗಿಸಿಟ್ಟುಕೊಳ್ಳಿರಿ. ಬೇಕಾದಾಗ ಕರಿದು ತಿನ್ನಲು ಯೋಗ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.