
ನವಜಾತ ಶಿಶುವಿನ ಬೆಳವಣಿಗೆಯಲ್ಲಿ ಹಾಲುಣಿಸುವಿಕೆ ಪ್ರಮುಖ ಹಂತವಾಗಿದೆ. ಮೊದಲ 6 ತಿಂಗಳವರೆಗೂ ಮಗುವಿನ ಪಾಲಿಗೆ ಎದೆಹಾಲೇ ಅಮೃತ. ಆದರೆ ಇಂಥ ಅಮೃತದಲ್ಲಿಯೇ ಯುರೇನಿಯಂ ಅಂಶ ಪತ್ತೆಯಾಗಿ, ಎದೆಹಾಲು ಕೂಡ ವಿಷವಾಗುತ್ತಿದೆ ಎಂಬ ಆತಂಕಕಾರಿ ಅಂಶವೊಂದು ಇತ್ತೀಚಿನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಅಷ್ಟಕ್ಕೂ ತಾಯಿಯ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಲು ಕಾರಣವೇನು ಎಂಬುದನ್ನು ನೋಡೋಣ.
ತಾಯಿಯ ಎದೆ ಹಾಲು ರೋಗ ನಿರೋಧಕ ಶಕ್ತಿಯಿಂದ ಕೂಡಿರುತ್ತದೆ. ಇದು ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಹೀಗಾಗಿ ಈ ದಿನಗಳಲ್ಲಿ ತಾಯಿ ಸೇವಿಸುವ ಆಹಾರ ಮತ್ತು ಔಷಧಿಗಳು ಎದೆಹಾಲಿಗೆ ಸೇರುತ್ತವೆ. ಈ ಮೂಲಕ ತಾಯಿಯಿಂದ ಮಗುವಿಗೆ ವರ್ಗಾವಣೆಗೊಳ್ಳುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ತಾಯಿಯು ಸೇವಿಸುವ ಎಲ್ಲಾ ಆಹಾರಗಳ ಮೇಲೆ ನಿಗಾ ಇಡಲಾಗುತ್ತದೆ.
ಮಾಲಿನ್ಯಕಾರಕಗಳು ಮತ್ತು ವಿಷಕಾರಿ ರಾಸಾಯನಿಕಗಳುಳ್ಳ ಪರಿಸರದಿಂದ ದೂರ ಉಳಿಯುವಂತೆ ಎಚ್ಚರಿಸಲಾಗುತ್ತದೆ. ತಾಯಿ ಸೇವಿಸಿದ ಈ ವಿಷಗಳು ಆಕೆಯ ಎದೆಹಾಲಿನ ಮೂಲಕ ಮಗುವಿಗೆ ದಾಟುತ್ತವೆ.
ಜನಪ್ರಿಯ ಜರ್ನಲ್ ‘NATURE’- ನವೆಂಬರ್ 2025 ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಭಾರತದ ಬಿಹಾರದಲ್ಲಿ ತಾಯಂದಿರ ಎದೆಹಾಲೇ ಮಕ್ಕಳಿಗೆ ವಿಷವಾಗುತ್ತಿದೆ. ಎದೆಹಾಲಿನಲ್ಲಿ ಯುರೇನಿಯಂ ಅಂಶ ಕಂಡುಬಂದಿದೆ. ಬಿಹಾರ ಮತ್ತು AIIMS ನವದೆಹಲಿಯಲ್ಲಿರುವ ತಂಡವು ಈ ಸಂಶೋಧನೆಯನ್ನು ನಡೆಸಿತ್ತು. ಅವರು 40 ಹಾಲುಣಿಸುವ ತಾಯಂದಿರ ಎದೆಹಾಲಿನ ಮಾದರಿಗಳನ್ನು ತೆಗೆದುಕೊಂಡು ಯುರೇನಿಯಂ ಮಟ್ಟವನ್ನು ಪರೀಕ್ಷಿಸಿದರು.
ಯುರೇನಿಯಂ 0-6mcg/l ವ್ಯಾಪ್ತಿಯಲ್ಲಿರುವುದು ಕಂಡುಬಂದಿದೆ. ಆದರೆ ಯುರೇನಿಯಂ ವಿಷವಾಗಲು ಗರಿಷ್ಠ ಸಾಂದ್ರತೆಯು 5.6 mcg/l ಇರಬೇಕು. ಆದ್ದರಿಂದ ನವಜಾತ ಶಿಶುಗಳನ್ನು ತಲುಪುವ ಹೆಚ್ಚಿನ ಮಟ್ಟದ ಯುರೇನಿಯಂ ಕ್ಯಾನ್ಸರ್ ಕಾರಕವಲ್ಲ ಎಂಬುದು ಸದ್ಯಕ್ಕೆ ಸಮಾಧಾನದ ಸಂಗತಿ. ಆದರೆ ನಂತರದ ಜೀವನದಲ್ಲಿ ಮೂತ್ರಪಿಂಡ ಮತ್ತು ಮೂಳೆ ಅಸ್ವಸ್ಥತೆಗಳನ್ನು ಹೆಚ್ಚಿನ ಅಪಾಯವಿದೆ ಎಂಬುದು ಅದೇ ಸಂಶೋಧನೆಯಿಂದ ತಿಳಿದುಬಂದಿದೆ.
ಯುರೇನಿಯಂ ತಾಯಂದಿರ ಎದೆಹಾಲನ್ನು ಹೇಗೆ ತಲುಪುತ್ತಿದೆ?
ಬಿಹಾರ ರಾಜ್ಯವು ಫಲವತ್ತಾದ ಮಣ್ಣನ್ನು ಹೊಂದಿದೆ. ಇಲ್ಲಿ ಕೃಷಿ ಪ‍್ರಮುಖ ಗಳಿಕೆಯ ಸಾಧನವಾಗಿದೆ. ಇಲ್ಲಿ ಅನೇಕ ಸೂಕ್ಷ್ಮ ಮತ್ತು ಅಗತ್ಯ ಖನಿಜಗಳಿವೆ. ರೈತರು ಬಳಸುವ ರಾಸಾಯನಿಕ ಗೊಬ್ಬರಗಳು ನೀರಿನ ಮೂಲಗಳಿಗೆ ಸೇರುತ್ತಿವೆ.
ಕೈಗಾರಿಕೆಗಳು ಸಂಸ್ಕರಿಸಿದ ತಾಜ್ಯಗಳನ್ನು ಬಿಡುಗಡೆ ಮಾಡಿದಾಗ ಮಣ್ಣಿನಲ್ಲಿ, ಸ್ಥಳೀಯ ನೀರಿನ ಆಕರಗಳಲ್ಲಿ ಸೇರುತ್ತವೆ. ಈ ನೀರನ್ನು ನೀರಾವರಿಗಾಗಿ ಬಳಸಿದಾಗ, ಯುರೇನಿಯಂ ನಮ್ಮ ದಿನನಿತ್ಯ ಬಳಕೆಯೊಂದಿಗೆ ಸೇರುತ್ತದೆ.
ಇಂತಹ ಮಣ್ಣಿನಲ್ಲಿ ಬೆಳೆದ ಆಹಾರ ಸೇವಿಸಿದರೆ, ಅಲ್ಲಿನ ಲೋಹಗಳು ನಮ್ಮ ದೇಹ ಸೇರುತ್ತದೆ. ಈ ಮೂಲಕವೇ ಬಿಹಾರದಲ್ಲಿ ಯುರೇನಿಯಂ ತಾಯಂದಿರ ಎದೆಹಾಲು ಸೇರಿರುವುದು.
ಮೂತ್ರಪಿಂಡಗಳು ದೇಹದಲ್ಲಿ ಅಧಿಕವಾದ ಯುರೇನಿಯಂ ಅನ್ನು ಹೊರಹಾಕುತ್ತವೆ. ಕಾರ್ಬೊನೇಟ್ ಮತ್ತು ಫಾಸ್ಫೇಟ್ ಗುಂಪುಗಳೊಂದಿಗೆ ಯುರೇನಿಯಂ ಮೂಳೆ ಮತ್ತು ಮೂತ್ರಪಿಂಡಗಳಲ್ಲಿ ಸಂಗ್ರಹವಾಗುತ್ತದೆ.
ಗರ್ಭಾವಸ್ಥೆಯಲ್ಲಿ ಈ ಯುರೇನಿಯಂ ದೇಹವನ್ನು ಭ್ರೂಣಕ್ಕೆ ಪ್ರಸರಣವಾಗಬಹುದು. ಭ್ರೂಣ ಅಥವಾ ನವಜಾತ ಶಿಶುವಿನಲ್ಲಿ ಹೆಚ್ಚಿನ ಯುರೇನಿಯಂ ಸಾಂದ್ರತೆಯು ಮೂಳೆ ಬೆಳವಣಿಗೆ ಮತ್ತು ದೇಹ ಬೆಳವಣಿಗೆಯಲ್ಲಿ ದುರ್ಬಲತೆ, ನರ ಸಮಸ್ಯೆಗಳು, ಐಕ್ಯೂ ಮಟ್ಟ ಕುಸಿತ ಮತ್ತು ವಯಸ್ಕ ಜೀವನದಲ್ಲಿ ಲ್ಯುಕೇಮಿಯಾ ಮತ್ತು ಮೂಳೆ ಕ್ಯಾನ್ಸರ್‌ಗಳಂತಹ ಕ್ಯಾನ್ಸರ್‌ಗಳನ್ನು ಅಭಿವೃದ್ಧಿಪಡಿಸುವ ಅಪಾಯವಿದೆ.
ಈ ಅಧ್ಯಯನ ವರದಿ ಪ್ರಕಟವಾದ ನಂತರ, ಅನೇಕ ವೈಜ್ಞಾನಿಕ ತಜ್ಞರು ಈ ಅಧ್ಯಯನದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಲು ಉತ್ಸುಕರಾಗಿದ್ದರು. ಸಣ್ಣ ಮಾದರಿ ಗಾತ್ರ, ದೋಷಪೂರಿತ ಮಾಪನಾಂಕ ನಿರ್ಣಯ ವಿಧಾನ, ಎದೆಹಾಲಿನಲ್ಲಿನ ಯುರೇನಿಯಂ ಮೌಲ್ಯ, ಅಂತರ್ಜಲ ಸಾಂದ್ರತೆ, ಮೂಳೆ ಹಾಗೂ ಮೂತ್ರಪಿಂಡಗಳಲ್ಲಿನ ಯುರೇನಿಯಂ ಸಾಂದ್ರತೆ ಕೊರತೆ ಮೊದಲಾದ ಸಂಗತಿಗಳು ಚರ್ಚೆಗೆ ಬಂದವು. ಹೀಗಾಗಿ ಈ ವರದಿ ಕುರಿತು ತಕ್ಷಣಕ್ಕೆ ಆತಂಕಪಡಬೇಕಿಲ್ಲ.
ನಾವು ಕುಡಿಯುವ ನೀರಿನಲ್ಲಿ ಯುರೇನಿಯಂ ಸಾಂದ್ರತೆ ಅದರಲ್ಲಿಯೂ ವಿಶೇಷವಾಗಿ ಫಲವತ್ತಾದ ಭೂ ಪ್ರದೇಶಗಳಲ್ಲಿ ವಾಸಿಸುವ ಜನರು ಕುಡಿಯುವ ನೀರಿನಲ್ಲಿ ಹೆಚ್ಚಿರಬಹುದು. ಕನಿಷ್ಟ ಸಾಂದ್ರತೆ ಹಾನಿಕರವಲ್ಲ. ಆದರೆ ಅಪಾಯದ ಮಟ್ಟ ಮೀರಬಾರದು.
ನೀರಿನಲ್ಲಿನ ಖನಿಜಾಂಶಗಳ ಪರೀಕ್ಷೆ ಒಳಿತು. ಭಾರತ ಸೇರಿದಂತೆ ಪ್ರತಿಯೊಂದು ದೇಶವು ಕುಡಿಯುವ ನೀರಿನಲ್ಲಿ ಯುರೇನಿಯಂ ಮತ್ತು ಅಂತಹ ಅನೇಕ ಅಂಶಗಳ ಅನುಮತಿಸುವ ಮೌಲ್ಯಗಳನ್ನು ನಿಗದಿಪಡಿಸಿದೆ. ಈ ಮಟ್ಟವನ್ನು ಪ್ರತಿ ಜಿಲ್ಲಾ ಮತ್ತು ರಾಜ್ಯದ ಆರೋಗ್ಯ ತಜ್ಞರು ಪರೀಕ್ಷಿಸುತ್ತಾರೆ.
ಆದಾಗ್ಯೂ ನಿಮ್ಮಲ್ಲಿ ಅನುಮಾನವಿದ್ದರೆ ಖಾಸಗಿಯಾಗಿ ನೀರಿನ ಪರೀಕ್ಷೆ ಮಾಡಿಸಿಕೊಳ್ಳಬಹುದು. ಶುದ್ಧ ನೀರು, ಆರೋಗ್ಯಕರವಾದ ಪೌಷ್ಟಿಕ ತರಕಾರಿ ಮತ್ತು ಹಣ್ಣುಗಳ ಸೇವನೆ ಎಲ್ಲಾ ಮಹಿಳೆಯರಿಗೆ, ವಿಶೇಷವಾಗಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಅಗತ್ಯವಾಗಿದೆ.
(ಡಾ. ಸಹನಾ ಕೆ.ಪಿ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಅಪೊಲೊ ಆಸ್ಪತ್ರೆ, ಶೇಷಾದ್ರಿಪುರಂ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.