ADVERTISEMENT

ಅಲರ್ಜಿ: ಕೆರೆಯಲು ಕರೆಯುವ ಅರ್ಟಿಕೇರಿಯ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 0:37 IST
Last Updated 3 ಫೆಬ್ರುವರಿ 2026, 0:37 IST
<div class="paragraphs"><p>ಅಲರ್ಜಿ: ಕೆರೆಯಲು ಕರೆಯುವ ಅರ್ಟಿಕೇರಿಯ!</p></div>

ಅಲರ್ಜಿ: ಕೆರೆಯಲು ಕರೆಯುವ ಅರ್ಟಿಕೇರಿಯ!

   

ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರಚೋದನಾತ್ಮಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಇವರಲ್ಲಿ IgE ಎಂಬ ಆ್ಯಂಟಿಬಾಡಿಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವು ರಕ್ತದಲ್ಲಿರುವ ಬೇಸೋಫಿಲ್ ಗಳೆಂಬ ಬಿಳಿರಕ್ತಕಣಗಳನ್ನೂ ಚರ್ಮ, ಶ್ವಾಸಾಂಗಗಳು, ಜೀರ್ಣಾಂಗಗಳು, ಮೊದಲಾದ ಅಂಗಾಂಗಗಳಲ್ಲಿರುವ ಮಾಸ್ಟ್ ಸೆಲ್ ಗಳೆಂಬ ಜೀವಕೋಶಗಳನ್ನೂ ಬಡಿದು ಅವುಗಳಿಂದ ಹಿಸ್ಟಮಿನ್, ಲ್ಯುಕೋಟ್ರಿನ್ ಮೊದಲಾದ  ರಾಸಾಯನಿಕಗಳು ಬಿಡುಗಡೆಯಾಗಿ ರಕ್ತನಾಳಗಳನ್ನು ಹಿಗ್ಗಿಸುತ್ತವೆ ಹಾಗೂ ನರಗಳನ್ನು ಪ್ರಚೋದಿಸುತ್ತವೆ. ಇದರಿಂದ ರಕ್ತ ಹೆಚ್ಚಾಗಿ ಹರಿದು, ಅದರಲ್ಲಿನ ನೀರಿನಂಶ ಹೊರಚೆಲ್ಲಿ ಕೆಂಪು ಬಣ್ಣ, ಹಾಗೂ ಊತಗಳಾಗುತ್ತವೆ.

ನರಗಳ ಪ್ರಚೋದನೆಯಿಂದ ಕೆಂಪು ಬಣ್ಣ ಸುತ್ತಲೂ ಹರಡಿ, ಬಹಳ ತುರಿಕೆಯುಂಟಾಗುತ್ತದೆ. ಈ ಖಾತೆಗಳಿಗೆ ವೀಲ್ ಗಳೆಂದು ಕರೆಯುತ್ತಾರೆ.‌ಕನ್ನಡದಲ್ಲಿ ಇವನ್ನು ಗಂಧೆಗಳು ಅಥವಾ ದದ್ದುಗಳು ಎನ್ನುತ್ತಾರೆ. ಈ ಗಂಧೆಗಳು ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ನಾಲ್ಕು ಗಂಟೆಗಳೊಳಗೆ ಹೊರಟುಹೋಗುತ್ತವೆ. ಅನಂತರ ಮತ್ತೆ ಮತ್ತೆ ಬರುತ್ತಿರುತ್ತವೆ.
   

ADVERTISEMENT

ಈ ಅರ್ಟಿಕೇರಿಯಾಗೆ ಕಾರಣವಾಗುವ ಪ್ರಚೋದನಾತ್ಮಕ ವಸ್ತುಗಳು ಹಲವಾರಿರುತ್ತವೆ. ಅವು ಆಹಾರ ಪದಾರ್ಥಗಳಿರಬಹುದು ( ಸಾಮಾನ್ಯವಾಗಿ ಮೊಟ್ಟೆ, ಮೀನು, ಬೀಜಗಳು ಇತ್ಯಾದಿ), ಉಸಿರಿನಲ್ಲಿ ತೆಗೆದುಕೊಳ್ಳುವಂಥವು ( ದೂಳು, ಮನೆ ಧೂಳಿನಲ್ಲಿರುವ ನುಸಿ ಎಂಬ ಕೀಟ, ಹೂವಿನ ಪರಾಗ, ಅನಿಲಗಳು ಇತ್ಯಾದಿ), ಔಷಧಿಗಳು, ಮೊದಲಾದವು. ಕೀಟಗಳ ಕಚ್ಚುವಿಕೆ, ಕರುಳಿನಲ್ಲಿ ವಾಸಿಸುವ ಜಂತು ಹುಳು, ಕೊಕ್ಕೆ ಹುಳು, ಮೊದಲಾದ ಹುಳುಗಳು, ಸೋಂಕು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮುಂತಾದವುಗಳೂ ಅಲರ್ಜಿಯನ್ನು ಪ್ರಚೋದಿಸುತ್ತವೆ.

ಇವಲ್ಲದೇ, ಚರ್ಮದ ಸ್ಪರ್ಶಕ್ಕೆ ಬರುವ ಕೂದಲ ಬಣ್ಣ, ಸೌಂದರ್ಯ ವರ್ಧಕಗಳು, ಅಂಗರಾಗ ದ್ರವ್ಯಗಳು, ಪ್ರಾಣಿಗಳ ಕೂದಲು ಮತ್ತು ಹೊಟ್ಟು, ಇವೆಲ್ಲವೂ ಸ್ಥಳೀಯವಾಗಿ ಅರ್ಟಿಕೇರಿಯ ಉಂಟುಮಾಡುತ್ತವೆ. ಇವಲ್ಲದೇ ಭೌತಿಕ ಅಂಶಗಳಾದ ಚಳಿ, ಸೆಖೆ, ಬಿಸಿಲು, ನೀರು, ಮೈ ಮೇಲಿನ ಒತ್ತಡ, ಶ್ರಮ ಮತ್ತು ವ್ಯಾಯಾಮ, ಇವೂ ಕೂಡ ಕೆಲವೊಮ್ಮೆ ಅರ್ಟಿಕೇರಿಯಾವನ್ನು ಪ್ರಚೋದಿಸಬಹುದು.

ಕೆಲವರಿಗೆ ವ್ಯಾಯಾಮ, ಶ್ರಮಗಳಾದಾಗ ಹಾಗೂ ಅತಿ ಖಾರ ಪದಾರ್ಥಗಳನ್ನು ಸೇವಿಸಿದಾಗ ಮೈಯಲ್ಲಿ ಬಿಸಿಯೇರಿ ನರಗಳ ತುದಿಗಳಿಂದ ಒಸರುವ ಅಸಿಟೈಲ್ ಕೋಲೀನ್ ದ್ರವ ಹೆಚ್ಚಿ ಅದೂ ಇದನ್ನು ಪ್ರಚೋದಿಸುತ್ತದೆ. ಇದನ್ನು ಕೋಲಿನರ್ಜಿಕ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಕೆಲವರಿಗೆ ಆಟೋ ಆಂಟಿಬಾಡಿಗಳು ಉತ್ಪತ್ತಿಯಾಗಿ ಇವು ಅವರ IgE ಆ್ಯಂಟಿಬಾಡಿಗಳನ್ನು ಮಾಸ್ಟ್ ಸೆಲ್ ಗಳನ್ನೂ ಬೇಸೋಫಿಲ್ ಗಳನ್ನೂ ಪ್ರಚೋದಿಸಿ ಅರ್ಟಿಕೇರಿಯ ಉಂಟಾಗುತ್ತದೆ. ಇದನ್ನು ಆಟೋ ಇಮ್ಯೂನ್ ಅರ್ಟಿಕೇರಿಯ ಎನ್ನುತ್ತಾರೆ.

ಅಪರೂಪವಾಗಿ ಮಾಸ್ಟ್ ಸೆಲ್ ಗಳು ತುಂಬಾ ಹೆಚ್ಚಾಗಿ ಅರ್ಟಿಕೇರಿಯ ಉಂಟಾಗುತ್ತದೆ. ಈ ಬಗೆಯಲ್ಲಿ ಗಂಧೆಗಳು ಹೋದ ಬಳಿಕ ಬಣ್ಣದ ಕಲೆಗಳು ಉಳಿಯುತ್ತವೆ. ಇದನ್ನು ಅರ್ಟಿಕೇರಿಯ ಪಿಗ್ಮೆಂಟೋಸ ಎನ್ನುತ್ತಾರೆ. ಹೀಗೆ ಅರ್ಟಿಕೇರಿಯ ಹಲವು ಕಾರಣಾಂಶಗಳಿಂದ ಆಗುತ್ತದೆ.

ಅರ್ಟಿಕೇರಿಯಾವನ್ನು ತೀವ್ರ ( ಅಕ್ಯೂಟ್) ಮತ್ತು ದೀರ್ಘಕಾಲದ ( ಕ್ರಾನಿಕ್) ಎಂದು ವಿಂಗಡಿಸಲಾಗುತ್ತದೆ. ಅರ್ಟಿಕೇರಿಯ ಆರಂಭವಾಗಿ ಆರು ವಾರಗಳ ಒಳಗಿದ್ದರೆ ಅದನ್ನು ತೀವ್ರ ಎನ್ನಲಾಗುತ್ತದೆ, ಹಾಗೂ ಆರು ವಾರಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ದೀರ್ಘ ಕಾಲದ್ದೆನ್ನಲಾಗುತ್ತದೆ. ತೀವ್ರ ಅರ್ಟಿಕೇರಿಯದಲ್ಲಿ ಕಾರಣ ಸುಲಭವಾಗಿ ತಿಳಿಯುತ್ತದೆ ಹಾಗೂ ಅದು ಚಿಕಿತ್ಸೆಗೆ ಬೇಗನೆ ಸ್ಪಂದಿಸುತ್ತದೆ.

ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕಾರಣ ತಿಳಿಯುವುದು ಬಹಳ ಕಷ್ಟ ಹಾಗೂ ಅದು ಚಿಕಿತ್ಸೆಗೆ ಸ್ಪಂದಿಸುವುದು ಬಹಳ ನಿಧಾನ.‌ ಎಷ್ಟೋ ದೀರ್ಘಾವಧಿಯ ಅರ್ಟಿಕೇರಿಯಾಗಳಲ್ಲಿ ಕಾರಣವೇ ಪತ್ತೆಯಾಗುವುದಿಲ್ಲ.

ಅರ್ಟಿಕೇರಿಯವನ್ನು ಹೋಗಲಾಡಿಸಲು ಹಾಗೂ ಅದು ಬಾರದಂತೆ ನಿವಾರಿಸಲು, ಪ್ರಚೋದನಾತ್ಮಕ ಅಂಶಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದು ಬಹಳ ಮುಖ್ಯ. ವೈದ್ಯರು ರೋಗಿಯ ಸುದೀರ್ಘ ಚರಿತ್ರೆಯನ್ನು ತೆಗೆದುಕೊಂಡು ಅವನಿಗೆ ಪ್ರಚೋದನಾತ್ಮಕ ಅಂಶಗಳು ಯಾವುವಿರಬಹುದೆಂದು ತಿಳಿಯಲು ಸಹಾಯ ಮಾಡುತ್ತಾರೆ. ಅರ್ಟಿಕೇರಿಯ ಲಕ್ಷಣಗಳನ್ನು  ಹೋಗಲಾಡಿಸಲು ಆಂಟಿಹಿಸ್ಟಮಿನ್ ಔಷಧಿಗಳನ್ನು ನೀಡಲಾಗುತ್ತದೆ. ಇವು ಹಿಸ್ಟಮಿನ್ ಅನ್ನು ವಿರೋಧಿಸಿ ಗಂಧೆಗಳನ್ನೂ ಕೆರೆತವನ್ನೂ ಹೋಗಲಾಡಿಸುತ್ತವೆ.

ದೀರ್ಘಕಾಲದ ಅರ್ಟಿಕೇರಿಯದಲ್ಲಿ ಎರಡು ಬಗೆಯ ಆಂಟಿಹಿಸ್ಟಮಿನ್ ಮಾತ್ರೆಗಳನ್ನು ದೀರ್ಘಕಾಲ ಸೇವಿಸಬೇಕಾಗುತ್ತದೆ. ನಿದ್ರೆ ಬರಿಸುವ, ಬಾಯಿ ಒಣಗಿಸುವ, ಮೊದಲಾದ  ಕೆಲವು ಅಡ್ಡಪರಿಣಾಮಗಳನ್ನು ಬಿಟ್ಟರೆ ಇವು ಬಹುತೇಕ ಸುರಕ್ಷಿತ. ಆದರೆ ಇವುಗಳನ್ನು ವೈದ್ಯರ ನಿರ್ದೇಶನದಂತೆ ಬಳಸಬೇಕು. ತೀವ್ರವಾದ ಅರ್ಟಿಕೇರಿಯಾಗೆ ಕೆಲವೊಮ್ಮೆ ಸ್ಟಿರಾಯ್ಡ್ ಮಾತ್ರೆ ಅಥವಾ ಚುಚ್ಚುಮದ್ದು ಬೇಕಾಗಬಹುದು. ಇದನ್ನೂ ವೈದ್ಯರ ನಿರ್ದೇಶನದಂತೆ ತೆಗೆದುಕೊಳ್ಳಬೇಕು.

ಅರ್ಟಿಕೇರಿಯಾದ ನವೆಯನ್ನು ಹೋಗಲಾಡಿಸುವಲ್ಲಿ ಕ್ಯಾಲಮಿನ್, ಆಲೋ ವೀರಾ, ತೇವಾಂಶ ಹೆಚ್ಚಿಸುವ ದ್ರಾವಣಗಳು ಸಹಾಯ ಮಾಡುತ್ತವೆ. ಜಂತು ಹುಳು ಮೊದಲಾದ ಹುಳುಗಳ ಬಾಧೆಗೆ ಹುಳು ನಿರೋಧಕ ಔಷಧಿ ನೀಡಲಾಗುತ್ತದೆ.
 

ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕೆಲವಾರು ರಕ್ತ ಪರೀಕ್ಷೆಗಳನ್ನು ಮಾಡಿ ಕಾರಣವನ್ನು ತಿಳಿಯಲು ಪ್ರಯತ್ನಿಸಿ ಚಿಕಿತ್ಸೆ ಮಾಡಲಾಗುತ್ತದೆ. ಆಟೋ ಇಮ್ಯೂನ್ ಅರ್ಟಿಕೇರಿಯದಲ್ಲಿ ವ್ಯಕ್ತಿಯ ರಕ್ತವನ್ನು ತೆಗೆದುಕೊಂಡು ಸೆಂಟ್ರಿಫ್ಯೂಜ್ ಯಂತ್ರದಿಂದ ನೀರಿನಂಶವಾದ ಪ್ಲಾಸ್ಮಾವನ್ನು ಬೇರ್ಪಡಿಸಿ ಅವನಿಗೇ ಚುಚ್ಚುಮದ್ದು ನೀಡಲಾಗುತ್ತದೆ. ಹೀಗೆ ಅರ್ಟಿಕೇರಿಯಾಗೆ ಅನೇಕ ಬಗೆಯ ಚಿಕಿತ್ಸೆಗಳಿವೆ.

ದೀರ್ಘಕಾಲದ ಅರ್ಟಿಕೇರಿಯದಲ್ಲಿ ವ್ಯಕ್ತಿಗೆ ಮಾನಸಿಕವಾಗಿ ಕಷ್ಟವಾಗಬಹುದು ಹಾಗೂ ಕೆಲಸ ಮಾಡಲು, ಸುಖವಾಗಿ ಜೀವನ ನಡೆಸಲು ಕಷ್ಟವಾಗಬಹುದು. ಆದರೆ ಭರವಸೆ ಕಳೆದುಕೊಳ್ಳದೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮನಸ್ಸನ್ನು ಹಲವಾರು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನವೆಯನ್ನು ಮರೆಯಲು ಪ್ರಯತ್ನಿಸಿದರೆ ಸುಧಾರಣೆ ಕಂಡುಬಂದು ಬೇಗನೆ ಗುಣವಾಗುತ್ತದೆ.                       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.