ADVERTISEMENT

ಹೊಟ್ಟೆಯಲ್ಲಿ ಹುಳುಬಾಧೆಯೇ? ಸಿಹಿತಿಂಡಿ ನಿಯಂತ್ರಿಸಿ

ಡಾ.ಸರಸ್ವತಿ ನಾಡಿಗ್‌
Published 10 ಜನವರಿ 2020, 19:30 IST
Last Updated 10 ಜನವರಿ 2020, 19:30 IST
   
""

ತಿಂಡಿಪ್ರಿಯರು ಯಾರಿಲ್ಲ ಹೇಳಿ? ಹಸಿವನ್ನು ಇಂಗಿಸಲು ತಿನ್ನುವುದು ಒಂದು ರೀತಿಯಾದರೆ, ಒತ್ತಡವನ್ನು ಕಡಿಮೆ ಮಾಡಲು ಅಥವಾ ಸಮಯವನ್ನು ಕಳೆಯಲು ಆಹಾರದ ಮೊರೆ ಹೋಗುವುದು ಇನ್ನೊಂದು ರೀತಿ. ಯಾರು ಎಷ್ಟೇ ಹೇಳಲಿ, ಪೌಷ್ಟಿಕ ಆಹಾರದ ಪಥ್ಯ ಕೆಲವೊಮ್ಮೆ ಅಡ್ಡ ದಾರಿ ಹಿಡಿಯುತ್ತದೆ. ನಾಲಿಗೆಯ ರುಚಿ ಮೊಗ್ಗುಗಳನ್ನು ತೃಪ್ತಿ ಪಡಿಸುವ ಭರದಲ್ಲಿ ಆರೋಗ್ಯಕ್ಕೆ ಧಕ್ಕೆ ಮಾಡುವ ತಿನಿಸುಗಳು ಹೊಟ್ಟೆಯನ್ನು ಸೇರುತ್ತವೆ.

ನಾವು ತಿನ್ನುವ ಆಹಾರವೆಲ್ಲವೂ ನಮ್ಮ ಶರೀರಕ್ಕೆ ಒಗ್ಗುವುದಿಲ್ಲ. ಆಹಾರವನ್ನೇ ಔಷಧಿಯನ್ನಾಗಿ ಮಾಡಿಕೊಳ್ಳಬೇಕಾದರೆ ಎಚ್ಚರಿಕೆಯಿಂದ ತಿನ್ನುವುದು ಒಳಿತು. ಉದಾಹರಣೆಗೆ ಹೊಟ್ಟೆಯಲ್ಲಾಗುವ ವಿವಿಧ ರೀತಿಯ ಹುಳುಗಳು. ಅತಿಯಾಗಿ ಸಿಹಿ ತಿನ್ನುವುದೂ ಜಂತು ಹುಳುವಿನಂತಹ ಬಾಧೆಗೆ ಕಾರಣ. ಮಕ್ಕಳಿಗಂತೂ ಚಾಕೊಲೇಟ್‌, ಕ್ಯಾಂಡಿ ಇರಲಿ, ಹಾಲನ್ನು ಕುಡಿಸುವಾಗಲೂ ಅದಕ್ಕೆ ಸಕ್ಕರೆ ಅಂಶವಿರುವ ವಿವಿಧ ರೀತಿಯ ಪೌಷ್ಟಿಕಾಂಶದ ಪುಡಿಯನ್ನು ಸೇರಿಸುವುದು ಸಾಮಾನ್ಯ ಅಥವಾ ಅವರು ಹೆಚ್ಚು ಹಠ ಮಾಡದೆ ಹಾಲು ಕುಡಿಯಲೆಂದು ಸಕ್ಕರೆ ಸೇರಿಸುತ್ತಾರೆ. ಹಾಲು ಮಕ್ಕಳ ದೇಹಕ್ಕೆ ಪೌಷ್ಟಿಕಾಂಶ ಒದಗಿಸಿದರೆ, ಅದಕ್ಕೆ ಮಿಶ್ರಣ ಮಾಡಿರುವ ಸಕ್ಕರೆ ಹುಳುವನ್ನು ಬೆಳೆಸಲು ಸಹಕಾರಿ.

ಮಕ್ಕಳು ಮಾತ್ರವಲ್ಲ, ದೊಡ್ಡವರಲ್ಲೂ ಈ ಹುಳುಗಳ ಬಾಧೆ ವಿಪರೀತ. ಎಷ್ಟೋ ಬಾರಿ ಸಮಸ್ಯೆ ಅತಿಯಾದಾಗಲೇ ನಮ್ಮ ಗಮನಕ್ಕೆ ಬರುತ್ತದೆ.

ADVERTISEMENT

ಹಸಿವಾಗದಿರುವುದು, ವಾಕರಿಕೆ, ಬಾಯಲ್ಲಿ ನೀರು ನೀರಾಗಿ ಬರುವುದು, ಗುದದ್ವಾರದ ಬಳಿ ನವೆ, ಹೊಟ್ಟೆನೋವು ಮೊದಲಾದವು ಹೊಟ್ಟೆಯಲ್ಲಿ ಹುಳುಗಳಾಗಿರುವ ಪ್ರಮುಖ ಲಕ್ಷಣಗಳು.ಕೆಲವೊಮ್ಮೆ ಜ್ವರ ಬಂದಂತಾಗುವುದು.

ಸಿಹಿ ತಿಂಡಿ, ಚಾಕೊಲೇಟ್‌, ಸಕ್ಕರೆ, ಬೆಲ್ಲ ಮೊದಲಾದವುಗಳ ಸೇವನೆಗೆ ಕಡಿವಾಣ ಹಾಕಿ. ಹುಳಿ ಬಂದ, ಬೇಕರಿ ತಿನಿಸುಗಳು, ಅರೆಬೆಂದ ಆಹಾರವನ್ನು ತಿನ್ನಬೇಡಿ.

ಹೊಟ್ಟೆಯಲ್ಲಿ ಹುಳುಗಳ ಬಾಧೆ ಕಡಿಮೆ ಮಾಡಲು ಕೆಲವು ಮನೆಮದ್ದುಗಳೂ ಇವೆ. ಹೆಚ್ಚಾಗಿ ಸಂಬಾರು ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದರೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

* ಬೆಳಿಗ್ಗೆ ಉಗುರು ಬೆಚ್ಚಗಿನ ಒಂದು ಲೋಟ ನೀರಿಗೆ ಅರ್ಧ ಚಮಚ ಅರಿಸಿನ ಬೆರೆಸಿ ಕುಡಿಯಿರಿ.

* ನೀವು ಸೇವಿಸುವ ಆಹಾರಕ್ಕೆ ಕಾಳು ಮೆಣಸನ್ನು ಅಲ್ಪ ಪ್ರಮಾಣದಲ್ಲಿ ಸೇರಿಸಿ.

* ಬೆಳ್ಳುಳ್ಳಿಯನ್ನು ಧಾರಾಳವಾಗಿ ಬಳಸಿ. ಇದನ್ನು ಹುರಿದು ಸೇವಿಸಿದರೆ ಹಿತ.

* ಶುಂಠಿಯನ್ನು ಸೈಂಧವ ಲವಣದೊಂದಿಗೆ ಕುಟ್ಟಿ ಸೇವಿಸಬಹುದು.

* ದಾಳಿಂಬೆ ರಸ ಕೂಡಾ ಒಳಿತು.

* ಕ್ಯಾರೆಟ್‌, ನುಗ್ಗೆಸೊಪ್ಪನ್ನು ಊಟದಲ್ಲಿ ಬಳಸಿ.

ಶುಂಠಿ ರಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.