ADVERTISEMENT

ಕೊರೊನಾ ಸಾಂತ್ವನ: ಎಚ್ಚರ- ಒಬ್ಬರಿಂದ 460 ಮಂದಿಗೆ ಹರಡುವ ಸಾಧ್ಯತೆ!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 21:42 IST
Last Updated 17 ಏಪ್ರಿಲ್ 2021, 21:42 IST
‍‍‍ಡಾ.ವಿ. ಶಂಕರ್
‍‍‍ಡಾ.ವಿ. ಶಂಕರ್   

ಬೆಂಗಳೂರು: ‘ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಂಡು, ಮನೆಯಲ್ಲಿಯೇ ಸ್ವಯಂ ನಿಗಾ ವ್ಯವಸ್ಥೆಗೆ ಒಳಪಡಬೇಕು. ಕೆಲವರು ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಬಳಿಕವೂ ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸಿದ ಪರಿಣಾಮ ಈಗ ಸಮಸ್ಯೆ ಎದುರಿಸುತ್ತಿದ್ದೇವೆ.’

‘ಕೋವಿಡ್ ಎರಡನೇ ಅಲೆ ಬರುತ್ತದೆ ಎಂಬುದು ತಿಳಿದಿತ್ತು. ಆದರೆ, ಇಷ್ಟು ಅಲ್ಪಾವಧಿಯಲ್ಲಿಯೇ ಅದು ಕಾಣಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ಜನಸಾಮಾನ್ಯರು ಮಾಡಿದ ತಪ್ಪುಗಳೇ ಕಾರಣ. ಕೋವಿಡ್ ಹೋಯಿತು ಎಂಬ ಮನೋಭಾವದಿಂದ ಕಳೆದ ವರ್ಷಾಂತ್ಯದಿಂದ ಜನರು ಗುಂಪಾಗಿ ಸೇರಲು ಆರಂಭಿಸಿದರು. ಸರಿಯಾದ ರೀತಿಯಲ್ಲಿ ಮುಖಗವಸು ಧರಿಸದೆಯೇ ನಿಯಮಗಳನ್ನು ಗಾಳಿಗೆ ತೂರಿದರು. ಸೋಂಕು ನಿವಾರಕದಿಂದ ಕೈಗಳನ್ನು ಸ್ವಚ್ಛಪಡಿಸಿಕೊಳ್ಳುತ್ತಿರಲಿಲ್ಲ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮನೆಯಲ್ಲಿಯೇ ಸ್ವಯಂ ನಿಗಾ ವ್ಯವಸ್ಥೆಗೆ ಒಳಗಾಗುತ್ತಿರಲಿಲ್ಲ. ಇದರಿಂದಾಗಿ ಈಗ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ವೈಜ್ಞಾನಿಕ ಅಧ್ಯಯನದ ಪ್ರಕಾರ ಸೋಂಕಿತ ವ್ಯಕ್ತಿಯಿಂದ 460 ಮಂದಿಗೆ ವೈರಾಣು ಹರಡುವ ಸಾಧ್ಯತೆ ಇರುತ್ತದೆ.’

‘ಎರಡನೇ ಅಲೆಯ ಅವಧಿಯಲ್ಲಿ 20ರಿಂದ 40 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಮೊದಲ ಅಲೆಯ ಅವಧಿಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ, ಆಸ್ಪತ್ರೆಗೆ ಬರುತ್ತಿದ್ದರು. ಯುವಕರು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳದೆಯೇ ಸಮಸ್ಯೆಯನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ತಡವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಅದರ ಪರಿಣಾಮವೂ ತೀಕ್ಷ್ಣವಾಗಿರುತ್ತದೆ. ಆರ್‌ಟಿ–ಪಿಸಿಆರ್ ಪರೀಕ್ಷೆಯ ಜತೆಗೆ ಸಿಟಿ ಸ್ಕ್ಯಾನ್ ಮೂಲಕ ಸಹ ಕಾಯಿಲೆ ಪತ್ತೆ ಸಾಧ್ಯವಾಗಲಿದೆ. ಈಗ ವೇಗವಾಗಿ ಹರಡುತ್ತಿರುವ ಈ ವೈರಾಣುವಿನ ನಿಯಂತ್ರಣ ಜನರ ವರ್ತನೆಯನ್ನು ಆಧರಿಸಿದೆ.’

ADVERTISEMENT

‘ಎಲ್ಲ ಸೋಂಕಿತರು ಆಸ್ಪತ್ರೆಗೆ ಬಂದು ದಾಖಲಾದಲ್ಲಿ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆಯಾಗಲಿದೆ. ಸಣ್ಣ ಪ್ರಮಾಣದಲ್ಲಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ಆದರೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುತ್ತಾ ಇರಬೇಕು. ಈ ಪ್ರಮಾಣ ಶೇ 95ಕ್ಕಿಂತ ಇಳಿಕೆಯಾದಲ್ಲಿ ಆಸ್ಪತ್ರೆಗೆ ತೆರಳಬೇಕು. ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವವರು ಸೋಂಕಿತರಾದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ಲಸಿಕೆ ಪಡೆಯುವುದರಿಂದ ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗಿ, ರಕ್ಷಣೆ ಸಿಗಲಿದೆ. ಸೋಂಕು ತಗುಲಿದರೂ ಸಣ್ಣ ಪ್ರಮಾಣದಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಕಾಯಿಲೆ ವಾಸಿಯಾಗಲಿದೆ.’

-‍‍‍ ಡಾ.ವಿ. ಶಂಕರ್, ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.