
ಗೆಟ್ಟಿ ಚಿತ್ರ
ಬದಲಾದ ಜೀವನಶೈಲಿಯಲ್ಲಿ ಹಲವು ದೈಹಿಕ ಪರಿಸ್ಥಿತಿಗೆ ಕಾರಣವಾದದ್ದು ಹೆಚ್ಚಿದ ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ. ನಿತ್ಯ ಜೀವನದಲ್ಲಿ ಉಪವಾಸವನ್ನು ಕ್ರಮವಾಗಿ ಅಳವಡಿಸಿಕೊಂಡರೆ ಅತಿಯಾದ ದೇಹದ ತೂಕವನ್ನು ಇಳಿಸಿ ಆರೋಗ್ಯವಾಗಿ ಇರಬಹುದು.
ಉಪವಾಸವೆಂದರೆ ಸಂಪೂರ್ಣವಾಗಿ ಆಹಾರವನ್ನು ತ್ಯಜಿಸುವುದು ಎಂದಲ್ಲ. ಮಿತವಾದ ಹಾಗೂ ನಿಯಮಿತ ಆಹಾರ ಕ್ರಮವೇ ಉಪವಾಸ. ಆಯುರ್ವೇದದಲ್ಲಿ ಇದನ್ನು ಲಂಘನ ಕರೆಯುತ್ತಾರೆ. ಕಫವನ್ನು ಕಡಿಮೆ ಮಾಡಲು ಹಾಗೂ ಜೀರ್ಣಶಕ್ತಿಯನ್ನು ಸಮಸ್ಥಿತಿಯಲ್ಲಿ ಇಡಲು ಉಪವಾಸ ಸಹಾಯ ಮಾಡುತ್ತದೆ. ಉಪವಾಸದಲ್ಲಿ ಹಲವು ಬಗೆಗಳಿವೆ. ಹಣ್ಣುಗಳನ್ನು ಮಾತ್ರ ಸೇವಿಸುವುದು. ಒಂದು ಹೊತ್ತು ಮಾತ್ರ ಆಹಾರ ಸೇವನೆ ಮಾಡುವುದು ಇತ್ಯಾದಿ.
ಆರೋಗ್ಯಕರ ಜೀವನಕ್ಕೆ ನಿತ್ಯ ಬೇಗ ಏಳುವುದು, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ಯೋಗ ಅಥವಾ ಲಘು ವ್ಯಾಯಾಮ, ಆಹಾರ ಸೇವನೆ ಹಾಗೂ ಸರಿಯಾದ ಸಮಯಕ್ಕೆ ಮಲಗುವುದು ಒಳ್ಳೆಯದು. ಉಪವಾಸವನ್ನು ಆಚರಿಸುವ ಮೊದಲು ನಾವು ಎಷ್ಟು ಹೊತ್ತು ಖಾಲಿ ಹೊಟ್ಟೆಯಲ್ಲಿ ಇರಬಹುದು ಎಂದು ತಿಳಿದುಕೊಳ್ಳಬೇಕು. ಬೆಳಿಗ್ಗೆ 8:30ಕ್ಕೆ ಉಪಹಾರ ಸೇವಿಸಿದರೆ ಮುಂದಿನ ಭೋಜನವನ್ನು ಎಷ್ಟು ಸಮಯ ಮುಂದೂಡಬಹುದು ಎಂದೂ ಪರೀಕ್ಷಿಸಿಕೊಳ್ಳಬೇಕು.
ತೂಕ ನಷ್ಟಕ್ಕೆ 7 ದಿನ
1. ಮೊದಲನೆಯ ದಿನ ಲಘು ಉಪಹಾರ ಸೇವಿಸುವುದು. ನಂತರ ಹೊಟ್ಟೆ ಹಸಿಯುವವರೆಗೆ ಏನು ತಿನ್ನಬಾರದು. ನೀರು ಕುಡಿಯಬಹುದು. ಹೊಟ್ಟೆ ಹಸಿದ ನಂತರ ಮತ್ತೆ ಲಘು ಭೋಜನ ಸೇವಿಸಬಹುದು.
2. ಎರಡನೆಯ ದಿನ ಬೆಳಿಗ್ಗೆ ಹಣ್ಣುಗಳು ಸೂಕ್ತ. ನಂತರ ಹೊಟ್ಟೆ ಹಸಿದ ನಂತರವೇ ಲಘು ಭೋಜನ ಮಾಡಬಹುದು. ಹಣ್ಣುಗಳೇ ಸಾಕು ಎನಿಸಿದರೆ ಬೇರೆ ಏನನ್ನು ತಿನ್ನುವುದು ಬೇಡ.
3. ಮೂರನೆಯ ದಿನ ಹೆಸರುಕಾಳಿನ ಸೂಪ್ ಸೇವಿಸಬಹುದು. ನಂತರ ನಾರಿನ ಅಂಶ ಹೆಚ್ಚು ಇರುವ ಬೆಯಿಸಿದ ತರಕಾರಿಯನ್ನು ಸೇವಿಸಬೇಕು.
4. ನಾಲ್ಕನೇ ದಿನ ಬೆಳಿಗ್ಗೆ ಹೊಟ್ಟೆ ಹಸಿದ ನಂತರ ತರಕಾರಿ ಸೂಪ್ ಅನ್ನು ಸೇವಿಸಬಹುದು.
5. ಐದನೇ ದಿನ ಸ್ವಲ್ಪ ಹಣ್ಣು, ನೆನೆಸಿದ ಐದು ಬಾದಾಮಿಯನ್ನು ತಿನ್ನಬಹುದು. ಸಂಜೆ ಬೇಯಿಸಿದ ತರಕಾರಿಯನ್ನು ತಿನ್ನಬೇಕು.
6. ಆರನೇ ದಿನ ರಾಗಿ ಗಂಜಿ ಅಥವಾ ಅಂಬಲಿ ಬೆಳಿಗ್ಗೆ ಸೇವಿಸಬೇಕು. ಸಂಜೆ ಹೊಟ್ಟೆ ಹಸಿದ ನಂತರ ನಿಯಮಿತ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬೇಕು.
7. ಏಳನೇ ದಿನ ಬೆಳಿಗ್ಗೆ ಮೊಳಕೆ ಕಾಳುಗಳು, ಒಂದು ಲೋಟ ಮಜ್ಜಿಗೆ ಸೇವಿಸಬಹುದು. ಹೊಟ್ಟೆ ಹಸಿದ ನಂತರ ಸಂಜೆ ತರಕಾರಿ ಸೂಪ್ ಕುಡಿಯಬಹುದು.
ಉಪವಾಸ ಮಾಡುವಾಗ ನೀರಿನ ಅಂಶ ಮುಖ್ಯ. ಆದ್ದರಿಂದ ಎರಡರಿಂದ ಮೂರು ಲೀಟರ್ ನೀರನ್ನು ತಪ್ಪದೆ ಕುಡಿಯಬೇಕು. ಮಧುಮೇಹ, ಥೈರಾಯ್ಡ್, ರಕ್ತಹೀನತೆ, ನಿಶ್ಯಕ್ತಿ ಹಾಗೂ ಗರ್ಭಿಣಿಯರು ಈ ಕ್ರಮವನ್ನು ಪಾಲಿಸಬಾರದು. ಉಪವಾಸವನ್ನು ಕ್ರಮಬದ್ಧವಾಗಿ ಪಾಲಿಸಿದರೆ ಎರಡರಿಂದ ಮೂರು ಕೆಜಿ ತೂಕವನ್ನು ಕಳೆಯಬಹುದು. ಜೊತೆಗೆ ವೈದ್ಯರ ಸಲಹೆ ಪಡೆದು ಉಪವಾಸವನ್ನು ನಿಯಮಿತವಾಗಿ ಕ್ರಮಬದ್ಧವಾಗಿ ಆಚರಿಸುವುದು ಒಳ್ಳೆಯದು.
(ಲೇಖಕರು: ಡಾ. ಶಿವಕುಮಾರ್. ಪ್ರೊಫೆಸರ್, ಸ್ವಸ್ಥವೃತ್ತ ಮತ್ತು ಯೋಗ ವಿಭಾಗ, ಎಸ್‌ಡಿಎಂ ಆಯುರ್ವೇದ ಮತ್ತು ಆಸ್ಪತ್ರೆ, ಹಾಸನ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.