ADVERTISEMENT

ಚಳಿಗಾಲ | ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:45 IST
Last Updated 24 ಡಿಸೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಳಿಗಾಲದಲ್ಲಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಆರೋಗ್ಯ ರಕ್ಷಣೆಯಲ್ಲಿ ನಾವು ಸೇವಿಸುವ ಆಹಾರಕ್ರಮದ ಪಾತ್ರವೂ ದೊಡ್ಡದು. ಇದು ದೈಹಿಕಶಕ್ತಿ ಹಾಗೂ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ದೇಹಕ್ಕೆ ಸೂಕ್ತ ಎನ್ನಿಸುವ ಆಹಾರ ಸೇವಿಸುವುದು ಬಹಳ ಅಗತ್ಯ.

ಆರೋಗ್ಯಕರ ಆಹಾರ ಸೇವನೆ ಕೇವಲ ಚರ್ಮದ ಆರೋಗ್ಯ ಮಾತ್ರವಲ್ಲ ದೇಹತೂಕ ನಿಯಂತ್ರಣ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ಸಹಕಾರಿ. ಇದು ಚರ್ಮವನ್ನು ಪುನರುಜ್ಜೀವನಗೊಳಿಸುವ ಜೊತೆಗೆ ಕೂದಲ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ, ಕೂದಲ ಕಾಂತಿ ಹೆಚ್ಚಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.ಉಗುರಿನ ಆರೋಗ್ಯವನ್ನು ಸುಧಾರಿಸುತ್ತದೆ.

ಹಾಗಾದರೆ, ಚಳಿಗಾಲದಲ್ಲಿ ಯಾವ ರೀತಿಯ ಆಹಾರವನ್ನು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ.

ADVERTISEMENT

ನೀರು: ನಮ್ಮ ದೈನಂದಿನ ಆಹಾರಕ್ರಮದಲ್ಲಿ ನೀರಿನ ಪಾತ್ರ ಬಹಳ ಮಹತ್ವದ್ದು. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವು ಮೃದುವಾಗುತ್ತದೆ. ನೀರು ಕುಡಿಯದಿದ್ದರೆ ಚರ್ಮ ಒಣಗುವುದು, ಸಿಪ್ಪೆ ಏಳುವುದು, ನೆರಿಗೆ ಮೂಡುವುದು ಹಾಗೂ ಕಾಂತಿ ಕಳೆದುಕೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ನೀರು ಕುಡಿಯುವುದು ಕಡಿಮೆಯಾದರೆ, ನಿರ್ಜಲೀಕರಣದಂತಹ (ಡೀಹ್ರೈಡೇಷನ್) ಸಮಸ್ಯೆಯೂ ಕಾಣಿಸುತ್ತದೆ.

ಫ್ಯಾಟಿ ಆ್ಯಸಿಡ್‌: ವಾಲ್‌ನಟ್‌, ಅಗಸೆ ಬೀಜದಂತಹ ಆಹಾರ ಧಾನ್ಯಗಳು, ಬಂಗುಡೆ, ಸಾಲ್ಮನ್‌ನಂತಹ ಮೀನು ಇವುಗಳಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ ಅಂಶ ಅಧಿಕವಿದೆ. ಇವುಗಳನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದರಲ್ಲಿ ಚರ್ಮಕ್ಕೆ ಬೇಕಾಗುವ ನೈಸರ್ಗಿಕ ಕೊಬ್ಬಿನಂಶವಿದ್ದು, ಚರ್ಮಕ್ಕೆ ತೇವಾಂಶ ಒದಗಿಸುತ್ತವೆ. ಅಲ್ಲದೇ ಚರ್ಮದ ಹೊಳಪು ಹೆಚ್ಚಿಸಿ ಬೇಗ ವಯಸ್ಸಾದಂತೆ ಕಾಣುವುದಕ್ಕೆ ತಡೆ ಹಾಕುತ್ತವೆ.

ವಿಟಮಿನ್‌ ಎ ಹಾಗೂ ಸಿ ಅಂಶ ಇರುವ ಹಣ್ಣು ಹಾಗೂ ತರಕಾರಿ ಸೇವನೆ: ಸಿಟ್ರಸ್ ಅಂಶವಿರುವ ಕಿತ್ತಳೆ ಹಾಗೂ ದ್ರಾಕ್ಷಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಿದೆ. ಇದು ಕೊಲಾಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕೊಲಾಜನ್‌ ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾಗುವ ಪ್ರೊಟೀನ್ ಅನ್ನು ಒದಗಿಸುತ್ತದೆ. ಮಾಂಸ, ಮೀನು, ಮೊಟ್ಟೆ ಹಾಗೂ ಡೇರಿ ಉತ್ಪನ್ನಗಳಲ್ಲಿ ವಿಟಮಿನ್‌ ಎ ಅಂಶ ಅಧಿಕವಿದೆ. ಇನ್ನು ಸಸ್ಯಾಹಾರಿಗಳು ಆಲೂಗೆಡ್ಡೆ, ಕ್ಯಾರೆಟ್‌ ಹಾಗೂ ಬ್ರೊಕೋಲಿಯಂತಹ ತರಕಾರಿಗಳನ್ನು ಸೇವಿಸಬಹುದು. ಇವುಗಳಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿದೆ. ಈ ತರಕಾರಿಗಳು ದೇಹಕ್ಕೆ ಬೇಕಾಗುವ ನೀರಿನಂಶವನ್ನು ಒದಗಿಸುತ್ತವೆ. ಅಲ್ಲದೇ ಚರ್ಮ ಒಣಗುವುದು, ತುರಿಕೆ ಹಾಗೂ ಚರ್ಮ ಕಾಂತಿಹೀನವಾಗುವಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಬೆಣ್ಣೆಹಣ್ಣು: ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಕೊಬ್ಬಿನಂಶ, ಜೀವಸತ್ವಗಳು ಹಾಗೂ ಖನಿಜಾಂಶ ಅಧಿಕವಾಗಿದೆ. ಈ ಹಣ್ಣಿನಲ್ಲಿರುವ ಪ್ರೊಟೀನ್ ಅಂಶ ಚರ್ಮದ ಕೊಲಾಜನ್ ಮತ್ತು ಎಲಾಸ್ಟಿನ್ ಅನ್ನು ಬಿಗಿಗೊಳಿಸಲು ಕಾರಣವಾಗಿದೆ.

ಹಸಿರುಸೊಪ್ಪುಗಳು: ಚರ್ಮದ ಕಾಂತಿ ಹೆಚ್ಚಲು ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಹಸಿರು ಸೊಪ್ಪಿನ ಸೇವನೆ ಅಗತ್ಯ. ಇದರಲ್ಲಿ ಖನಿಜಾಂಶ ಹೇರಳವಾಗಿದ್ದು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶ ಚರ್ಮದ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಚರ್ಮದ ಹೊಳಪು ಹೆಚ್ಚುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.