
ಚಿತ್ರ:ಗೆಟ್ಟಿ
ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ಪಡೆಯಲು ಹೆಚ್ಚು ಹೆಚ್ಚು ಚಹಾ ಮತ್ತು ಕಾಫಿ ಕುಡಿಯಲು ಪ್ರಾರಂಭಿಸುತ್ತಾರೆ. ಈ ಪಾನೀಯಗಳಿಂದ ಚಳಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದರೆ ಚಳಿಗಾಲದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ? ಎಷ್ಟು ಪ್ರಮಾಣದಲ್ಲಿ ಕುಡಿಯುವುದು ಸುರಕ್ಷಿತ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ ಚಳಿಗಾಲದಲ್ಲಿ ಯಾವ ಪ್ರಮಾಣದಲ್ಲಿ ಕಾಫಿ, ಚಹಾ ಕುಡಿಯಬೇಕು ಎಂಬುದನ್ನು ತಿಳಿಯೋಣ.
ಚಹಾ ಮತ್ತು ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ವಿಶೇಷವಾಗಿ ಗ್ರೀನ್ ಮತ್ತು ಬ್ಲ್ಯಾಕ್ ಚಹಾವು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ಇವು ಉರಿಯೂತ ಕಡಿಮೆ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಮತ್ತೊಂದೆಡೆ, ಕಾಫಿ ಉತ್ಕರ್ಷಣ ನಿರೋಧಕಗಳ ಸಮೃದ್ಧ ನೈಸರ್ಗಿಕ ಮೂಲಗಳಲ್ಲಿ ಒಂದಾಗಿದೆ. ಏಕಾಗ್ರತೆ, ಸುಧಾರಿತ ಮನಸ್ಥಿತಿ ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಕೆಲವು ಹೃದಯ ರೋಗಗಳಂತಹ ದೀರ್ಘಕಾಲದ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧ್ಯಮ ಪ್ರಮಾಣದ ಚಹಾ ಅಥವಾ ಕಾಫಿಯು ಎಚ್ಚರಿಕೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತವೆ.
ಆದಾಗ್ಯೂ, ಕಾಫಿ ಅಥವಾ ಚಹಾ ಕುಡಿಯುವುದು ಯಾವಾಗಲೂ ಉತ್ತಮವಲ್ಲ. ಅತಿಯಾದ ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸಬಹುದು, ನಿದ್ರಾಹೀನತೆಗೆ ಕಾರಣವಾಗಬಹುದು. ಆಮ್ಲತೆಯನ್ನು ಹೆಚ್ಚಿಸಬಹುದು ಹಾಗೂ ಸೂಕ್ಷ್ಮ ವ್ಯಕ್ತಿಗಳಲ್ಲಿ ಹೆಚ್ಚು ಹೃದಯ ಬಡಿತವನ್ನು ಪ್ರಚೋದಿಸಬಹುದು. ಅತಿಯಾದ ಚಹಾ ಅಥವಾ ಕಾಫಿಯು ಆಯಾಸ, ಒಣ ಚರ್ಮ, ತಲೆನೋವು ಅಥವಾ ಜೀರ್ಣಾಂಗ ಅಸ್ವಸ್ಥತೆಗೆ ಕಾರಣವಾಗಬಹುದು.
ಮೂಳೆಗಳ ಸಂದಿನ ಆರೋಗ್ಯಕ್ಕೆ ಸರಿಯಾದ ಜಲಸಂಚಯ ಅತ್ಯಗತ್ಯ. ಸಂದುಗಳ ಒಳಗಿನ ಕಾರ್ಟಿಲೇಜ್‌ಗೆ ಮೆತ್ತಗೆ, ಬಗ್ಗುವಿಕೆ ಮತ್ತು ನಯವಾಗಿ ಉಳಿಯಲು ಸಾಕಷ್ಟು ತೇವಾಂಶ ಅಗತ್ಯವಿದೆ. ದ್ರವ ಸೇವನೆ ಕಡಿಮೆಯಾದಾಗ ಮತ್ತು ಕೆಫೀನ್ ಸೇವನೆ ಹೆಚ್ಚಾದಾಗ, ದೇಹವು ಅಗತ್ಯಕ್ಕಿಂತ ಹೆಚ್ಚು ನೀರನ್ನು ಹೊರ ಹಾಕಬಹುದು. ಕಾಲಾನಂತರದಲ್ಲಿ, ಇದು ಕಾರ್ಟಿಲೇಜ್‌ನ ಆಂತರಿಕ ಜಲಸಂಚಯವನ್ನು ಕಡಿಮೆ ಮಾಡಬಹುದು ಮತ್ತು ಸಂದುಗಳ ನೋವಿಗೆ ಕಾರಣವಾಗಬಹುದು.
ಚಳಿಗಾಲದಲ್ಲಿ ಕಾಫಿ ಚಹಾ ತ್ಯಜಿಸಬೇಕು ಎಂದಲ್ಲ. ಮಿತ ಪ್ರಮಾಣದ ಸೇವನೆ ಒಳ್ಳೆಯದು. ಆರೋಗ್ಯವಂತ ವಯಸ್ಕರು ದಿನಕ್ಕೆ 2 ರಿಂದ 3 ಕಪ್ ಕಾಫಿ ಅಥವಾ ಚಹಾ (200 ರಿಂದ 300 ಮಿ.ಗ್ರಾಂ ಕೆಫೀನ್) ಕುಡಿಯಬಹುದು.
ನಿಯಮಿತವಾಗಿ 4 ಕಪ್‌ಗಳಿಗಿಂತ ಹೆಚ್ಚು ಕಾಫಿ ಅಥವಾ ಚಹಾ ಸೇವಿನೆ, ನಿದ್ರಾಹೀನತೆ, ಆಮ್ಲತೆ, ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಚಹಾ ಕಡಿಮೆ ಕೆಫೀನ್ ಹೊಂದಿರುವುದರಿಂದ, ದಿನಕ್ಕೆ 3 ರಿಂದ 4 ಕಪ್ ಸಾಮಾನ್ಯವಾಗಿ ಸುರಕ್ಷಿತವಾಗಿದೆ.
ಚಹಾ ಅಥವಾ ಕಾಫಿಯ ಜೊತೆ ಗಿಡಮೂಲಿಕೆಗಳಾದ (ಶುಂಠಿ, ತುಳಸಿ ಅಥವಾ ಪುದೀನ) ಸೇರಿಸುವುದು ಉತ್ತಮ.
ಬೆಳಿಗ್ಗೆ, ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ತಪ್ಪಿಸಿರಿ. ಮುಂಜಾನೆ ಕೇಫಿನ್ ಮುಕ್ತ ಪಾನೀಯ ಕಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ.
ಸಕ್ಕರೆ, ಕ್ರೀಂ ಮತ್ತು ಹಾಲು ಕುಡಿಯುವ ಅಭ್ಯಾಸ ಮಾಡಬಹುದು.
ಲೇಖಕರು: ಡಾ. ಅನಿಂದಿತಾ ಪಾಲ್, ಸಲಹೆಗಾರರು. ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ, ರೇನ್ಬೋ ಮಕ್ಕಳ ಆಸ್ಪತ್ರೆ, ಬನ್ನೇರುಘಟ್ಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.