ADVERTISEMENT

ವಿಶ್ವ ಹೃದಯ ದಿನ| 50ಕ್ಕಿಂತ ಕಡಿಮೆ ಪ್ರಾಯದ ಶೇ 75 ಮಂದಿಗೆ ಹೃದಯಾಘಾತದ ಸಾಧ್ಯತೆ

ಐಎಎನ್ಎಸ್
Published 29 ಸೆಪ್ಟೆಂಬರ್ 2021, 8:53 IST
Last Updated 29 ಸೆಪ್ಟೆಂಬರ್ 2021, 8:53 IST
ವಿಶ್ವ ಹೃದಯ ದಿನದ ಅಂಗವಾಗಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಗುಲಾಬಿ ಹೂವುಗಳನ್ನು ಬಳಸಿಕೊಂಡು ಹೃದಯವನ್ನು ಹೋಲುವ ರಂಗೋಲಿ ಬಿಡಿಸಲಾಯಿತು – ಪಿಟಿಐ ಚಿತ್ರ
ವಿಶ್ವ ಹೃದಯ ದಿನದ ಅಂಗವಾಗಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಗುಲಾಬಿ ಹೂವುಗಳನ್ನು ಬಳಸಿಕೊಂಡು ಹೃದಯವನ್ನು ಹೋಲುವ ರಂಗೋಲಿ ಬಿಡಿಸಲಾಯಿತು – ಪಿಟಿಐ ಚಿತ್ರ   

ಹೈದರಾಬಾದ್: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 75ರಷ್ಟು ಭಾರತೀಯರಿಗೆ ಹೃದಯಾಘಾತ ಮತ್ತು ಹೃದಯದ ಸಮಸ್ಯೆಗಳ ಅಪಾಯ ಎದುರಾಗುವ ಸಾಧ್ಯತೆ ಇದೆ. ಇದನ್ನು ಕಡೆಗಣಿಸುವಂತಿಲ್ಲ ಎಂದು ‘ವಿಶ್ವ ಹೃದಯ ದಿನ’ದಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ದೇಶದ ವೈದ್ಯಕೀಯ ವೃತ್ತಿಪರರು ನಡೆಸಿದ ಅಧ್ಯಯನ ವರದಿಯ ಪ್ರಕಾರ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 25ರಷ್ಟು ಮಂದಿಗೆ ಹೃದಯಾಘಾತದ ಅಪಾಯ ಎದುರಾಗುವ ಸಾಧ್ಯತೆ ಇದೆ. 40ರಿಂದ 50 ವರ್ಷ ವಯಸ್ಸಿನವರಲ್ಲಿ ಶೇ 50ರಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.

ಯುವಕರು ಹಾಗೂ ಮಧ್ಯವಯಸ್ಕರು ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಮಾಡಲೇಬೇಕಿದೆ. ಯುವಕರಲ್ಲಿ ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾನಸಿಕ ಒತ್ತಡ ಮತ್ತ ಅಸಮರ್ಪಕ ಜೀವನ ಶೈಲಿ ಹೃದಯ ಸಂಬಂಧಿ ಕಾಯಿಲೆಗಳ ಏರಿಕೆಗೆ ಪ್ರಮುಖ ಕಾರಣಗಳಾಗಿದ್ದು, ಇವುಗಳನ್ನು ತಡೆಗಟ್ಟಬಹುದಾಗಿದೆ ಎಂದು ಎಂದು ವೈದ್ಯರು ಹೇಳಿದ್ದಾರೆ.

‘ಅನೇಕ ಸಾಮಾಜಿಕ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಕಳಪೆಯಾಗಿದೆ. ಇದು ಪ್ರತಿ ವರ್ಷ ಹೆಚ್ಚೆಚ್ಚು ಜನರನ್ನು ಮತ್ತಷ್ಟು ಒತ್ತಡದ ಸನ್ನಿವೇಶಗಳಿಗೆ ಒಳಗಾಗುವಂತೆ ಮಾಡಲು ಕಾರಣವಾಗುತ್ತಿದೆ. ಈಗಾಗಲೇ ಮಾನಸಿಕ ಒತ್ತಡದಿಂದ ಬಳಲುತ್ತಿರುವ ಜನರಲ್ಲಿ ವೈಯಕ್ತಿಕ ಸಮಸ್ಯೆಗಳೊಂದಿಗೆ ಸಾಮಾಜಿಕ ಸಮಸ್ಯೆಗಳೂ ಸೇರಿ ಅವರ ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಈ ಸಮಸ್ಯೆ ಪುರುಷರಲ್ಲೇ ಹೆಚ್ಚು ಎಂದು ಭಾವಿಸಲಾಗಿದ್ದರೂ, ಮಹಿಳೆಯರು ಕೂಡ ಹೆಚ್ಚು ದುರ್ಬಲರಾಗಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರ ಮರಣ ಪ್ರಮಾಣವೂ ಹೆಚ್ಚಾಗಿದೆ’ ಎಂದು ಹೈದರಾಬಾದ್‌ನ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯ ಹೃದ್ರೋಗ ತಜ್ಞ ಡಾ. ಸಾಯಿ ಸುಧಾಕರ್ ಹೇಳಿದ್ದಾರೆ.

‘ಕೊಬ್ಬಿನ ಅಂಶವಿರುವ ಆಹಾರ ಸೇವನೆ, ಅಸಮರ್ಪಕ ಜೀವನ ಶೈಲಿ ಮತ್ತು ಕೆಲಸದ ಸಮಯ, ಮದ್ಯಪಾನ, ಧೂಮಪಾನಗಳಿಂದಾಗಿ ಭಾರತೀಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ’ ಎಂದುಹೈದರಾಬಾದ್‌ನ ಎಸ್‌ಎಲ್‌ಜಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿ.ಹರಿರಾಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.