ADVERTISEMENT

ವಾಟೆ ತಟ್ಟೆ: ಬೇಡಿಕೆ ಸಿಕ್ಕಾಪಟ್ಟೆ

ವಾ.ಮುರಳೀಧರ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST
ವಾಟೆ ತಟ್ಟೆ ಹೆಣೆಯುತ್ತಿರುವ ಸಿದ್ಧಪ್ಪ ಹಾಗೂ ಗಿಡ್ಡಪ್ಪ
ವಾಟೆ ತಟ್ಟೆ ಹೆಣೆಯುತ್ತಿರುವ ಸಿದ್ಧಪ್ಪ ಹಾಗೂ ಗಿಡ್ಡಪ್ಪ   

ಈ ಗ ಎಲ್ಲೆಲ್ಲೂ ಪ್ಲಾಸ್ಟಿಕ್‌ನದ್ದೇ ಕಾರುಬಾರು. ಇದರ ಬಳಕೆ ಮಾಡಬಾರದು ಎಂಬ ಬಗ್ಗೆ ಎಷ್ಟೇ ಘೋಷಣೆಗಳು ಬಂದರೂ ಬಳಕೆ ಮಾತ್ರ ನಿಂತಿಲ್ಲ. ಮಲೆನಾಡಿನ ಮಟ್ಟಿಗೆ ಹೇಳುವುದಾದರೆ ಅಡಿಕೆ ಒಣಗಿಸಲು, ಅಡ್ಡಗೋಡೆ ಕಟ್ಟಲು, ಬುಟ್ಟಿಯಾಗಿ ಉಪಯೋಗಿಸಲ್ಪಡುತ್ತಿದೆ. ಇದು ಒಳ್ಳೆಯದಲ್ಲವೆಂದು ಗೊತ್ತಿದ್ದರೂ ರೈತರು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಪ್ಲಾಸ್ಟಿಕ್‌ಗೆ ಸೆಡ್ಡು ಹೊಡೆಯಲು ಮಲೆನಾಡ ಕೃಷಿಕರು ಕಂಡುಕೊಂಡ ಮಾರ್ಗವೇ `ತಟ್ಟೆ' ತಯಾರಿಕೆ.

ಏನಿದು ತಟ್ಟೆ?
`ತಟ್ಟೆ' ಮಲೆನಾಡ ಕೃಷಿಕರ ಬದುಕಿನ ಅವಿಭಾಜ್ಯ ಅಂಗ. ಕೃಷಿ ಚಟುವಟಿಕೆ ಇಲ್ಲದ ವೇಳೆ ತಟ್ಟೆ ಮಾಡುವಲ್ಲಿ ಇವರು ತಲ್ಲೆನ. ಯಾರ ಗಮನವನ್ನೂ ಅಷ್ಟಾಗಿ ಸೆಳೆಯದ ಬಿದಿರು, ಬೊಂಬು ಹಾಗೂ `ವಾಟೆ'ಗಳೇ ಇದರ ಬಂಡವಾಳ. ಸುಲಭದಲ್ಲಿ ಸಿಗುವ ಬಿದಿರಿನ ಬಗ್ಗೆ ನಿರ್ಲಕ್ಷ್ಯ ತೋರುವವರೂ ಅಬ್ಬಾ! ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಷ್ಟು ಅಂದದಲ್ಲಿ ರೂಪುಗೊಳ್ಳುತ್ತವೆ ಈ ತಟ್ಟೆಗಳು.
ವಯಸ್ಸಾದರೇನು, ಮನಸ್ಸೊಂದಿದ್ದರೆ ಎಲ್ಲ ಕೆಲಸಗಳೂ ಸುಲಭವೇ ಎಂದುಕೊಂಡಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಎಂಬತ್ತು ವರ್ಷ ವಯಸ್ಸಿನ ಸಿದ್ದಪ್ಪ ಹಾಗೂ ಎಪ್ಪತ್ತು ವರ್ಷ ವಯಸ್ಸಿನ ಗಿಡ್ಡಪ್ಪ ತಟ್ಟೆ ತಯಾರಿಕೆಯಲ್ಲಿ ನುರಿತರು. ಇವರ ಕೈಚಳಕದಿಂದ ಕೆಲವೇ ಗಂಟೆಗಳಲ್ಲಿ ಭಿನ್ನ ಭಿನ್ನದ ತಟ್ಟೆಗಳು ರೆಡಿ.

`ಗೌರಿ ಹಬ್ಬದಿಂದ ದೀಪಾವಳಿ ಹಬ್ಬದವರೆಗೆ ಸಾಮಾನ್ಯವಾಗಿ ಕೃಷಿ ಚಟುವಟಿಕೆ ಇರುವುದಿಲ್ಲ. ಕೃಷಿ ಇಲ್ಲದಾಗ ಸುಮ್ಮನೆ ಕುಳಿತುಕೊಳ್ಳಲು ನಮಗಾಗದು. ಹೊಟ್ಟೆಯೂ ತುಂಬಬೇಕಲ್ಲ. ಆಗ ಕೈಹಿಡಿದಿರುವುದೇ ಈ ತಟ್ಟೆ' ಎನ್ನುವುದು ಇವರಿಬ್ಬರ ಮಾತು. ಯಾರಿಗೆ ಅಗತ್ಯ ಇವೆಯೋ ಅಂಥವರ ಮನೆಗೆ ಹೋಗಿ ತಟ್ಟೆಗಳನ್ನು ಹೆಣೆದು ಕೊಡುತ್ತಾರೆ.

ತೋಟದಲ್ಲೇ ವಾಟೆ
ತೋಟದಲ್ಲಿಯೇ ಈ ವಾಟೆಯನ್ನು ಬೆಳೆಯಲು ಸಾಧ್ಯವಿದೆ. ಅದರ ಬುಡಕ್ಕೆ ಬತ್ತದ ಹೊಟ್ಟನ್ನು ಹಾಕಿ ಬೆಳೆಸಬಹುದು. ಈ ತಟ್ಟೆಗಳನ್ನು ಅವರು ಆಳಿನ ಲೆಕ್ಕದಲ್ಲಿ ಎರಡು - ಮೂರು ದಿನಗಳಲ್ಲಿ ಹೆಣೆಯುತ್ತಾರೆ. ಪೇಟೆಯಲ್ಲಿ ಸಿಗುವುದಕ್ಕಿಂತ ಅರ್ಧ ಬೆಲೆಗೆ ಈ ತಟ್ಟೆ ಸಿದ್ಧವಾಗುತ್ತದೆ.

ಈ ತಟ್ಟೆಗಳನ್ನು ಅಡಿಕೆ ಒಣಗಿಸಲು, ಕಾಫಿ ಬೀಜ ಒಣಗಿಸಲು ಹಾಗೂ ಬತ್ತವನ್ನು ಸಂಗ್ರಹಿಸಲು ಕಣಜದಂತೆ ಬಳಸಲಾಗುತ್ತದೆ. ಈ ತಟ್ಟೆಯ ಮೇಲೆ ಕಂಬಳಿಯನ್ನು ಹಾಸಿ ಒಣಗಿಸಿದ ಅಡಿಕೆ ತನ್ನ ಬಣ್ಣವನ್ನು ಕಳೆದುಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಬಿಕರಿಯಾಗುತ್ತದೆ. ಮನೆಯಂಗಳದಲ್ಲಿ ಬೆಳೆದ ವಾಟೆ, ರೈತರು ಬೆಳೆದ ಉತ್ಪನ್ನಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ, ಸ್ವದೇಶಿ ಕಲ್ಪನೆಗೂ ಜೀವ ತುಂಬುತ್ತ, ಗ್ರಾಮಿಣ ಕೆಲಸಗಾರರಿಗೆ ಉದ್ಯೋಗವನ್ನೂ ಒದಗಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕಡಿಮೆ ಖರ್ಚು - ಹೆಚ್ಚು ನೆಮ್ಮದಿ ಇಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.