ಮಲಪ್ರಭೆಯ ನದಿಯ ದಡದಲ್ಲಿ ಹಚ್ಚಹಸಿರು ನೆಲಸಿರುವ ನದಿಯ ತಟದಲ್ಲಿ ಇರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದ ಬಸವಣ್ಣದ ಪಲ್ಲಕ್ಕಿ ಉತ್ಸವ ಏಪ್ರಿಲ್ 10ರಿಂದ ಆರಂಭ. ಬಸವಣ್ಣನ ಜಾತ್ರೆ ಅಂಗವಾಗಿ ಓಕಳಿ ಹೊಂಡದ ಪೂಜೆಗೆ ಗ್ರಾಮದಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದೆ.
ಏಪ್ರಿಲ್ 15ರಂದು ಬಸವಣ್ಣನ ಬೆಳ್ಳಿ ಮೂರ್ತಿ ಪಲ್ಲಕ್ಕಿಯಲ್ಲಿ ಇಟ್ಟು ವಾದ್ಯ ಸಮೇತವಾಗಿ ಗುಡ್ಡಕ್ಕೆ ತೆರಳಿ ಅಲ್ಲಿ ಮರದ ಕೆಳಗೆ ಬಸವಣ್ಣನ ಪಲ್ಲಕ್ಕಿ ಇಡುವುದು ನೋಡುವುದೇ ಅಂದ. ಅದೇ ದಿನ ರಾತ್ರಿ ಗುಡ್ಡದಿಂದ ಬಸವಣ್ಣನ ಪಲ್ಲಕ್ಕಿ ರಾತ್ರಿ 8 ಗಂಟೆಗೆ ಪಂಚಾಯತಿ ಕಟ್ಟೆಯ ಮೇಲೆ ಇಡುತ್ತಾರೆ. ಆ ದಿನ ಪೂರ್ತಿ ಜಾಗರಣೆ ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನ.
ಕರಡಿ ಮಜಲು, ಡೊಳ್ಳು ಹಾಗೂ ಬಾಜಾ ಬಜಂತ್ರಿ ಅಂದಿನ ವಿಶೇಷ. ಭಕ್ತರು ಚುರುಮರಿ, ಬತ್ತಾಸ, ಕಾರೀಕ ಹಾಗೂ ಚಿಲ್ಲರೆ ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಳ್ಳುವ ಸಂಪ್ರದಾಯ. ಗುಡಿ ಸುತ್ತಲೂ ಪಲ್ಲಕ್ಕಿ ಮೂರು ಸುತ್ತು ಸುತ್ತಿದ ಮೇಲೆ ಭಕ್ತರು ತೆಂಗಿನಕಾಯಿಯನ್ನು ಗುಡಿ ಬಲಭಾಗಕ್ಕೆ ಎಸೆಯುತ್ತಾರೆ. ಹೊಂಡದ ಸುತ್ತಲೂ ಮುತ್ತೈದೆಯರು ಜೋಳದ ಸಜ್ಜೆಯ ಕುಚಗಡಬುಗಳನ್ನು ಆಕಾಶದತ್ತ ತೂರುತ್ತಾರೆ. ಅದು ಯಾರ ಉಡಿಯಲ್ಲಿ ಬೀಳುತ್ತವೆಯೋ ಆ ಮುತ್ತೈದೆಯರಿಗೆ ಸಂತಾನ ಆಗುವುದು ಎಂಬ ನಂಬಿಕೆ.
ಶರಣಬಸವೇಶ್ವರ ಜಾತ್ರೆ
ಶರಣರ ನಾಡಿನಲ್ಲಿ ಪ್ರಖ್ಯಾತಿಯ ಗುಲ್ಬರ್ಗದಲ್ಲಿ ಇದೇ 31 ರಂದು ಜಾತ್ರಾ ಸಂಭ್ರಮ. 76 ವರ್ಷ ಬಾಳಿ ಬದುಕಿ ದಾಸೋಹ ಕಾಯಕ ಮಾಡಿಕೊಂಡು ಬಂದ ಜೇವರ್ಗಿ ಅರಳಗುಂಡಿಯ ಶರಣಬಸವೇಶ್ವರ ಸಮಾಧಿಯ ಮೇಲೆ ರೂಪುಗೊಂಡ ಶರಣಬಸವೇಶ್ವರ ದೇವಾಲಯ ಈಗ ವಿಶೇಷವಾಗಿ ಅಲಂಕೃತಗೊಂಡಿದೆ. 45 ಅಡಿ ಎತ್ತರದ ಈ ದೇವಾಲಯದಲ್ಲಿ ಅರೆ ಕಂಬ, ಬಿಡಿ ಕಂಬ ಮತ್ತು ಜೋಡಿ ಕಂಬ ಹಾಗೂ 36 ಕಮಾನುಗಳುನ್ನ ಬಳಸಿ ನಿರ್ಮಿತಗೊಂಡ ಆಕರ್ಷಕ ಸಭಾ ಮಂಟಪವಿದೆ. ಇದಕ್ಕೆ ನವಿಲು, ಗರಡು, ನಾಗ ಮುಂತಾದ ಪಶು-ಪಕ್ಷಿಗಳು ಹಾಗೂ ಹೂ ಬಳ್ಳಿಗಳ ರೂಪು ನೀಡಲಾದ ಕೆತ್ತನೆ ಮಾಡಲಾಗಿದೆ. ಜೊತೆಗೆ ಗೋಪುರಕ್ಕೆ ಸ್ವರ್ಣ ಲೇಪನ ಕಾರ್ಯ ನಡೆದಿದೆ.
ಶರಣಬಸವೇಶ್ವರ ಹೆಸರಿನಲ್ಲಿ ಹಳ್ಳಿಗಳಲ್ಲಿ ರಾಜ್ಯದ ವಿವಿಧೆಡೆ ಸುಮಾರು ಹನ್ನೊಂದು ಸಾವಿರ ಗುಡಿಗಳು ನಿರ್ಮಾಣವಾಗಿವೆ. ಇವುಗಳ ಜೊತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿ ಮತ್ತು ಅಮೇರಿಕದಲ್ಲೂ ದೇವಾಲಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.