ಗೌಳಿಗರ ದೀಪವಾಳಿ:
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ವಾಡಿಕೆ. ಆದರೆ ನಿತ್ಯ ಹಾಲು ಕೊಟ್ಟು, ಜೀವನಕ್ಕೆ ಆಧಾರವಾದ, ಆದಾಯ ತರುವ ಎಮ್ಮೆ, ದನಗಳನ್ನು ವಿಶೇಷವಾಗಿ ಅಲಂಕರಿಸಿ, ಅವುಗಳನ್ನೇ ಪೂಜಿಸುವುದು ಗೌಳಿಗರ ಸಂಪ್ರದಾಯ.
ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ಗೌಳಿಗರ ಸಂಖ್ಯೆ ತುಸು ಹೆಚ್ಚು, ಆದ್ದರಿಂದಲೇ ಇಲ್ಲಿ ಗೌಳಿಗರ ದೀಪಾವಳಿ ಆಚರಣೆಯನ್ನು ಕಣ್ತುಂಬಿಕೊಳ್ಳಬಹುದು. ಎಮ್ಮೆಗಳ ಓಟ ಈ ಸಮುದಾಯದ ಪ್ರಮುಖ ಆಕರ್ಷಣೆ.
ದೀಪಾವಳಿ ಬಂತೆಂದರೆ ನಮಗೆ ಎಲ್ಲಿಲ್ಲದ ಖುಷಿ. ಎಮ್ಮೆಗಳೊಂದಿಗೆ ಹೆಚ್ಚು ಒಡನಾಟ ಹೊಂದಿರುವ ನಮಗೆ, ಅವುಗಳನ್ನು ಸುಂದರವನ್ನಾಗಿ ಸಿಂಗರಿಸುವುದೇ ಸಂಭ್ರಮ. ದೀಪಾವಳಿ ಅಮಾವಾಸ್ಯೆ ಸಂಜೆ ಅವುಗಳ ಮೈ ತೊಳೆದು, ಕೋಡುಗಳಿಗೆ ಕೆಂಪು ಬಣ್ಣ ಬಳೆಯುತ್ತೇವೆ, ಕೆಲವರು ಇಡೀ ಮೈಮೇಲೆ ಆಕರ್ಷಕವಾದ ಚಿತ್ರ ಬಿಡಿಸುತ್ತಾರೆ. ಕೊರಳಲ್ಲಿ ಘಂಟೆ ಸರ, ಕವಡೆ ಸರ, ಮುರುಕುಂಜ (ಕೋಡುಗಳಿಗೆ ನವಿಲುಗರಿಯಿಂದ ಸಿಂಗರಿಸುವುದು), ಕಾಲಿಗೆ ಗೆಜ್ಜೆ ಹಾಕಿ ಅಲಂಕರಿಸಿ, ಬಲಿಪಾಡ್ಯಮಿ ದಿನದಂದು ಎಮ್ಮೆಗಳಿಗೆ ವಿಶೇಷ ಪೂಜೆ ಮಾಡುತ್ತೇವೆ. ಮನೆ ಮಂದಿಯೆಲ್ಲ ಸೇರಿ ಖುಷಿಯಿಂದ ಅವುಗಳನ್ನು ಅಲಂಕರಿಸುವುದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯ ಗೌಳಿಗಲ್ಲಿಯ ಶರಣು ಉಪ್ಪಾರ.
ದಾಜಿಬಾನ್ ಪೇಟೆ, ಗೌಳಿಗಲ್ಲಿ, ಬಾನಿ ಓಣಿಯಲ್ಲಿರುವ ಉಪ್ಪಾರ ಹಾಗೂ ಗೌಳಿ ಸಮುದಾಯದ ಹಿರಿಯರು ಬಲಿಪಾಡ್ಯಮಿಯಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಒಂದೆಡೆ ಸೇರುತ್ತಾರೆ. ಪ್ರತಿ ಮನೆಯಿಂದ ಸಿಂಗರಿಸಿದ ಎಮ್ಮೆ, ದನಗಳೊಂದಿಗೆ, ಕುಟುಂಬದವರು ಸೇರುತ್ತೇವೆ. ಸಮುದಾಯದ ಪ್ರತಿ ಕುಟುಂಬದವರು ಹಿರಿಯರಿಗೆ ನಮಿಸಲೆಬೇಕು, ನಂತರ ಎಮ್ಮೆಗಳ ಓಟ ಏರ್ಪಡಿಸಲಾಗುತ್ತದೆ. ಇದನ್ನು ನೋಡುವುದೇ ಚೆಂದ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಓಟದ ನಂತರ ಬನ್ನಿ ಮರದ ಬಳಿ ಎಮ್ಮೆ, ದನಗಳನ್ನು ಓಡಿಸಿಕೊಂಡು ಹೋಗುತ್ತೇವೆ, ಅಲ್ಲಿ ನಮ್ಮೊಂದಿಗೆ ಎಮ್ಮೆ, ದನಗಳು ಮಂಡಿಯೂರಿ ನಮಸ್ಕರಿಸುತ್ತಿವೆ. ಇದಕ್ಕೆ ಬೈಠಕ್ ಎಂದು ಕರೆಯಲಾಗುತ್ತದೆ. ಈ ಮೊದಲು ಹುಬ್ಬಳ್ಳಿಯ ಈದ್ಗಾ ಮೈದಾನ, ನಂತರ ಮೂರುಸಾವಿರ ಮಠದ ಆವರಣದಲ್ಲಿ ಎಮ್ಮೆಗಳ ಓಟ ಏರ್ಪಡಿಸಲಾಗುತ್ತಿತ್ತು. ಕಳೆದ 15 ವರ್ಷಗಳಿಂದ ನೆಹರು ಮೈದಾನದಲ್ಲಿ ಬಲಿಪಾಡ್ಯಮಿ ದಿನದಂದು ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಸಮುದಾಯದವರೆಲ್ಲ ಸೇರಿ ಎಮ್ಮೆಗಳೊಂದಿಗೆ ಹಬ್ಬ ಆಚರಿಸುತ್ತೇವೆ ಎಂದರು.
ದೀಪಾವಳಿ ಬಲಿಪಾಡ್ಯಮಿಯಂದು ಸಿಂಗರಿಸಿರು ಎಮ್ಮೆಗಳೊಂದಿಗೆ ಗೌಳಿಗ ಸಮುದಾಯದವರು
ಸಮುದಾಯದವರೆಲ್ಲ ಜುಬ್ಬಾ, ಬಿಳಿ ಪೈಜಾಮ ಧರಿಸಿ, ಹಳದಿ ಪೇಟ ಸುತ್ತಿಕೊಂಡು ಅಲಂಕರಿಸಿದ ಎಮ್ಮೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತೇವೆ. ನಂತರ ನಡೆಯುವ ಎಮ್ಮೆಗಳ ಓಟ ರೋಮಾಂಚನಕಾರಿಯಾಗಿರುತ್ತದೆ ಎನ್ನುತ್ತಾರೆ ಅವರು.
ಅಂದು ಮನೆಯಲ್ಲಿ ಹೋಳಿಗೆ, ಕಡುಬು, ಬದನೆಕಾಯಿ ಪಲ್ಲೆ ಸೇರಿದಂತೆ ಹಬ್ಬಕ್ಕಾಗಿ ವಿಶೇಷ ಖಾದ್ಯ ತಯಾರಿಸಲಾಗುತ್ತದೆ. ಎಮ್ಮೆಗಳಿಗೆ ಪೂಜಿಸಿದ ನಂತರ ಅವುಗಳಿಗೆ ನೈವೇದ್ಯ ಅರ್ಪಿಸಿ, ಮನೆ ಮಂದಿಯೆಲ್ಲ ಒಟ್ಟಿಗೆ ಭೋಜನ ಸವಿದು ಸಂಭ್ರಮಿಸುತ್ತಾರೆ.
ಜೊತೆಗೆ ಸಗಣಿಯಿಂದ ಪಾಂಡವರನ್ನು ತಯಾರಿಸಿ, ಅವುಗಳ ಮೇಲೆ ಉತ್ರಾಣಿ ಕಡ್ಡಿ, ಹೂಗಳಿಂದ ಅಲಂಕರಿಸಿ, ಪೂಜಿಸಿ ನಂತರ ದೇವರ ಕೋಣೆ, ಅಡುಗೆ ಮನೆ, ಕಿಟಕಿ, ಬಾಗಿಲು ಬಳಿ ಇಡಲಾಗುತ್ತದೆ. ಸಂಜೆ ಸೂರ್ಯಾಸ್ತಕ್ಕೂ ಮುನ್ನ ಎಲ್ಲವನ್ನೂ ಒಟ್ಟುಗೂಡಿಸಿ ಮತ್ತೊಮ್ಮೆ ಪೂಜೆ ಮಾಡಿ ಅವುಗಳನ್ನು ಮನೆಯ ಟೆರೆಸ್ ಮೇಲೆ ಅಥವಾ ಹೂವಿನ ಕುಂಡಲಿಗಳಲ್ಲಿ ಇಡಲಾಗುತ್ತದೆ.
ನಮ್ಮ ಹಿರಿಯರು ನಮಗೆಲ್ಲ ಹೇಳುತ್ತಾ ಬಂದಿದ್ದೇನೆಂದರೆ, ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ವಿರಾಟ ರಾಜನ ಆಶ್ರಯದಲ್ಲಿದ್ದರು. ಆಗ ಕೌರವ ಸೇನೆ ವಿರಾಟರಾಜನ ರಾಜ್ಯದ ಮೇಲೆ ಆಕ್ರಮಣ ಮಾಡಿ, ಅವರ ಗೋವುಗಳನ್ನೆಲ್ಲ ಅಪಹರಿಸಿಕೊಂಡು ಹೋಗಿರುತ್ತಾರೆ. ಆಗ ಅರ್ಜುನ ಏಕಾಂಗಿಯಾಗಿ ಹೋರಾಡಿ, ವಿರಾಟರಾಜನ ಹಸುಗಳನ್ನೆಲ್ಲ ಬಿಡಿಸಿಕೊಂಡು ಬಂದನೆಂಬ ಪ್ರತೀತಿಯಿದೆ. ಅದರ ನೆನಪಿಗಾಗಿ, ಗೌಳಿ ಜನಾಂಗದವರೆಲ್ಲ ಪ್ರತಿವರ್ಷ ಬಲಿಪಾಡ್ಯಮಿ ದಿನದಂದು ಎಮ್ಮೆಗಳನ್ನು ಓಡಿಸುವ ಆಚರಣೆ ಮಾಡುತ್ತಾ ಬಂದಿದ್ದೇವೆ ಎನ್ನುತ್ತಾರೆ ಗೌಳಿಸಮುದಾಯದ ಹಿರಿಯರೊಬ್ಬರು.
ಒಟ್ಟಿನಲ್ಲಿ ಬೇರೆ ಬೇರೆ ಸಮುದಾಯದವರು ಬೆಳಕಿನ ಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸಿ, ಸಂಭ್ರಮಿಸುತ್ತಾರೆ.
ದೀಪಾವಳಿ ಬಲಿಪಾಡ್ಯಮಿಯಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಗೌಳಿ ಸಮುದಾಯದ ಹಿರಿಯರು ಒಂದೇ ಕಡೆ ಸೇರಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.