ADVERTISEMENT

ನರೇಗಲ್: ಶ್ರಾವಣದಲ್ಲಿ ನಡೆವ ಕಡಬಡ ಸೋಗು!

ವಿಶಿಷ್ಟ ಜನಪದ ನೃತ್ಯ ಮೂಲಕ ದೇವಿ, ರಾಕ್ಷಸರ ನಡುವಿನ ಕಾಳಗ ಪ್ರದರ್ಶನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜುಲೈ 2022, 7:21 IST
Last Updated 24 ಜುಲೈ 2022, 7:21 IST
ನರೇಗಲ್ ಪಟ್ಟಣದಲ್ಲಿ ನಡೆದ ಕಡಬಡ ಸೋಗಿನ ಪ್ರದರ್ಶನದ ವೇಳೆ ವಾಹನದ ಮೇಲೆ ಕುಳಿತಿರುವ ವೇಷಧಾರಿಗಳು          (ಸಂಗ್ರಹ ಚಿತ್ರ)
ನರೇಗಲ್ ಪಟ್ಟಣದಲ್ಲಿ ನಡೆದ ಕಡಬಡ ಸೋಗಿನ ಪ್ರದರ್ಶನದ ವೇಳೆ ವಾಹನದ ಮೇಲೆ ಕುಳಿತಿರುವ ವೇಷಧಾರಿಗಳು          (ಸಂಗ್ರಹ ಚಿತ್ರ)   

ನರೇಗಲ್: ಶ್ರಾವಣ ಬಂದರೆ ಸಾಕು ನರೇಗಲ್‌ ಪಟ್ಟಣದ ಜನರು ದೇವರ ಆರಾಧನೆ ಜತೆಗೆ ವಿಶಿಷ್ಟ ಜನಪದ ನೃತ್ಯದ ಮೂಲಕ ದೇವಿಯ ಆರಾಧನೆಗೂ ಮುಂದಾಗುತ್ತಾರೆ. ದೇವಿ ಮತ್ತು ರಾಕ್ಷಸರ ನಡುವೆ ನಡೆಯುವ ಹೋರಾಟವನ್ನು ಸೋಗಿನ ಮೂಲಕ ಪ್ರದರ್ಶನಕ್ಕೆ ಮುಂದಾಗುತ್ತಾರೆ. ಅದನ್ನು ಕಡಬಡ ಸೋಗು ಎಂದು ಕರೆಯುತ್ತಾರೆ.

ರಾಜ್ಯದಲ್ಲಿ ಎಲ್ಲೂ ಕಾಣದ ಸಾಂಪ್ರದಾಯಿಕ ಜನಪದ ಶೈಲಿಯ ಆಟ ನರೇಗಲ್‌ನಲ್ಲಿ ಇನ್ನೂ ರೂಢಿಯಲ್ಲಿದೆ. ಸಮೂಹನೃತ್ಯ ಕಲೆಯಾಗಿರುವ ಕಾರಣ 2019 ನಂತರ ಕೋವಿಡ್‌ ಪರಿಣಾಮದಿಂದ ಕಡಬಡ ಸೋಗಿನ ವಿಜೃಂಭಣೆ ಕಂಡುಬಂದಿರಲಿಲ್ಲ. ಆದರೆ ಈ ಬಾರಿ ಜುಲೈ 28ರಿಂದ ಆರಂಭವಾಗುವ ಶ್ರಾವಣ ಮಾಸದಲ್ಲಿ ಪುರಾತನ ಸಂಸ್ಕೃತಿ- ಸಂಪ್ರದಾಯದ ಆಚರಣೆಯ ವೈಭವ ಗರಿಗೆದರಲಿದೆ.

ಸಾಮಾನ್ಯವಾಗಿ ಪಟ್ಟಣದ ಸಂತೆ ಬಜಾರ್‌ನ ಕಟ್ಟಿ ಬಸವೇಶ್ವರ ಯುವಕ ಸಂಘದ ಸದಸ್ಯರು ಮುಂದಾಳತ್ವ ವಹಿಸುತ್ತಾರೆ. ಶ್ರಾವಣ ಮಾಸದ ಮಂಗಳವಾರ ಅಥವಾ ಶುಕ್ರವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಡಬಡ ಸೋಗಿನ ವಿವಿಧ ವೇಷಗಳನ್ನು ಧರಿಸಿ ಮೆರವಣಿಗೆ ನಡೆಸುತ್ತಾರೆ. ಸಮೃದ್ಧ ಮಳೆ-ಬೆಳೆ, ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ADVERTISEMENT

ಈ ಸಮೂಹ ಸನ್ನಿವೇಶದಲ್ಲಿ ಮುಂದೆ ಇಬ್ಬರು ರಾಕ್ಷಸರು ದೇವಿಯ ಮೇಲೆ ಆಕ್ರಮಣ ಮಾಡಲು ಹವಣಿಸುತ್ತಿರುತ್ತಾರೆ. ದೇವಿ ಅವರನ್ನು ಸಂಹರಿಸಲು ಯತ್ನಿಸುತ್ತಿರುತ್ತಾಳೆ. ಇದೇ ಈ ಆಟದ ತಿರುಳಾಗಿರುತ್ತದೆ. ಈ ಸೋಗಿನ ಆಟದಲ್ಲಿ 20ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಊರ್ವಶಿ, ಮೇನಕೆ, ರಾಕ್ಷಸರು, ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳ ವೇಷಧಾರಿಗಳು ಇರುತ್ತಾರೆ.

ವಾಹನದ ಮುಂದೆ ದೇವಿ ಕುಣಿತವಿದ್ದರೆ ಆಕೆಯನ್ನು ಕಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ರಾಕ್ಷಸರನ್ನು ಸಂಹರಿಸಲು ಬಂದಾಗ ಆಡುವ ಆಟವನ್ನು ನೋಡುವುದೇ ಒಂದು ಸೊಗಸು. ಈ ಹಿಂದೆ ಚಕ್ಕಡಿಯಲ್ಲಿ ಬರುತ್ತಿದ್ದ ಕಡಬಡ ಸೋಗು ಈಗ ಟ್ರ್ಯಾಕ್ಟರ್‌ನಲ್ಲಿ ಬರುತ್ತಾರೆ. ವಾಹನ ಬದಲಾದರೂ ಆಟದ ವಿಧಾನ ಬದಲಾಗಿಲ್ಲ ಎನ್ನುವುದು ವಿಶೇಷವಾಗಿದೆ.

ಸೋಗಿಗೆ ಹಲವು ಉದ್ದೇಶಗಳಿದ್ದು, ಶ್ರಾವಣವೆಂದರೆ ಮಳೆಗಾಲದ ಮಾಸ. ಈ ಸಮಯದಲ್ಲಿ ಜನರು ಅನೇಕ ಸಾಂಕ್ರಾಮಿಕ ಮತ್ತಿತರ ರೋಗಗಳಿಂದ ಬಳಲುವ ಸಾಧ್ಯತೆ ಹೆಚ್ಚು. ಮುಂಗಾರು ಬಿತ್ತನೆಯನ್ನೆಲ್ಲ ಮುಗಿಸಿದ ರೈತರು ವರುಣನ ಕೃಪೆಗಾಗಿ ಕಾದು ಕುಳಿತಿರುವ ಮಾಸವೂ ಹೌದು. ಮಳೆ ಚೆನ್ನಾಗಿ ಆಗಲಿ, ಬರುವ ಎಲ್ಲ ರೋಗಗಳು ದೂರವಾಗಲಿ ಮತ್ತು ಜನತೆಗೆ ಈ ಸಮಯದಲ್ಲಿ ಮನರಂಜನೆಯನ್ನು ನೀಡಬೇಕೆನ್ನುವ ದೃಷ್ಟಿಯಿಂದಲೂ ಈ ಕಡಬಡ ಸೋಗನ್ನು ಆಡಲಾಗುತ್ತಿದೆ ಎಂದು ಕಟ್ಟಿ ಬಸವೇಶ್ವರ ಸಂಘದ ಸಂಚಾಲಕ ಮಹಾದೇವ ಬೇವಿನಕಟ್ಟಿ ತಿಳಿಸಿದರು.

*
ಉತ್ತರ ಕರ್ನಾಟಕದ ಪುರಾತನ ಹಾಗೂ ಜನಪದ ವಿಶೇಷ ಕಲೆಯಾದ ಕಡಬಡ ಸೋಗು ಕೆಲ ಜಿಲ್ಲೆಗಳಲ್ಲಿ ಮಾತ್ರ ಕಂಡು ಬರುತ್ತದೆ. ಈ ಕಲೆ ನಶಿಸಿ ಹೋಗುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆ ಉತ್ತೇಜನ ನೀಡಬೇಕಾಗಿದೆ.
-ನಿಂಗನಗೌಡ ಲಕ್ಕನಗೌಡ್ರ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.