ADVERTISEMENT

ಹರೂರಿನ ಹಾದಿಯಲ್ಲಿ ಹಸಿರು, ಜಲಪಾತಗಳು...

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 23:41 IST
Last Updated 25 ಅಕ್ಟೋಬರ್ 2025, 23:41 IST
ದಾರಿಯುದ್ದಕ್ಕೂ ಇಂತಹ ಜಲಪಾತಗಳು ಸಾಮಾನ್ಯ 
ದಾರಿಯುದ್ದಕ್ಕೂ ಇಂತಹ ಜಲಪಾತಗಳು ಸಾಮಾನ್ಯ    

ಹಂದಿಕೊಡ್ಲು, ಹುಲಿ ಮೂಲೆ, ಗಮಯನ ಕತ್ರಿ, ಬಾಳೆಕೊಡ್ಲು, ನೀರಿನ ಜಡ್ಡಿ, ಬೆಳ್ಮನೆ ಕ್ರಾಸ್ ಹೀಗೆ ದಾರಿಯ ಪ್ರತಿ ತಿರುವಿಗೂ ಒಂದೊಂದು ಹೆಸರು. ಸುಮ್ಮನೆ ಈ ರಸ್ತೆಯಲ್ಲಿ ಸಾಗುವಾಗ ಹುಲಿ, ಕಾಡುಕೋಣ, ಕಾನುಕುರಿ, ಕಡವೆ ಸಿಗದೇ ಹೋಗುವ ಸಂದರ್ಭವೇ ಇಲ್ಲ. ಅಪರೂಪದ ಜೀವವೈವಿಧ್ಯಗಳನ್ನು ತನ್ನೊಡಲೊಳಗಿಟ್ಟುಕೊಂಡ ಪಶ್ಚಿಮ ಘಟ್ಟದ ಕಾಳಿ ನದಿಯ ಪಕ್ಕದ ತಾಣವಿದು. ಉತ್ತರಕನ್ನಡದ ಯಲ್ಲಾಪುರ ಕೇಂದ್ರದಿಂದ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯ ಮಾರ್ಗವಿದು. ಕದ್ರಾ, ಮಲ್ಲಾಪುರ ಸಂಪರ್ಕಿಸುವ ಹರೂರಿನ ಬಳಿಯ ಹಸಿರು ಮರದ ನೆರಳಿನ ಅಡಿಯಲ್ಲಿ ನಿಧಾನವಾಗಿ ಸಾಗುವಾಗ ಪ್ರತಿ ತಿರುವಿನಲ್ಲಿ ಪುಟ್ಟದಾದ ಕಿರು ಜಲಪಾತಗಳು ಎದುರುಗೊಳ್ಳುತ್ತವೆ. ಹಸಿರು ಹಾಸಿನ ಕಲ್ಲುಬಂಡೆಗಳ ನಡುವೆ ತುಸು ತುಸುವೇ ಜಾರಿಕೊಳ್ಳುವ ನೀರಹನಿಗಳನ್ನು ಒಮ್ಮೆ ಮುಟ್ಟದೇ ಬರಲು ಮನಸ್ಸಾಗುವುದಿಲ್ಲ. ಹತ್ತು ಅಡಿಗಳಿಂದ ಐವತ್ತು ಅಡಿಗಳವರೆಗೆ ಹಾಲಿನಧಾರೆಯಾಗಿ ಕಾಣಸಿಗುವ ಈ ಜಲಪಾತಗಳು ಬೇಸಿಗೆಯ ಕೊನೆಯಲ್ಲಿ ಕಣ್ಮರೆಯಾದರೂ ಮಳೆ ಆರಂಭವಾಗುವ ಹೊತ್ತಿಗೆ ಮೈದುಂಬಿಕೊಳ್ಳುತ್ತವೆ.

ರಸ್ತೆ ಪಕ್ಕದಲ್ಲೇ ಇರುವ ಕಿರುಜಲಪಾತ

ನೇರ ರಸ್ತೆ ದಾಟಿದ ಮೇಲೂ ಮೂವತ್ತು ಕಿಲೋಮೀಟರ್‌ ತಿರುವುಗಳಿಂದ ಕೂಡಿದ ಇಲ್ಲಿಯ ಘಟ್ಟ ಪ್ರದೇಶದ ಇಳಿಜಾರಿನ ರಸ್ತೆಯಲ್ಲಿ ಸಾಗುವಾಗ ಎದೆಗಟ್ಟಿಯಾಗಿರಬೇಕು. ಏಕೆಂದರೆ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಈ ಬೆಟ್ಟದಲ್ಲಿ ಹುಲಿ, ಕರಡಿ, ಕಾಡುಕೋಣ, ಕಾನುಕುರಿ, ಕಡವೆಗಳು ಹಗಲು–ರಾತ್ರಿ ಎನ್ನದೇ ಪ್ರತ್ಯಕ್ಷವಾಗುವ ಸಾಧ್ಯತೆ ಇದೆ. ಅಪರೂಪದ ಕೀಟಗಳು, ಪಕ್ಷಿಸಂಕುಲಗಳು, ಸಸ್ಯ ಪ್ರಭೇದಗಳು ತುಂಬಿರುವ ಈ ಕಾಡಿನಲ್ಲಿ ಪ್ರಾಣಿಗಳ ಚಲನವಲನ ಅರಿತು ಸಂಚರಿಸಬೇಕಾಗುತ್ತದೆ. ಒಂದು ಕಡೆ ಭಯ, ಇನ್ನೊಂದಡೆ ಖುಷಿಯನ್ನು ನೀಡುವ ಈ ಪ್ರದೇಶ ಪ್ರಕೃತಿ ಪ್ರಿಯರಿಗೆ ರಮ್ಯ ತಾಣ.

ಕಾಳಿ ನದಿಯ ವಿಹಂಗಮ ನೋಟ

ಕೈಗಾ ಅಣು ಸ್ಥಾವರ, ಕಾಳಿ ನದಿಯ ಕೊನೆಯ ಭಾಗದಲ್ಲಿನ ಕದ್ರಾ ಅಣೆಕಟ್ಟೆಯ ಹಿನ್ನೀರು, ಆಚೆಗೆ ಅಣಶಿ ರಕ್ಷಿತಾರಣ್ಯ...ಹೀಗೆ ಪ್ರಕೃತಿಯ ವಿಹಂಗಮ ನೋಟ ಕಣ್ಣು ತುಂಬಿಕೊಳ್ಳುತ್ತದೆ. ಈ ಮಾರ್ಗದಲ್ಲಿನ ಸಂಚಾರ ಯಾವುದೇ ಕ್ಷಣಕ್ಕೂ ಸ್ಥಗಿತಗೊಳ್ಳಬಹುದು. ಜನವಸತಿ ಕಡಿಮೆ ಇರುವ ಕಡಿದಾದ ಬೆಟ್ಟದ ಈ ದಾರಿಯಲ್ಲಿ ಸಾಗುವಾಗ ಮರ ಬಿದ್ದರೆ ಮುಂದೆ ಸಾಗಲಾಗದೇ ಹಿಂದಿರುಗಬೇಕಾದ ಪರಿಸ್ಥಿತಿಗೆ ಎದುರಾಗಿಬಿಡುತ್ತದೆ. ಹರೂರಿನ ಗುಡ್ಡದಲ್ಲಿ ವನವಾಸಿಗಳಾದ ಅಟ್ಟೆಕುಣಬಿಗಳ ಕುಟುಂಬಗಳು ಪ್ರಕೃತಿಯ ಸಾಹಸದಲ್ಲಿ ಪ್ರತಿನಿತ್ಯವೂ ಮಿಂದೇಳುತ್ತವೆ. ಹರೂರಿನ ಕಾಡುಗಳೆಂದರೆ ಸಮುದ್ರಮಟ್ಟದಿಂದ 650 ಅಡಿ ಎತ್ತರದ ಪ್ರದೇಶವಾಗಿದ್ದು ಚಳಿಯ ಅನುಭವವು ಹೆಚ್ಚು. ಪ್ರತಿಗುಡ್ಡದ ಮೂಲೆಯಲ್ಲೂ ಸರ್ವಋತು ನೀರು ತೊಟ್ಟಿಕುತ್ತದೆ. ತಾವು ಆರಾಧಿಸುವ ತಮ್ಮ ಜನಾಂಗದ ದೇವತೆಗಳಿಗೆಲ್ಲ ತಮ್ಮ ಹಾಗೆ ಕಾಡಿನಲ್ಲಿ ಆಶ್ರಯಕೊಟ್ಟಿರುವ ಅಟ್ಟೆಕುಣಬಿಗಳು ಈ ಕಾಡಿನ ಕಾವಲುಗಾರರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.