ADVERTISEMENT

ಎಲೆಮರೆಯ ಅರೆಬೈಲು!

ಗಣೇಶ ಕಾಳೀಸರ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ಮಳೆಗಾಲದ ವೈಭವ ದಿನಗಳಿವು. ಪಶ್ಚಿಮಘಟ್ಟದ ಸೊಬಗು ಇಮ್ಮಡಿಗೊಳ್ಳುವ ಸಮಯ. ವರ್ಷಧಾರೆಯೊಂದಿಗೆ ಹಳ್ಳಕೊಳ್ಳಗಳಲ್ಲಿ ಜೀವ ಸಂಚಾರವಾಗಿದೆ. ಕಡಲನ್ನು ಸೇರುವ ತವಕದಲ್ಲಿ ಹರಿಯುವ ಜಲಧಾರೆಗಳು ಎತ್ತರದ ಕಲ್ಲಿನ ಹಂದರದಿಂದ ಧುಮುಕಿ ಸುಂದರ ದೃಶ್ಯ ಕಾವ್ಯವನ್ನು ಸೃಷ್ಟಿಸುತ್ತವೆ.

ಮರುಜೀವ ಪಡೆದುಕೊಳ್ಳುವ ಜಲಪಾತಗಳು ಹೊಸಲೋಕವನ್ನೇ ಅನಾವರಣಗೊಳಿಸುತ್ತವೆ. ಘಟ್ಟದ ಕಾನನದ ಮಧ್ಯದಲ್ಲಿರುವ ಹಲವಾರು ಜಲಪಾತಗಳು ಸ್ಥಳೀಯರನ್ನು ಹೊರತುಪಡಿಸಿದರೆ ಉಳಿದವರಿಗೆ ಅಪರಿಚಿತವಾಗಿಯೇ ಉಳಿದಿವೆ. ಅಂಥ ಜಲಧಾರೆಗಳಲ್ಲೊಂದು ಅರೆಬೈಲು ಜಲಪಾತ.

ಅರೆಬೈಲು ಜಲಪಾತವು ಕಾರವಾರ - ಹುಬ್ಬಳ್ಳಿ ಹೆದ್ದಾರಿಯಲ್ಲಿನ (ಎನ್.ಎಚ್-63) ಅರೆಬೈಲು (ಅರ್ಬೈಲ್) ಘಾಟ್‌ನಲ್ಲಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಕಾರವಾರ ರಸ್ತೆಯಲ್ಲಿ ಸುಮಾರು 20 ಕಿಮೀ ಸಾಗಿದರೆ ಈ ಜಲಧಾರೆಯ ಸಾಕ್ಷಾತ್ಕಾರ. ಹೆದ್ದಾರಿಯಲ್ಲಿ ಸಿಗುವ ಅರೆಬೈಲ್ ಊರಿನಿಂದ ಜಲಪಾತಕ್ಕೆ ಸುಮಾರು ಒಂದೂವರೆ ಕಿ.ಮೀ. ನಡೆದು ಸಾಗಬೇಕು. ಜಲಪಾತದವರೆಗೂ ಕಚ್ಚಾ ರಸ್ತೆ ಇದೆ.

ಈ ದಾರಿಯಲ್ಲಿ ಪ್ರಯಾಸಪಟ್ಟು ದ್ವಿಚಕ್ರ ವಾಹನಗಳಲ್ಲಿ ಹೋಗಬಹುದು. ಹನುಮಂತನ ಗುಡಿಯೆದುರಿಗಿನ ರಸ್ತೆಯಲ್ಲಿ ಸಾಗಿದರೆ ಜಲಪಾತ ಸಿಗುತ್ತದೆ.
ಈ ಜಲಪಾತವು ಸುಮಾರು 170 ಅಡಿಗಿಂತಲೂ ಹೆಚ್ಚು ಎತ್ತರವಿದ್ದರೂ ನೀರು ಒಮ್ಮೆಲೇ ಧುಮುಕುವುದಿಲ್ಲ.

ಇಳಿಜಾರಾದ ಕಲ್ಲಿನ ಹಂದರದ ಮೇಲೆ ಬಳುಕುತ್ತಾ ಜಲಧಾರೆ ಕೆಳಗಿಳಿಯುತ್ತದೆ. ಶುಭ್ರವಾದ ನೀರು ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಕಲ್ಲಿನ ಹಂದರ ಮೆಟ್ಟಿಲಿನಂತೆ ನಾಲ್ಕು ಹಂತದಲ್ಲಿದ್ದು, ಜಲಪಾತದ ಸೊಬಗನ್ನು ಹೆಚ್ಚಿಸಿದೆ. ಪಾಚಿಗಟ್ಟಿದ ಕಲ್ಲಿನ ಮೇಲೆ ಜಾಗರೂಕತೆಯಿಂದ ಸಾಗಿದರೆ ಜಲಪಾತದ ಬುಡದವರೆಗೂ ಸಾಗಬಹುದು.

ಮಳೆ ಬಿಡುವು ಕೊಟ್ಟ ಸಮಯದಲ್ಲಿ ಮೈಯಲ್ಲಿ ಕಸುವಿರುವವರು ಎಚ್ಚರಿಕೆಯಿಂದ ಕಸರತ್ತು ಮಾಡಿದರೆ ಜಲಪಾತದ ತುದಿಯನ್ನೂ ತಲುಪಬಹುದು. ಚಾರಣಪ್ರಿಯರಿಗೆ, ಪ್ರಕೃತಿಯನ್ನು ಆರಾಧಿಸುವವರಿಗೆ ಈ ಜಲಪಾತ ಖುಷಿ ಕೊಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.