ಯುರೋಪ್ ಮತ್ತು ಏಷ್ಯಾ ಖಂಡ ಎರಡರಲ್ಲೂ ಹಂಚಿಹೋಗಿರುವ ಯೂರೇಷಿಯಾ ದೇಶದ ಅಝರ್‌ಬೈಜಾನ್ ರಾಜಧಾನಿ ಬಾಕುವಿನ ಹೈದರ್ ಅಲಿಯೇವ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾವು ಇಳಿದಾಗ ಮಧ್ಯಾಹ್ನ ಆಗಿತ್ತು. ನಮಗಾಗಿ ಕಾದಿದ್ದ ಬಸ್ಸಿನ ಕಡೆ ಹೊರಟಾಗ ಆ ನಡು ಮಧ್ಯಾಹ್ನವೂ ಕಡು ತಂಪಾಗಿತ್ತು. ಆಗಷ್ಟೆ ಅಲ್ಲ, ನಾವು ಅಲ್ಲಿದ್ದ ಐದಾರು ದಿನವೂ ವಾತಾವರಣ ಬಿರುಬಿಸಿಲಿಲ್ಲದ ಹದವಾದ, ಕೆಲವೊಮ್ಮೆ ಮಂಜು ಮುಸುಕಿ ನಡುಕ ಹುಟ್ಟಿಸುವ ಶೀತದಿಂದ ಕೂಡಿತ್ತು. ಇಲ್ಲಿ ಆಗಾಗ ಹಿಮಪಾತವೂ ಆಗುತ್ತಂತೆ. ಹೀಗಿರುವ ಈ ದೇಶದ ಹೆಸರು ಅಝರ್‌ಬೈಜಾನ್ (ಉರಿಯ ಜ್ವಾಲೆ) ಎಂಬುದು ಕುತೂಹಲಕಾರಿ ವ್ಯಂಗೋಕ್ತಿಯಾಗಿ ತೋರಿತು.
ಬಾಕುವಿನಲ್ಲಿ ನಾವು ತಂಗಬೇಕಿದ್ದ ಹೋಟೆಲಿನತ್ತ ಹೊರಟಾಗ ಕಂಡದ್ದು ಆಚೀಚೆ ಹಸುರು ಹಾಸಿನ ಅಂಚನ್ನುಳ್ಳ ವಿಶಾಲ ರಸ್ತೆಗಳು. ಇಡೀ ಬೀದಿಗಳಲ್ಲಿ ಒಂದೇ ರೀತಿಯ ಪಾರಂಪರಿಕ ಶೈಲಿಯ ಕಟ್ಟಡಗಳು, ಕೆಲವು ಮಾರ್ಗಗಳಲ್ಲಿ ಅತ್ಯಾಧುನಿಕ ತಾಂತ್ರಿಕತೆಯ ಗಗನಚುಂಬಿ ಮಹಲುಗಳು. ಜನಜಂಗುಳಿಯೇ ಕಾಣದ, ವಾಹನ ಸಂಚಾರದ ಸದ್ದುಗದ್ದಲಗಳಿಲ್ಲದ ಕ್ರಿಯಾಶೀಲತೆಯನ್ನೊಳಗೊಂಡೂ ನಿದ್ರಿಸುತ್ತಿದೆಯೇನೋ ಎನಿಸುವಂಥ ಪ್ರಶಾಂತತೆಯ, ಮಾಲಿನ್ಯರಹಿತ, ಸೌಂದರ್ಯಭರಿತ ನಗರವದು. ಬಾಕು ಎಂದರೆ ಗಾಳಿ–ಬೆಳಕಿನ ಊರಂತೆ. ಆಗಾಗ ಬಿರುಸಾದ ಬೀಸುಗಾಳಿ ಇಲ್ಲಿ ಸುಳಿದುಹೋಗುತ್ತದೆ. ಬೀದಿ ಬೀದಿಯ ಪ್ರತಿ ಸೌಧವೂ ವಿದ್ಯುದ್ದೀಪಗಳಿಂದ ಜಗಜಗಿಸಿ ಇಲ್ಲಿನ ರಾತ್ರಿಗಳನ್ನು ಬೆಳಗಿಸುತ್ತವೆ.
ಹಲವು ವರ್ಷಗಳು ಪರ್ಷಿಯಾದ ರಾಜವಂಶಸ್ಥರ ಆಡಳಿತಕ್ಕೊಳಪಟ್ಟಿದ್ದ ಅಝರ್‌ಬೈಜಾನ್ 70 ವರ್ಷ ಸೋವಿಯತ್ ಸೋಷಿಯಲಿಸ್ಟ್ ಒಕ್ಕೂಟ ರಾಷ್ಟ್ರದ ಭಾಗವಾಗಿತ್ತು. 1991ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿ ಅಭಿವೃದ್ಧಿ ಸಾಧಿಸಿದೆ. ಇದರ ವಿಸ್ತೀರ್ಣ 86,600 ಚದರ ಕಿಲೋಮೀಟರ್, ಜನಸಂಖ್ಯೆ ಕೇವಲ ಒಂದು ಕೋಟಿ ಚಿಲ್ಲರೆ. ಇವರಲ್ಲಿ ಶೇಕಡ 97 ಇಸ್ಲಾಂ ಧರ್ಮೀಯರು. ಆದರೂ ನಿತ್ಯ ಜೀವನದಲ್ಲಿ ಧರ್ಮಾಚರಣೆಗಳಿಗೆ ಇಲ್ಲಿ ಪ್ರಾಧಾನ್ಯತೆ ಇಲ್ಲ. ಬುರ್ಕಾ, ಹಿಜಾಬ್, ಬಿಳಿಗೌನುಗಳು ಕಣ್ಣಿಗೆ ಬೀಳುವುದಿಲ್ಲ. ಚಹರೆಯಲ್ಲಿ ಇರಾನಿಯನ್ನರನ್ನು ಹೋಲುವ ಇವರದು ಸ್ಫುರದ್ರೂಪ. ಪಾಶ್ಚಾತ್ಯ ಶೈಲಿಯ ಉಡುಗೆ ತೊಡುಗೆ. ಸದೃಢ ಶರೀರ, ಸುಂದರ ಮೈಬಣ್ಣ, ಕಪ್ಪು ದಟ್ಟ ಬಿಚ್ಚುಕೂದಲ ಸ್ತ್ರೀ, ಪುರುಷರು ಎಲ್ಲೆಲ್ಲೂ ಕಂಗೊಳಿಸುತ್ತಾರೆ. ಇವರ ನಡೆನುಡಿ ನಾಗರಿಕ, ಸುಸಂಸ್ಕೃತ.
ರಾಜಕೀಯವಾಗಿ ಏಳುಬೀಳುಗಳನ್ನು ಕಂಡಿರುವ ಅಝರ್‌ಬೈಜಾನ್‌ನಲ್ಲಿ ನಮ್ಮ ಕಾಶ್ಮೀರ ಸಮಸ್ಯೆಯಂಥ ಕಗ್ಗಂಟೊಂದು ಇದೆ. ಗಡಿಭಾಗದಲ್ಲಿರುವ ಕರಬಖ್ ಎಂಬ ಪ್ರದೇಶಕ್ಕಾಗಿ ಪಕ್ಕದ ಅರ್ಮೇನಿಯಾದೊಂದಿಗಿನ ಪೈಪೋಟಿ, ಯುದ್ಧಗಳಿಗೆ ಕಾರಣವಾಗಿದೆ. ಈಚೆಗೆ ಎಂದರೆ, 2020ರಲ್ಲಿ ಈ ದೇಶಗಳ ನಡುವೆ ನಡೆದ ಸಮರದಲ್ಲಿ ಸಾವಿರಾರು ಸೈನಿಕರು ಮಡಿದರಂತೆ. ಈ ವೀರ ಯೋಧರ ಬಗೆಗೆ ಅಪಾರ ಗೌರವ ಹೊಂದಿರುವ ಇಲ್ಲಿನ ಜನ ರಸ್ತೆ, ಮಾಲ್, ಮತ್ತಿತರ ಸ್ಥಳಗಳಲ್ಲಿ ಅವರ ಚಿತ್ರಪಟಗಳನ್ನು ಪ್ರದರ್ಶಿಸಿದ್ದಾರೆ, ಅವರಿಗೆ ದೊಡ್ಡದೊಂದು ಸಮಾಧಿಯ ಆವರಣ ನಿರ್ಮಿಸಿದ್ದಾರೆ. ವಾಸ್ತವವಾಗಿ ಈ ಸಮಾಧಿಗಳ ದರ್ಶನದಿಂದಲೇ ನಮ್ಮ ಪ್ರವಾಸ ಆರಂಭವಾಯಿತು.
ಮೊದಲ ದಿನ, ಬಾಕುವಿನ ತೀರದ ಅಪ್‌ಲ್ಯಾಂಡ್, ಹೈಲ್ಯಾಂಡ್ ಪಾರ್ಕುಗಳಲ್ಲಿರುವ ಕಪ್ಪು ಗ್ರಾನೈಟ್‌ಗಳ ಮೇಲೆ ಪ್ರತಿಯೊಬ್ಬ ಯೋಧನ ಚಿತ್ರಗಳಿದ್ದು, ಎದುರಿನ ಹಾಸುಗಲ್ಲ ಮೇಲೆ ಪುಷ್ಪಗುಚ್ಛಗಳನ್ನಿಟ್ಟ, ಸಾಲುಸಾಲು ಸಮಾಧಿಗಳನ್ನು ನಮಗೆ ತೋರಿಸಿದರು. ಅಲ್ಲಿಂದಲೇ ಕ್ಯಾಸ್ಪಿಯನ್ ಕೊಲ್ಲಿಯ ಮನೋಹರ ನೋಟ ಕಂಡೆವು. ಕೊಲ್ಲಿಗೆ ಎದುರಾಗಿ ಅಝರ್‌ಬೈಜಾನ್‌ನ ಐಕಾನ್‌ಗಳಾದ ಫ್ಲೇಮ್ ಟವರ್‌ಗಳಿವೆ. ಆ ಮೂರು ಜ್ವಾಲಾಗೋಪುರಗಳು ಉರಿಯ ಓಲಾಟದಂತೆಯೇ ಬಾಗು ಬಳುಕಿನ ವಿನ್ಯಾಸದ ವಿಶಿಷ್ಟ ಸೌಧಗಳಾಗಿವೆ. ರಾತ್ರಿ ಹೊತ್ತು ವಿದ್ಯುತ್ ಬೆಳಕಿನ ವರ್ಣಗಳಿಂದಲಂಕೃತವಾಗಿ ಜೀವಂತ ಜ್ವಾಲೆಗಳಂತೆಯೇ ರಾರಾಜಿಸುತವಂತೆ. ಬೆಟ್ಟದ ದೂರದಿಂದ ಅವುಗಳನ್ನು ನೋಡಿ ಬಳಿಬಂದು ಎದುರಿನ ವೃತ್ತಗಳ ಸುತ್ತಲಿರುವ ಇತರ ಸ್ಮಾರಕಗಳನ್ನು ವೀಕ್ಷಿಸಿದೆವು.
ಅಝರ್‌ಬೈಜಾನ್ ತನ್ನಲ್ಲಿರುವ ಐತಿಹಾಸಿಕ ಸಾಂಸ್ಕೃತಿಕ ಪಳೆಯುಳಿಕೆಗಳಿಂದಾಗಿ ಪ್ರಸಿದ್ಧವಾಗಿದೆ. ಅಂಥದೊಂದು ಮುಖ್ಯ ತಾಣ ಬಾಕು ನಗರದ ಒಡಲಲ್ಲೇ ಅಡಗಿರುವ ಇಚೆರಿ ಶಹರ್ ಎಂದು ಕರೆಯಲ್ಪಡುವ ಓಲ್ಡ್ ಸಿಟಿ. ಸಣ್ಣ ಗುಡ್ಡದ ಮೇಲಿರುವ ಈ ಪಟ್ಟಣದ ಸುತ್ತ ಕೋಟೆಯೊಂದು ಸುತ್ತುವರಿದಂತಿದೆ. ಮಧ್ಯಕಾಲೀನ ಮುಸಲ್ಮಾನ್ ದೊರೆಗಳು ಕಟ್ಟಿಸಿರಬಹುದಾದ ಇದರೊಳಗೆ ಅನೇಕ ಸ್ಮಾರಕಗಳು ಇಡಿಕಿರಿದಿವೆ. ಇವುಗಳಲ್ಲಿ ಕಾಣುವಂಥದ್ದು ‘ಮೆಯ್ಡನ್ ಟವರ್’ ಎಂಬ ಸಿಲಿಂಡರಿನಾಕಾರದ, ಸುಣ್ಣಕಲ್ಲು ಇಟ್ಟಿಗೆಗಳಿಂದಾದ ಎತ್ತರದ ಗೋಪುರ. ಪೂಜಾ ಸ್ಥಳವೆಂದೂ ಬತೇರಿಯೆಂದೂ ಹೇಳಲಾಗುವ ಇದು ರಾಜಕುಮಾರಿಯರ ಪ್ರೇಮ, ಬಲಿದಾನದ ರೋಮಾಂಚಕ ಕಥೆಗಳಿಗೆ ಕಾರಣವಾಗಿದೆ. ಅಲ್ಲದೇ ಕಾವ್ಯ, ನಾಟಕ, ನೃತ್ಯಗಳಿಗೆ ಪ್ರೇರಣೆ ನೀಡಿದೆ. ಹೀಗಾಗಿ ಐತಿಹಾಸಿಕವಾಗಿ ಅಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಮಹತ್ವದ್ದಾಗಿದೆ.
ಇನ್ನರ್‌ಸಿಟಿಯ ಇನ್ನೊಂದು ಮುಖ್ಯ ಪಳೆಯುಳಿಕೆ ಶರ್‌ವನ್‌ಶಾಹ್ ಅರಮನೆ. ಇದು ದಿವಾನಖಾನೆ, ಮಸೀದಿ, ಸಮಾಧಿ ಸ್ಥಳ ಮುಂತಾದವನ್ನೊಳಗೊಂಡು ಪ್ರವಾಸಿಗರ, ಇತಿಹಾಸ ಶೋಧಕರ ಗಮನ ಸೆಳೆಯುತ್ತದೆ. ಉಳಿದಂತೆ ಈ ಪ್ರಾಚೀನ ನಗರಿಯಲ್ಲಿ ಭವ್ಯ ಕಟ್ಟಡಗಳು, ಕಲಾಮಂದಿರಗಳು, ಮಾರುಕಟ್ಟೆಗಳು, ಹೋಟೆಲುಗಳು, ಸ್ನಾನಗೃಹಗಳಿದ್ದು ಅವನ್ನೆಲ್ಲ ಯಥಾವತ್ ರಕ್ಷಿಸಲು ಯತ್ನಿಸಲಾಗಿದೆ. ಪ್ರವಾಸಿಗರ ದಟ್ಟಣೆಯಿಂದ ಗತಕಾಲದ ನಗರ ಜೀವಂತವಾಗಿದೆ. ಅಲ್ಲಿನ ಕಿರುಬೀದಿಗಳಲ್ಲಿ ಅಲೆದು ಎದುರಾದ ವಿವಿಧ ಸ್ವರೂಪದ ಜನರು, ಸಂಗೀತ ಸಭೆಗಳು, ಮದುವೆಯ ಮೆರವಣಿಗೆ, ವ್ಯಾಪಾರ ವ್ಯವಹಾರ ಮುಂತಾದವುಗಳನ್ನು ವೀಕ್ಷಿಸುತ್ತಾ ಮಧ್ಯಯುಗಕ್ಕೆ ಸಂದು ನಾವು ಹೊರಬಂದಾಗ ಮುಸ್ಸಂಜೆಯಾಗಿತ್ತು.
ಹಳೆ ನಗರದ ಕೋಟೆ ಹೆಬ್ಬಾಗಿಲ ಹತ್ತಿರದಲ್ಲೇ ನಿಜಾಮೀ ರಸ್ತೆ. ಬಾಕುಗೆ ಬರುವವರೆಲ್ಲ ಒಮ್ಮೆ ಭೇಟಿ ಕೊಡಲೇಬೇಕಾದ ಮುಖ್ಯಸ್ಥಳ. ಅಝರ್‌ಬೈಜಾನ್‌ನ ಉನ್ನತಿಕೆ, ವೈಭವಗಳನ್ನು ಪ್ರದರ್ಶಿಸುವ ಇಮಾರತು, ಕಚೇರಿ, ಮಾರುಕಟ್ಟೆ, ಹೋಟೆಲ್ ಇತ್ಯಾದಿಗಳು ಇಲ್ಲಿವೆ. ರಸ್ತೆಯ ಆರಂಭ ವಿಶಾಲ, ಸುಂದರ ನಿಜಾಮೀ ವೃತ್ತದಿಂದ. ಇಲ್ಲೇ ನಿಜಾಮೀ ಸಾಹಿತ್ಯ ವಸ್ತು ಸಂಗ್ರಹಾಲಯವಿದೆ. ಅನೇಕ ಕವಿ ಕಲಾವಿದರ ಚಿತ್ರಗಳನ್ನೂ, ಮೂರ್ತಿಗಳನ್ನೂ ಹೊರಗೋಡೆಯಲ್ಲಿ ಹೊಂದಿ ಆಕರ್ಷಿಸುವ ಈ ಭವನದ ಎದುರಿನ ಎತ್ತರದ ಸ್ಥಳದಲ್ಲಿ ನಿಜಾಮೀ ಜಾಂಗ್ವಿಯ ವಿಶಿಷ್ಟ ಭಂಗಿಯ ಬೃಹತ್ ಪ್ರತಿಮೆ ಸ್ಥಾಪಿತವಾಗಿದೆ. ಕ್ರಿ.ಶ. 12 ನೇ
ಶತಮಾನದ ಪರ್ಸಿಯನ್ ದಾರ್ಶನಿಕ, ಮಹಾಕವಿ ಈ ನಿಜಾಮೀ ಜಾಂಗ್ವಿ. ಈತ ಅಝರ್‌ಬೈಜಾನ್‌ನ ರಾಷ್ಟ್ರಕವಿಯೂ ಹೌದು. ಈ ಯುಗಪುರುಷ ಇಲ್ಲಿ ಬಹು ಗೌರವವಾನ್ವಿತನಾದ್ದರಿಂದಾಗಿ, ಆತನ ಹೆಸರಲ್ಲಿ ಹತ್ತು ಹಲವು ಸ್ಮಾರಕಗಳು ಇಲ್ಲಿದ್ದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ದ್ಯೋತಕವಾಗಿವೆ.
ಮರುದಿನ ನಾವು ಕೈಗೊಂಡ ಬಾಲಾ (ಕಾಕಸಸ್) ಪರ್ವತ ಪ್ರದೇಶದ ಪ್ರವಾಸ ಈ ದೇಶದ ಭೂ ಪ್ರದೇಶದ ವಿಭಿನ್ನತೆಯನ್ನು ದರ್ಶಿಸಿತು. ನಗರ ದಾಟುತ್ತಿದ್ದಂತೆ ಮರಳುಗಾಡಿನಂತಿದ್ದ ನೆಲ ದೂರ ಹೋದಂತೆಲ್ಲ ತೆಳು ಹಸಿರಿನ ಹೊದಿಕೆಯಾಗುತ್ತ ಕ್ರಮೇಣ ಫಲವತ್ತಾದ ಕೃಷಿ ಕ್ಷೇತ್ರವಾಗಿ ಇನ್ನೂ ಮುಂದೆ ಹೋದಾಗ ಗುಡ್ಡಬೆಟ್ಟ, ದಟ್ಟ ಕಾಡಾಗುತ್ತಾ ಮಳೆಯೂ ಸುರಿದು ಮಲೆನಾಡಿನ ನಮಗೆ ಊರ ನೆನಪು ತಂದಿತು. ಗಬಾಲಾ ತಪ್ಪಲಿನ ನೋಹರ್ ಸರೋವರದ ನೋಟ, ಕಡಿದಾದ ಬೆಟ್ಟದೋರೆಯ ಕೇಬಲ್ ಕಾರ್ ಪ್ರಯಾಣ ಇಂದಿನ ನಮ್ಮ ಕಾರ್ಯಕ್ರಮಗಳಾಗಿದ್ದವು.
ಅಝರ್‌ಬೈಜಾನ್ ಅನೇಕ ಪ್ರಾಕೃತಿಕ ವಿಸ್ಮಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಯೋನಾರ್‌ದಾಗ್ ಎಂಬಲ್ಲಿ ನಾವು ಕಂಡ ನೆಲದಿಂದ ನಿರಂತರ ಬುಗಿಲೆದ್ದು ಬರುತ್ತಿರುವ ಬೆಂಕಿಯ ಜ್ವಾಲೆ ಅವುಗಳಲ್ಲೊಂದು. ಗೊಬುಸ್ತಾನ್ ಪ್ರಾಂತದ ಬೋಳು ಬೆಟ್ಟಗಳ ನೆತ್ತಿಯಲ್ಲಿನ ಅಲ್ಲಲ್ಲಿ ಕೆಸರಿನ ಬೊಬ್ಬುಳಿಗಳನ್ನು ಉಗುಳುವ ಮಣ್ಣಜ್ವಾಲಾಮುಖಿಗಳು ಇನ್ನೊಂದು.
ಇವು ಕೂಡ ಯೊನಾರ್‌ದಾಗ್ ಬೆಂಕಿಬುಗ್ಗೆಗಳಂತೆ ನೆಲದೊಳಗಿನ ಇಂಧನ ನಿಧಿಗಳ ತೋರ್ಬೆರಳುಗಳಂತೆ. ಕಡ್ಡಿ ಗೀರಿದಾಗ ಕೆಸರಿನಿಂದ ಬೆಂಕಿ ಉರಿದದ್ದು ಇದಕ್ಕೆ ಸಾಕ್ಷಿಯೊದಗಿಸಿತು. ಪ್ರಪಂಚದಲ್ಲಿರುವ ಇಂಥ ಮಣ್ಣಿನ ಜ್ವಾಲಾಮುಖಿಗಳಲ್ಲಿ ಅರ್ಧದಷ್ಟು ಇಲ್ಲೇ ಇವೆಯಂತೆ. ಇವನ್ನಲ್ಲದೆ ಈ ದೇಶದ ಉದ್ದಗಲಕ್ಕೂ ಮಾರುಮಾರಿಗೂ ಪೆಟ್ರೋಲಿಯಂ ಕಚ್ಛಾ ತೈಲ ಮೇಲೆತ್ತುವ ಏತಗಳನ್ನು ಕಂಡು, ಈ ದೇಶಕ್ಕೆ ಪ್ರಕೃತಿಯ ಈ ವರದಾನಕ್ಕಾಗಿ ಅಚ್ಚರಿ, ಅಸೂಯೆಪಡುತ್ತಾ ನಮ್ಮ ಪಯಣವನ್ನು ಮುಗಿಸಿದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.