ADVERTISEMENT

ಪ್ರವಾಸ: ಏಳು ‘ಆರ್‌’ಗಳ ಭುಜ್‌ನ ಸ್ಮೃತಿ ಭವನ

ಪ್ರಜಾವಾಣಿ ವಿಶೇಷ
Published 1 ಫೆಬ್ರುವರಿ 2026, 1:47 IST
Last Updated 1 ಫೆಬ್ರುವರಿ 2026, 1:47 IST
<div class="paragraphs"><p>ಸ್ಮೃತಿ ಭವನದ ಪಕ್ಷಿನೋಟ</p></div>

ಸ್ಮೃತಿ ಭವನದ ಪಕ್ಷಿನೋಟ

   

ಜನವರಿ 26, 2001ರ ಬೆಳಿಗ್ಗೆ ಸರಿಯಾಗಿ 8:46 ಗಂಟೆಗೆ ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮುಳುಗಿತ್ತು. ಮಕ್ಕಳು ಉತ್ಸಾಹದಿಂದ ದೇಶದ ಕುರಿತಾದ ಘೋಷಣೆಗಳನ್ನು ಕೂಗುತ್ತ ಧ್ವಜಾರೋಹಣ ಸಂಭ್ರಮದಲ್ಲಿ ಭಾಗವಹಿಸಲು ಸಾಲಾಗಿ ಬರುತ್ತಿದ್ದರು. ಜನಸಾಮಾನ್ಯರು ಅವರವರ ಕೆಲಸದಲ್ಲಿ ಮಗ್ನರಾಗಿದ್ದರು. ಆಗ ಇದ್ದಕ್ಕಿದ್ದಂತೆ ಗುಜರಾತಿನ ಭುಜ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಬರೋಬ್ಬರಿ 90 ಸೆಕೆಂಡುಗಳು ಭೂಮಿ ಕಂಪಿಸಿತು. ರಿಕ್ಟರ್ ಮಾಪನದಲ್ಲಿ 7.9 ಕಂಪನಾಂಕವನ್ನು ತೋರಿಸಲಾಗಿತ್ತು. ಏನಾಯಿತು ಎಂದು ತಿಳಿಯಲು ಕೆಲವು ಹೊತ್ತು ಬೇಕಾಯಿತು. ನೋಡು ನೋಡುತ್ತಿದ್ದಂತೆ ಅನೇಕ ಕಟ್ಟಡಗಳು ಕುಸಿದವು. ಮೊದಲಿಗೆ ಅಪಾಯ ಕಡಿಮೆ ಇರಬಹುದು ಎಂದು ಯೋಚಿಸಲಾಗಿತ್ತು. ಆದರೆ ಸತ್ತವರ ಸಂಖ್ಯೆ ಹದಿಮೂರು ಸಾವಿರದ ಆಸುಪಾಸು ಇತ್ತು. ಗಾಯಗೊಂಡವರು, ಸಂತ್ರಸ್ತರ ಸಂಖ್ಯೆ ಅಂದಾಜು ಹದಿನೈದು ಲಕ್ಷ. ಆ ದಿನಗಳನ್ನು ನೆನಪು ಮಾಡಿಕೊಂಡರೆ ಮೈ ಜುಂ ಅನ್ನುತ್ತದೆ. ಲಕ್ಷಾಂತರ ಮಂದಿ ಮನೆ ಮಠ ಕಳೆಕೊಂಡು ಬೀದಿಗೆ ಬಂದು ಬಿದ್ದದ್ದು, ಕ್ಷಣ ಮಾತ್ರದಲ್ಲಿ ಕೋಟಿಗಟ್ಟಲೆ ಇದ್ದವರು ಭಿಕ್ಷೆ ಬೇಡಬೇಕಾದ ಸ್ಥಿತಿ ತಲುಪಿದ್ದು, ಹೀಗೆ ಒಂದೇ ಎರಡೇ... ಆ ಕರಾಳ ಅನುಭವಕ್ಕೆ ಈಗ ಇಪ್ಪತ್ತೈದು ವರ್ಷಗಳು.

ಭುಜ್ ನಗರವು ಆ ಹೊಡೆತವನ್ನು ಎದುರಿಸಿ ಮತ್ತೆ ತಲೆಎತ್ತಿ ನಿಂತಿದೆ. ಅಂದಿನ ನೆನಪುಗಳು ಮತ್ತು ಅನುಭವಗಳು ಹತ್ತಾರು. ಅವುಗಳೆಲ್ಲವನ್ನೂ ಮುಂದಿನ ತಲೆಮಾರಿನವರಿಗೆ ತಿಳಿಸುವುದು ಮತ್ತು ಪ್ರಕೃತಿ ಕುರಿತಾಗಿ ಕಾಳಜಿ ಸ್ವಲ್ಪವಾದರೂ ಇರುವಂತೆ ಮಾಡಲು ಗುಜರಾತ್ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು 2022 ರಲ್ಲಿ ‘ಸ್ಮೃತಿ ಭವನ’ ಎನ್ನುವ ಭೂಕಂಪದ ಕರಾಳ ನೆನಪನ್ನು ಪರಿಚಯಿಸುವ ಮ್ಯೂಸಿಯಂ ಅನ್ನು ಸ್ಥಾಪಿಸಿದೆ.

ADVERTISEMENT

ನನ್ನ ಇತ್ತೀಚಿಗಿನ ಗುಜರಾತ್ ಪ್ರವಾಸದಲ್ಲಿ ಆ ವಸ್ತುಸಂಗ್ರಹಾಲಯವನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿತು. ನಮ್ಮ ಡ್ರೈವರ್ ‘ನೀವು ಆ ವಸ್ತುಸಂಗ್ರಹಾಲಯವನ್ನು ಖಂಡಿತವಾಗಿಯೂ ನೋಡಬೇಕು’ ಎಂದು ಹೇಳಿದಾಗ, ಅದೊಂದು ಮಾಮೂಲಿ ಮ್ಯೂಸಿಯಂ ಇರಬೇಕು ಎಂದು ಭಾವಿಸಿದ್ದೆ. ಆದರೆ ಅಲ್ಲಿಗೆ ಹೋದ ಮೇಲೆ ಅದರ ಮಹತ್ವ ಏನು ಎಂದು ತಿಳಿಯಿತು.

‘ಸ್ಮೃತಿ ಭವನ’ವು ನಗರದ ಹೊರವಲಯದಲ್ಲಿರುವ ಎತ್ತರವಾದ ಗುಡ್ಡದ ಮೇಲೆ ನಿರ್ಮಾಣವಾಗಿದೆ. ಇದರಲ್ಲಿ ಏಳು ಹಂತಗಳು ಇವೆ. ಟಿಕೆಟ್ ಪಡೆದುಕೊಂಡು ಒಳಗೆ ಹೋಗುತ್ತಿದ್ದಂತೆ ಮೊದಲ ಹಂತದಲ್ಲಿ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಪುರಾತನ ವ್ಯಾಪಾರದ ರಸ್ತೆಗಳು, ಅವುಗಳ ವಿಕಾಸ ಇತ್ಯಾದಿಗಳ ಬಗ್ಗೆ ಮಾಹಿತಿಗಳು ಸಿಗುತ್ತವೆ. ಮರುಹುಟ್ಟು (Rebirth) ಎಂದು ಇದಕ್ಕೆ ಹೆಸರು ಇಡಲಾಗಿದೆ.

ಎರಡನೆಯ ಹಂತದಲ್ಲಿ ಅಲ್ಲಾಹ್ ಬಂದ್ ಮೂಲಕ 1819 ರಲ್ಲಿ ಗುಜರಾತ್ ಎದುರಿಸಿದ ಪ್ರಾಕೃತಿಕ ಸಮಸ್ಯೆ ಹಾಗೂ ಇದರ ಪ್ರಾಕೃತಿಕ ವಿಕೋಪಗಳ ಕುರಿತಾದ ವಿವರಣೆಗಳು ಸಿಗುತ್ತವೆ. ಮರು ಅನ್ವೇಷಣೆ (Rediscover) ಎಂದು ಈ ಹಂತಕ್ಕೆ ಹೆಸರು.

ಮೂರನೆಯ ಹಂತದಲ್ಲಿ ಭೂಕಂಪ ಸಂಭವಿಸಿದ ದಿನದಂದು ಜನಸಾಮಾನ್ಯರ ದೈನಂದಿನ ಚಟುವಟಿಕೆ ಹೇಗಿತ್ತು? ಮನೆಗಳು ಯಾವ ರೀತಿ ಇದ್ದವು ಕುಸಿದಾಗ ಏನಾಯಿತು ಎನ್ನುವುದನ್ನು ಒಂದು ಮಾದರಿಯಾಗಿ ಇಟ್ಟು ತೋರಿಸಲಾಗಿದೆ. ಯಥಾ ಸ್ಥಿತಿಯ ದರ್ಶನ (Restore) ಎನ್ನುವುದು ಈ ಹಂತ.

ನಾಲ್ಕನೆಯ ಹಂತದಲ್ಲಿ ಭೂಕಂಪದ ನಂತರ ಮರು ನಿರ್ಮಾಣವನ್ನು ಹೇಗೆ ಮಾಡಲಾಯಿತು. ಲಕ್ಷಾಂತರ ಜನರಿಗೆ ಮೂಲಸೌಕರ್ಯಗಳನ್ನು ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದರ ಕುರಿತಾದ ವಿವರಗಳಿವೆ. ಮರು ನಿರ್ಮಾಣ (Rebuild) ಎನ್ನುವುದು ಈ ಹಂತಕ್ಕೆ ಇಟ್ಟ ಹೆಸರು.

ಐದನೇ ಹಂತಕ್ಕೆ ಮರುಯೋಚನೆ (Rethink) ಎಂದು ಹೆಸರಿಡಲಾಗಿದೆ. ನಡೆದ ಆಪತ್ತು ಮತ್ತೆ ಘಟಿಸದೇ ಇರಲು ಯಾವೆಲ್ಲ ಪ್ರಯತ್ನಗಳನ್ನು ಮಾಡಬೇಕು, ಒಂದೊಮ್ಮೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಹೇಗೆ ಎದುರಿಸಬೇಕು ಎಂಬುದರ ಕುರಿತಾದ ಪರಿಕಲ್ಪನೆಯ ಚಿತ್ರಣಗಳು ಇವೆ.

ಆರನೆಯ ಹಂತದಲ್ಲಿ ಭೂಕಂಪದ ಅನುಭವವನ್ನು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಅನುಭವಕ್ಕೆ ಬರುವಂತೆ ಮಾಡುವ ವ್ಯವಸ್ಥೆ ಇದೆ. 5.5 ರಿಕ್ಟರ್ ಮಾಪಕದಲ್ಲಿ ದೊಡ್ಡ ಪರದೆಯಲ್ಲಿ ಶಬ್ದ ಮತ್ತು ಚಿತ್ರಗಳ ಮೂಲಕ ಕಟ್ಟಡಗಳು ಕುಸಿಯುವುದು, ಜನರ ಆರ್ತನಾದವನ್ನು ತೋರಿಸಲಾಗುತ್ತದೆ. ನಡುವೆ ಒಂದು ವೃತ್ತಾಕಾರದ ಭೂಮಿಕೆಯಲ್ಲಿ ಒಂದು ಹಿಡಿಕೆಯನ್ನು ಮಾಡಿ ಆರಾರು ಮಂದಿ ಅದನ್ನು ಹಿಡಿದುಕೊಳ್ಳುವಂತೆ ಹೇಳಲಾಗುತ್ತದೆ. ಸುಮಾರು ಒಂದು ನಿಮಿಷ ಭೂಕಂಪದ ಅನುಭವ ಆ ವೇದಿಕೆಯಲ್ಲಿ ನಿಂತ ಪ್ರತಿಯೊಬ್ಬರಿಗೂ ಆಗುತ್ತದೆ. ಇಲ್ಲಿ ಐದು ವರ್ಷಗಳ ಕೆಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಪ್ರವೇಶವಿಲ್ಲ. ಪುನರ್ ಅನುಭವ (Relive) ಎನ್ನುವುದು ಆರನೆಯ ಹಂತದ ಹೆಸರು. ಕಡಿಮೆ ಕಂಪನದಲ್ಲಿ ನಮಗಾದ ಅನುಭವವೇ ಭಯಂಕರವಾಗಿತ್ತು. ಇನ್ನು ಹೆಚ್ಚು ಕಂಪನಾಂಕದಲ್ಲಿ ಆದಾಗಿನ ಅನುಭವ ಹೇಗೆ ಆಗಿದ್ದಿರಬಹುದು? ಎಂದು ಯೋಚಿಸಿದಾಗ ಭಯವಾಯಿತು.

ಭೂಕಂಪದ ವಿವರ ನೀಡುವ ಪ್ರದರ್ಶನಗಳು

ಏಳನೆಯ ಹಂತದಲ್ಲಿ ದುರಂತದಲ್ಲಿ ಮಡಿದವರಿಗೆ ನೊಂದವರಿಗೆ ಮೌನ ಪ್ರಾರ್ಥನೆಯ ಮೂಲಕ ಸಹಾನುಭೂತಿಯನ್ನು ವ್ಯಕ್ತಪಡಿಸುವ ವಿಭಾಗವಿದೆ. (Renew) ಇದರ ಹೆಸರು. ನೊಂದವರ ಕತೆಗಳನ್ನು ಅಲ್ಲಲ್ಲಿ ವಿಡಿಯೊ ಮಾಡಿ ಕೇಳಿಸಲಾಗುತ್ತದೆ. ಆ ಕಾಲದಲ್ಲಿ ಯುವಕರಾಗಿದ್ದವರು, ಸಣ್ಣ ಪ್ರಾಯದವರು ಅದನ್ನು ಒಂದು ದುಃಸ್ವಪ್ನದಂತೆ ವಿವರಿಸುತ್ತಾರೆ. ಅವರ ಮಾತುಗಳನ್ನು ಕೇಳಿದಾಗ ಕಣ್ಣು ಹನಿಗೂಡುತ್ತದೆ.

ಹೀಗೆ ಏಳು ಹಂತಗಳಲ್ಲಿ ಇರುವ ಮ್ಯೂಸಿಯಂ ಅನ್ನು ಸಂಪೂರ್ಣವಾಗಿ ವೀಕ್ಷಿಸಲು ಸುಮಾರು ಎರಡೂವರೆಯಿಂದ ಮೂರು ಗಂಟೆ ಬೇಕಾಗುತ್ತದೆ. ಪ್ರತಿ ಹಂತದಲ್ಲಿಯೂ ಹಿಂದಿಯಲ್ಲಿ ವಿವರಿಸುವ ವಿವರಣೆಗಾರರು ಇದ್ದಾರೆ. ಮೂರು ನಾಲ್ಕು ನಿಮಿಷಗಳ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಹಾಗಾಗಿ ಘಟನೆಗಳ ಕುರಿತು ತಿಳಿಯುವ ಉತ್ಸಾಹ ಮೂಡುತ್ತದೆ. 25 ವರ್ಷಗಳ ಹಿಂದೆ ನಡೆದ ಭಾರತದ ಕರಾಳ ದಿನವೊಂದರ ನೈಜ ಚಿತ್ರಣ ಇಲ್ಲಿ ದೊರಕುತ್ತದೆ.

ಪ್ರವೇಶ ದರ ಪ್ರತಿಯೊಬ್ಬರಿಗೆ ₹300. ಸೋಮವಾರ ರಜಾ ದಿನವಾಗಿರುತ್ತದೆ. ಗುಜರಾತ್ ಪ್ರವಾಸಕ್ಕೆ ಭುಜ್ ಕಡೆಗೆ ಹೋದವರು ಈ ವಸ್ತುಸಂಗ್ರಹಾಲಯವನ್ನು ಅನ್ನು ನೋಡದೇ ಬರಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.