ಸಾಂದರ್ಭಿಕ ಚಿತ್ರ
ಕೃಪೆ: ಎಐ
ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಹಬ್ಬದ ಈ ಸುಂದರ ಕ್ಷಣವನ್ನು ಆನಂದಿಸಲು ಸಾಲು ಸಾಲು ರಜೆಗಳು ಕೂಡ ಸಿಗಲಿದೆ. ಹಾಗಾಗಿ, ಹಬ್ಬದ ಈ ಸಂದರ್ಭದಲ್ಲಿ ಬೆಂಗಳೂರಿನ ಸಮೀಪ ಎಲ್ಲಿಯಾದರು ಪ್ರವಾಸಕ್ಕೆ ಹೋಗುವ ಯೋಜನೆ ಇದ್ದರೆ ನಿಮಗಾಗಿ ನಾವು ಕೆಲವು ಸುಂದರ ಪ್ರವಾಸಿ ಸ್ಥಳಗಳನ್ನು ಪರಿಚಯಿಸುತ್ತೇವೆ.
ನಂದಿ ಬೆಟ್ಟ:
ಬೆಂಗಳೂರಿನ ಹೊರವಲಯದಲ್ಲಿರುವ ನಂದಿಬೆಟ್ಟ 1438 ಮೀಟರ್ ಎತ್ತರದಲ್ಲಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆ ವಿಶೇಷವಾಗಿರಲಿದೆ. ಬೆಂಗಳೂರಿನಿಂದ ಒಂದು ದಿನದಲ್ಲಿ ಇಲ್ಲಿಗೆ ಹೋಗಿಬರಬಹುದು. ಇಲ್ಲಿ ಟಿಪ್ಪು ಡ್ರಾಪ್‌ನಂತಹ ಐತಿಹಾಸಿಕ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ಸೈಕ್ಲಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ನಂತಹ ಸಾಹಸಮಯ ಚಟುವಟಿಕೆಗಳನ್ನು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತವೆ.
ಕೂರ್ಗ್:
ಬೆಂಗಳೂರಿನಿಂದ 5 ಗಂಟೆಗಳ ಪ್ರಯಾಣ ಬೆಳಸಿದರೆ ಕೂರ್ಗ್ ಅನ್ನು ತಲುಪಬಹುದು. ಈ ದೀಪಾವಳಿಯ ಸಂದರ್ಭದಲ್ಲಿ ಇಲ್ಲಿನ ತಣ್ಣನೆಯ ಹಾಗೂ ಮಂಜು ಮುಸಕಿನ ವಾತಾವರಣ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ಇಲ್ಲಿನ ಮಂಜಿನ ಬೆಟ್ಟಗಳು, ಕಾಫಿ ತೋಟಗಳು ಮತ್ತು ಕೊಡವ ಸಂಸ್ಕೃತಿ ನಿಮ್ಮ ಪ್ರಯಾಣಕ್ಕೆ ಇನ್ನಷ್ಟು ಮೆರಗು ನೀಡುತ್ತದೆ.
ಕಬಿನಿ:
ಪ್ರಕೃತಿ ಸೌಂದರ್ಯದ ಜೊತೆಗೆ ವನ್ಯಜೀವಿಗಳಿಗೆ ನೆಲೆಯಾಗಿರುವ ಇದು ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ವನ್ಯಜೀವಿಗಳಿಗೆ ಆಶ್ರಯ ನೀಡಿರುವುದರಿಂದ ಸಫಾರಿ ಮೂಲಕ ಅವುಗಳನ್ನು ವೀಕ್ಷಿಸಬಹುದು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಭಾಗವಾಗಿರುವ ಇದು ಜೀಪ್ ಸಫಾರಿ, ದೋಣಿ ವಿಹಾರ ಮತ್ತು ಪಕ್ಷಿಗಳ ವೀಕ್ಷಣೆಗೆ ಅವಕಾಶಗಳನ್ನು ಒದಗಿಸುತ್ತದೆ.
ಮೈಸೂರು:
ಬೆಂಗಳೂರಿನ ಸಮೀಪದಲ್ಲಿರುವ ಮೈಸೂರು ಕನ್ನಡಿಗರ ಶ್ರೀಮಂತ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿನ ಭವ್ಯ ಮೈಸೂರು ಅರಮನೆ, ಐತಿಹಾಸಿಕ ಚಾಮುಂಡಿ ಬೆಟ್ಟ ಜೊತೆಗೆ ರೋಮಾಂಚಕ ಅನುಭವ ನೀಡುವ ಬೃಂದಾವನ. ನಗರದ ಶ್ರೀಮಂತ ಪರಂಪರೆ ಮತ್ತು ಹಬ್ಬದ ದೀಪಗಳು ನಿಮ್ಮ ದೀಪಾವಳಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತವೆ.
ಯಳಗಿರಿ:
ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಇದು ತಮಿಳುನಾಡಿನ ಪ್ರಸಿದ್ಧ ಹಾಗೂ ಸುಂದರ ಗಿರಿದಾಮಗಳಲ್ಲಿ ಒಂದಾಗಿದೆ. ಇದು ಹಚ್ಚ ಹಸಿರು ಮತ್ತು ಶಾಂತಿಯುತ ವಾತಾವರಣಕ್ಕೆ ಹೆಸರುವಾಸಿಯಾದ ಗಿರಿದಾಮವಾಗಿದೆ. ಇದು ಟ್ರೆಕ್ಕಿಂಗ್, ದೋಣಿ ವಿಹಾರ ಮತ್ತು ಪ್ರಕೃತಿಯ ಸೌಂದರ್ಯದ ನಡುವೆ ವಿಶ್ರಾಂತಿ ಪಡೆಯುವ ಅವಕಾಶವನ್ನು ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.