ADVERTISEMENT

ಫಿಲ್ಮ್‌ಸಿಟಿಯ ಚಿಟ್ಟೆ ಲೋಕ

ಮಾಲಾ ಮ ಅಕ್ಕಿಶೆಟ್ಟಿ
Published 22 ಜನವರಿ 2020, 19:30 IST
Last Updated 22 ಜನವರಿ 2020, 19:30 IST
ಚಿಟ್ಟೆ ಲೋಕ
ಚಿಟ್ಟೆ ಲೋಕ   

ಹೈದರಾಬಾದ್‌ಗೆ ಪ್ರವಾಸ ಹೋದವರು ಸಾಮಾನ್ಯವಾಗಿ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡುತ್ತಾರೆ. ಈ ಸಿಟಿಗೆ ಹೋದವರು ಸಿನಿಮಾ ಶೂಟಿಂಗ್‌ ಸೆಟ್‌ಗಳು, ತೋಟಗಳು, ಪಕ್ಷಿ ಉದ್ಯಾನ, ವಿಧ ವಿಧವಾದ ತಿನಿಸಿನ ಅಂಗಡಿಗಳು, ಮಕ್ಕಳು ಹಾಗೂ ಪೋಷಕರಿಗೆ ವೈವಿಧ್ಯಮಯ ಗೇಮ್‌ಗಳು... ಲೈವ್ ಡಾನ್ಸ್ ಪರ್ಫಾರ್ಮೆನ್ಸ್‌ನಂತಹ ಕಾರ್ಯಕ್ರಮಗಳನ್ನು ನೋಡಿ ಬರುತ್ತಾರೆ.

ಇತ್ತೀಚೆಗೆ ಫಿಲ್ಮ್‌ಸಿಟಿಗೆ ಹೋಗಿದ್ದಾಗ ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಸಿಟಿಯೊಳಗಿನ ಚಿಟ್ಟೆ ಪಾರ್ಕ್. ಈ ಪಾರ್ಕ್ ಬಗ್ಗೆ ಓದಿದ್ದೆ. ಆದರೆ, ಅಲ್ಲಿ ಏನೆಲ್ಲ ವೆರೈಟಿಯ ಚಿಟ್ಟೆಗಳಿರಬಹುದೆಂದು ಊಹಿಸಿರಲಿಲ್ಲ. ಆ ಚಿಟ್ಟೆ ಪಾರ್ಕ್‌ ಎದುರು ನಿಂತಾಗ ಬಣ್ಣ ಬಣ್ಣದ, ಬಹು ವಿನ್ಯಾಸದ ಸಾವಿರಾರು ಚಿಟ್ಟೆಗಳು ಹಾರಾಡುತ್ತಿದ್ದನ್ನು ಕಂಡು ಮೂಕ ವಿಸ್ಮಿತಳಾದೆ. ಪಾರ್ಕ್‌ ಒಳಗೆ ಬಂದವರಲ್ಲಿ ಮಕ್ಕಳಷ್ಟೇ ಅಲ್ಲ, ವಯಸ್ಕರೂ ಕುತೂಹಲದಿಂದ ನೋಡಿ, ಆನಂದಿಸಿದರು.

ವಿಶಾಲವಾದ ಪಾರ್ಕ್‌

ADVERTISEMENT

ಆ ಪಾರ್ಕ್‌ ಬಹಳ ವಿಶಾಲವಾಗಿದೆ. ಅಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ಪೂರಕವಾದ ಗಿಡ, ಮರ ಮತ್ತು ಬಳ್ಳಿಗಳನ್ನು ಬೆಳೆಸಿದ್ದಾರೆ. ಚಿಕ್ಕ ಚಿಕ್ಕ ಹೂವಿನ ಗಿಡಗಳೂ ಇವೆ. ಒಟ್ಟಿನಲ್ಲಿ ಚಿಟ್ಟೆಗಳಿಗೆ ಯಾವ ವಾತಾವರಣದ ಅವಶ್ಯಕತೆ ಇದೆಯೋ ಅಂಥ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅಲ್ಲಲ್ಲಿ ಚಿಟ್ಟೆಗಳು ಬಂದು ಹೋಗಲು ದಾರಿ ಇದೆ. ಆ ದಾರಿಯಲ್ಲಿ ಗುಂಪು ಗುಂಪಾಗಿ ಚಿಟ್ಟೆಗಳು ಹಾರಾಡುತ್ತಿದ್ದಾಗ, ಅಷ್ಟೊಂದು ಚಿಟ್ಟೆಗಳನ್ನು ಕಂಡು ಮನ ಉಲ್ಲಸಿತಗೊಂಡಿತು. ಅವು ಗಿಡ, ಹೂವು, ಬಳ್ಳಿಗಳ ಮೇಲೆ ಕೂತು ನಮಗೆಲ್ಲ ಸೌಂದರ್ಯದ ರಸವನ್ನ ಉಣಬಡಿಸುತ್ತಿದ್ದವು.

ಪಾರ್ಕ್‌ನಲ್ಲಿ ಚಿಟ್ಟೆಗಳನ್ನು ನೋಡುತ್ತಾ, ಮನಸ್ಸು ಬಾಲ್ಯದತ್ತ ಓಡಿತು. ಆಗ ಚಿಟ್ಟೆಗಳನ್ನು ಹಿಡಿಯಲು ಅವುಗಳ ಬೆನ್ನು ಹತ್ತಿ ಹೋಗು ತ್ತಿದ್ದದು ನೆನಪಾಯಿತು. ಆದರೆ, ಇಲ್ಲಿ ಯಾರೂ ಚಿಟ್ಟೆಗಳನ್ನು ಹಿಡಿಯ ಬಾರದೆಂದು ಸಣ್ಣ ಸಲಾಕೆಗಳನ್ನು ಹಾಕಿದ್ದರು.

ಮಕ್ಕಳಿಗೆ ಸಂಭ್ರಮದ ತಾಣ

ನಾನು ಭೇಟಿ ನೀಡಿದಾಗ ಉದ್ಯಾನದಲ್ಲಿ ಮಕ್ಕಳ ಸಂಖ್ಯೆಯೇ ಅಧಿಕವಾಗಿತ್ತು. ‘ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ’ ಎಂಬ ಪದ್ಯವನ್ನು ಓದಿದ್ದ ಮಕ್ಕಳಿಗೆ ನಿಜವಾಗಿ ಬಣ್ಣ ಬಣ್ಣದ ಚಿಟ್ಟೆಗಳನ್ನು ಕಂಡು ಖುಷಿಯೋ ಖುಷಿ.

ಫಿಲ್ಮ್ ಸಿಟಿಯಲ್ಲಿ ಇನ್ನೂ ನೋಡಲು ಬೇಕಾದಷ್ಟು ಸ್ಥಳಗಳಿದ್ದವು. ಆದರೂ ಮನಸ್ಸು ಮಾತ್ರ ಆ ಪಾರ್ಕ್‌ನಲ್ಲೇ ಚಿಟ್ಟೆಗಳ ಜತೆಗೆ ಹಾರಾಡುತ್ತಿತ್ತು. ಬಾಲ್ಯದಲ್ಲಿ ಚಿಟ್ಟೆ ಹಿಡಿಯಲು ಅವುಗಳ ಬೆನ್ನು ಹತ್ತುತ್ತಿದ್ದ ನಾನು, ಇಲ್ಲಿ ಚಿಟ್ಟೆಗಳ ಫೋಟೊ ತೆಗೆಯಲು ಬೆನ್ನು ಹತ್ತಿ ಹೋಗುತ್ತಿದ್ದೆ. ಅಷ್ಟೊತ್ತಿಗೆ ನನ್ನ ತಮ್ಮ ‘ಮುಂದೆ ಇನ್ನೂ ಆಕರ್ಷಕ ಸ್ಥಳಗಳಿವೆ ಬಾ ಹೋಗೋಣ’ ಎಂದಾಗ ನಾನು ಮನಸ್ಸಿಲ್ಲದೆಯೇ ಚಿಟ್ಟೆಯ ಪಾರ್ಕ್‌ನಿಂದ ಹೊರಬಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.