
ನವದೆಹಲಿ: 2025ರಲ್ಲಿ ಅತಿಹೆಚ್ಚು ವಿದೇಶಿ ಪ್ರಯಾಣ ಮಾಡಿದ ಭಾರತೀಯರಲ್ಲಿ ಮಿಲೇನಿಯಲ್ ಹಾಗೂ ಝೆನ್ ಜಿ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ವಿದೇಶಿ ಪ್ರಯಾಣ ಮಾಡಿದ 10 ಮಂದಿ ಭಾರತೀಯರಲ್ಲಿ 9 ಜನರು ಹೊಸ ತಲೆಮಾರಿನವರಾಗಿದ್ದಾರೆ ಎಂದು ಪ್ರಯಾಣ-ಬ್ಯಾಂಕಿಂಗ್ ಫಿನ್‌ಟೆಕ್ ವೇದಿಕೆ ನಿಯೋ ಸಂಸ್ಥೆಯ ವಾರ್ಷಿಕ ವರದಿಯಲ್ಲಿದೆ.
ಡಿಜಿಟಲ್ ಬಳಕೆ ಮಾಡುವ ಭಾರತದ ಯುವಜನರು ಹೆಚ್ಚಾಗಿ ಪ್ರವಾಸ ಯೋಜನೆ, ಒಂಟಿ ಪ್ರಯಾಣ ಹಾಗೂ ದುಡ್ಡು ಉಳಿತಾಯ ಮಾಡುವ ವಿದೇಶಿ ಪ್ರಯಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದೆ.
ವಿದೇಶಿ ಪ್ರಯಾಣ ಮಾಡುವ ಮೂರನೇ ಎರಡು ಭಾಗ ಯುವಜನರು ಮೆಟ್ರೊ ನಗರಗಳಿಂದ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ದೆಹಲಿ, ಬೆಂಗಳೂರು ಹಾಗೂ ಮುಂಬೈಗಳಿಂದ ಪ್ರಯಾಣಿಸುತ್ತಾರೆ ಎಂದು ಮಾಹಿತಿ ನೀಡಿದೆ.
ಭಾರತದ ಯುವ ಜನರಲ್ಲಿ ಒಂಟಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶೇ 63.8 ಒಂಟಿ ಪ್ರವಾಸಗಳಾಗಿದ್ದರೆ, ಶೇ 19.93 ದಂಪತಿ, ಶೇ.12.26 ಕುಟುಂಬಗಳು ಹಾಗೂ ಶೇ 4.01 ಜನರು ಗುಂಪಿನಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂಟಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿದೆ.
ಭಾರತೀಯ ಪ್ರವಾಸಿಗರು ಹೆಚ್ಚಾಗಿ ವಿದೇಶಿ ಪ್ರವಾಸವನ್ನು ಏಷ್ಯಾದ ರಾಷ್ಟ್ರಗಳಿಗೆ ಕೈಗೊಳ್ಳುತ್ತಿದ್ದಾರೆ. ಶೇ 23.08 ಜನರು ಥಾಂಯ್ಲೆಂಡ್, ಶೇ 21.57 ಜನರು ಯುಎಇ, ಶೇ 9.65 ಪ್ರವಾಸಿಗರು ಜಾರ್ಜಿಯಾ, ಶೇ 8.89 ಮಂದಿ ಮಲೇಷ್ಯಾ, ಶೇ 8.8 ಜನರು ಫಿಲಿಫೈನ್ಸ್, ಶೇ.7.38 ಪ್ರವಾಸಿಗರು ಕಜಕಸ್ತಾನ, ಶೇ 5.87 ಜನರು ವಿಯೆಟ್ನಾಂ, ಶೇ 5.6 ಮಂದಿ ಉಜ್ಬೇಕಿಸ್ತಾನ, ಶೇ 5.38 ಜನರು ಯುನೈಟೆಡ್ ಕಿಂಗ್‌ಡಂ ಹಾಗೂ ಶೇ 3.78 ಜನರು ಸಿಂಗಪುರಕ್ಕೆ ಪ್ರವಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.
ವಿದೇಶಿ ಪ್ರವಾಸ ಮಾಡುತ್ತಿರುವ ಹತ್ತು ಲಕ್ಷ ಭಾರತೀಯರನ್ನು ಅಧ್ಯಯನ ಮಾಡಿ, ಈ ವರದಿ ತಯಾರಿಸಲಾಗಿದೆ ಎಂದು ನಿಯೋ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.