
ಭೂಗೋಳಶಾಸ್ತ್ರ ಮೇಷ್ಟ್ರು ವೃತ್ತಿಯಿಂದ ನಿವೃತ್ತನಾದ ಮೇಲೆ ‘ಅರೌಂಡ್ ದಿ ಗ್ಲೋಬ್’ ಕನಸು ಹೊತ್ತು ತಿರುಗಾಟ ಆರಂಭಿಸಿದೆ. ಪ್ರವಾಸಕ್ಕೆಂದೇ ಪ್ರತ್ಯೇಕ ಬಜೆಟ್, ಕ್ಯಾಮೆರಾ ಜೋಡಿಸಿಟ್ಟುಕೊಂಡೆ. ಜಗತ್ತಿನ 35 ದೇಶಗಳ ಪರ್ಯಟನೆ ಮಾಡಿದ ನನಗೆ ಕಜಾಕಸ್ತಾನ ನೋಡುವ ಆಸೆ ಇತ್ತು. ಒಮ್ಮೆ ಯೂಟ್ಯೂಬ್ ಜಾಹೀರಾತು ನೋಡುತ್ತಿದ್ದಾಗ ವೀಸಾ ಬೇಕಿಲ್ಲ, ಕಡಿಮೆ ಖರ್ಚು, ಅದ್ಭುತ ಲ್ಯಾಂಡ್ ಸ್ಕೇಪ್ ಎನ್ನುವ ಮಾತು ಅಲ್ಲಿಗೆ ಹೊರಡಲು ಪ್ರೇರಣೆ ಆಯಿತು. ‘ಲ್ಯಾಂಡ್ ಲಾಕ್’ ಆದ ಕೇಂದ್ರ ಏಷ್ಯಾದ ದೇಶದಲ್ಲಿ 48,000 ಸರೋವರ, 8,500 ನದಿಗಳು ಹಾಗೂ 2,724 ಹಿಮಗಿರಿಗಳಿವೆ ಎಂದಾಗ ಕುತೂಹಲ ಹೆಚ್ಚಾಯಿತು.
ಮೊದಲು ಪ್ರಯಾಣ ಶುರುವಾಗಿದ್ದು ಚರ್ಯನ್ ಕಣಿವೆಗೆ. ಚುರು ಚುರು ಬಿಸಿಲಿದ್ದರೂ ಚೇತೋಹಾರಿ ಹವಾಗುಣ. ನೋಡಿದ ಕಡೆ ವಿಶಾಲ ಸ್ಟೆಪ್ಪೆ ಹುಲ್ಲುಗಾವಲು, ಕುದುರೆಗಳ ಗುಂಪು, ಅಪರೂಪಕ್ಕೆ ಬಾರ್ಲಿ, ಗೋಧಿ, ಮೆಕ್ಕೆಜೋಳದ ಹೊಲ. ಎಲ್ಲಿಯೂ ತಿರುಗಾಡುವ ಒಂದು ನರಪಿಳ್ಳೆಯೂ ಕಾಣಿಸುತ್ತಿರಲಿಲ್ಲ. ಒಮ್ಮೊಮ್ಮೆ ಹೋಗುವ ದಾರಿ ಅಜ್ಞಾತವೆನಿಸುತ್ತಿತ್ತು. ಕೆಲವು ಹಳ್ಳಿಗಳು ದಾರಿಯಲ್ಲಿ ಸಿಕ್ಕವು. ಕೆಲವು ಕಡೆ ಹಣ್ಣು ತರಕಾರಿಗಳ ರಾಶಿ. ಸತತ ಮೂರು ಗಂಟೆ ಪ್ರಯಾಣದ ನಂತರ ಚರ್ಯನ್ ಕಣಿವೆ ಹತ್ತು ಕಿಲೋಮೀಟರ್ ಎಂದು ಸಾರುವ ಬೋರ್ಡ್ ಕಾಣಿಸಿತು. ಕೇವಲ ಹತ್ತೇ ನಿಮಿಷದಲ್ಲಿ ಅಲ್ಲಿದ್ದೆವು. ತಲಾ 3000 ಟೆಂಗೆ ನೀಡಿ (₹1000) ಟಿಕೆಟ್ ಖರೀದಿಸಿ, ಕಣಿವೆಯ ಮೆಟ್ಟಿಲು ಇಳಿದು ಹೊರಟೆವು. ನೆತ್ತಿಯ ಮೇಲೆ ಸೂರ್ಯ ಪ್ರಖರವಾಗಿದ್ದ.
ಚರ್ಯನ್ ಕಣಿವೆಗೆ ಶರ‍್ಯನ್ ಎಂದು ಕರೆಯುತ್ತಾರೆ. ಇದು ಚರ್ಯನ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಚರ್ಯನ್ ಕಣಿವೆಯಲ್ಲಿ ಚರ್ಯನ್ ನದಿ ಹರಿಯುತ್ತದೆ. ಅದು ಟಿಯಾನ್ ಶ್ಯಾನ್ ಪರ್ವತದಲ್ಲಿ ಹುಟ್ಟಿ 393 ಕಿಲೋಮೀಟರ್ ಹರಿಯುತ್ತದೆ. ಆದರೆ, ಚರ್ಯನ್ ಕಣಿವೆಯು ಮಾತ್ರ 80 ಕಿಲೋಮೀಟರ್ ಉದ್ದವಿದ್ದು, ಅದರ ಸವಕಳಿಗೊಂಡ ಬಾಹುಗಳು 150 ರಿಂದ 300 ಮೀಟರ್ ಎತ್ತರವಾಗಿದೆ. ಎಲ್ಲಾ ದೃಷ್ಟಿಯಿಂದ ಚರ್ಯನ್ ಕಣಿವೆ ಅಮೆರಿಕದ ಗ್ರ್ಯಾಂಡ್ ಕೆನಾನ್‌ಗೆ ಹೋಲುವುದರಿಂದ ಇದು ಕಜಾಕಸ್ತಾನದ ಗ್ರ್ಯಾಂಡ್ ಕೆನಾನ್ ಎನಿಸಿಕೊಂಡಿದೆ. ಟರ್ಕಿಶ್ ಭಾಷೆಯಲ್ಲಿ ಚರ್ಯನ್ ಎಂದರೆ ಕ್ಲಿಫ್ ಎಂದರ್ಥ. ಚಾರಣ ಮಾಡುತ್ತ ಕಣವೆಯಲ್ಲಿ ಹೊರಟಾಗ ಗೋಡೆಗಳು ಕೊರೆದು, ಕೆತ್ತಿ ನಿಲ್ಲಿಸಿದಂಥ ಚಿತ್ರ-ವಿಚಿತ್ರ ವಿನ್ಯಾಸಗಳಿಂದ ಕಂಗೊಳಿಸಿದ್ದವು. ಕೆಂಪು, ಹಳದಿ ಮಿಶ್ರಣದ ಶಿಖರ, ಗೋಪುರ, ಕೊಂಬು, ಕಹಳೆ, ಅಣಬೆ ಮತ್ತು ಸುರುಳಿ ಹೊಳೆಗೆಯಂಥ ಜಟಿಲ ರೂಪದಲ್ಲಿ ಆಕರ್ಷಕವಾಗಿದ್ದವು. ನಮ್ಮ ಬಾದಾಮಿ, ಗುಹಾ ದೇವಾಲಯದ ಶಿಲ್ಪ ಕಲಾಕೃತಿಗಳನ್ನು ಅವು ಹೋಲುತ್ತಿದ್ದವು. ಅವು ಕೆಂಪು ಕಣಶಿಲೆಗಳಲ್ಲಿ ಒಡಮೂಡಿದಂಥವು. ಗಾಳಿ, ಮಳೆ, ಬಿಸಿಲು ಮತ್ತು ನದಿಯ ಶಿಥಿಲೀಕರಣದಿಂದ ಲಕ್ಷಾಂತರ ವರ್ಷಗಳಲ್ಲಿ ರೂಪುಗೊಂಡಂಥವು.
ಕೆಂಪು ಬಣ್ಣದ ಕಣಿವೆ (Red Canyon), ಹಳದಿ ಬಣ್ಣದ ಕಣಿವೆ (Yellow Canyon), ಕಪ್ಪು ಬಣ್ಣದ ಕಣಿವೆ (Black Canyon), ಚಂದ್ರನಾಕಾರ ಕಣಿವೆ (Moon Canyon) ಹಾಗೂ ಟಿಮಿರ್ಲಿಕ್ ಕಣಿವೆ, ಬಿಷ್ಟಮಾರ್ಕ್ ಹೀಗೆ ನಾನಾ ನಮೂನೆಯ ಚಿಕ್ಕ-ದೊಡ್ಡ ಕಣಿವೆಗಳು ಗಮನ ಸೆಳೆಯುತ್ತವೆ. 20 ಕಿಲೋಮೀಟರ್ ದೂರದಲ್ಲಿ ಕಣಿವೆಯ ನೆರಳಿನಲ್ಲಿ ಸೊಗಾಡಿಯನ್ ಆ್ಯಷ್ ಎಂಬ ರೆಲಿಕ್ ಅರಣ್ಯವಿದೆ. ಅಲ್ಲಿ ವಿಲ್ಲೋ ಮರ, ಪಾಪ್ಲರ್ ಮರ, ಬಾರ್ಬೆರಿಯನ್ ಮರ ಹಾಗೂ ಬೂದಿ ಮರಗಳು ವಿಶಿಷ್ಟವಾಗಿವೆ. ಎಲ್ಲವೂ ನೆರಳಿನಲ್ಲಿ ಹಿಮಯುಗದ ಪಳೆಯುಳಿಕೆಯಂತೆ ರೆಂಬೆ-ಕೊಂಬೆ ಕಳೆದುಕೊಂಡು ನಿಂತಿವೆ. ಕೆಲವು ಕಡೆ ಬಿಸಿನೀರಿನ ಬುಗ್ಗೆಗಳಿವೆ. ಹೀಗೆ ಚರ್ಯನ್ ಕಣಿವೆಯನ್ನು ದಿನಗಟ್ಟಲೆ ನೋಡಬಹುದು. ನಾವು ಮಾತ್ರ ಮೂರ್ನಾಲ್ಕು ಗಂಟೆ ಕಳೆದು ಚರ್ಯನ್ ನದಿಯ ಸಖ್ಯವನ್ನು ಸವಿದು ನೂರು ಕಿಲೋಮೀಟರ್ ದೂರದ ಸತಿ ಗ್ರಾಮಕ್ಕೆ ತೆರಳಿದೆವು.
ಚಿಲಿಕ್ ನದಿ ದಡದ ಹಸಿರು ಬೆಟ್ಟ ಶ್ರೇಣಿಗಳ ಪುಟ್ಟ ಊರೇ ಸತಿ. ಹತ್ತಿರದ ಸರೋವರಕ್ಕೆ ಭೇಟಿ ನೀಡುವವರು ಇಲ್ಲಿ ಒಂದು ರಾತ್ರಿ ತಂಗುತ್ತಾರೆ. ನಾವೂ ತಂಗಿದ್ದೆವು. ವಿಶೇಷವೆಂದರೆ ಇಲ್ಲಿ ಎಲ್ಲಾ ಕಡೆ ಕುದುರೆ ಮಾಂಸದ ಖಾದ್ಯ ಸಿಗುತ್ತದೆ. ಅದಕ್ಕೆ ಹೆದರಿ ನಾವು ‘ರೆಡಿ ಟು ಈಟ್’ ತಯಾರಿಸಿಕೊಳ್ಳುತ್ತಿದ್ದೆವು. ಬಗೆಬಗೆಯ ಹಣ್ಣು ಎಲ್ಲಾ ಕಡೆ ಸಿಗುತ್ತಿದ್ದರಿಂದ ಅವುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಸತಿಯಿಂದ ಗುರ್ಮಿಟ್ ಕಣಿವೆ ದಾಟಿದಾಗ ಪ್ರವೇಶದ್ವಾರದಲ್ಲಿ ಶುಲ್ಕ ಪಾವತಿಸಿ ಏರು ಇಳಿವುಗಳ ಕಣಿವೆ ದಾರಿಯಲ್ಲಿ ಸಾಗಿದೆವು. ಎಲ್ಲಾ ಕಡೆ ಸ್ವಚ್ಛತೆ ಎದ್ದು ಕಾಣುತ್ತಿತ್ತು. ಕಜಾಕಸ್ತಾನದ ಸ್ವಿಸ್ ಸರೋವರವೆಂದೇ ಹೆಸರಾದ ಕೋಲ್ಸೆ ಸರೋವರದ ರಾಷ್ಟ್ರೀಯ ಉದ್ಯಾನವದು. ವಿಶ್ವ ಪಾರಂಪರಿಕ ತಾಣವೂ ಹೌದು. ಹಾಗಾಗಿ ಎಲ್ಲಾ ಕಡೆ ಬಿಗಿ ಭದ್ರತೆ, ಪೊಲೀಸ್ ಪಹರೆ, ರಕ್ಷಣೆ, ಶಿಸ್ತು ಎದ್ದು ಕಾಣುತ್ತಿದ್ದವು. ಕೊಲ್ಸೆ ಸರೋವರ ಹಸಿರು ಪರಿಸರದ ನಡುವೆ ಮುಕುಟಮಣಿಯಂತೆ ಶೋಭಿಸುತ್ತಿತ್ತು.
ಕೊಲ್ಸೆ ಸರೋವರ ಟಿಯಾನ್ ಶ್ಯಾನ್ ಪರ್ವತದ ಹವಳ. ಏಕೆಂದರೆ ಕೊಲ್ಸೆ ನದಿ ಟಿಯಾನ್ ಶ್ಯಾನ್ ಪರ್ವತದ ಹಿಮದ ಗುಹೆಯಲ್ಲಿ ಹುಟ್ಟಿ ಹರಿದು ಬರುತ್ತದೆ. ಹಸಿರು ನೀಲಿ ಮಿಶ್ರಣದ ಸರೋವರ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಸರೋವರ ಎಂದೂ ಬತ್ತುವುದಿಲ್ಲ. ನೀರು ಹಳ್ಳವಾಗಿ ಮುಂದೆ ಹರಿದು ಹೋಗುವುದರಿಂದ ಅದು ಶುದ್ಧವಾಗಿ ಗಮನ ಸೆಳೆಯುತ್ತದೆ. ಕಣಿವೆಯ ದಡ ಮುಟ್ಟಲು ಮೆಟ್ಟಿಲುಗಳಿವೆ. ಸರೋವರದ ಸುತ್ತ ಚಾರಣ ಮಾಡಲು, ಕುದುರೆ ಸವಾರಿ ಮಾಡಲು ವ್ಯವಸ್ಥಿತ ದಾರಿಗಳಿವೆ. ಒಂದು ಕಿಲೋಮೀಟರ್ ಉದ್ದ, ಅರ್ಧ ಕಿಲೋಮೀಟರ್ ಅಗಲ ಹಾಗೂ 80 ಮೀಟರ್ ಆಳದ ಕೊಲ್ಸೆ ಸರೋವರ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ಬೋಟಿಂಗ್, ಕಯಾಕಿಂಗ್ ಅಲ್ಲಿಯ ವಿಶಿಷ್ಟ ಅನುಭವಗಳು. ಶಂಕುಧಾರಿ ವೃಕ್ಷಗಳ ಹಿನ್ನೆಲೆಯಿಂದ ಕೂಡಿದ ಕೊಲ್ಸೆ ಸರೋವರದಿಂದ ಕಿರ್ಗಿಸ್ತಾನ ಗಡಿ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಇಲ್ಲಿಗೆ ಕಾಲಿಟ್ಟರೆ ಕೊಲ್ಸೆ ಸರೋವರ ಹೆಪ್ಪುಗಟ್ಟಿದ ಸ್ಕೇಟಿಂಗ್ ಕ್ರೀಡಾಂಗಣವಾಗಿರುತ್ತದೆ.
ನಾವು ನೋಡಲು ಹೊರಟ ಮತ್ತೊಂದು ಸರೋವರ ಕೇಂಡಿ. ಕಜಕ್ ಭಾಷೆಯಲ್ಲಿ ಕೇಂಡಿ ಎಂದರೆ ಭೂ ಕುಸಿತ. 1911ರಲ್ಲಿ ಕೆಬಿನ್ ಎಂಬ ಭೂಕಂಪ ಸಂಭವಿಸಿ, ಕಾಡಿನ ನಡುವೆ ಬೋಗುಣಿಯಂಥ ಸರೋವರ ಸೃಷ್ಟಿಯಾಯಿತು. ಕಾಲಕ್ರಮೇಣ ಅದುವೇ ಮಳೆನೀರಿನಿಂದ ತುಂಬಿಕೊಂಡ ಕೇಂಡಿ ಸರೋವರ. ಸತಿ ಹಳ್ಳಿಯ ಪಶ್ಚಿಮದಲ್ಲಿ ಕೋಲ್ಸೆ ಸರೋವರವಿದ್ದರೆ, ಪೂರ್ವದಲ್ಲಿ ಕೇಂಡಿ ಸರೋವರವಿದೆ. ಸತಿಯಿಂದ ಒಂದು ಕಿಲೋಮೀಟರ್ ಬೆಟ್ಟ ಹತ್ತಿ ಕೆಳಗಿಳಿದರೆ ಸುಂದರ ಕೇಂಡಿ ಕಣಿವೆ ಕಾಣಿಸುತ್ತದೆ. ಕಲ್ಲು, ಮಣ್ಣು, ಕೆಸರು, ಗುಂಡಿ, ಗುದುಕಲ, ಹಳ್ಳಕೊಳ್ಳದ ಕೊರಕಲಿನ ದಾರಿಯಂತೂ ಪಯಣಿಸಲು ಹೈರಾಣ ಮಾಡುತ್ತದೆ. ಸಾಗುವಾಗ ಕೆಳಗೆ ಬೀಳುತ್ತೇವೆಯೋ ಎಂಬ ಭಯ. ಅಲ್ಲಿ ಖಾಸಗಿ ವಾಹನಗಳಿಗೆ ಮಾತ್ರ ಪ್ರವೇಶ. ಅಲ್ಲಿ ಪ್ರವೇಶ ಶುಲ್ಕ ನೀಡಿದರೆ ಮೊದಲ ನಿಲ್ದಾಣಕ್ಕೆ ಹೋಗಿ ವಾಪಸ್ ಬರಬಹುದು. ಅಲ್ಲಿಗೆ ತೆರಳಿದಾಗ ಮಟಮಟ ಮಧ್ಯಾಹ್ನ ಒಂದು ಗಂಟೆ. ಮೊದಲ ನಿಲ್ದಾಣದಲ್ಲಿ ಇಳಿದು ನಾವು ಚಾರಣ ಮಾಡಿದೆವು.
ಕಿರಿದಾದ ಕಾಡಿನ ದಾರಿ ನದಿಯ ದಡದುದ್ದಕ್ಕೂ ಅನನ್ಯ ಅನುಭವ ನೀಡಿತ್ತು. ಜೊತೆಗೆ ಚಾರಣಿಗರೂ ಇದ್ದುದರಿಂದ ಯಾವುದೇ ಭಯವಿರಲಿಲ್ಲ. ಅದೊಂದು ಪರಿಶುದ್ಧ ನೀರಿನ ದರ್ಪಣ ಸರೋವರ. ನೀರಿನಲ್ಲಿ ನೂರು ವರ್ಷಗಳ ಹಿಂದೆ ಮುಳುಗಿ ಹೋದ ಸ್ಪ್ರೂಸ್ ಮರಗಳ ಬೆಳ್ಳನೆಯ ಕಾಂಡಗಳು ಆಕರ್ಷಕವಾಗಿದ್ದವು. ಸುತ್ತಲೂ ಸ್ಪ್ರೂಸ್ ಶಂಕಧಾರಿ ವೃಕ್ಷಗಳು ಹಚ್ಚಹಸಿರಾಗಿ ಮೆರಗು ನೀಡಿದ್ದವು. ಬಿಸಿಲಿನ ಪ್ರಖರತೆಗೆ ನೀರು ಹಸಿರು, ನೀಲಿ, ಬೂದು ಬಣ್ಣದಲ್ಲಿ ಕ್ಷಣಕ್ಷಣವೂ ಬದಲಾಗುತ್ತಿತ್ತು. ಸರೋವರದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು ಅನನ್ಯ ಅನುಭವ. ಸ್ಥಳೀಯರಿಗೆ ಇದೊಂದು ಭೂತ ಸರೋವರ. ಜಗತ್ತಿನಲ್ಲಿ ಮುಳುಗಿದ ಕಾಡುಗಳ ಸುಣ್ಣದ ಕಲ್ಲಿನ ನೀರಿನ ಸರೋವರಗಳು ಅಪರೂಪ. ಅಂಥದ್ದೊಂದು ಸರೋವರವನ್ನು ನೋಡಿದ್ದು ಹೆಮ್ಮೆಯ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.