ADVERTISEMENT

ಕುಂದಾದ್ರಿ ಕಂಡಾಗ...

ಸತ್ಯ ಹರಿಹರಪುರ
Published 23 ಜನವರಿ 2019, 19:30 IST
Last Updated 23 ಜನವರಿ 2019, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ದೀಪಾವಳಿ ದಿನ ಮಧ್ಯಾಹ್ನ, ಗೆಳೆಯರೆಲ್ಲಾ ಕೂಡಿ ಕುಂದಾದ್ರಿ ಪರ್ವತಕ್ಕೆ ಚಿಕ್ಕದೊಂದು ಟ್ರಿಪ್ ಹೋಗೋಣ ಎಂದು ತೀರ್ಮಾನಿಸಿದೆವು.

ಕುಂದಾದ್ರಿ ಪರ್ವತ ಶಿವಮೊಗ್ಗ ಜಿಲ್ಲೆಗೆ ಸೇರಿದೆ. ಆದರೆ, ನಮ್ಮೂರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹರಿಪುರದಿಂದ ತುಸು ಸಮೀಪದಲ್ಲಿದೆ. ಹರಿಪುರದಿಂದ ಕುಂದಾದ್ರಿ ಕಡೆಗೆ ಪ್ರಯಾಣ ಆರಂಭಿಸಿದೆವು. ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಕುಂದಾದ್ರಿಯ ನೆತ್ತಿಯ ಮೇಲಿರಬೇಕು ಎಂಬುದು ನಮ್ಮ ಗುರಿಯಾಗಿತ್ತು.

ಕುಂದಾದ್ರಿಯನ್ನು ಹತ್ತುವುದಕ್ಕೂ ಮುನ್ನ ಬೆಟ್ಟದ ತಟದಲ್ಲಿ ಒಂದು ಚಹಾ ಅಂಗಡಿ ಇತ್ತು. ಅಲ್ಲಿ ಚಹಾ ಕುಡಿದು ಮೇಲೆ ಏರಲು ಶುರು ಮಾಡಿದೆವು. ನಾವು ಮೇಲಕ್ಕೆ ಹೋದಂತೆ ಸಾಲುಗಟ್ಟಿ ನಿಂತ ಹಸಿರು ನಿಮ್ಮನ್ನು ಸ್ವಾಗತಿಸಿದವು. ಬೆಟ್ಟ ಹತ್ತಲು ಸೂಕ್ತ ವ್ಯವಸ್ಥೆಗಳಿದ್ದಿದ್ದರಿಂದ, ಸುಲಭವಾಗಿ ಬೆಟ್ಟ ಏರಿ ನಿಂತೆವು.

ADVERTISEMENT

ಸಮುದ್ರ ಮಟ್ಟದಿಂದ 826 ಮೀಟರ್ ಎತ್ತರ ಇರುವ ಕುಂದಾದ್ರಿ ಮೇಲೆ ನಿಂತು ಆಕಾಶ ನೋಡುತ್ತ ಮೈ ಮರೆತಾಗ ತಂಪಾದ ಗಾಳಿ ಬೀಸಿ, ಹಿತವೆನಿಸಿತು. ಹೊಸದೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ದಂತೆ ಭಾಸವಾಯಿತು.

ಪರ್ವತದ ತುದಿಯಲ್ಲಿ ಜೈನ ಬಸದಿ ಇದೆ. ಅದನ್ನು ನೋಡಲು ಮೆಟ್ಟಿಲುಗಳನ್ನು ಏರಬೇಕು. ಮೆಟ್ಟಿಲನ್ನು ಹತ್ತಿದ ನಂತರ ನಮ್ಮ ಬಲ‌ ಭಾಗಕ್ಕೆ ಬಸದಿ ಕಂಡಿತು. ಅದಕ್ಕೆ ತಾಗಿಕೊಂಡೇ ಒಂದು ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಕೊಳವೂ ಇತ್ತು. ಎಡಕ್ಕೆ ಸಾಗಿದಾಗ, ಮತ್ತೊಂದು ಕೊಳ ಕಂಡಿತು.

2 ಸಾವಿರ ವರ್ಷಗಳ ಹಿಂದೆ ಕುಂದಕುಂದ ಎಂಬ ಜೈನ ಆಚಾರ್ಯರು ಇಲ್ಲಿ ನೆಲೆಸಿದ್ದರು. ನಂತರ 17 ನೇ ಶತಮಾನದಲ್ಲಿ ಬಸದಿ ನಿರ್ಮಾಣಗೊಂಡಿತು ಎಂಬ ಪ್ರತೀತಿ ಇದೆ. ಇಲ್ಲಿ ಮೂರು ಅಡಿ ಎತ್ತರದ ಗರ್ಭಗುಡಿ ಇದೆ. ಗುಡಿ ಚಿಕ್ಕದಿರುವುದರಿಂದ ಅದರೊಳಗೆ ಬೆಳಕು ಬೀಳುವುದಿಲ್ಲ. ಗುಡಿಯಲ್ಲಿ ಜೈನರ 23 ನೆಯ ತೀರ್ಥಂಕರ ಪಾರ್ಶನಾಥರ ಮೂರ್ತಿ ಇದೆ. ಇಷ್ಟೆಲ್ಲಾ ಇತಿಹಾಸವನ್ನು ಅಲ್ಲಿರುವ ಪುರೋಹಿತರೇ ತಿಳಿಸುತ್ತಾರೆ.

ಆಗುಂಬೆಗೆ ಭೇಟಿ ನೀಡಿದ ಪ್ರವಾಸಿಗರು ಸನಿಹದಲ್ಲಿರುವ ಕುಂದಾದ್ರಿಗೂ ಬರುತ್ತಾರೆ. ನಾವು ಹೋದಾಗ, ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹೀಗಾಗಿ ಸ್ಥಳೀಯ ಆಡಳಿತ ಮಂಡಳಿ ರಕ್ಷಣೆಗಾಗಿ ಸುತ್ತಲೂ ಏಳು ಅಡಿ ಎತ್ತರದ ಮೆಷ್‌ನ ಬೇಲಿ ಹಾಕಿದೆ‌.

ಕುಂದಾದ್ರಿಯ ಮೇಲೆ ನಿಂತು ಕೆಳಗಿರುವ ಗದ್ದೆ ಬಯಲು, ಕಾಡು ಗಿಡ ಮರ ಬಳ್ಳಿ, ರಸ್ತೆ, ಕಟ್ಟಡ ಸೇತುವೆ ನೋಡುವುದೇ ಒಂದು ಸೊಬಗು. ಎಲ್ಲವೂ ಆ ಪ್ರಕೃತಿ ಮಾತೆಯ ಮಡಿಲಿನಲ್ಲಿ ತೂಗುವ ಮಕ್ಕಳಂತೆ ಚಿಕ್ಕದಾಗಿ ಚೊಕ್ಕದಾಗಿ ಕಾಣಿಸಿದವು.

ಇಂಥ ಅಪರೂಪದ ಪ್ರಕೃತಿ ಸೌಂದರ್ಯದ ಮನಮೋಹಕ ತಾಣವನ್ನು ಎಲ್ಲರೂ ಒಮ್ಮೆ ನೋಡಲೇಬೇಕು.

**

ಹೋಗುವುದು ಹೇಗೆ?

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕು ಕೊಪ್ಪದಿಂದ ಕುಂದಾದ್ರಿ ಬೆಟ್ಟ 50 ಕಿ.ಮೀ ದೂರವಿದೆ.

ಶಿವಮೊಗ್ಗದಿಂದ ಹೋಗುವವರು ತೀರ್ಥಹಳ್ಳಿ–ಆಗುಂಬೆ ರಸ್ತೆಯಲ್ಲಿ ಗುಡ್ಡೆಕೇರಿ ಗ್ರಾಮದಿಂದ 9 ಕಿ.ಮೀ ದೂರ ಸಾಗಬೇಕು. ಶಿವಮೊಗ್ಗದಿಂದ 80 ಕಿ.ಮೀ ದೂರವಾಗುತ್ತದೆ.

ಬೆಟ್ಟವನ್ನು ತಲುಪಲು ಡಾಂಬಾರು ರಸ್ತೆಯಿದೆ. ನಡೆದು ಹೋಗಲು ಕಾಲು ದಾರಿಯೂ ಇದೆ. ಚಾರಣ ಮಾಡಲು ಉತ್ತಮವಾದ ತಾಣ. ಬೆಟ್ಟದ ಮೇಲೆ ಅಂಗಡಿಗಳಿಲ್ಲ. ಹೀಗಾಗಿ ಇಲ್ಲಿಗೆ ಬರುವವರು ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿಕೊಂಡು ಬರಬೇಕು. ತೀರ್ಥಹಳ್ಳಿ ಅಥವಾ ಆಗುಂಬೆಯಲ್ಲಿ ತಂಗುವ ವ್ಯವಸ್ಥೆ ಮಾಡಿಕೊಂಡು ಕುಂದಾದ್ರಿ ಬೆಟ್ಟ ಹತ್ತಬಹುದು. ಇದು ಜಿಲ್ಲಾ ಕೇಂದ್ರದಿಂದ ಒಂದು ದಿನದ ಪ್ರವಾಸಕ್ಕೆ ಹೋಗಬಹುದಾದ ಪ್ರವಾಸಿ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.