ADVERTISEMENT

ಮಿನ್ನೆಹಹ ಜಲಪಾತದ ಸೊಬಗು

ರುಕ್ಮಿಣಿಮಾಲಾ
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
ಮಿನ್ನೆಹಹ ಪಾಲ್ಸ್
ಮಿನ್ನೆಹಹ ಪಾಲ್ಸ್   

ಕಳೆದ ಸಲ ಅಮೆರಿಕ ಪಯಣ ಸಂದರ್ಭದಲ್ಲಿ ಮಿನ್ನೆಸೋಟ ರಾಜ್ಯದ ಮಿನಿಯಾಪೊಲೀಸ್ ಜಿಲ್ಲೆಯಲ್ಲಿರುವ ಮಿನ್ನೆಹಹ (Minnehaha falls ) ಜಲಪಾತ ನೋಡಲು ಹೋಗಿದ್ದೆವು. ನನ್ನ ತಂಗಿ ಮಗ ಶಶಾಂಕ ಮಿನ್ನೆಸೋಟ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದು, ಮಿನಿಯಾಪೊಲೀಸ್‌ನಲ್ಲಿ ಮನೆ ಮಾಡಿದ್ದ. ಅವನ ಮಾರ್ಗದರ್ಶನದಲ್ಲಿ ಮಗಳು ಅಕ್ಷರಿ ಅಳಿಯ ಮಹೇಶನ ಸಾರಥ್ಯದಲ್ಲಿ ನಾನು ಹಾಗೂ ಅನಂತ ಜತೆಗೂಡಿ ಮಿನ್ನೆಹಹ ಪಾರ್ಕ್‌ಗೆ ಹೋದೆವು.

ಶಶಾಂಕನ ಮನೆಯಿಂದ 20 ನಿಮಿಷದ ದಾರಿ. ಮಿನ್ನೆಹಹ ಪಾರ್ಕ್ 170 ಎಕರೆ ಪ್ರದೇಶದಲ್ಲಿದೆ. ಅಲ್ಲಿ ಜಲಪಾತವಿದೆ. ಅದಕ್ಕೆ ಮಿನ್ನೆಹಹ ಹೆಸರು. 1849ರಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿದೆ.. ಮಿಸ್ಸಿಸಿಪ್ಪಿ ನದಿಯಿಂದ ಹೊರಬರುವ ನೀರು ಜಲಪಾತವಾಗಿ ಹೊರಹೊಮ್ಮುತ್ತದೆ. 53 ಅಡಿಯಿಂದ ಕೆಳಗೆ ಧುಮ್ಮಿಕ್ಕುತ್ತದೆ. ನಾವು ಮೇ ತಿಂಗಳಲ್ಲಿ ಹೋಗಿದ್ದಾಗ ಹೆಚ್ಚು ನೀರಿರಲಿಲ್ಲ.

‘ಜನವರಿ ತಿಂಗಳಲ್ಲಿ ಈ ಜಲಪಾತ ಹೆಪ್ಪುಗಟ್ಟಿ ಮಂಜುಗಡ್ಡೆಯಾಗುತ್ತದೆ. ಆಗ ನೋಡಲು ಬಲು ಸೊಗಸು’ ಎಂದು ಶಶಾಂಕ ಹೇಳಿದ. ಹಾಗಾಗಿ ಈ ಉದ್ಯಾನವನ ವರ್ಷವಿಡೀ ಆಕರ್ಷಣೆಯ ತಾಣವಾಗಿದೆ. ಮದುವೆ ಮತ್ತು ಇನ್ನಿತರ ಸಾಂಸ್ಕೃತಿಕ ಹಬ್ಬಗಳಿಗೆ ಇದು ಜನಪ್ರಿಯ ತಂಗುದಾಣ. ಇಲ್ಲಿ ವಾಯುವಿಹಾರ ಮಾಡಲು ಬೇಕಾದಷ್ಟು ದಾರಿಗಳಿವೆ. ಈ ಪಾರ್ಕ್‌ನಲ್ಲಿ ಹಯಾವತ (Hiawatha) ಮತ್ತು ಮಿನ್ನೆಹಹ ಅವರ ಕಂಚಿನ ಪ್ರತಿಮೆಗಳಿವೆ. ಅವರಿಬ್ಬರು ಪ್ರೇಮಿಗಳು. ಈ ಪ್ರತಿಮೆ ಕೆತ್ತಿದವರು ಜೇಕಬ್ ಫೀಲ್ಡ್.

ADVERTISEMENT

ನಾವು ಅಲ್ಲಿ ನಾಲ್ಕೈದು ಮೈಲಿ ಕಾಡೊಳಗೆ ನಡೆಯುತ್ತ ಮಿಸ್ಸಿಸಿಪ್ಪಿ ನದಿ ದಂಡೆಗೆ ಹೋದೆವು. ಮಿಸ್ಸಿಸಿಪ್ಪಿ ನದಿ ಉತ್ತರ ಅಮೆರಿಕದಲ್ಲಿಯೇ ಅತ್ಯಂತ ದೊಡ್ದ ನದಿ. ಜಗತ್ತಿನಲ್ಲೇ ನಾಲ್ಕನೇ ದೊಡ್ಡ ನದಿ ಎಂಬ ಹೆಸರು ಇದೆ. 1969ರಲ್ಲಿ ಮಿನ್ನೆಹಹವನ್ನು ಐತಿಹಾಸಿಕ ಜಿಲ್ಲೆ ಎಂದು ಘೋಷಿಸಲಾಗಿದೆ. ಪ್ರತಿ ವರ್ಷ ಎಂಟೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರಂತೆ. ನಾವು ನದಿದಂಡೆಯಲ್ಲಿ ಸ್ವಲ್ಪ ಹೊತ್ತು ಕೂತು ಕಾಲ ಕಳೆದು ವಾಪಾಸಾದೆವು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.