ADVERTISEMENT

ಗಿರಿಯಲ್ಲಿ ಮಂಜಿನ ಸಿರಿ

ಸಿದ್ದು ಆರ್.ಜಿ.ಹಳ್ಳಿ
Published 12 ಜೂನ್ 2019, 16:59 IST
Last Updated 12 ಜೂನ್ 2019, 16:59 IST
ಮಂಜಿನ ಶೃಂಗಾರದಿಂದ ‘ಶ್ವೇತಗಿರಿ’ಯಂತೆ ಕಂಗೊಳಿಸುತ್ತಿರುವ ಮುಳ್ಳಯ್ಯನಗಿರಿ
ಮಂಜಿನ ಶೃಂಗಾರದಿಂದ ‘ಶ್ವೇತಗಿರಿ’ಯಂತೆ ಕಂಗೊಳಿಸುತ್ತಿರುವ ಮುಳ್ಳಯ್ಯನಗಿರಿ   

ಭೋರಿಡುವ ಗಾಳಿಯ ಹಿಮ್ಮೇಳಕ್ಕೆ ನರ್ತಿಸುತ್ತಿದ್ದ ಮೋಡ,ಭೂರಮೆಯನ್ನು ತಬ್ಬಿಕೊಳ್ಳಲು ತವಕಿಸುತ್ತಿದ್ದ ಬಾನು,ಹಸಿರ ಸಿರಿಯ ಮೇಲೆ ತುಂತುರು ಇಬ್ಬನಿಯ ಸಿಂಚನ,ಇಡೀ ಗಿರಿಯನ್ನೇ ಆಲಂಗಿಸಿ ಚುಂಬಿಸುತ್ತಿದ್ದ ಮಂಜು....

ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿಗೆ ಈಗ ಹೋದರೆ, ಇಂಥ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಕಳೆದ ವಾರ ಗೆಳೆಯರೆಲ್ಲ ಸೇರಿ ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ ಬೈಕ್‌ನಲ್ಲಿ ಹೋದೆವು. ತರೀಕೆರೆ ರಸ್ತೆ ಮಾರ್ಗವಾಗಿ ಸಾಗಿದ ನಮ್ಮ ಬೈಕ್‌ಗಳು ಕೈಮರದ ಬಳಿ ಎಡಕ್ಕೆ ತಿರುಗಿ ತಿಪ್ಪನಹಳ್ಳಿ ಎಸ್ಟೇಟ್‌ ರಸ್ತೆಯಲ್ಲಿ ಹೊರಟವು. ಒಂದೆಡೆ ಕಾಫಿ ಕಣಿವೆ, ಮತ್ತೊಂದೆಡೆ ಹುಲ್ಲು ಹಾಸಿನ ಶೋಲಾ ಕಾಡು ಪ್ರೀತಿಯ ಸ್ವಾಗತ ಕೋರಿತು.

ADVERTISEMENT

ಹಾವಿನ ಹಾದಿಯಂತಹ ಅಂಕು ಡೊಂಕಾದ ರಸ್ತೆ. ರಸ್ತೆ ಅಕ್ಕಪಕ್ಕದಲ್ಲಿ ಕಣ್ತುಂಬುವ ಗಿರಿ ಕಂದರಗಳ ಚೆಲುವು. ಕ್ಷಣಾರ್ಧದಲ್ಲೇ ಸುರಿದು ಮಾಯವಾಗುವ ಮಂಜು, ಇಡೀ ಗಿರಿಯನ್ನು ‘ಶ್ವೇತ ಗಿರಿ’ಯನ್ನಾಗಿಸಿ ಬಿಡುತ್ತಿತ್ತು. ಮಾರು ದೂರದಲ್ಲಿರುವವರನ್ನು ಗುರುತಿ ಸಲಾಗದಷ್ಟು ದಟ್ಟ ಮಂಜು. ಹೆಡ್‌ಲೈಟ್‌ ಹಾಕಿಕೊಂಡು ಆಮೆ ವೇಗದಲ್ಲಿ ಚಲಿಸುತ್ತಿದ್ದ ಕಾರುಗಳ ಜತೆಯಲ್ಲಿ ನಾವೂ ಹೆಜ್ಜೆ ಹಾಕಿದೆವು. ಮೋಡಗಳ ಮರೆಯಿಂದ ಆಗೊಮ್ಮೆ ಈಗೊಮ್ಮೆ ಇಣುಕುವ ಸೂರ್ಯ ಮಂಜಿನ ತೆರೆಯನ್ನು ಸರಿಸಲು ಹೆಣಗಾಡುತ್ತಿದ್ದ.ಅಪಾಯಕಾರಿ ತಿರುವು ಗಳಲ್ಲಿ ಧುತ್ತನೆ ಎದುರಾಗುವ ವಾಹನಗಳು,ನಮ್ಮನ್ನು ತಬ್ಬಿಬ್ಬುಗೊಳಿಸುತ್ತಿದ್ದವು. ಒಟ್ಟಿನಲ್ಲಿ ಮಂಜಿಗೆ ಚೆಲ್ಲಾಟ,ಚಾಲಕರಿಗೆ ಪ್ರಾಣ ಸಂಕಟ!

ಮುಳ್ಳಯ್ಯನಗಿರಿಗೂ 3ಕಿ.ಮೀ.ಮೊದಲೇ ಸಿಗುವ ಸೀತಾಳಯ್ಯನಗಿರಿ ದೇವಾಲಯ ಮಂಜಿನಲ್ಲಿ ಮುಳುಗಿ ಹೋಗಿತ್ತು.ಬೈಕ್‌ಗಳನ್ನು ಪಾರ್ಕ್ ಮಾಡಿ ಹತ್ತಿರ ಹೋದಂತೆ,ದೇಗುಲವೂ ಸಿಕ್ಕಿತು. ದೇವರ ದರ್ಶನವೂ ಆಯಿತು. ಅಲ್ಲಿಂದ ಕಡಿದಾದ ರಸ್ತೆಯಲ್ಲಿ ನಿಧಾನವಾಗಿ ಸಾಗಿ,ಗಿರಿಯ ಮೇಲ್ಭಾಗ ತಲುಪಿದೆವು.ನಂತರ, ಕಡಿದಾದ ಮೆಟ್ಟಿಲು ಹತ್ತುತ್ತಾ,ಏದುಸಿರು ಬಿಡುತ್ತಾ,ಗಿರಿಯ ತುತ್ತ ತುದಿಯಲ್ಲಿ ನಿಂತಾಗ, ಎಲ್ಲರಿಗಿಂತಲೂ ಎತ್ತರದಲ್ಲಿ ಇದ್ದೇವೆ ಎಂಬ ಭಾವ, ಮನಸ್ಸಿಗೆ ಅಮಿತಾನಂದ.

ಧಾರ್ಮಿಕ ಹಾಗೂ ಪ್ರಾಕೃತಿಕ ಐಸಿರಿಯಾದ ಈ ಪರ್ವತದ ಮೇಲೆ ನಿಂತರೆ ಎಲ್ಲಿ ನಾವು ಪ್ರಪಾತಕ್ಕೆ ಬೀಳುತ್ತೇವೆಯೋ ಎನ್ನಿಸುವಷ್ಟು ರಭಸವಾದ ಕುಳಿರ್ಗಾಳಿ ಬೀಸುತ್ತಿತ್ತು. ಆ ಭಯದಲ್ಲಿ ಕೈ ಮೇಲೆ ಮಾಡಿದರೆ, ಮೋಡಗಳು ಬೆವರ ತುದಿ ಸವರಿ ಹೋಗುತ್ತಿದ್ದಂತೆ ಕಂಡಿತು. ಬೆಟ್ಟದ ಮೇಲೆ ಚಳಿಯನ್ನು ದೂಡುವ ತಿನಿಸುಗಳಿದ್ದವು. ದಣಿದ ದೇಹಕ್ಕೆ ಗ್ಲೂಕೋಸ್‌ ನೀಡುವ ಎಳನೀರು ಇತ್ತು. ಬಂಡೆಯ ಮೇಲೆ ಕುಳಿತು, ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ ಪರಿಸರ ಮತ್ತು ಮಂಜಿನ ಶೃಂಗಾರ ಶಬ್ದಾತೀತ ಅನುಭವ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.