ಪುದುಚೇರಿ ಹಲವು ಆಕರ್ಷಕ ತಾಣಗಳನ್ನು ಹೊಂದಿರುವ ಪ್ರದೇಶ. ಈ ಪೈಕಿ ಫ್ರೆಂಚರ ಕಾಲದ ವಾಸ್ತುಶಿಲ್ಪವಿರುವ ಮನೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ನೀಲಾಗಸಕ್ಕೆ ಮುತ್ತಿಕ್ಕುವಷ್ಟು ವಿಶಾಲ ಸಾಗರ. ಕೆಳಗೆ ಬಂಡೆಹಾಸುಗಳ ಮೇಲಿಂದ ರಸ್ತೆಯ ಮೇಲೆ ಚಿಮ್ಮುವ ನೀರು. ರಸ್ತೆಯ ಮೇಲೆ ಒಂದರ ಮೇಲೊಂದರಂತೆ ಹೆಜ್ಜೆ ಹಾಕುತ್ತಾ ಸಾಗಿದಾಗ ಭಾರತದಲ್ಲಿದ್ದೇವೋ ಅಥವಾ ಫ್ರೆಂಚರ ವಸಾಹತು ಕಾಲದಲ್ಲೇ ಸುತ್ತುತ್ತಿದ್ದೇವೋ ಎಂದು ಅನುಮಾನ ಬರಿಸುವ ಫ್ರೆಂಚ್ ಕಾಲೊನಿಯ ಮನೆಗಳಿದ್ದವು. ಅದುವೇ ಪುದುಚೇರಿ.
ಕಾಂಕ್ರೀಟ್ ಕಾಡಿನ ಮನೆಗಳು, ಮಲೆನಾಡಿನ ಹೆಂಚಿನ ಮನೆಗಳನ್ನು ಕಾಣುತ್ತಿರುವ ನಮಗೆ, ಫ್ರೆಂಚರ ಕಾಲದ ವಾಸ್ತುಶಿಲ್ಪ ಶೈಲಿಯನ್ನು ತನ್ನೊಳಗೆ ತುಂಬಿಸಿಕೊಂಡು ಆಕರ್ಷಣೀಯವಾಗಿ ಕಾಣುವ ಮನೆಗಳು ವಿಶೇಷವಾಗಿ ಕಂಡವು. ಹಳದಿ, ನೀಲಿ, ಕಂದು ಬಣ್ಣದ ಮನೆಗಳು, ಅವುಗಳ ಬಾಗಿಲುಗಳ ವಿನ್ಯಾಸದಿಂದ ಹಿಡಿದು ಮನಸೂರೆಗೊಳ್ಳುವ ಮೇಲ್ಫಾವಣಿಯವರೆಗೆ ಕಣ್ಮನ ಸೆಳೆದವು. ಆವರಣದ ಹೊರಗೋಡೆಗೆ ಬೃಹದಾಕಾರದ ಮರದ ಬಾಗಿಲುಗಳನ್ನೇ ಗೇಟಿನ ರೂಪದಲ್ಲಿ ತಳೆದಿರುವ ಕೆಲ ಮನೆಗಳಂತೂ ಸೋಜಿಗವನ್ನು ಉಂಟು ಮಾಡುತ್ತವೆ. ಈ ಸೋಜಿಗದ ಮನೆಗಳ ಕಾಲೊನಿಗೆ ‘ಹೆರಿಟೇಜ್ ವಿಲೇಜ್’ ಅಥವಾ ‘ವೈಟ್ ಟೌನ್’ ಎಂಬುದಾಗಿಯೂ ಕರೆಯುತ್ತಾರೆ.
ಓಲ್ಡ್ ಲೈಟ್ ಹೌಸ್
ಪುದುಚೇರಿ ಪ್ರವಾಸದಲ್ಲಿ ಅನ್ವೇಷಿಸಲೇಬೇಕಾದ ಮತ್ತೊಂದು ಜನಪ್ರಿಯ ಪ್ರವಾಸಿ ಸ್ಥಳ 19 ನೇ ಶತಮಾನಕ್ಕೆ ಸೇರಿದ ಓಲ್ಡ್ ಲೈಟ್ ಹೌಸ್. ಫ್ರೆಂಚ್ ಆಡಳಿತಗಾರರಿಂದ ನಿರ್ಮಾಣವಾದ ದೀಪಸ್ತಂಭವು ತನ್ನ ಸೊಗಸಾದ ವಾಸ್ತುಶಿಲ್ಪದಿಂದ ಫೋಟೊ ಪ್ರಿಯರಿಗೆ ಹಾಟ್ ಸ್ಪಾಟ್ ಎನ್ನಬಹುದು. ವೈಟ್ ಹೌಸ್ ಬಳಿ ಇರುವ ಈ ಓಲ್ಡ್ ಲೈಟ್ ಹೌಸ್ ಒಂದು ಕಾಲದಲ್ಲಿ ಸಮುದ್ರದ ಹಡಗುಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಏಕೈಕ ಬೆಳಕಿನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇದೊಂದೇ ಅಲ್ಲದೇ ಇದರಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ಪಾಂಡಿ ಮರೀನಾ ಬೀಚ್ ತಟದಲ್ಲಿ ನ್ಯೂ ಲೈಟ್ ಹೌಸ್ ಕೂಡ ಇದ್ದು,ಇದೂ ಪ್ರವಾಸಿಗರಿಗೆ ಮುಕ್ತವಾಗಿದೆ.
ಕರಾವಳಿ ಆಹಾರ ಪ್ರಿಯರಿಗೆ ತರಹೇವಾರಿ ಸಮುದ್ರ ಜೀವಿಗಳಿಂದ ತಯಾರಿಸಿದ ಆಹಾರ ಸಿಗುತ್ತದೆ. ಹಾಗೆಯೇ ಫ್ರೆಂಚ್ ಶೈಲಿಯ ಭಕ್ಷ್ಯಗಳ ರುಚಿಯನ್ನು ಸವಿಯಲು ಪುದುಚೇರಿಯ ರೆಸ್ಟೋರೆಂಟ್‌ಗಳಿಗೆ ಹೋಗಲೇಬೇಕು. ಸಸ್ಯಾಹಾರಿಗಳಿಗೆ ಅಲ್ಲಲ್ಲಿ ಕೆಲವು ಬಗೆಯ ಖಾದ್ಯಗಳು ಸಿಗುತ್ತವಷ್ಟೇ.
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯ ಪಟ್ಟಣದ ಹೃದಯ ಭಾಗದಲ್ಲೇ ರಾಜಭವನವಿದೆ. ಕಾಲ್ನಡಿಗೆಯಲ್ಲಿ ಪಟ್ಟಣವನ್ನು ಸುತ್ತಾಡುತ್ತ ಸರ್ಕಾರಿ ಕಟ್ಟಡಗಳು, ಫ್ರೆಂಚರ ಕಾಲದ ವಿಲ್ಲಾಗಳನ್ನೆಲ್ಲ ನೋಡುತ್ತಾ ಸಾಗಬಹುದು.
ಭಾರತ ಮತ್ತು ರೋಮ್ ನಡುವೆ ವ್ಯಾಪಾರ ನಡೆಸುತ್ತಿದ್ದ ಪ್ರಮುಖ ಪಟ್ಟಣವೇ ಅರಿಕಮೇಡು. ಪುದುಚೇರಿ ಪಟ್ಟಣದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಅರಿಕಮೇಡುವಿನಲ್ಲಿ ಅನೇಕ ಉತ್ಖನನಗಳು ಮತ್ತು ಆಳವಾದ ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳು ರೋಮನ್ ಸಾಮ್ರಾಜ್ಯದ ನಡುವೆ ಇದ್ದ ವ್ಯಾಪಾರ ಸಂಬಂಧ ತಿಳಿಸುತ್ತದೆ.
ಅರೋವಿಲ್ಲೆ
‘ಸಿಟಿ ಆಫ್ ಡಾನ್’ ಎಂದೂ ಕರೆಯಲ್ಪಡುವ ಅರೋವಿಲ್ಲೆ, ಪುದುಚೇರಿಯ ಆಕರ್ಷಣೆಯಾಗಿದೆ. ವಾಸ್ತುಶಿಲ್ಪಿ ರೋಜರ್ ಆಂಗರ್ ವಿನ್ಯಾಸಗೊಳಿಸಿರುವ ಇದನ್ನು,1968ರಲ್ಲಿ ಮಿರ್ರಾ ಅಲ್ಫಾಸ್ಸಾ ಸ್ಥಾಪಿಸಿದರು. ಬೃಹತ್ ಧ್ಯಾನ ಕೇಂದ್ರವಾಗಿರುವ ಈ ಸ್ಮಾರಕದಲ್ಲಿ 124 ದೇಶಗಳ ಮಣ್ಣನ್ನು ತಂದು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ಸೇರಿಸಲಾಗಿದೆ ಎಂಬುದಾಗಿ ದಾಖಲೆಗಳು ಹೇಳುತ್ತವೆ. ಇಲ್ಲಿನ ಅರಬಿಂದೋ ಆಶ್ರಮಕ್ಕೆ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. 1926 ರಲ್ಲಿ ನಿರ್ಮಾಣಗೊಂಡ ಈ ಆಶ್ರಮವು ಆಧ್ಯಾತ್ಮಿಕತೆಯ ಒಲವನ್ನು ಮೂಡಿಸುವಂತಿದೆ.
ಕುಟುಂಬದವರು ಮತ್ತು ಗೆಳೆಯರೊಡನೆ ವಾರಾಂತ್ಯ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ ಪುದುಚೇರಿ. ಜನಜಂಗುಳಿ ಇಲ್ಲದ ಇಲ್ಲಿನ ನೈಟ್ ಲೈಫ್ ಪ್ರವಾಸಕ್ಕೆ ಇನ್ನಷ್ಟು ಹುರುಪು ತುಂಬುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.