ADVERTISEMENT

ಕಣ್ಮನ ತಣಿಸುವ ‘ರೋಸ್‌ಗಾರ್ಡನ್‌’

ಸಿಟಿ ಆಫ್ ರೋಸಸ್‌ನಲ್ಲಿ...

ರುಕ್ಮಿಣಿಮಾಲಾ
Published 27 ನವೆಂಬರ್ 2019, 19:30 IST
Last Updated 27 ನವೆಂಬರ್ 2019, 19:30 IST
   

ಕಳೆದ ವರ್ಷ ಅಮೆರಿಕಕ್ಕೆ ಹೋಗಿದ್ದಾಗ ಪೋರ್ಟ್‌ಲ್ಯಾಂಡ್‌ನಲ್ಲಿರುವ ಅನಂತನ ಅಣ್ಣ ಆನಂದವರ್ಧನ ಅವರ ಮನೆಗೆ ಮಗಳು ಅಕ್ಷರಿ ಜೊತೆ ಭೇಟಿಕೊಟ್ಟಿದ್ದೆ. ಅವರು ನಮ್ಮನ್ನು ರೋಸ್‌ಗಾರ್ಡ್‌ನ್‌ಗೆ ಕರೆದುಕೊಂಡು ಹೋಗಿದ್ದರು.

ಆಗ ಅಲ್ಲಿಗೆ ನಮ್ಮ ಸಂಬಂಧಿಕರಾದ ಶ್ಯಾಮ ಶೈಲಜಾ, ಅನಿರುದ್ಧ ಕೂಡ ಬಂದಿದ್ದರು. ಆನಂದ, ಅನಿರುದ್ಧ (ಟ್ಯಾಂಡಮ್‍ನಲ್ಲಿ), ಅನಂತ ಒಂಟಿ ಸೈಕಲಿನಲ್ಲಿ ರೋಸ್ ಗಾರ್ಡ್‌ನ್‌ಗೆ ಹೋದರು. ನಾವು ಕಾರಿನಲ್ಲಿ ರೋಸ್ ಗಾರ್ಡನ್ ತಲುಪಿದೆವು. ಅಲ್ಲಿ ಸೈಕಲಿನಲ್ಲಿ ಹೋದವರು ಉಸ್ಸಪ್ಪ ಎಂದು ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. ಸುಮಾರು 10 ಮೈಲಿ ದೂರ ಸೈಕಲ್ ತುಳಿದದ್ದರಲ್ಲಿ ಅವರಿಗೆ ಏರು ದಾರಿಯೇ ಜಾಸ್ತಿ ಇತ್ತು. ಎಲ್ಲರೂ ಸೇರಿ ರೋಸ್ ಗಾರ್ಡನ್ ಪ್ರವೇಶಿಸಿದೆವು.

1917ರಲ್ಲಿ ಅಮೆರಿಕ ಸರ್ಕಾರ ಪೋರ್ಟ್‌ಲ್ಯಾಂಡ್‌ನ ಓರೆಗಾನಿನಲ್ಲಿ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ರೋಸ್ ಗಾರ್ಡನ್ ಸ್ಥಾಪಿಸಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡಿನಿಂದ ಗುಲಾಬಿಗಿಡಗಳನ್ನು ತರಿಸಿ ಇಲ್ಲಿ ನೆಟ್ಟು ಬೆಳೆಸಿದ್ದಾರೆ. 10 ಸಾವಿರ ಗುಲಾಬಿ ಗಿಡಗಳು ಹೂ ಬಿಟ್ಟು ನಳನಳಿಸುತ್ತಿವೆ. 10ಸಾವಿರ ಗಿಡಗಳಲ್ಲಿ 650 ಪ್ರಬೇಧಗಳ ವಿವಿಧ ಜಾತಿಯ ಗುಲಾಬಿಗಳಿವೆ.

ADVERTISEMENT

ಇದೇ ಕಾರಣಕ್ಕೆ ಪೋರ್ಟ್‌ಲ್ಯಾಂಡ್‌ ಅನ್ನು ‘ಸಿಟಿ ಆಫ್ ರೋಸಸ್’ ಎನ್ನುತ್ತಾರೆ. ಹಾಗೆ ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಏಕೆಂದರೆ, ರಸ್ತೆ ಬದಿ, ಮನೆ ಮನೆ ಎದುರು, ಎಲ್ಲಿ ನೋಡಿದರೂ ಸುಂದರ ಗುಲಾಬಿ ಹೂವುಗಳನ್ನು ಕಾಣುತ್ತೇವೆ. ಅಲ್ಲಿ ದಾರಿಯುದ್ದಕ್ಕೂ ರಂಗುರಂಗಿನ ಗುಲಾಬಿಗಳು ಮನ ಸೆಳೆದವು.

ಅಲ್ಲೆಲ್ಲ ಸುತ್ತಾಡಿ ವಿವಿಧ ನಮೂನೆಯ ಬಣ್ಣಬಣ್ಣದ ಗುಲಾಬಿಗಳನ್ನು ನೋಡಿ ಕಣ್ಣು ತಣಿಸಿಕೊಂಡು ಪಟ ಕ್ಲಿಕ್ಕಿಸಿಕೊಂಡೆವು. ಅಲ್ಲಿಂದ ವಾಪಾಸು ಹೋಗುತ್ತ ನಾನು ಟ್ಯಾಂಡಮ್ ಸೈಕಲ್ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.