ADVERTISEMENT

ಪ್ರವಾಸ: ಮನಸೂರೆಗೊಳ್ಳುವ ಶೆಕ್ವಾಗಾ

ಧಾರಿಣಿ ಮಾಯಾ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಶೆಕ್ವಾಗಾ ಜಲಪಾತದ ವಿಹಂಗಮ ನೋಟ ಚಿತ್ರಗಳು: ಪ್ರೀತಮ್
ಶೆಕ್ವಾಗಾ ಜಲಪಾತದ ವಿಹಂಗಮ ನೋಟ ಚಿತ್ರಗಳು: ಪ್ರೀತಮ್   
ಅಮೆರಿಕದ ಶೆಕ್ವಾಗಾ ಜಲಪಾತ ಹಾಗೂ ಅದಕ್ಕೆ ಸಮೀಪದಲ್ಲೇ ಇರುವ ವಾಟ್‌ಕಿನ್ಸ್‌ ಗ್ಲೆನ್‌ ಸ್ಟೇಟ್‌ ಪಾರ್ಕ್‌ ಪ್ರವಾಸಿಗರನ್ನು ಸೆಳೆಯುವ ತಾಣ. ಈ ಪ್ರದೇಶದಲ್ಲಿ ನೀರು ರಭಸವಾಗಿ ಹರಿದು ಉಂಟಾಗಿರುವ ಬಂಡೆಗಳಲ್ಲಿನ ವಿನ್ಯಾಸವೇ ಪ್ರಮುಖ ಆಕರ್ಷಣೆ. ಇಲ್ಲಿ ಹೆಜ್ಜೆ ಹಾಕಿದ ಲೇಖಕರ ಅನುಭವ ಇಲ್ಲಿದೆ...

ಶೆಕ್ವಾಗಾ (Sheh-kwa-ga) 156 ಅಡಿ ಎತ್ತರದ ಬೆರಗುಗೊಳಿಸುವಂಥ ಜಲಪಾತ. ಇದು ನ್ಯೂಯಾರ್ಕ್‌ನ ಮಾಂಟೋರ್ ಫಾಲ್ಸ್‌ನ ಹಳ್ಳಿಯಲ್ಲಿದೆ. ಇದನ್ನು ನೋಡಿದಾಗ ಯಾವುದೋ ಪೋಸ್ಟರ್‌ ನೋಡಿದ ಅನುಭವವಾಯಿತು.

ದಬದಬನೆ ಧುಮ್ಮಿಕ್ಕುವ ಈ ಜಲಪಾತ ಪ್ರಶಾಂತ ಕೊಳಕ್ಕಿಳಿದು ಮೆಲ್ ಸ್ಟ್ರೀಟ್ ಬ್ರಿಡ್ಜ್‌ನ ಮೂಲಕ ಹಾದು ಸೆನೆಕಾ ಸರೋವರ ಸೇರಿಕೊಳ್ಳುತ್ತದೆ. ಈ ಸೆನೆಕಾ ಸರೋವರದ ದಕ್ಷಿಣ ಭಾಗದಲ್ಲಿ ಹೆಸರಾಂತ ಫಿಂಗರ್ ಲೇಕ್ ಇದೆ. ಈ ಜಲಪಾತ ರಸ್ತೆಬದಿಯ ಆಕರ್ಷಣೀಯ ಕೇಂದ್ರವಾಗಿದೆ.

ಶೆಕ್ವಾಗಾದಿಂದ ಐದು ಮೈಲಿ ಪ್ರಯಾಣಿಸಿದಾಗ ಅಲ್ಲಿ ಮತ್ತೊಂದು ಪ್ರಕೃತಿಯ ಸೊಬಗು ಮನಸೂರೆಗೊಂಡಿತು. ದೂರದಿಂದಲೇ ಕಡಿದಾದ ಬಂಡೆಗಲ್ಲುಗಳ ಬೃಹತ್ ಗಾತ್ರ ನೋಡಿದಾಗ ಆಶ್ಚರ್ಯವಾಯಿತು. ತೊರೆನೊರೆಗಳ ರಭಸದಿಂದಾದ ಬಂಡೆಗಳ ಕೊರೆತ ಸಮ್ಮೋಹನಗೊಳಿಸುವಂತಿತ್ತು. ಈ ಸ್ಥಳವನ್ನು ‘ವಾಟ್‌ಕಿನ್ಸ್ ಗ್ಲೆನ್’ ಸ್ಟೇಟ್ ಪಾರ್ಕ್‌ ಎಂದು ಕರೆಯಲಾಗಿದೆ.

ADVERTISEMENT

ಪ್ರಕೃತಿಯ ಆಕರ್ಷಣೆಗೆ ಒಳಗಾದ ವಿಕ್ಟೋರಿಯನ್ಸ್ ವಾಟ್‌ಕಿನ್ಸ್ ಗ್ಲೆನ್‌ನನ್ನು ರಮಣೀಯ ಪ್ರವಾಸಿ ಸ್ಥಳವಾಗಿ ಪರಿವರ್ತಿಸಿದರು. ಬರವಣಿಗೆಯಲ್ಲಿ ಹಿಡಿದಿಡಲು ಅಸಾಧ್ಯವಾದ ಸೌಂದರ್ಯದ ಗ್ಲೆನ್ ಕಡಿದಾದ ಕಲ್ಲುಗಳಿಂದ ಕೂಡಿವೆ. ಕೆಲವು ಮಾರ್ಗಗಳು, ಸೇತುವೆಗಳು ಹಾಗೂ ಕಲ್ಲಿನ ಮೆಟ್ಟಿಲುಗಳನ್ನು ನಂತರ ನಿರ್ಮಿಸಲಾಯಿತು. ಇಲ್ಲಿ ಸುಮಾರು 19 ಜಲಪಾತಗಳಿದ್ದು, ಸಾವಿರಾರು ವರ್ಷಗಳಿಂದ ಗ್ಲೆನ್ ಕ್ರೀಕ್‌ನಿಂದ ರಚನೆಯಾದ ಇಕ್ಕಟ್ಟಾದ ಕಡಿದಾದ ಮಾರ್ಗದಲ್ಲಿ ಎಷ್ಟು ಏರಿದರೂ ಕೊನೆಯಿಲ್ಲವೆನಿಸುವಷ್ಟು ಎತ್ತರಕ್ಕೆ ಸಾಗಲು (1.5 ಮೈಲು) ಸುಮಾರು 2 ಗಂಟೆಗಳು ಕ್ರಮಿಸಬೇಕಾಗುತ್ತದೆ. ಇದರಲ್ಲಿ ಹೈಕಿಂಗ್ ಮಾರ್ಗ ಇರುವುದರಿಂದ ‘ಗಾರ್ಜ್‌ ಟ್ರೇಲ್’ ಎನ್ನಲಾಗುತ್ತದೆ. ಹತ್ತುವ ಮಾರ್ಗದ ಮಧ್ಯದಲ್ಲಿನ ಒಂದು ಸುಂದರ ಜಲಪಾತದ ಬದಿಯಲ್ಲಿ ನಿಂತು ಹಾಲಿನಂತೆ ಚಿಮ್ಮುವ ನೀರಿನ ಮುತ್ತಿನಹನಿಗಳನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ವಿಫಲವಾದರೂ ಇದೊಂದು ಅವಿಸ್ಮರಣೀಯ ಅನುಭವ.

ಹೀಗಿದೆ ನೋಡಿ ನೀರು ಹರಿಯುವ ಜಾಗ

ವರ್ಷಗಳು ಉರುಳುತ್ತಿದ್ದ ಹಾಗೆ ಈ ಪ್ರಪಾತದಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ಈ ಜಲಪಾತ ಹಾಗೂ ಕೊರೆದ ಬಂಡೆಗಳ ವಿನ್ಯಾಸದ ದೃಶ್ಯಾವಳಿಯನ್ನು ಎಷ್ಟು ಕಣ್ತುಂಬಿಕೊಂಡರೂ ಸಾಲದು ಎನಿಸುತ್ತದೆ. ಆಯಾ ಜಾಗ ಕಂಡು ಬಂದ ರೀತಿಗೆ ಅನುಸಾರವಾಗಿ ರೈನ್ ಬೋ ಫಾಲ್ಸ್, ಫ್ರೌನಿಂಗ್ ಕ್ಲಿಫ್ ಎಂದು ಹೆಸರಿಸಲಾಗಿದೆ. ನೀರು ಹಾಗೂ ಹಿಮನದಿಗಳಿಂದ ರಚನೆಯಾದ ಈ ನೈಸರ್ಗಿಕ ಸೌಂದರ್ಯ ಅನನ್ಯ ಅನುಭವ ಕೊಡುತ್ತದೆ.

1871ರಲ್ಲಿ ಸಿವಿಲ್ ವಾರ್ ಹೀರೊ ಹಾಗೂ ಕಲಾವಿದ ಜೇಮ್ಸ್ ಹೋಪ್ ವಾಟ್‌ಕಿನ್ಸ್ ಗ್ಲೆನ್ಸ್‌ಗೆ ಭೇಟಿ ನೀಡಿದನು. ರೇನ್‌ಬೋ ಜಲಪಾತವನ್ನು ಚಿತ್ರಿಸಲು ಈತನನ್ನು ನಿಯೋಜಿಸಲಾಗಿತ್ತು. ಅವನ ಊರಾಗಿದ್ದ ಸ್ಕಾಟ್‌ಲ್ಯಾಂಡಿನಂತೆಯೇ ಇಲ್ಲಿನ ಭೂದೃಶ್ಯ ಅವನ ಮನಸೂರೆಗೊಂಡಿತ್ತು. ಕೆಲವು ವರ್ಷಗಳ ನಂತರ ಕುಟುಂಬ ಸಮೇತ ಗ್ಲೆನ್ಸ್‌ನಲ್ಲಿಯೇ ಮನೆ ಮಾಡಿಕೊಂಡು ಸ್ಟುಡಿಯೊವನ್ನೂ ಸ್ಥಾಪಿಸಿದನು. ಈತ ರಚಿಸಿದ ಅಂದವಾದ ಕಲಾಕೃತಿಗಳು ಪ್ರವಾಸಿಗರನ್ನು ಇಂದಿಗೂ ಆಕರ್ಷಿಸುತ್ತವೆ. ಈತನ ಕಲಾಕೃತಿಗಳು ಗೈಡ್‌ ಬುಕ್ಸ್ ಹಾಗೂ ಜಾಹೀರಾತುಗಳಲ್ಲಿ ಬಿತ್ತರವಾಗಿ, ವಾಟ್‌ಕಿನ್ಸ್ ಗ್ಲೆನ್ಸ್‌ನ ಮೋಹಕ ಸೌಂದರ್ಯ ಪ್ರಪಂಚಕ್ಕೆ ತೆರೆದುಕೊಂಡಿತು.

ಮಿಲ್ಸ್ ಇನ್ ದಿ ಗಲ್ಲಿ

1830 ರಲ್ಲಿ ಸ್ಯಾಮ್ಯುಯೆಲ್‌ನ ವಾಟ್‌ಕಿನ್ಸ್ ಹಿಟ್ಟಿನ ಗಿರಣಿಯನ್ನು ಗಾರ್ಜ್‌ನ ಪ್ರವೇಶದ್ವಾರದಲ್ಲಿ ನಿರ್ಮಿಸಲಾಗಿತ್ತು. ಯೂರೋಪಿಯನ್ನರು ಈ ಸ್ಥಳಕ್ಕೆ ಬಂದಾಗ ಬದುಕಲು ಹೋರಾಟ ನಡೆಸಿದರು. ಈ ಜಾಗದಲ್ಲಿ ಏನೂ ಇಲ್ಲದ್ದರಿಂದ ಇದನ್ನು ‘ಗ್ರೇಟ್ ಗಲ್ಲಿ’ ಎಂಬ ಅಡ್ಡಹೆಸರಿನಿಂದ ಕರೆಯಲಾಗಿತ್ತು. ವಾಟ್‌ಕಿನ್ಸ್ ಕುಟುಂಬ 1794 ರಲ್ಲಿ ಇಲ್ಲಿನ ಜಾಗವನ್ನು ಖರೀದಿಸಿ ಗಿರಣಿಯನ್ನು ಸ್ಥಾಪಿಸಿದನು. ಈ ಜಾಗವನ್ನು ಆನುವಂಶಿಕವಾಗಿ ಪಡೆದ ನಂತರ ಸ್ಯಾಮ್ಯುಯಲ್ ವಾಟ್‌ಕಿನ್ಸ್ ಎಂಬುವನು ಮೇಲ್ಭಾಗದ ಗಾರ್ಜ್‌ ಅನ್ನು ಅಣೆಕಟ್ಟುಗಳಿಂದ ಕಟ್ಟಿ, ತಳಹದಿಯಲ್ಲಿ ಹೊಸ ಗಿರಣಿಗಳನ್ನು ಕಟ್ಟಿದನು. 1842 ರಲ್ಲಿ ಜೆಫರ್ಸನ್ ಪಟ್ಟಣವನ್ನು ಸ್ಥಾಪಿಸಿ, ನಂತರ ಅದನ್ನು ಗೌರವಾರ್ಥವಾಗಿ ‘ವಾಟ್‌ಕಿನ್ಸ್ ಗ್ಲೆನ್’ ಎಂದು ಮರುನಾಮಕರಣ ಮಾಡಲಾಯಿತು.

ನೀರಿನ ರಭಸಕ್ಕೆ ಉಂಟಾದ ಶಿಲಾವಿನ್ಯಾಸ

ಅಮೆರಿಕನ್ನರು, ನೈಸರ್ಗಿಕ ಸ್ಥಳಗಳನ್ನು ಸಂರಕ್ಷಿಸುವ ಮೌಲ್ಯವನ್ನು ಅರಿತು, ನವೆಂಬರ್ 1906 ರಲ್ಲಿ ಸ್ಟೇಟ್ ಆಫ್ ನ್ಯೂಯಾರ್ಕ್‌ ವಾಟ್‌ಕಿನ್ಸ್ ಗ್ಲೆನ್ ಅನ್ನು ಖರೀದಿ ಮಾಡಿತು. ಇದೀಗ ಇದೊಂದು ಸ್ಟೇಟ್ ಪಾರ್ಕ್‌ ಆಗಿ ಸಾರ್ವಜನಿಕರಿಗೆ
ಮುಕ್ತವಾಗಿದೆ. ಮುಂದಿನ ಹಲವಾರು ವರ್ಷಗಳಲ್ಲಿ ಅಗಲವಾದ ಮಾರ್ಗಗಳು, ಸೇತುವೆ, ರೈಲ್ಲಿಂಗ್‌, ದಕ್ಷಿಣ ಪ್ರವೇಶ, ಕ್ಯಾಂಪಿಂಗ್ ಸೌಲಭ್ಯಗಳಂಥ ಸುಧಾರಣೆಗಳಾಯಿತು. ರಾಜ್ಯ ನಿಧಿಯ ಸಹಾಯದಿಂದ ವಾಟ್‌ಕಿನ್ಸ್ ಗ್ಲೆನ್ ಅನ್ನು ಇಂದು 500 ಎಕರೆಗಳವರೆಗೆ ವಿಸ್ತರಿಸಲು ಸಾಧ್ಯವಾಗಿದೆ.

ಜುಲೈ 1935 ರ ಪ್ರವಾಹದಿಂದ ವಾಟ್‌ಕಿನ್ಸ್ ಗ್ಲೆನ್‌ಗೆ ವ್ಯಾಪಕ ಹಾನಿ ಉಂಟಾಯಿತು. ಇದನ್ನು ಸಿಬ್ಬಂದಿ ದುರಸ್ತಿ ಮಾಡಿದರು. ಅವರ ಶ್ರಮದ ಸಾಕ್ಷಿಯಾಗಿ ಇದೀಗ ವಾಟ್‌ಕಿನ್ಸ್ ಗ್ಲೆನ್‌ನ ಸೊಬಗನ್ನು ನಾವು ಅನುಭವಿಸಬಹುದಾಗಿದೆ. ಚಳಿಗಾಲದಲ್ಲಿ ಈ ಕಮರಿಯನ್ನು ಜಾಡು ಮಂಜುಗಡ್ಡೆ ಹಾಗೂ ಅಪಾಯಕಾರಿ ಸ್ಥಿತಿಯ ಕಾರಣ ಮುಚ್ಚಲಾಗುತ್ತದೆ. ಈ ಜಾಗ ಇದೀಗ ಪ್ರವಾಸಿಗರಿಗಷ್ಟೇ ಅಲ್ಲ, ಚಾರಣಪ್ರಿಯರಿಗೂ ಆಪ್ತಜಾಗವಾಗಿದೆ.

ಶಿಲಾವಿನ್ಯಾಸ