ಉಡುಪಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ದ್ವೀಪ ಪ್ರದೇಶವಿದು. ಅಪರೂಪದ ಶಿಲಾ ರಚನೆಗಳು ಇಲ್ಲಿನ ಮುಖ್ಯ ಆಕರ್ಷಣೆ. ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿರುವ ಈ ದ್ವೀಪದ ವಿವರ ಇಲ್ಲಿದೆ...
ಅರಬ್ಬಿ ಸಮುದ್ರ ನಡುವಿನಲ್ಲೊಂದು ಶಿಲೆಗಳಿಂದ ಸುತ್ತುವರಿದ ಭೂ ಪ್ರದೇಶ. ಮಳೆಗಾಲದಲ್ಲಿ ಭೋರ್ಗರೆಯುವ ಕಡಲಿನ ನಡುವೆ ನಿರ್ಜನವಾಗುವ ಈ ದ್ವೀಪವು ಸಮುದ್ರ ಶಾಂತವಾಗುತ್ತಿದ್ದಂತೆ ಪ್ರವಾಸಿಗರ ಕಲರವಕ್ಕೆ ಸಾಕ್ಷಿಯಾಗುತ್ತದೆ.
ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಈ ಸುಂದರ ತಾಣವೇ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಸೇಂಟ್ ಮೇರೀಸ್ ದ್ವೀಪ. ಕರಾವಳಿ ಜಿಲ್ಲೆ ಉಡುಪಿಗೆ ಭೇಟಿ ನೀಡುವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಇದು ತನ್ನ ಒಡಲಿನಲ್ಲಿರುವ ಅಪರೂಪದ ಶಿಲಾ ರಚನೆಗಳಿಂದ ಪ್ರವಾಸಿಗರ ಜೊತೆ ಅಧ್ಯಯನಾಸಕ್ತರನ್ನೂ ಆಕರ್ಷಿಸುತ್ತಿದೆ.
ಸ್ತಂಭಾಕಾರದ ಬಸಾಲ್ಟ್ ಶಿಲಾರಚನೆಗಳಿರುವ ಈ ದ್ವೀಪವು ಹಲವು ಅಚ್ಚರಿ, ಸೋಜಿಗದ ಕೇಂದ್ರ ಬಿಂದು. ಜ್ವಾಲಾಮುಖಿಯ ಲಾವಾರಸ ಹರಿದು ಹಾಸುಗಲ್ಲಾಗಿ ಮಾರ್ಪಟ್ಟಿದೆ ಎನ್ನಲಾದ ಬಸಾಲ್ಟ್ ಶಿಲೆಗಳೇ ಈ ದ್ವೀಪದ ತುಂಬೆಲ್ಲಾ ಕಾಣ ಸಿಗುತ್ತದೆ.
ಆಯತಾಕಾರದ ಸಾಲುಗಳು ಮೇಲಕ್ಕೆ ಎದ್ದು ನಿಂತಂತೆ ಕಾಣುವ ಅಪರೂಪದ ಶಿಲಾ ರಚನೆಗಳೇ ಇದರ ಪ್ರಮುಖ ಆಕರ್ಷಣೆಯಾಗಿದೆ.
ಈ ಶಿಲಾ ರಚನೆಗಳು ಜ್ವಾಲಾಮುಖಿ ಚಟುವಟಿಕೆಗಳಿಂದ ರೂಪುಗೊಂಡಿವೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ಮತ್ತು ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ದ್ವೀಪದ ಶಿಲಾ ರಚನೆಯನ್ನು ಕೊಲಮ್ನರ್ ಬಸಾಲ್ಟಿಕ್ ರಾಕ್ ಎಂದು ಕರೆಯಲಾಗುತ್ತದೆ.
ಸೇಂಟ್ ಮೇರೀಸ್ ದ್ವೀಪದಲ್ಲಿ ಕಂಡು ಬರುವ ಶಿಲಾರಚನೆಗಳು ಆಫ್ರಿಕಾದ ಮಡ್‌ಗಾಸ್ಕರ್‌ನಲ್ಲಿರುವ ಶಿಲಾರಚನೆಗಳನ್ನು ಹೋಲುತ್ತವೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಬಂಡೆಗಳ ವಯಸ್ಸಿನ ಬಗ್ಗೆ ಹಲವು ತಜ್ಞರು ಹಲವು ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ಇಂತಹ ಶಿಲಾರಚನೆಗಳು ಸಮೀಪದಲ್ಲಿ ಬೇರೆಲ್ಲೂ ಕಾಣಸಿಗದಿರುವುದರಿಂದ ಇದು ಅಧ್ಯಯನಾಸಕ್ತರಲ್ಲಿ ಕುತೂಹಲ ಕೆರಳಿಸುತ್ತದೆ.
ಸೇಂಟ್ ಮೇರೀಸ್ ದ್ವೀಪವು ನಾಲ್ಕು ಸಣ್ಣ ದ್ವೀಪಗಳ ಸಮೂಹವಾಗಿದೆ. ಮಲ್ಪೆ ಬೀಚ್‌ನಿಂದ ಬೋಟ್‌ನಲ್ಲಿ ಸುಮಾರು 20 ನಿಮಿಷ ಕ್ರಮಿಸಿದರೆ ಈ ದ್ವೀಪವನ್ನು ತಲುಪಬಹುದಾಗಿದೆ. ಇದರ ಸನಿಹದಲ್ಲಿ ಉತ್ತರ ದ್ವೀಪ, ದಕ್ಷಿಣ ದ್ವೀಪ ಮತ್ತು ದರಿಯಾ ಬಹದ್ದೂರ್‌ಗಢ ದ್ವೀಪಗಳಿವೆ. ನಾಲ್ಕು ದ್ವೀಪಗಳಲ್ಲಿ ಉತ್ತರ ತುದಿಯಲ್ಲಿರುವ ದ್ವೀಪದಲ್ಲಿ ಷಡ್ಬುಜಾಕೃತಿಯ ಶಿಲಾರಚನೆ ಇದ್ದು ಹೆಚ್ಚು ಗಮನ ಸೆಳೆಯುತ್ತದೆ.
ಮಲ್ಪೆ ಬೀಚ್‌ನಿಂದ ಬರಿಗಣ್ಣಿಗೆ ಕಾಣುವ ಸೇಂಟ್ ಮೇರೀಸ್ ದ್ವೀಪವು 1,640 ಅಡಿ ಉದ್ದ ಮತ್ತು 328.1 ಅಡಿ ಅಗಲವಿದೆ. ಈ ದ್ವೀಪದಲ್ಲಿ ಸಾಕಷ್ಟು ತೆಂಗಿನಮರಗಳಿವೆ. ಇದೇ ಕಾರಣಕ್ಕೆ ಈ ದ್ವೀಪವನ್ನು ತೆಂಗಿನಕಾಯಿ ದ್ವೀಪ ಎಂದೂ ಕರೆಯುತ್ತಾರೆ. ಥೋನ್ಸೆಪರ್ ಎಂಬ ಮತ್ತೊಂದು ಸ್ಥಳೀಯ ಹೆಸರೂ ಇದಕ್ಕಿದೆ. ಅಪರೂಪದ ಶಂಖಗಳು, ಚಿಪ್ಪುಗಳು ಈ ದ್ವೀಪದ ಮರಳಿನಲ್ಲಿ ಕಾಣಸಿಗುತ್ತವೆ. ದ್ವೀಪದಲ್ಲಿ ಮಂಟಪಗಳು ಮತ್ತು ಬೆಂಚುಗಳನ್ನು ಬಿಟ್ಟರೆ ಬೇರೇನೂ ಇರುವುದಿಲ್ಲ.
ಇತಿಹಾಸಕ್ಕೆ ಸಂಬಂಧಪಟ್ಟ ವಿಚಾರಗಳೂ ಈ ಪುಟ್ಟ ದ್ವೀಪದ ಜೊತೆಗೆ ತಳುಕು ಹಾಕಿಕೊಂಡಿವೆ. ಪೋರ್ಚ್‌ಗಲ್‌ನಿಂದ ಕೇರಳದ ಕೋಯಿಕ್ಕೋಡ್‌ಗೆ ಪ್ರಯಾಣ ಬೆಳೆಸುತ್ತಿದ್ದಾಗ ಪೋರ್ಚ್‌ಗೀಸ್ ನಾವಿಕ ವಾಸ್ಕೊ ಡ ಗಾಮ ಈ ದ್ವೀಪದಲ್ಲಿ ಇಳಿದಿದ್ದ ಎಂದೂ ನಂಬಲಾಗಿದೆ. ವಾಸ್ಕೊ ಡ ಗಾಮನೇ ಪೋರ್ಚುಗೀಸ್ ಭಾಷೆಯಲ್ಲಿ ‘ಒ ಪಾಡ್ರಾವೊ ಡಿ ಸಾಂತಾ ಮಾರಿಯಾ’ ಎಂದು ಈ ದ್ವೀಪಕ್ಕೆ ನಾಮಕರಣ ಮಾಡಿದ ಎಂದೂ ಹೇಳಲಾಗುತ್ತದೆ.
ಮನುಷ್ಯರು ವಾಸ ಮಾಡದ ಸೇಂಟ್ ಮೇರೀಸ್ ದ್ವೀಪವು ಹಲವಾರು ಪಕ್ಷಿ ಪ್ರಭೇದಗಳ ಆವಾಸಸ್ಥಾನವೂ ಹೌದು. ನೀರುಕಾಗೆ, ಸ್ಯಾಂಡ್ ಪೈಪರ್, ಸೀಗಲ್, ಬ್ರಾಹ್ಮಿನಿ ಕೈಟ್ ಮತ್ತು ಬೆಳ್ಳಕ್ಕಿಗಳು ಈ ದ್ವೀಪದಲ್ಲಿ ಕಂಡು ಬರುತ್ತವೆ. ಪ್ರವಾಸಿಗರಿಗೆ ನಿರ್ಬಂಧವಿರುವ ಅವಧಿಯಲ್ಲಿ ಇವುಗಳ ಸ್ವಚ್ಛಂದ ವಿಹಾರಕ್ಕೆ ಅಡೆ ತಡೆ ಇರುವುದಿಲ್ಲ.
ಹೀಗೆ ತಲುಪಬಹುದು...
ಉಡುಪಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಮಲ್ಪೆ ಬೀಚ್‌ಗೆ ಬಂದರೆ, ಮಲ್ಪೆ ಬೀಚ್ ಹಾಗೂ ಸೀವಾಕ್ ಬಳಿಯಿಂದ ಈ ದ್ವೀಪಕ್ಕೆ ಬೋಟ್ ಸೇವೆ ಲಭ್ಯವಿರುತ್ತದೆ. ಮಲ್ಪೆ ಕಡಲತೀರದಿಂದ ಈ ದ್ವೀಪಕ್ಕೆ ಸುಮಾರು 4.5 ಕಿ.ಮೀ. ಅಂತರವಿದೆ.
ದ್ವೀಪ ಪ್ರವೇಶಕ್ಕೆ ಪ್ರತಿ ವರ್ಷ ಮೇ 15 ರಿಂದ ಸೆಪ್ಟೆಂಬರ್ 15ರ ವರೆಗೆ ನಿಷೇಧ ಹೇರಲಾಗುತ್ತದೆ. ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧವಾಗುವುದರಿಂದ ಬೋಟ್ ಮೂಲಕ ಸಾಗುವುದು ಅಪಾಯಕಾರಿಯಾದ ಕಾರಣ ಈ ಅವಧಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗುತ್ತದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ಬೋಟ್‌ಗಳು ಪ್ರವಾಸಿಗರನ್ನು ಈ ದ್ವೀಪಕ್ಕೆ ಕರೆದೊಯ್ಯುತ್ತವೆ. ದ್ವೀಪದಲ್ಲಿ ಸುಮಾರು ಒಂದು ಗಂಟೆ ಇರಲು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಈ ದ್ವೀಪಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ ಸೂಕ್ತ ಕಾಲ.
ಬೇಸಿಗೆ ಕಾಲದ ರಜಾದಿನಗಳಲ್ಲಿ ಪ್ರವಾಸಿಗರ ದಂಡೇ ಸೇಂಟ್ ಮೇರೀಸ್‌ಗೆ ತೆರಳಲು ಮಲ್ಪೆ ಬೀಚ್‌ನಲ್ಲಿ ಸರದಿಯಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಮಲ್ಪೆ ಬೀಚ್ ಮತ್ತು ಸೇಂಟ್ ಮೇರೀಸ್ ದ್ವೀಪದ ನಡುವಿನ ಕಡಲಲ್ಲಿ ಜಲ ಸಾಹಸ ಕ್ರೀಡೆಗಳೂ ಗರಿಗೆದರುತ್ತವೆ. ಬೋಟ್ ಮೂಲಕ ನಡೆಸುವ ಪ್ಯಾರ ಸೈಲಿಂಗ್, ಜೆಟ್‌ಸ್ಕಿ, ಸ್ಪೀಡ್ ಬೋಟ್‌ಗಳ ಸಾಹಸ ಪ್ರವಾಸಿಗರಿಗೆ ಹೆಚ್ಚು ಮುದ ನೀಡುತ್ತವೆ.
ಮಲ್ಪೆ ಸೀವಾಕ್‌ನಿಂದ ಬೋಟ್‌ನಲ್ಲಿ ಹೋಗುವುದಿದ್ದರೆ ಒಬ್ಬರಿಗೆ ₹360, ಮಲ್ಪೆ ಬೀಚ್‌ನಿಂದ ಹೋಗುವುದಿದ್ದರೆ ಒಬ್ಬರಿಗೆ ₹400 ಶುಲ್ಕವಿದೆ. ಉಡುಪಿಯ ಕೃಷ್ಣ ಮಠ, ಮಲ್ಪೆ ಬೀಚ್‌ಗೆ ರಜಾದಿನಗಳಲ್ಲಿ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಈ ದ್ವೀಪದ ಸೌಂದರ್ಯವನ್ನು ಸವಿಯುತ್ತಾರೆ. ದ್ವೀಪದಲ್ಲಿ ಅಂಗಡಿ, ಹೋಟೆಲ್‌ಗಳಾಗಲಿ ಇಲ್ಲ. ಆದ್ದರಿಂದ ಪ್ರವಾಸಿಗರೇ ನೀರು, ಆಹಾರ ಜೊತೆಗೆ ಕೊಂಡೊಯ್ಯುವುದು ಉತ್ತಮ. ದ್ವೀಪಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಕೊಂಡುಹೋಗುವುದನ್ನು ನಿಷೇಧಿಸಲಾಗಿದೆ.
ದ್ವೀಪದ ಅಪಾಯಕಾರಿ ಸ್ಥಳಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿ ಸಮುದ್ರದ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ದ್ವೀಪದಲ್ಲಿ ಪ್ರವಾಸಿಗರಿಗೆ ಶೌಚಾಲಯದ ವ್ಯವಸ್ಥೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.