ADVERTISEMENT

ನವಿಲುತೀರ್ಥದಲ್ಲಿ ಈಜುತ್ತಾ...

ಕಿರಣ ಯಲಿಗಾರ ಮುನವಳ್ಳಿ
Published 24 ಏಪ್ರಿಲ್ 2019, 19:30 IST
Last Updated 24 ಏಪ್ರಿಲ್ 2019, 19:30 IST
ನವಿಲು ತೀರ್ಥ
ನವಿಲು ತೀರ್ಥ   

ನವಿಲುತೀರ್ಥದಲ್ಲಿಈಜುತ್ತಾ...

ಸುತ್ತಲೂ ಕಲ್ಲುಬಂಡೆಗಳು, ಮಧ್ಯದಲ್ಲಿ ಶಾಂತವಾಗಿ ಹರಿಯುವ ತೊರೆ, ದೂರದಲ್ಲೆಲ್ಲೋ ಕೇಳಿಸುವ ನವಿಲಿನ ಕಂಠಸಿರಿ, ಬೆಟ್ಟದ ಮೇಲೊಂದು ದೇವಾಲಯ. ಇದು ನವಿಲುತೀರ್ಥ ಅಣೆಕಟ್ಟಿನ ಸುತ್ತಲಿನ ದೃಶ್ಯ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿರುವ ಈ ಅಣೆಕಟ್ಟು. ಇದು ಭರ್ತಿಯಾದಾಗ ನಾಲ್ಕು ಬದಿ ಗೇಟ್‌ಗಳನ್ನು ತೆರೆಯುತ್ತಾರೆ. ಗೇಟ್‌ ತೆರೆದಾಗ ರಭಸವಾಗಿ ನೀರು ಹರಿಯು ವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜೊತೆಗೆ ಅಲ್ಲಿನ ಕಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಅಣೆಕಟ್ಟೆಯ ಮೇಲೆ ಓಡಾಡಲು ನಿರ್ಬಂಧವಿದೆ.

ಆದರೆ ಅಣ್ಣೆಕಟ್ಟೆ ಸಮೀಪದ ರಾಮಲಿಂ‌ಗೇಶ್ವರ ದೇವಸ್ಥಾನದ ಮುಂಭಾಗದಿಂದ ಅಣೆಕಟ್ಟಿನ ಕೆಳಗೆ ಹೋಗಲು ಅವಕಾಶವಿದೆ. ಅಲ್ಲಿಂದ ಇಳಿಯಲು 110 ಮೆಟ್ಟಿಲುಗಳಿದ್ದು ಸುತ್ತಲೂ ಸಣ್ಣ ಪುಟ್ಟ ಬಂಡೆಕಲ್ಲುಗಳಿವೆ.ಅದನ್ನು ದಾಟಿ ಮುಂದೆ ಹೋದರೆ ಸಿಗುವುದು ಕಲ್ಲುಗಳಿಂದ ನಿರ್ಮಿತವಾದ ನೀರಿನ ಹೊಂಡಗಳು. ಸದಾ ಸ್ವಚ್ಛಂದವಾಗಿ ಹರಿಯುವ ನೀರಿನಲ್ಲಿ ಮನಸೋ ಇಚ್ಛೆ ಸ್ನಾನ ಮಾಡಬಹುದು. ತಣ್ಣನೆಯ ನೀರು ಮೈ ಮನಸ್ಸಿಗೂ ಆಹ್ಲಾದ ನೀಡುತ್ತವೆ. ಆದರೆ ಮಂಗಗಳ ಕಾಟ ಹೆಚ್ಚು. ಸ್ನಾನ ಮಾಡುತ್ತಾ ಮೈ ಮರೆತರೆ ನಿಮ್ಮ ಬ್ಯಾಗ್‌ ಮಂಗಗಳ ಪಾಲಾಗುವುದರಲ್ಲಿ ಆಶ್ಚರ್ಯವಿಲ್ಲ.

ADVERTISEMENT

ನೆನಪಿರಲಿ: ಅಣೆಕಟ್ಟಿನ ಗೇಟ್‌ ತೆರೆದಾಗ ನೀರಿನ ಹೊಂಡಕ್ಕೆ ಇಳಿಯುವುದು ಅಪಾಯಕಾರಿ. ಅಂದ ಹಾಗೆ ಈ ತಾಣದ ಸುತ್ತಾ ಆಗಾಗ ನವಿಲುಗಳು ಕೂಗು ಕೇಳಿಸುತ್ತದೆ. ಬಹುಶಃ ಅದೇ ಕಾರಣದಿಂದಲೇ ಈ ಸ್ಥಳಕ್ಕೆ ನವಿಲುತೀರ್ಥ ಎಂದು ಹೆಸರಿಟ್ಟಿರಬಹುದು.

ಪಕ್ಷಿಧಾಮ, ಉದ್ಯಾನ

ನವಿಲುತೀರ್ಥದ ಬಸ್‌ ನಿಲ್ದಾಣದಲ್ಲಿ ಇಳಿದ ಕೂಡಲೇ, ವೃತ್ತಾಕಾರದ ಕಮಾನು ನಿಮ್ಮನ್ನು ಸ್ವಾಗತಿಸುತ್ತದೆ. ಕಮಾನಿನ ಒಳಗೆ ನೇರವಾಗಿ ನಡೆದರೆ ಒಂದು ಕೆಳಭಾಗದ ದಾರಿ ಇದೆ. ಅದರ ಮೂಲಕ ಹೋದರೆ ಅಣೆಕಟ್ಟೆ ತಲುಪುತ್ತೇವೆ. ತಿರುವಿನಲ್ಲಿ ಎಡಕ್ಕೆ ಹೊರಳಿದರೆ ಅಲ್ಲೊಂದು ಒಂದು ಪಕ್ಷಿಧಾಮವಿದೆ. ಪಕ್ಕದಲ್ಲಿ ವಿಶ್ರಾಂತಿ ಗೃಹಗಳಿವೆ. ಸುಂದರ ಉದ್ಯಾನವನವಿದೆ. ಈ ಜಾಗದಲ್ಲಿ ಹಲವು ಕನ್ನಡ ಸಿನಿಮಾಗಳ ಶೂಟಿಂಗ್ ಸಹ ನಡೆದಿದೆ. ಬೆಳಗಾವಿ ಅಥವಾ ಹುಬ್ಬಳ್ಳಿ–ಧಾರವಾಡಕ್ಕೆ ಭೇಟಿ ನೀಡುವವರಿಗೆ ನವಿಲು ತೀರ್ಥ ಒಂದು ದಿನದ ಪಿಕ್ನಕ್‌ ತಾಣವಾಗುವುದರಲ್ಲಿ ಸಂದೇಹವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.