‘ಮಿಕ್ಕಿ ಮೌಸ್’, ‘ಡೊನಾಲ್ಡ್ ಡಕ್’ಗಳು ಭಾರತಕ್ಕೆ ಟಿ.ವಿ ಕಾಲಿಟ್ಟ ದಿನಗಳಿಂದಲೂ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸ್ಸಿನವರನ್ನೂ ಆಕರ್ಷಿಸುತ್ತಿದ್ದ ಕಾರ್ಟೂನುಗಳು. ಈ ಮಿಕ್ಕಿ ಮೌಸ್, ಡೊನಾಲ್ಡ್ ಡಕ್ ಮುಂತಾದ ಕಾರ್ಟೂನುಗಳು ಚಿರಂಜೀವಿಗಳೆಂದು ಅನಿಸುತ್ತದೆ! ಇವುಗಳ ಸೃಷ್ಟಿಕರ್ತ ‘ವಾಲ್ಟ್ ಡಿಸ್ನಿ’ ಎಂದೇ ಪ್ರಖ್ಯಾತರಾದ ‘ವಾಲ್ಟರ್ ಎಲಿಯಾಸ್ ಡಿಸ್ನಿ’. ಅವರು ಚಿತ್ರ ಕಲಾವಿದರಾಗಿ ವೃತ್ತಿ ಆರಂಭಿಸಿದರು. ಆದರೆ ಅವರು ಒಬ್ಬ ಅಪರೂಪದ ಕನಸುಗಾರ ಮಾತ್ರವಲ್ಲ, ಸಾಮಾನ್ಯರಿಗೆ ಕಲ್ಪನಾತೀತವಾದ ಲೋಕವನ್ನು ಸೃಷ್ಟಿಸಿ, ನಮ್ಮನ್ನೂ ಅವರ ಕನಸಿನ ಲೋಕದಲ್ಲಿ ಆನಂದೋಲ್ಲಾಸದಿಂದ ವಿಹರಿಸುವಂತೆ ಮಾಡಿರುವ ಜಾದೂಗಾರ.
ಯೂರೋಪ್ ಪ್ರವಾಸದಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್‌ನ ಡಿಸ್ನಿಲ್ಯಾಂಡ್‌ಗೆ ನಾವು ಕೆಲವರು ಭೇಟಿ ಕೊಟ್ಟಿದ್ದೆವು. ನಾವೀಗ ಮನೋಲ್ಲಾಸಕರವಾದ ಕಾರ್ಟೂನುಗಳನ್ನು ಬಿಟ್ಟು ಭಯಂಕರ ಧಾರಾವಾಹಿಗಳನ್ನು ನೋಡುತ್ತಿರುವುದರಿಂದ, ‘ಅಯ್ಯೋ ಸಣ್ಣ ಮಕ್ಕಳಿಗೆ ಏನೋ ಒಂದಿಷ್ಟು ಕಾರ್ಟೂನುಗಳಿರುತ್ತವೆ. ನಮ್ಮಂಥ ವಯಸ್ಸಾದವರಿಗೆ ಒಂದು ದಿನ ಪೂರ್ತಿ ನೋಡಲು ಅಲ್ಲಿ ಏನಿರುತ್ತೆ’ ಎಂದು ಸ್ವಲ್ಪ ಉಪೇಕ್ಷೆಯಿಂದಲೇ ಹೊರಟೆವು. ಡಿಸ್ನಿಲ್ಯಾಂಡ್‌ನ ಪ್ರವೇಶ ದ್ವಾರದಲ್ಲಿ ನೂರಾರು ಕಾರುಗಳು ಸಾಲುಗಟ್ಟಿ ಕಾಯುತ್ತಿದ್ದುದನ್ನು ಕಂಡು ‘ಓಹೋ, ಇಷ್ಟೊಂದು ಜನ ಬರುತ್ತಿದ್ದಾರೆ ಅಂದ್ರೆ ನೋಡಕ್ಕೆ ಪರವಾಗಿಲ್ಲ ಅನ್ಸುತ್ತೆ’ ಎಂಬ ಭಾವನೆ ಮೂಡಿತು.
ವಯಸ್ಸು ಮರೆತು ಹೋಯಿತು!
ಒಳಗೆ ಕಾಲಿಟ್ಟಿದ್ದೇ ತಡ ನಮ್ಮ ವಯಸ್ಸು ಮರೆತು ಹೋಯಿತು. ಬಾಲ್ಯದ ಉತ್ಸಾಹ ಮರುಕಳಿಸಿತು. ಅದೊಂದು ಬೆರಗಿನ ಲೋಕ. ನಮಗೆ ಕೊಟ್ಟಿರುವ ಸಮಯದಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಿಲ್ಲ ಅನಿಸಿತು. ಹೆಚ್ಚಿನ ಕಡೆ ಸರತಿ ಸಾಲಿನಲ್ಲಿ ಕಾಯಬೇಕು. ಸರಿ, ಇನ್ನು ಸಮಯ ವ್ಯರ್ಥ ಮಾಡುವುದು ಬೇಡ, ಇರುವ ಸಮಯದಲ್ಲಿ ಆದಷ್ಟನ್ನು ನೋಡಿಬಿಡಬೇಕೆಂದು ಎಂದು ನಿರ್ಧರಿಸಿದೆವು. ಎಲ್ಲವೂ ಕಣ್ಮನ ಸೆಳೆಯುವ ಆಕರ್ಷಣೆಗಳೇ. ಅಲ್ಲಲ್ಲಿ ಫೋಟೊ ತೆಗೆದುಕೊಳ್ಳುತ್ತಾ ಸಾಗಿದೆವು. ಡಿಸ್ನಿ ಕಾರ್ಟೂನ್, ಅನಿಮೇಷನ್ ಚಿತ್ರಗಳ ವೇಷತೊಟ್ಟ ಕಲಾವಿದರು ಒಂದು ಅತ್ಯಾಕರ್ಷಕ ವಾಹನದಲ್ಲಿ ಮೆರವಣಿಗೆ ಬಂದರು. ಅದನ್ನು ಕಣ್ತುಂಬಿಕೊಂಡು ಅದರ ಚಿತ್ರಗಳನ್ನು ಮೊಬೈಲಿಗೆ ತುಂಬಿಸಿಕೊಂಡು ಹೊರಟೆವು. ಸರತಿಸಾಲಿನಲ್ಲಿ ನಿಂತು ಡಿಸ್ನಿ ಟ್ರೈನ್ ಹತ್ತಿ ಡಿಸ್ನಿಲ್ಯಾಂಡ್‌ನ ಒಂದು ಸುತ್ತು ಹೊಡೆದೆವು. ಅಲ್ಲಿ ಇನ್ನೂ ಏನೇನು ನೋಡಲಿಕ್ಕಿದೆ ಎಂದು ಒಂದು ಅಂದಾಜು ಸಿಕ್ಕಿತು. ಆದರೆ ಟ್ರೈನ್ ಇಳಿದ ನಂತರ ಯಾವುದನ್ನು ನೋಡಲು ಎಲ್ಲಿಗೆ ಹೋಗಬೇಕು ಎಂದು ತಿಳಿಯದಾಯಿತು.
ಅಲ್ಲಲ್ಲೇ ಹಲವು ಕಡೆಗಳಲ್ಲಿ ಡಿಸ್ನಿ ಚಿತ್ರಗಳ ಪಾತ್ರಗಳು ಜೀವಪಡೆದಂತೆ ಓಡಾಡುತ್ತ ಮಕ್ಕಳಾದಿಯಾಗಿ ಎಲ್ಲರನ್ನೂ ರಂಜಿಸುತ್ತಿದ್ದವು. ಮಕ್ಕಳು ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಕಾರ್ಟೂನ್ ಪಾತ್ರಗಳ ಜೊತೆ ಫೋಟೊ ತೆಗೆಸಿಕೊಳ್ಳುತ್ತ, ಆಟೋಗ್ರಾಫ್ ಹಾಕಿಸಿಕೊಳ್ಳುತ್ತ ಸಂಭ್ರಮ ಪಡುತ್ತಿದ್ದರು. ಮಕ್ಕಳ ಸಂಭ್ರಮ ತಂದೆ ತಾಯಿಗಳಿಗೂ ವರ್ಗವಾಗುತ್ತಿತ್ತು. ‘ಪೈರೇಟ್ಸ್ ಆಫ್ ಕೆರಿಬಿಯನ್’ ಚಲನಚಿತ್ರ ಸರಣಿಯ ಹಡಗು, ಗುಹೆ ಮತ್ತಿತರ ಸೆಟ್‌ಗಳು ಸಿನಿಮಾದ ಒಳಗೆ ಸಂಚರಿಸಿದ ಅನುಭವ ನೀಡಿದವು. ಅಷ್ಟರಲ್ಲಿ ಹೊಟ್ಟೆ ಚುರುಗುಟ್ಟಲಾರಂಭಿಸಿದ್ದರಿಂದ ಹೋಟೆಲ್ ಹುಡುಕಿಕೊಂಡು ಹೊರಟೆವು. ಕ್ಯೂ ನಿಂತು ಪಡೆದ ಊಟ ಏನು ಗೊತ್ತೇ? ಅಲ್ಲಿಯೂ ಮಿಕ್ಕಿ ಮೌಸ್ ಆಕಾರದ ಪಿಜ್ಜಾ!
ವಾಲ್ಟ್ ಡಿಸ್ನಿ 1901ರಲ್ಲಿ ಅಮೆರಿಕದ ಶಿಕಾಗೊದಲ್ಲಿ ಹುಟ್ಟಿದರು. 18ನೇ ವಯಸ್ಸಿನಲ್ಲಿಯೇ ಕ್ಯಾಲಿಫೋರ್ನಿಯಾಗೆ ತೆರಳಿ ಚಿತ್ರಕಾರನಾಗಿ ವೃತ್ತಿ ಪ್ರಾರಂಭಿಸಿದರು. 1920ರಲ್ಲಿ ಸೋದರನ ಜೊತೆಗೂಡಿ ‘ಡಿಸ್ನಿ ಬ್ರದರ್ಸ್ ಸ್ಟುಡಿಯೊ’ ಪ್ರಾರಂಭಿಸಿದರು. 1928ರಲ್ಲಿ ಇವರು ಸೃಷ್ಟಿಸಿದ ‘ಮಿಕ್ಕಿ ಮೌಸ್’ ಅವರ ಭವಿಷ್ಯವನ್ನೇ ಬದಲಿಸಿತು. ಕನಸುಗಾರ, ಜಾದೂಗಾರ ಡಿಸ್ನಿ ಮಿಕ್ಕಿ ಮೌಸ್ ಬರೀ ಕಾರ್ಟೂನ್ ಚಿತ್ರವಾಗಿರಲು ಬಿಡಲಿಲ್ಲ. ಅದಕ್ಕೆ ಚಲನೆ ಕೊಟ್ಟು, ಅದಕ್ಕೆ ತಾನೇ ಧ್ವನಿಯಾದರು. ಹೀಗೆ ‘ಅನಿಮೇಶನ್’ ಉದ್ಯಮದ ಅಧಿಪತಿಯಾದರು. ನಂತರ ಚಲನಚಿತ್ರಗಳ ಉದ್ಯಮಕ್ಕೂ ಪ್ರವೇಶಿಸಿ ಅತಿ ಹೆಚ್ಚು ಅಕಾಡೆಮಿ ಅವಾರ್ಡ್, ಎರಡು ಬಾರಿ ಗೋಲ್ಡನ್ ಗ್ಲೋಬ್ ಅವಾರ್ಡ್, ಎಮ್ಮಿ ಅವಾರ್ಡ್, ಅನೇಕ ಬಾರಿ ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದ ಪ್ರಶಸ್ತಿಗಳು ಅವರ ಖಾತೆ ಸೇರಿವೆ.
ಊಟದ ನಂತರ ‘ಒಗಟಿನ ದಾರಿ’ಯಲ್ಲಿ ಆತುರಾತುರವಾಗಿ ನಡೆದು ರಾಜಕುಮಾರಿಯ ಅರಮನೆಯ ಗೋಪುರದ ಮೇಲೇರಿ ಖುಷಿಪಟ್ಟೆವು. ಅರೇಬಿಯಾದ ಅಲ್ಲಾವುದ್ದೀನ್ ಅದ್ಭುತ ದೀಪದ ಕಥೆ ನೋಡಿದೆವು. ಹೀಗೆ ಆದಷ್ಟು ಹೆಚ್ಚು ನೋಡಿಬಿಡಬೇಕೆಂಬ ಧಾವಂತದಲ್ಲಿ ನಮ್ಮ ವಯಸ್ಸನ್ನೂ ಮರೆತು ಅಡ್ಡಾದಿಡ್ಡಿಯಾಗಿ ವೇಗವಾಗಿ ಚಲಿಸುವ, ರಭಸದಿಂದ ತಲೆಕೆಳಗಾಗುವಂತೆ ಸುತ್ತುಹೊಡೆಯುವ ‘ರೋಲರ್ ಕೋಸ್ಟರ್’ನಲ್ಲಿ ಕುಳಿತುಕೊಳ್ಳುವ ದುಸ್ಸಾಹಸವನ್ನೂ ಮಾಡಿಬಿಟ್ಟೆವು. ವಯಸ್ಸಾದವರು, ಕಾಯಿಲೆಗಳು, ಭಯ, ಆತಂಕ ಇರುವವರು ಇಂಥ ರೈಡ್‌ಗಳಲ್ಲಿ ಹೋಗುವುದು ಒಳ್ಳೆಯದಲ್ಲ. ಎಲ್ಲ ಕಡೆಯೂ ಸರತಿ ಸಾಲುಗಳು ಹೆಚ್ಚುತ್ತಿದ್ದವು. ಸರತಿ ಸಾಲು ಹೆಚ್ಚಾಗಿದ್ದಷ್ಟೂ ಅದರ ಆಕರ್ಷಣೆಯೂ ಹೆಚ್ಚು ಎಂದು ಅನುಭವದಿಂದ ಕಲಿತಿದ್ದೆವು.
ಹಾಗೆಯೇ ಹೆಚ್ಚು ಹೊತ್ತು ಸರತಿಯಲ್ಲಿ ಕಾದು ನೋಡಿದ ‘ಅದೊಂದು ಪುಟ್ಟ ಪ್ರಪಂಚ’ (‘It is a small world’) ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ಅಲ್ಲಿ ನಾವು ದೋಣಿಯಲ್ಲಿ ತೇಲುತ್ತಾ ಪ್ರಪಂಚದ ಎಲ್ಲ ಖಂಡಗಳ ಸಾಂಸ್ಕೃತಿಕ ಜಗತ್ತನ್ನು ಅನಾವರಣಗೊಳಿಸುವ ಚಲಿಸುವ ಗೊಂಬೆಗಳ ಲೋಕದಲ್ಲಿ ಪಯಣಿಸಿದೆವು. ಆ ಅನುಭವವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಆದರೆ ಎಷ್ಟೊಂದು ಗೊಂಬೆಗಳು, ಎಷ್ಟೊಂದು ಅಲಂಕಾರ...ನೋಡಲು ಎರಡು ಕಣ್ಣುಗಳು ಸಾಲದು. ಏಕೆಂದರೆ ಆ ಪುಟ್ಟ ಪಯಣದಲ್ಲಿ 300ಕ್ಕೂ ಹೆಚ್ಚು ಗೊಂಬೆಗಳಿವೆ. ಒಂದಕ್ಕಿಂತ ಒಂದು ಮುದ್ದಾಗಿವೆ, ಜೊತೆಗೆ ಚಲನೆಯೂ ಕೂಡ.
ಪ್ಯಾರಿಸ್‌ನ ಈ ಡಿಸ್ನಿಲ್ಯಾಂಡ್ 1992ರಲ್ಲಿ ಪ್ರಾರಂಭವಾಗಿ ಈಗ 30ನೇ ವರ್ಷಾಚರಣೆ ನಡೆಯುತ್ತಿದೆ. ಪ್ರಾರಂಭದಲ್ಲಿ ಫ್ರಾನ್ಸ್‌ನಲ್ಲಿ ವಿರೋಧ ಎದುರಿಸಬೇಕಾಯಿತು. ಇದು ಫ್ರಾನ್ಸ್ ಸಂಸ್ಕೃತಿಯ ಮೇಲೆ ಅಮೆರಿಕದ ಸಾಮ್ರಾಜ್ಯಶಾಹಿಯ ದಾಳಿ ಎಂದು ಪ್ರತಿಭಟನೆಗಳು ನಡೆದವು. ನಂತರ ನೌಕರರು ಅಮೆರಿಕ ಮಾದರಿಯ ಸಮವಸ್ತ್ರಗಳು ತಮ್ಮ ಖಾಸಗಿತನದ ಮೇಲೆ ಹೇರಿಕೆ ಎನ್ನುವ ಪ್ರತಿರೋಧ ತೋರಿಸಿದರು. ಕೆಲವು ವರ್ಷಗಳು ಆರ್ಥಿಕ ನಷ್ಟವನ್ನು ಅನುಭವಿಸಿತು. ನಂತರ ಡಿಸ್ನಿಯವರ ನೇರ ಆಡಳಿತದಿಂದ ಪ್ಯಾರಿಸ್‌ನ ಈ ಡಿಸ್ನಿಲ್ಯಾಂಡ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ 30 ವರ್ಷಗಳಲ್ಲಿ 32 ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿ ಯೂರೋಪಿನಲ್ಲಿ ಅತ್ಯಧಿಕ ಜನರು ವೀಕ್ಷಿಸಿರುವ ಥೀಮ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಷ್ಟು ನೋಡುವಷ್ಟರಲ್ಲಿ ನಾವು ಹೊರಡುವ ಸಮಯವಾಯಿತು. ‘ಛೇ, ಇಷ್ಟು ಬೇಗ ಒಂದು ದಿನ ಕಳೆದು ಹೋಯಿತೇ? ನಾವು ಬೆಳಗ್ಗೆ ಇನ್ನಷ್ಟು ಬೇಗ ಬರಬೇಕಾಗಿತ್ತು, ಇನ್ನಷ್ಟು ನೋಡಬಹುದಾಗಿತ್ತು, ಆಟ ಆಡಬಹುದಾಗಿತ್ತು’ ಎಂದು ನೋಡಿದ ಸಂತೋಷಕ್ಕಿಂತ ನೋಡದೇ ಉಳಿದಿದ್ದರ ಬಗ್ಗೆ ವಿಷಾದದಿಂದಲೇ ಡಿಸ್ನಿಲ್ಯಾಂಡ್‌ಗೆ ವಿದಾಯ ಹೇಳಿದೆವು.
ನಿಜಕ್ಕೂ ವಾಲ್ಟ್ ಡಿಸ್ನಿ ಒರ್ವ ಮಹಾನ್ ಕನಸುಗಾರ, ಜಾದೂಗಾರನೇ ಸರಿ. ಸಿಂಗಪುರದ ಡಿಸ್ನಿಲ್ಯಾಂಡ್ ಉದ್ಘಾಟನೆ ಸಂದರ್ಭದಲ್ಲಿ ಅಲ್ಲಿಯ ಮುಖ್ಯಸ್ಥ ‘ಇದನ್ನು ನೋಡಲು ಡಿಸ್ನಿ ಇರಬೇಕಿತ್ತು’ ಎಂದರಂತೆ. ಅದಕ್ಕೆ ಡಿಸ್ನಿಯವರ ಪತ್ನಿ ‘ಆತ ಇದನ್ನೆಲ್ಲ ಆಗಲೇ ನೋಡಿದ್ದಾನೆ’ ಎಂದರಂತೆ. ಹೌದಲ್ಲವೇ ಅನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.