ADVERTISEMENT

ಪ್ರವಾಸ: ಮಾಚು ಪಿಚುವಿಗೆ ಮನಸೋತಾಗ...

ವಿ.ಶ್ರೀನಿವಾಸ
Published 3 ಮೇ 2025, 23:30 IST
Last Updated 3 ಮೇ 2025, 23:30 IST
ಆಂಡಿಸ್‌ ಪರ್ವತ ಶ್ರೇಣಿಯಲ್ಲಿರುವ ಇಂಕಾ ಸಾಮ್ರಾಜ್ಯದ ಕೋಟೆಯ ವಿಹಂಗಮ ನೋಟ...
ಆಂಡಿಸ್‌ ಪರ್ವತ ಶ್ರೇಣಿಯಲ್ಲಿರುವ ಇಂಕಾ ಸಾಮ್ರಾಜ್ಯದ ಕೋಟೆಯ ವಿಹಂಗಮ ನೋಟ...   
ದಕ್ಷಿಣ ಅಮೆರಿಕದ ಪೆರುವಿನ ಆಂಡಿಸ್‌ ಪರ್ವತ ಶ್ರೇಣಿಯಲ್ಲಿರುವ ಇಂಕಾ ಸಾಮ್ರಾಜ್ಯದ ಅವಶೇಷ ನೋಡುಗರನ್ನು ಬೆರಗಾಗಿಸುತ್ತದೆ. ಕಡಿದಾದ ಬೆಟ್ಟದ ತುದಿಯಲ್ಲಿ ಬಂಡೆಕಲ್ಲುಗಳನ್ನು ಬಳಸಿ 14ನೇ ಶತಮಾನದಲ್ಲಿ ಇಂಕಾ ದೊರೆಗಳು ನಿರ್ಮಿಸಿದ ಈ ನಗರ ಅತ್ಯಂತ ರಮಣೀಯ ತಾಣ. ಇಲ್ಲಿ ಕಲ್ಲಿನಲ್ಲಿ ಅಚ್ಚುಕಟ್ಟಾದ ಕಟ್ಟಡಗಳನ್ನು ಕಟ್ಟಿದ ರೀತಿ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ...

ನಮ್ಮ ಮಕ್ಕಳು ರೆಕ್ಕೆ ಕಟ್ಟಿಕೊಂಡು ಅಮೆರಿಕಕ್ಕೆ ಹಾರಿಹೋದ ಮೇಲೆ ನಾವು ಅಲ್ಲಿಗೆ ಎರಡು ಬಾರಿ ಹೋಗಿ ಹಲವಾರು ಸ್ಥಳಗಳನ್ನು ನೋಡಿ ಬಂದಿದ್ದೆವು. ಮೂರನೇ ಬಾರಿ ಹೋಗುವ ಸಂದರ್ಭ ಬಂದಾಗ ಲೇಖಕಿ ನೇಮಿಚಂದ್ರ ಅವರ ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಪುಸ್ತಕದಿಂದ ಪ್ರೇರಿತರಾಗಿ ಅದನ್ನು ನೋಡುವ ಕನಸಿನ ಬೀಜ ಮೊಳಕೆಯೊಡೆಯಿತು.

ಉತ್ತರ ಅಮೆರಿಕದಿಂದ ದಕ್ಷಿಣ ಅಮೆರಿಕದ ಪೆರುವಿನ ರಾಜಧಾನಿ ಲೀಮಾಕ್ಕೆ ಪ್ರಯಾಣ ಬೆಳೆಸಿದೆವು. ಭೂಪಟದಲ್ಲಿ, ಗೋಳದಲ್ಲಿ ಮೇಲೆ ಕೆಳಗೆ ಇರುವ ಖಂಡಗಳನ್ನು ನೋಡಿ ಅಲ್ಲೇ ಆಚೆಈಚೆ ಇವೆ ಎಂಬ ಭಾವನೆ. ಆದರೆ ಅಗಾಧ ದೂರದ ಕಲ್ಪನೆಯೇ ಇರಲಿಲ್ಲ. ವಿಮಾನದಲ್ಲಿಯೇ ಸುಮಾರು ಹನ್ನೆರಡು ಗಂಟೆಗಳ ಪ್ರಯಾಣ. ಮರುದಿನ ಲೀಮಾದಿಂದ ಕುಸ್ಕೋ ನಗರಕ್ಕೆ ಮತ್ತೊಂದು ವಿಮಾನ ಪ್ರಯಾಣ. ಆಂಡಿಸ್ ಪರ್ವತದ ಮಡಿಲಿನಲ್ಲಿರುವ ಕುಸ್ಕೋ ನಗರ 11,600 ಅಡಿಗಳಷ್ಟು ಎತ್ತರದಲ್ಲಿದೆ. ಆದರೆ ಆ ನಗರ ಒಂದು ಬೋಗುಣಿಯಂತಿದ್ದು, ಸುತ್ತಲೂ ಪರ್ವತಗಳಿರುವುದರಿಂದ ನಾವು ಎತ್ತರದಲ್ಲಿದ್ದೇವೆ ಎಂದು ತಿಳಿಯುವುದೇ ಇಲ್ಲ. ಕುಸ್ಕೋ ತಲುಪಿದಾಗ ಆ ಇಡೀ ದಿನ ವಿಶ್ರಾಂತಿಗೆ ಮೀಸಲಾಗಿತ್ತು. ಏಕೆ ಹೀಗೆ ಎಂದುಕೊಂಡೆವು. ಊಟವಾಗಿ ಸ್ವಲ್ಪ ಹೊತ್ತಿನ ನಂತರ ಅರಿವಾಗತೊಡಗಿತು. ಆ ಎತ್ತರದಲ್ಲಿ ಕಡಿಮೆ ಆಮ್ಲಜನಕದ ಕಾರಣ ತಲೆನೋವು, ವಾಂತಿ ಮುಂತಾದ ಅಸ್ವಸ್ಥತೆ ಶುರುವಾಯಿತು.

ಕುಸ್ಕೋ ಇಂದಿಗೂ ಇಂಕಾ ಕಾಲದಂತೆಯೇ ಉಳಿದಿದೆ. ಶತಮಾನಗಳ ಆಳಕ್ಕೆ ಇಳಿದ ಅನುಭವ. ಪುರಾತನ ಇಂಕಾ ಸಾಮ್ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ರಾಜಧಾನಿ. ಇಂದಿಗೂ ಅನೇಕ ಇಕ್ಕಟ್ಟಾದ ರಸ್ತೆಗಳಲ್ಲಿ ಇಂಕಾ ಕಾಲದ ಕಲ್ಲಿನ ನೆಲಹಾಸುಗಳಿವೆ. ಒಂದು ಸಣ್ಣ ಕಾರು ಹೋಗಬಹುದಾದ ಕಿರಿದಾದ ರಸ್ತೆಗಳಲ್ಲಿ ಎಲ್ಲೂ ಒನ್‌ವೇ ಎಂದು ಬೋರ್ಡ್ ಇರದಿದ್ದರೂ ಕಾರುಗಳು ಏಕಮುಖವಾಗಿ ಮಾತ್ರ ಸಲೀಸಾಗಿ ಓಡಾಡುತ್ತವೆ. 1983ರಲ್ಲಿ ಯುನೆಸ್ಕೋ ಈ ನಗರವನ್ನು ಐತಿಹಾಸಿಕ ತಾಣವೆಂದು ಗುರುತಿಸಿದೆ. ನಗರದ ಹೊರವಲಯದ ಒಂದು ಭಾಗದಲ್ಲಿ ಗುಡ್ಡದ ಮೇಲೆ ಕೋಟೆಯ ಅವಶೇಷಗಳಿವೆ. ಚಕ್ರದ ಬಳಕೆಯೂ ಅವರಿಗೆ ಗೊತ್ತಿಲ್ಲದ ಕಾಲದಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಜೋಡಿಸಿ ಭೂಕಂಪವನ್ನು ಸಹಿಸುವಂತೆ ಕೋಟೆ ಕಟ್ಟಿದ್ದಾರೆ!

ADVERTISEMENT

ನಗರದ ಉತ್ತರ ಭಾಗದಲ್ಲಿ ಒಂದು ಗುಡ್ಡದ ಮೇಲೆ ತೆರೆದ ಬಾಹುಗಳ ಏಸುವಿನ ಶಾಂತಮೂರ್ತಿ ಇದೆ. ಆದರೆ ನಗರದಲ್ಲಿರುವ ವೈಭವೋಪೇತ ಚರ್ಚುಗಳು ಸ್ಪಾನಿಶರ ಲೂಟಿ, ಹಿಂಸಾಕಾಂಡ, ರಕ್ತಸಿಕ್ತ ಚರಿತ್ರೆಯ ಕುರುಹುಗಳಾಗಿ ಉಳಿದಿವೆ. ಕುಸ್ಕೋ ನಗರದ ಮಧ್ಯಭಾಗದಲ್ಲಿ ಪ್ಲಾಜಾ ಡಿರ‍್ಮಾಸ್ ಎಂಬ ಆಕರ್ಷಣೀಯ ಸ್ಕ್ವೇರ್‌ ಇದೆ. ಸಣ್ಣ ಪಾರ್ಕ್ ಸುತ್ತಲೂ ಸ್ಪಾನಿಶ್ ಕಾಲದ ಕಟ್ಟಡಗಳು, ಸುತ್ತಲೂ ಬೆಟ್ಟಗುಡ್ಡಗಳ ಸಾಲು. ಆ ಬೆಟ್ಟದ ಮೇಲೆ ನಾಸ್ಕಾ ಗೆರೆಗಳನ್ನು ಅನುಸರಿಸಿ ಪೆರು ಎಂದು ಬೃಹದಾಕಾರವಾಗಿ ಬರೆದಿರುವುದು ಇಲ್ಲಿಂದ ಕಾಣುತ್ತದೆ. ಈ ಸ್ಕ್ವೇರ್‌ ಸದಾ ಸ್ಥಳೀಯರಿಂದ, ಪ್ರವಾಸಿಗಳಿಂದ ತುಂಬಿರುತ್ತದೆ. ಸಹಜವಾಗಿ ಬೀದಿಬದಿ ತಿನಿಸುಗಳು ಪ್ರವಾಸಿಗರ ಆಕರ್ಷಣೆ. ಇಲ್ಲಿ ನಮಗೆ ವಿಶೇಷವಾಗಿ ಕಂಡಿದ್ದು ಹಲವಾರು ಮಾರಾಟಗಾರರು ಚಿತ್ರಕಲಾಕೃತಿಗಳನ್ನು ಮಾರುತ್ತಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ಚಿತ್ರಕಲಾಕೃತಿಗಳಿಗೆ ಭಾರೀ ಬೆಲೆ ಇದೆ. ಹರಾಜುಗಳಲ್ಲಿ ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟವಾಗುತ್ತವೆ.

ಮಾಚು ಪಿಚುವಿಗೆ ನಾವು ಹೋಗಿದ್ದು ಸುತ್ತಮುತ್ತಲ ಪ್ರಕೃತಿ ಸೌಂದರ್ಯದ ನೋಟಕ್ಕೆ ಅನುಕೂಲವಾಗುವಂತೆ ವಿಶಾಲ ಗಾಜುಗಳಿಂದ ನಿರ್ಮಿಸಲಾದ ವಿಸ್ಟಾಡೋಂ ರೈಲಿನಲ್ಲಿ. ವಿಮಾನದ ಗಗನಸಖಿಯರ ಹಾಗೆ ಗಾಡಿ ತಳ್ಳಿಕೊಂಡು ಬಂದು ಸಿರಿಧಾನ್ಯದ ಬಿಸ್ಕತ್ತು, ಚಾಕೋಲೆಟ್‌, ಕಾಫಿ, ಟೀ ಕೊಟ್ಟರು. ನಂತರ ಒಂದೊಂದೇ ಬೋಗಿಯ ಪ್ರಯಾಣಿಕರನ್ನು ರೈಲಿನ ಕಡೆಯ ಬೋಗಿಗೆ ಕರೆದೊಯ್ದರು. ಅಲ್ಲಿ ಈ ಪರಿಚಾರಕರೇ ಕಲಾವಿದರಾಗಿ ಹಾಡು ನೃತ್ಯಗಳಿಂದ ರಂಜಿಸಿದರು. ಪಾನಪ್ರಿಯರಿಗೆ ಅಲ್ಲಿ ಕೊಳ್ಳಲು ಪಾನೀಯವೂ ಇತ್ತು. ತೆರೆದ ಜಾಗದಲ್ಲಿ ಪ್ರಕೃತಿಯ ದೃಶ್ಯವನ್ನೂ ವೀಕ್ಷಿಸಬಹುದಿತ್ತು. ನಂತರ ಅದೇ ಪರಿಚಾರಕ, ಕಲಾವಿದರು ಮಾರಾಟಗಾರರಾಗಿ ಬದಲಾಗಿ ವಿವಿಧ ವಸ್ತುಗಳನ್ನು ಮಾರಲು ಬಂದರು! ಒಟ್ಟಿನಲ್ಲಿ ಮಾಚು ಪಿಚು ರೈಲಿನ ಪ್ರಯಾಣ ಮರೆಯಲಾಗದ ಅನುಭವ. ರೈಲಿನಲ್ಲಿ ಕನ್ನಡಿಗರೊಬ್ಬರು ಸಿಕ್ಕಿದ್ದರು. ನಾವು ಕನ್ನಡ ಮಾತನಾಡುತ್ತಿದ್ದುದನ್ನು ಕೇಳಿದ ಅವರ ಮರಾಠಿ ಹೆಂಡತಿ ‘ಅದು ಕನ್ನಡವೋ ತೆಲುಗೋ’ ಎಂದು ತನ್ನ ಕನ್ನಡಿಗ ಗಂಡನ್ನು ಕೇಳಿದರಂತೆ. ಅವರು ಬಹಳ ಸಂತೋಷದಿಂದ ನಮ್ಮೊಡನೆ ಕನ್ನಡದಲ್ಲಿ ಮಾತನಾಡಿದರು.

ಮಾಚು ಪಿಚು ಬೆಟ್ಟಕ್ಕೆ ಖಾಸಗಿ ವಾಹನ ಹೋಗುವಂತಿಲ್ಲ. ಬಹಳ ವ್ಯವಸ್ಥಿತವಾದ ಬಸ್ ಸೌಲಭ್ಯ ಇದೆ. ಉತ್ತಮ ರಸ್ತೆಯಲ್ಲಿ ಸುಮಾರು ಒಂದು ಗಂಟೆಯ ಬಸ್ ಪ್ರಯಾಣದುದ್ದಕ್ಕೂ ದಟ್ಟವಾಗಿ ಸುತ್ತಲೂ ಸುತ್ತುವರಿದ ಆಂಡಿಸ್ ಪರ್ವತದ ಸಾಲುಗಳು, ಕಿರಿದಾದ ಕಣಿವೆಗಳು, ಕಣಿವೆಯಾಳದಲ್ಲಿ ಹರಿವ ನದಿಯ ಅದ್ಭುತ ನೋಟ ಬೆರಗಾಗಿಸುವಂಥದ್ದು. ನೋಡುವ ಗುರಿಯಷ್ಟೇ ಕ್ರಮಿಸುವ ಹಾದಿಯೂ ರಮ್ಯ ಮನೋಹರ. ಮಾಚುಪಿಚು ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಲ್ಲಿಲ್ಲ. ಅಷ್ಟು ದೂರದ ಪ್ರಯಾಣ ಸಾರ್ಥಕವೆನಿಸಿತು. ಪೆರುವನ್ನು ನೂರಾರು ವರ್ಷ ಆಳಿದ ಸ್ಪ್ಯಾನಿಷರಿಗೆ ಮಾಚು ಪಿಚು ನಗರ ಸಿಕ್ಕಿರಲಿಲ್ಲ. 1911ರಲ್ಲಿ ಸ್ಥಳೀಯರ ಸಹಾಯದಿಂದ ಅಮೆರಿಕದ ಹಿರಮ್‌ಬಿಂಗಮ್ ಇದನ್ನು ಕಂಡುಹಿಡಿದಿದ್ದ. ಇಷ್ಟು ಕಡಿದಾದ ಬೆಟ್ಟದ ತುದಿಯಲ್ಲಿ ಇಂಕಾ ದೊರೆಗಳು ತಮ್ಮ ನಗರವನ್ನು ಬೃಹದಾಕಾರದ ಬಂಡೆಗಳಿಂದ ನಿರ್ಮಿಸಿದ್ದಾದರೂ ಯಾಕೆ ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ. ಇದು ಕೋಟೆ, ಅರಮನೆ ನಗರ ಅಲ್ಲ. ಇದೊಂದು ತರಬೇತಿ, ಅಧ್ಯಯನ, ಉನ್ನತ ಶಿಕ್ಷಣ, ಅಧ್ಯಾತ್ಮ ತರಬೇತಿ ಕೇಂದ್ರ ಮುಂತಾಗಿ ಇತಿಹಾಸ ತಜ್ಞರು ಚರ್ಚೆ, ಅಧ್ಯಯನ ಮುಂದುವರೆಸಿದ್ದಾರೆ. ಮಾಚುಪಿಚು ರಹಸ್ಯ ರೋಮಾಂಚನದ ನಗರ. ಅತ್ಯಂತ ರಮಣೀಯ ತಾಣ. ಆಂಡಿಯನ್ ಸಂಸ್ಕೃತಿಯ ಉತ್ಕೃಷ್ಟತೆಯ ಸಂಕೇತ. ಇಲ್ಲಿ ಅಧ್ಯಾತ್ಮ ಶಕ್ತಿ ಇದೆ ಎಂದು ಇಂಕಾಗಳು ನಂಬಿದ್ದರು. ನಾವು ಹಿಮಾಲಯ ಪರ್ವತಗಳ ಬಗ್ಗೆ ನಂಬಿರುವ ಹಾಗೆ. ಈ ಪರಿಸರದಲ್ಲಿ ಆಧ್ಯಾತ್ಮಿಕ ಶಕ್ತಿ ಯಥೇಚ್ಛವಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಕಟ್ಟಡಗಳೆಲ್ಲ ಬಂಡೆಕಲ್ಲಿನಿಂದ ಕಟ್ಟಿದವು. ಒಂದೊಂದು ಕಲ್ಲನ್ನೂ ಅದೆಷ್ಟು ಕೋನಗಳಿಂದ ಅದೆಷ್ಟು ಸೂಕ್ಷ್ಮವಾಗಿ ಕತ್ತರಿಸಿ ಜೋಡಿಸಿದ್ದಾರೆ. ಮೇಲೆ ಹುಲ್ಲುಹಾಸಿನ ಹೊದಿಕೆ ಸೂರು. ಈ ರೀತಿ ಕಟ್ಟಡ ಕಟ್ಟುವ ತಾಂತ್ರಿಕತೆ ಹೇಗೆ ಬಂತು? ಇಂದಿಗೂ ನಿಗೂಢವಾಗಿದೆ.

14ನೇ ಶತಮಾನದಲ್ಲಿ ಇಂಕಾಗಳು ಇದನ್ನು ಕಟ್ಟಿದರು. 16ನೇ ಶತಮಾನದವರೆಗೂ ಜೀವಂತವಿದ್ದ ನಗರ. 1912ರಲ್ಲಿ ಈ ಸ್ಥಳವನ್ನು ಉತ್ಖನನದ ಮೂಲಕ ಪುನರುಜ್ಜೀವನಗೊಳಿಸಲಾಯಿತು. 400 ವರ್ಷಗಳ ಯೂರೋಪಿಯನ್ನರ ಲೂಟಿಯಿಂದ ಪಾರಾಗಿದ್ದ ಈ ಸ್ಥಳ ಅಮೆರಿಕದಿಂದ ಲೂಟಿಯಾಯಿತೇ? ಉತ್ಖನನ ಮಾಡಿದಾಗ ಸಿಕ್ಕಿರಬಹುದಾದ ಚಿನ್ನ ಬೆಳ್ಳಿ ಏನಾಯಿತು? ಹಿರಮ್‌ಬಿಂಗಮ್ ಏನೂ ಹೇಳಿಲ್ಲ. ಅಂದು ಬೆಟ್ಟದಿಂದ ವಾಪಸ್ ಬಂದು ಮತ್ತೆ ಮರುದಿನ ಬಸ್ ಮೂಲಕ ಬೆಟ್ಟಕ್ಕೆ ಹೋದೆವು. ನಾವು ಹೋದಾಗ ತುಂತುರಿನ ಮಳೆ. ಹಾಗೇ ಮಾಚು ಪಿಚು ಬೆಟ್ಟದ ಚಾರಣ ಮಾಡಿ ಮತ್ತೊಮ್ಮೆ ಮಾಚು ಪಿಚು ನಗರವನ್ನು ವಿವಿಧ ಕೋನಗಳಲ್ಲಿ ವಿವಿಧ ಎತ್ತರದಿಂದ ಕಣ್ತುಂಬಿಕೊಂಡೆವು.

ಕಣಿವೆಯಾಳದಲ್ಲಿ ಹರಿಯುವ ನದಿಯ ಅದ್ಭುತ ನೋಟ...
ಮಾಚು ಪಿಚು ನಗರದ ಅವಶೇಷ
ಮಾಚು ಪಿಚುವಿಗೆ ವಿಸ್ಟಾಡೋಂ ರೈಲಿನಲ್ಲಿ ಸಾಗುವಾಗ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.