ಭುವನೇಶ್ವರದಿಂದ ಎಂಟು ಕಿಲೋಮೀಟರ್ ದೂರದಲ್ಲಿ ಧವಳಗಿರಿ ಎಂಬ ಸಣ್ಣ ಗುಡ್ಡದಲ್ಲಿ ಶಾಂತಿ ಸ್ತೂಪವಿದೆ. ದಯಾ ನದಿಯ ದಂಡೆಯ ಮೇಲಿದೆ ಈ ಧವಳಗಿರಿ ಬೆಟ್ಟ. ಇದು ಭಾರತದ ಚರಿತ್ರೆಯಲ್ಲಿ ಬಹಳ ಮಹತ್ವವನ್ನು ಪಡೆದಿದೆ. ಜಗತ್ತಿನ ಅತ್ಯಂತ ಭಯಂಕರ ಯುದ್ಧಗಳಲ್ಲಿ ಒಂದಾದ ಕಳಿಂಗ ಯುದ್ಧ ಇದೇ ಪ್ರದೇಶದಲ್ಲಿ ನಡೆದು ಸುಮಾರು ಎರಡು ಲಕ್ಷ ಸೈನಿಕರು ಪ್ರಾಣ ಕಳೆದುಕೊಂಡಿದ್ದರ ಪರಿಣಾಮ ಇಲ್ಲಿರುವ ದಯಾ ನದಿ ರಕ್ತಸಿಕ್ತವಾಗಿತ್ತು. ಈ ಯುದ್ಧದ ನೋಟವೇ ಅಶೋಕನನ್ನು ಮಮ್ಮಲ ಮರುಗುವಂತೆ ಮಾಡಿತ್ತು. ತನ್ನ ತಪ್ಪಿನ ಅರಿವಾಗಿ ಶಾಶ್ವತವಾಗಿ ಶಾಂತಿಯ ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆಯನ್ನು ಅಶೋಕ ಇಲ್ಲಿಯೇ ಮಾಡಿದ್ದು.
ಬೌದ್ಧ ಧರ್ಮದ ಅನುಯಾಯಿಯಾದ ರಾಜ ಅಶೋಕನಿಗೆ ಶಾಂತಿ ಮಂತ್ರವೇ ಬುನಾದಿಯಾಗಿತ್ತು. ಕಳಿಂಗ ಯುದ್ಧದ ಕೊನೆಯ ಭಾಗದಲ್ಲಿ ಧವಳಗಿರಿಯಲ್ಲಿ ಅಶೋಕ ಈ ಶಾಂತಿ ಸ್ತೂಪದ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದ್ದನು. ಇಲ್ಲಿರುವ ಒಂದು ಶಾಸನ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಬೌದ್ಧ ಬಿಕ್ಕುಗಳು ಭೇಟಿ ನೀಡಿದ್ದಾರೆಂದು ತಿಳಿಸುತ್ತದೆ. ಇಲ್ಲಿರುವ ಹಲವಾರು ಶಾಸನಗಳು ಅಶೋಕನ ಸಂತೋಷ, ಶಾಂತಿ ಮತ್ತು ತೃಪ್ತಿಯನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ತಿಳಿಸುತ್ತದೆ.
ಇಲ್ಲಿರುವ ಸ್ತೂಪ ನೋಡಲು ಆಕರ್ಷಣಿಯವಾಗಿದ್ದು ಮೇಲೆ ಗೊಮ್ಮಟಾಕಾರದಲ್ಲಿದೆ. ಇಲ್ಲಿರುವ ಕಲ್ಲಿನಲ್ಲಿ ಬೋಧಿವೃಕ್ಷ ಹಾಗೂ ಬುದ್ಧನ ಹೆಜ್ಜೆ ಗುರುತುಗಳನ್ನು ಕೆತ್ತಲಾಗಿದೆ. ಬುದ್ಧನ ಮುಂದೆ ತನ್ನ ಕತ್ತಿಯನ್ನು ಇರಿಸಿ ಯುದ್ಧದಿಂದ ಸಂಪೂರ್ಣ ವಿಮುಖನಾಗುತ್ತಿರುವುದಾಗಿ ಹೇಳುತ್ತಿರುವ ಶಿಲ್ಪವು ನೋಡುಗರ ಮನಸೆಳೆಯುತ್ತದೆ. ಈ ಸ್ತೂಪದ ಆವರಣದಲ್ಲಿಯೇ ಬೌದ್ಧರ ಸದ್ಧರ್ಮ ವಿಹಾರ ಮಠವಿದೆ. ಇದು ಬೌದ್ಧ ಅನುಯಾಯಿಗಳು ಹೆಚ್ಚಿಗೆ ಭೇಟಿಕೊಡುವ ಸ್ಥಳವಾಗಿದೆ. ಈ ಸ್ತೂಪವನ್ನು 1970 ರಲ್ಲಿ ಜಪಾನ್ ಬುದ್ಧ ಸಂಘ ಹಾಗೂ ಕಳಿಂಗ ನಿಪ್ಪೋನ್ ಬುದ್ಧ ಸಂಘದವರು ಸೇರಿ ನಿರ್ಮಿಸಿದ್ದಾರೆ. ಬಿಳಿಯ ಬಣ್ಣದ ತನ್ನ ವಿಶೇಷ ವಾಸ್ತುಶಿಲ್ಪ ಹಾಗೂ ದೊಡ್ಡ ಗುಮ್ಮಟದಿಂದ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೊಡ್ಡ ಗೊಮ್ಮಟದ ಮೇಲಿರುವ ಐದು ಛತ್ರಿಯಾಗಳು ಬೌದ್ಧ ಧರ್ಮದ ಸಿದ್ಧಾಂತ
ಗಳನ್ನು ಎತ್ತಿ ಹಿಡಿಯುತ್ತದೆ. ಬುದ್ಧನ ಹಲವು ಭಂಗಿಯ ಮೂರ್ತಿಗಳು ಈ ಸ್ತೂಪದ ಗೋಡೆಗಳ ಮೇಲೆ ಕೆತ್ತಲಾಗಿದೆ. ಕಲ್ಲಿನಲ್ಲಿ ಬುದ್ಧನ ಜೀವನ ಚರಿತೆಯನ್ನು ಬಿಂಬಿಸುವ ಕಲಾಕೃತಿಗಳಿವೆ.
ಧವಳಗಿರಿ ಸ್ತೂಪದ ಕೆಳಗೆ ಅಶೋಕನ ಅನೇಕ ಶಿಲಾಶಾಸನಗಳು ಇವೆ. ಶಿಲೆಗಳ ಮೇಲೆ, ಕಂಬ ಗುಹೆಗಳ ಗೋಡೆಗಳ ಮೇಲೆ ಕೆತ್ತಲಾದ ಅಶೋಕನ ಶಾಂತಿ ಮಂತ್ರಗಳು/ನುಡಿಗಳು ಮತ್ತು ಬೌದ್ಧ ಮತದ ಬೋಧನೆಗಳನ್ನು ನೋಡಬಹುದು. ಇಲ್ಲಿರುವ ಆಕರ್ಷಣೀಯ ಶಿಲೆಗಳಲ್ಲಿ ಕೆತ್ತಿರುವ ಕಲ್ಲಿನಿಂದ ಹೊರಬರುತ್ತಿರುವಂತೆ ಇರುವ ಆನೆಯ ಶಿಲ್ಪ ಗಮನ ಸೆಳೆಯುತ್ತದೆ.
ಈ ಸ್ತೂಪದ ಹಿಂದೆಯೇ ಧವಳೇಶ್ವರ ದೇವಸ್ಥಾನವಿದೆ. ಇದು ಕೂಡ ಹಿಂದೂ ಧರ್ಮೀಯರು ಹೆಚ್ಚಾಗಿ ಭೇಟಿ ಕೊಡುವ ಸ್ಥಳವಾಗಿದೆ. 1972ರಲ್ಲಿ ಈ ದೇವಸ್ಥಾನವನ್ನು ನವೀಕರಣ ಮಾಡಿದ್ದಾರೆ. ಧವಳಗಿರಿಯ ಎಡಭಾಗದಲ್ಲಿ ಪ್ರಶಾಂತವಾಗಿ ಹರಿಯುವ ದಯಾ ನದಿಯ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೂ ತೆರೆದಿರುವ ಈ ಪ್ರವಾಸಿ ತಾಣವನ್ನು ನೋಡಲು ಯಾವುದೇ ಶುಲ್ಕ ಕೊಡಬೇಕಾಗಿಲ್ಲ. ಬೆಳಗಿನ 11 ಗಂಟೆಯ ಒಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಏಕೆಂದರೆ ಆಮೇಲೆ ತುಂಬಾ ಸೆಖೆ ಹಾಗೂ ಬರಿಗಾಲಿನಲ್ಲಿ ನಡೆಯುವುದು ಕಷ್ಟವಾಗುತ್ತದೆ. ಗುಡ್ಡದ ಮೇಲಿರುವ ಸ್ತೂಪ ಹಾಗೂ ದೇವಸ್ಥಾನದ ಸುಂದರ ಪರಿಸರ ಮನಸ್ಸಿಗೆ ನೆಮ್ಮದಿಯನ್ನು ಕೊಡುವ ಸ್ಥಳವಾಗಿದ್ದು ಒಡಿಶಾ ಪ್ರವಾಸದಲ್ಲಿ ಪ್ರವಾಸಿಗರು ನೋಡಲೇ ಬೇಕಾದ ಸ್ಥಳವಾಗಿದೆ. ಗುಡ್ಡದ ಮೇಲಿಂದ ಭುವನೇಶ್ವರ ನಗರದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಇಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಕಳಿಂಗ ದೌಳಿ ಮಹೋತ್ಸವ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಶಾಸ್ತ್ರೀಯ ನೃತ್ಯ, ಹಾಡು ಸಂಗೀತ ಮತ್ತು ಸಮರ ಕಲೆಗಳ ಅನಾವರಣಕ್ಕೆ ಈ ಹಬ್ಬ ಪ್ರಸಿದ್ಧವಾಗಿದೆ. ಒಡಿಶಾ ಪ್ರವಾಸೋದ್ಯಮ ಇಲಾಖೆ ಏರ್ಪಡಿಸುವ ಈ ಹಬ್ಬದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಸುಮಾರು ಐನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.