ADVERTISEMENT

Sanctuary of Truth: ಸುಂದರ ಕಲಾ ಮ್ಯೂಸಿಯಂ ಸತ್ಯದ ಅಭಯಾರಣ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 23:30 IST
Last Updated 8 ಫೆಬ್ರುವರಿ 2025, 23:30 IST
ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌ನ ಹೊರನೋಟ
ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌ನ ಹೊರನೋಟ   
ಸರ್ವಧರ್ಮಗಳ ಸಂದೇಶಗಳನ್ನು ಸಾರುವ ಜಗತ್ತಿನ ಅತೀ ಎತ್ತರವಾದ ಕಲಾ ದೇಗುಲ ಥಾಯ್ಲೆಂಡ್‌ನಲ್ಲಿ ನಿರ್ಮಾಣವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗುತ್ತಿದೆ. 44 ವರ್ಷಗಳಿಂದ ಇದರ ಕೆತ್ತನೆಯ ಕೆಲಸ ನಡೆಯುತ್ತಿದ್ದು, ಇದೇ ವರ್ಷ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಇದು ಚೀನಾದ ವ್ಯಾಪಾರಿ ಲೆಕ್‌ ವಿರಿಯಾಫನ್‌ ಅವರ ಕನಸು.

ಥಾಯ್ಲೆಂಡ್‌, ಪಟ್ಟಾಯ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವ ದಿನವದು. ನಮ್ಮ ವಿಮಾನ ಬ್ಯಾಂಕಾಕ್‌ನಿಂದ ಮಧ್ಯಾಹ್ನ ಹೊರಡುವುದಿತ್ತು. ಅರ್ಧದಿನ ಹೇಗೆ ಕಳೆಯಬೇಕು ಎಂದು ಯೋಚಿಸುತ್ತಿದ್ದಾಗ ಹತ್ತಿರದಲ್ಲೇ ವಿಶಿಷ್ಟವಾದ ‘ದಿ ಸ್ಯಾಂಕ್ಚುರಿ ಆಫ್ ಟ್ರೂಥ್’ ಮ್ಯೂಜಿಯಂ ಇರುವುದು ಗೊತ್ತಾಯಿತು. ಅದು ನಾವು ತಂಗಿದ್ದ ಹೋಟೆಲ್‌ನಿಂದ ತುಂಬಾ ಸನಿಹದಲ್ಲೇ ಇತ್ತು. ಅಲ್ಲಿಗೆ ಹೋಗಲು ನಿರ್ಧರಿಸಿದೆವು.

ಅದೋ ನೆಲ ನೀರು ನೀಲಾಗಸಗಳ ಸಂಗಮ. ಅಲ್ಲಿ ಎಚ್ಎಂಎಸ್ ಬೀಗಲ್‌ನಂಥ ಬೃಹತ್ ಹಡಗು ಲಂಗರು ಹಾಕಿ ನಿಂತಂತೆ ಭಾಸವಾಗುತಿತ್ತು. ಹಿಂದೆ ಕಡಲು ಹರಡಿಕೊಂಡಿದೆ. ಹತ್ತಿರ ಹೋಗಿ ನೋಡಿದರೆ ಅದು ಹಡಗಲ್ಲ, ರಾಜ ಮಹಾರಾಜರ ಅರಮನೆ ಮೀರಿಸುವಂಥ ವೈಭವದ ಕಟ್ಟಡ!. ಹೌದು ಸಂಪೂರ್ಣ ಮರದ ದಿಮ್ಮಿಗಳಿಂದ ಕೆತ್ತನೆಯ ಕುಸುರಿ ಕೆಲಸದಿಂದ ಅರಳುತ್ತಿರುವ ಶ್ರೇಷ್ಠ ಸುಂದರ ಕಲಾ ಮ್ಯೂಸಿಯಂ.

ಅಲ್ಲಿ ಮರದ ಮೆಟ್ಟಿಲುಗಳಿದ್ದವು. ಹೆಲ್ಮೆಟ್ ಧರಿಸಿ ಹೆಜ್ಜೆ ಇರಿಸಿದೆವು. ಹಕ್ಕಿಪಕ್ಷಿಗಳ ಕಲರವ, ಹಸುರಿನ ಉದ್ಯಾನ, ತಿಳಿನೀರ ಸರೋವರ ಮುದ ನೀಡುತ್ತಿದ್ದವು. ಸಮುದ್ರತೀರದಲ್ಲಿ ಅದ್ಭುತವಾದ ಕಲಾ ಮ್ಯೂಸಿಯಂ ಅತ್ಯಾಕರ್ಷಕವಾಗಿ ಕಾಣಿಸುತ್ತಿತ್ತು. ಅಲ್ಲಿ ಪರಿಣತ ಕಲಾಕಾರರು ಉಳಿ, ಚಾಣ, ಬಾಚಿ ಹಿಡಿದು ಕೆತ್ತನೆಯಲ್ಲಿ ತೊಡಗಿದ್ದರು. ಥಾಯ್ಲೆಂಡ್‌, ಕಾಂಬೋಡಿಯಾ ಹಾಗೂ ಮಯನ್ಮಾರ್ ದೇಶಗಳ ಬಡಗಿಗಳು ದಶಕಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ‘ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌’ಗೆ ಮತ್ತೊಂದು ಹೆಸರು ‘ಸತ್ಯದ ಅಭಯಾರಣ್ಯ’. ಮರದ ಕಲಾ ಮ್ಯೂಸಿಯಂ ಜಗತ್ತಿನಲ್ಲಿಯೇ ಅತಿ ಭವ್ಯ ಹಾಗೂ ಅಪರೂಪದ್ದು. ಬೌದ್ಧ, ಜೈನ, ಕ್ರೈಸ್ತ ಹಾಗೂ ಹಿಂದೂ ಧರ್ಮದ ನೂರಾರು ದೇವಾನು ದೇವತೆಗಳು ಅಲ್ಲಿ ಜೀವ ಪಡೆದಿದ್ದಾರೆ. ಇದು ದೇವಸ್ಥಾನ-ಕಳಸ-ಗೋಪುರಾಕೃತಿಗಳ ಸಮ್ಮಿಶ್ರಣ.

ADVERTISEMENT

ಈ ಕಲಾ ಮ್ಯೂಸಿಯಂನಲ್ಲಿ ಹುಟ್ಟು, ಸಾವು, ಕುಟುಂಬ ಪ್ರೀತಿ, ದೈವ, ನಾಗರಿಕತೆ, ಸರಳ ಜೀವನ ಹಾಗೂ ಮೋಕ್ಷವೆಂಬ ಏಳು ಸತ್ಯಗಳು ಕೆತ್ತನೆಯ ರೂಪ ಪಡೆದು ಅನಾವರಣಗೊಂಡಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವಾಸ್ತವ ಕಲಾಕೃತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಎಲ್ಲವೂ ಅರಿವಿಗೆ ಬರುತ್ತವೆ.

ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌ ಹೊರಭಾಗದಲ್ಲಿರುವ ಕೆತ್ತನೆಗಳು

ಚೀನಾ ವ್ಯಾಪಾರಿಯ ಕನಸು

ಜಗತ್ತಿನಲ್ಲಿಯೇ ಅತೀ ಎತ್ತರದ ಮರದ ಕಲಾ ಮ್ಯೂಸಿಯಂ ಇದು. 105 ಮೀಟರ್‌ ಎತ್ತರ, 100 ಮೀಟರ್‌ ಅಗಲ ಹಾಗೂ 2,115 ಚದರ ಮೀಟರ್‌ ವಿಸ್ತೀರ್ಣ (ಒಳಾಂಗಣ)ದ ಈ ಕಟ್ಟಡ ಚತುರ್ಭುಜ ವಿನ್ಯಾಸದಲ್ಲಿ ರೂಪುಗೊಂಡಿದೆ. ಅಚ್ಚರಿಗೊಳಿಸುವ ಈ ಮ್ಯೂಸಿಯಂಗೆ ರೋಚಕ ಕಥೆ ಇದೆ. ಲೇಕ್ ವಿರಿಯಾಫನ್ ಎಂಬ ಚೀನಾದ ವ್ಯಾಪಾರಿ ಬಹು ಹಿಂದೆಯೇ ಥಾಯ್ಲೆಂಡ್‌ಗೆ ಬಂದು ಉದ್ಯಮ ಆರಂಭಿಸಿ ದೊಡ್ಡ ಶ್ರೀಮಂತನಾದ. ಥಾಯ್ಲೆಂಡ್‌ ಸಮುದ್ರತೀರದುದ್ದಕ್ಕೂ ಅವನದೇ ಅಂಗಡಿ, ಮುಂಗಟ್ಟು, ಹೋಟೆಲ್‌ಗಳ ಸರಣಿ ಸ್ಥಾಪನೆಯಾದವು. ಸಮುದ್ರತೀರದಲ್ಲಿ ಸರ್ವಧರ್ಮಗಳ ಸಿದ್ಧಾಂತಗಳನ್ನು ಮರದ ಕೆತ್ತನೆಯ ಮೂಲಕ ಅನಾವರಣಗೊಳಿಸಬೇಕು ಎಂದು ಕನಸು ಕಂಡ. ಅದಕ್ಕಾಗಿ ಸುಮಾರು ಹದಿಮೂರು ಹೆಕ್ಟೇರ್ ಜಾಗವನ್ನು ಖರೀದಿಸಿ ಮೀಸಲಿರಿಸಿದ. 1981 ರಲ್ಲಿ ಕೆತ್ತನೆ ಕೆಲಸ ಶುರುವಾಯಿತು. ಇದಕ್ಕಾಗಿ ವಿದೇಶಗಳಿಂದ ನೂರಾರು ನುರಿತ ಕುಸುರಿ ಕೆತ್ತನೆಯ ಬಡಗಿಗಳು ಬಂದಿಳಿದರು. ಕೆತ್ತನೆಗಾಗಿ ಸಾಗುವಾನಿ, ಮೊಹೋಗನಿ, ಮೈಡಿಂಗ್, ಮೈಪಂಚೆಟ್‌ನಂಥ ಮರದ ದಿಮ್ಮಿಗಳು ಸಂಗ್ರಹವಾದವು. ತುಂಬಾ ಹಳೆಯದಾದ ಮೈಟಾಕಿನ್ ಮರವನ್ನು ವಿಶೇಷ ಕೆತ್ತನೆಗೆ ತರಿಸಲಾಯಿತು.

ಮರದ ಮ್ಯೂಸಿಯಂ ಕೆಲಸ ಆರಂಭವಾಗಿ 44 ವರ್ಷಗಳು ಉರುಳಿವೆ. ಆದರೂ ಪೂರ್ಣವಾಗಿಲ್ಲ. 2025ರ ಅಂತ್ಯಕ್ಕೆ ಮ್ಯೂಸಿಯಂ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ. ಮ್ಯೂಸಿಯಂನ ಹೃದಯ ಭಾಗದಿಂದ ಮೇಲಕ್ಕೆ ಒಂದು ಕಂಬದಂಥ ಗೋಪುರ ಚಾಚಿಕೊಂಡಿದೆ. ಅದರ ತುದಿಯಲ್ಲಿ ಬ್ರಹ್ಮನ ಚತುರ್ಮುಖ ಪ್ರತಿಮೆ ಕಾಣಿಸುತ್ತದೆ. ಈ ಚತುರ್ಮುಖ ತಂದೆ, ತಾಯಿ, ಗುರು ಹಾಗೂ ಆಳುವ ದೊರೆಯ ಸಂಕೇತ ರೂಪಗಳಾಗಿವೆ. ದಯೆ, ಸಮಚಿತ್ತ, ಪರೋಪಕಾರ, ಸಂತೃಪ್ತಿ ಇವು ಚತುರ್ಮುಖದ ಇತರ ಭಾವಗಳು. ಬ್ರಹ್ಮನ ಮೂರ್ತಿಯ ಸುತ್ತಲಿನ ಮೇಲ್ಛಾವಣಿಯ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ವಿಶೇಷತೆಗಳಿವೆ. ಭವಿಷ್ಯದ ಬದುಕು ಆರೋಗ್ಯಪೂರ್ಣವಾಗಿರಲು ಭೂತಕಾಲದ ನೀತಿ, ನಿಯಮ, ಸಿದ್ಧಾಂತಗಳ ಪಾಲನೆ ಆಗಬೇಕು ಎನ್ನುವುದನ್ನು ಪೂರ್ವ ದಿಕ್ಕಿನ ಚಿತ್ರಗಳು ತೋರಿಸುತ್ತವೆ. ಪಶ್ಚಿಮದಲ್ಲಿ ಬಾಲಕಿಯೊಬ್ಬಳು ಪಾರಿವಾಳಗಳಿಗೆ ಕಾಳು ತಿನ್ನಿಸುವ ಚಿತ್ರವಿದೆ. ಜಗತ್ತಿನ ಹಸಿವು ತಣಿಸುವ ಹಾಗೂ ಭೂಮಿಯನ್ನು ಫಲವತ್ತುಗೊಳಿಸುವ ಸಂಕೇತವದು. ಕಮಲದ ಹೂವಿನ ಮೇಲೆ ಧ್ಯಾನಾಸಕ್ತರಾಗಿ ಕುಳಿತು ಆಧ್ಯಾತ್ಮಕ ಚಿಂತನೆ ಭೋದಿಸುವ ದೇವತೆಯ ಚಿತ್ರ ಉತ್ತರ ದಿಕ್ಕಿನಲ್ಲಿದ್ದರೆ, ದಕ್ಷಿಣದಲ್ಲಿ ತಂದೆ, ತಾಯಿ, ಮಕ್ಕಳ ಕುಟುಂಬದ ಚಿತ್ರಗಳಿವೆ. ಇವೆಲ್ಲಾ ಅರ್ಥಪೂರ್ಣ ಬದುಕಿಗೆ ಮುಖ್ಯ. ಮೇಲ್ಛಾವಣಿಯ ನಾಲ್ಕೂ ದಿಕ್ಕಿನ ಮಧ್ಯ ಕುದುರೆ ಸವಾರನೊಬ್ಬ ಕಡಿವಾಣ ಹಿಡಿದು ಎಲ್ಲವನ್ನೂ ನಿಯಂತ್ರಣ ಮಾಡುವ ಚಿತ್ರ ವಿಶೇಷ ಪರಿಕಲ್ಪನೆ.

ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌ನ ಹೊರನೋಟ

ನೆಲಮಹಡಿಯ ಒಳಂಗಣ ವೈವಿಧ್ಯಮಯ ಕೆತ್ತನೆಗಳಿಂದ ಕೂಡಿದೆ. ಮರದ ಕುಸುರಿ ಕೆತ್ತನೆಗಳು ಒಂದನ್ನೊಂದು ಮೀರಿಸುತ್ತವೆ. ಇಲ್ಲಿಯೂ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹಜಾರಗಳಿದ್ದು, ವೈವಿಧ್ಯಮಯ ಕೆತ್ತನೆಗಳಿಂದ ತುಂಬಿಹೋಗಿವೆ. ಉತ್ತರ ದಿಕ್ಕಿನ ಹಜಾರದಲ್ಲಿ ಬೌದ್ಧ ಧರ್ಮದ ತತ್ವ ಸಿದ್ಧಾಂತಗಳಿಗೆ ಸಂಬಂಧಿಸಿದ ಚಿತ್ರಗಳಿವೆ. ಒಳ್ಳೆಯದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಕೆಟ್ಟದನ್ನು ಮಾಡಿದರೆ ಕೆಟ್ಟದ್ದಾಗುತ್ತದೆ ಎನ್ನುವ ಸಿದ್ಧಾಂತವನ್ನು ಇಲ್ಲಿಯ ಕೆತ್ತನೆ ಸಂದೇಶ ನೀಡುತ್ತದೆ. ದಕ್ಷಿಣ ದಿಕ್ಕಿನ ಹಜಾರದಲ್ಲಿ ಸೌರಮಂಡಲದ ಸೂರ್ಯ, ಚಂದ್ರ, ಗ್ರಹ, ಉಪಗ್ರಹ, ನಕ್ಷತ್ರಾದಿಗಳಿದ್ದು ಅವು ಬದುಕಿನ ಹುಟ್ಟು, ಸಾವು, ಯಶಸ್ಸನ್ನು ನಿರ್ಧರಿಸುತ್ತವೆ. ಪಶ್ಚಿಮ ಹಜಾರದ ಪಂಚಭೂತಗಳಾದ ನೀರು, ಗಾಳಿ, ನೆಲ, ಬೆಂಕಿ, ಆಕಾಶಗಳ ಕೆತ್ತನೆಗಳಿದ್ದು, ಅವು ಬದುಕಿನ ಮೂಲಭೂತ ಅವಶ್ಯಕತೆಯನ್ನು ಸಾರುತ್ತವೆ. ಪೂರ್ವ ಹಜಾರದಲ್ಲಿಯ ಚಿತ್ರಗಳು ತಂದೆ, ತಾಯಿ, ಮಕ್ಕಳ ಕೌಟುಂಬಿಕ ಪ್ರೀತಿ, ಬಂಧನಗಳನ್ನು ಪ್ರತಿನಿಧಿಸುತ್ತವೆ. ಜೊತೆಗೆ ಕೈಲಾಸ ಶಿಖರದಲ್ಲಿ ಕುಳಿತ ಶಿವ, ಹಂಸದ ಮೇಲೆ ಕುಳಿತ ಬ್ರಹ್ಮ, ಕಡಲ ಮಧ್ಯ ಏಳು ಹೆಡೆ ಸರ್ಪದ ನೆರಳಿನಲ್ಲಿ ಪವಡಿಸಿದ ವಿಷ್ಣುವಿನ ಕೆತ್ತನೆ ಆಕರ್ಷಣೆಯಾಗಿವೆ. ಇಲ್ಲಿ ಹಾಲಿವುಡ್ ಸಿನಿಮಾಗಳಲ್ಲಿನ ಫ್ಯಾಂಟಸಿಯಂಥ ನೂರಾರು ದೇವಾನುದೇವತೆಗಳ ದೃಶ್ಯಾವಳಿಗಳು ಮನಸೂರೆಗೊಳ್ಳುತ್ತವೆ.

ಖಾಸಗಿ ಒಡೆತನದ ‘ದಿ ಸ್ಯಾಂಕ್ಚುರಿ ಆಫ್ ಟ್ರೂಥ್’ ಆರಂಭಿಸುವ ಮೊದಲೇ ವಿರಿಯಾಫನ್ ‘ದಿ ಏನ್ಸಿಯಂಟ್ ಸಿಟಿ ಆಫ್ ಮ್ಯೂಸಿಯಂ’ ಸ್ಥಾಪಿಸಿ ಅನುಭವ ಪಡೆದಿದ್ದರು. ಪಾಶ್ಚಾತ್ಯ ಜಗತ್ತಿನ ವಿಜ್ಞಾನ, ತಂತ್ರಜ್ಞಾನ ಬದುಕಿಗೆ ಐಷಾರಾಮಿ ಸೌಲಭ್ಯ ಒದಗಿಸಿದರೂ ಅವುಗಳಿಗೆ ಯಾವುದೇ ಧಾರ್ಮಿಕ ಕಟ್ಟಳೆಗಳಿಲ್ಲ. ಅವು ಯಾವ ಪ್ರಾಚೀನತೆಯನ್ನು ಜಗತ್ತಿಗೆ ಸಾರುವುದಿಲ್ಲ. ಹಾಗಾಗಿ ವಿರಿಯಾಫನ್ ಏಷ್ಯ ಖಂಡದ ಧರ್ಮ, ಅಧ್ಯಾತ್ಮ, ಪುರಾಣ, ಸಂಪ್ರದಾಯ, ಸಂಸ್ಕೃತಿಗಳನ್ನು ಮೂಲ ನೆಲೆಯಾಗಿಟ್ಟುಕೊಂಡು ‘ದಿ ಸ್ಯಾಂಕ್ಚುರಿ ಆಫ್ ಟ್ರೂಥ್‌’ ಅನ್ನು ಸ್ಥಾಪಿಸಿದರು. ಒಳಾಂಗಣದ ಎಡ–ಬಲ, ಮೇಲೆ–ಕೆಳಗೆ ಎಲ್ಲಾ ಕಡೆ ಪ್ರತಿ ಸೆಂಟಿಮೀಟರ್‌ ಜಾಗವೂ ಕಲಾ ಪ್ರೌಢಿಮೆಯಿಂದ ತುಂಬಿಹೋಗಿದೆ. ಪೌರ್ವಾತ್ಯ ಜಗತ್ತಿನ ಬದುಕಿನ ಮೌಲ್ಯಗಳು, ತತ್ವ ಸಿದ್ಧಾಂತಗಳು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗಬೇಕು. ಈ ನಿಟ್ಟಿನಲ್ಲಿ ಲೇಕ್ ವಿರಿಯಾಫನ್ ಎಲ್ಲಾ ಹಳೆಯ ಧಾರ್ಮಿಕ-ದೈವಿಕ ಶಕ್ತಿಗಳನ್ನು, ಮೌಲ್ಯಗಳನ್ನು ಕಲಾತ್ಮಕವಾಗಿ ಮರದ ಕೆತ್ತನೆಯಲ್ಲಿ ಅರಳಿಸಿದ್ದು ಮೆಚ್ಚುವಂಥ ಕೆಲಸ. ನಾವು ನೋಡಿದ ಅವಿಸ್ಮರಣೀಯ ಮರದ ಪ್ರತಿಮಾ ಸಂಗ್ರಹಾಲಯ ಎಂದೆಂದಿಗೂ ನೆನಪಿಲ್ಲಿ ಉಳಿಯುವಂಥದ್ದು.‌

ಒಳಗಿರುವ ಮರದ ಕೆತ್ತನೆಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.