ADVERTISEMENT

ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ದೇಶಗಳಿವು: ವೀಸಾ ಕೂಡ ಬೇಕಿಲ್ಲ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 12:58 IST
Last Updated 28 ನವೆಂಬರ್ 2025, 12:58 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಇನ್ನೇನು ಒಂದು ತಿಂಗಳಲ್ಲಿ 2025ರ ವರ್ಷ ಕೊನೆಯಾಗಿ 2026ಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಆಚರಣೆಗೆ ಕೆಲವರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯಲ್ಲಿರುತ್ತಾರೆ. ಇನ್ನು ಕೆಲವರು ವಿದೇಶ ಪ್ರವಾಸ ಹೋಗುತ್ತಾರೆ. ನೀವು ವಿದೇಶ ಪ್ರಯಾಣ ಬಯಸಿದರೆ, ಭಾರತದಿಂದ ವೀಸಾ ರಹಿತವಾಗಿ ಈ ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಹಾಗಾದರೆ ಯಾವೆಲ್ಲಾ ದೇಶಗಳಿಗೆ ಭೇಟಿ ನೀಡಬಹುದು ಎಂಬುದರ ಮಾಹಿತಿ ತಿಳಿಯೋಣ. 

ಥೈಲಾಂಡ್‌

ADVERTISEMENT

ಆಗ್ನೇಯ ಏಷ್ಯಾದಲ್ಲಿರುವ ಸುಂದರ ದೇಶಗಳ ಪೈಕಿ ಥೈಲಾಂಡ್‌ ಕೂಡ ಒಂದಾಗಿದೆ. ಭಾರತಕ್ಕೆ ಸಮೀಪವಿರುವ ಈ ದೇಶದಲ್ಲಿ ಆಕರ್ಷಕ ಕಡಲ ತೀರ, ವಿಭಿನ್ನವಾದ ಸಂಸ್ಕೃತಿ ಸೇರಿದಂತೆ ಬೌದ್ಧ ದೇವಾಲಯಗಳಿವೆ. ಇಲ್ಲಿಗೆ ಭೇಟಿ ನೀಡುವುದು ಬಜೆಟ್‌ ಸ್ನೇಹಿ ಪ್ರವಾಸವಾಗಿದೆ. 

ಭಾರತದ ಪ್ರವಾಸಿಗರು ಇಲ್ಲಿಗೆ ಹೋಗಲು ವೀಸಾ ಪಡೆಯಬೇಕಿಲ್ಲ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಮಾಲ್ಡೀವ್ಸ್: 

ಭಾರತಕ್ಕೆ ಸಮೀಪವಿರುವ ದ್ವೀಪ ರಾಷ್ಟ್ರಗಳಲ್ಲಿ ಮಾಲ್ಡೀವ್ಸ್ ಕೂಡ ಒಂದು. ಹಿಂದೂ ಮಹಾಸಾಗರದಲ್ಲಿರುವ ಸುಂದರ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ಗೆ ಭಾರತೀಯರು ವೀಸಾ ರಹಿತವಾಗಿ ಭೇಟಿ ನೀಡಬಹುದಾಗಿದೆ. ಇಲ್ಲಿನ ಕಡಲ ತೀರ, ಕಡಲ ಆಟಗಳು ಹಾಗೂ ಐಷಾರಾಮಿ ವಾಟರ್ ವಿಲ್ಲಾಗಳು ಪ್ರಮುಖ ಆಕರ್ಷಣೆಯಾಗಿವೆ. 

ಇಲ್ಲಿಗೆ ಡಿಸೆಂಬರ್‌ನಿಂದ ಮಾರ್ಚ್‌ ನಡುವೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಮಾಲ್ಡೀವ್ಸ್‌ನ ರಾಜಧಾನಿ ಮಾಲೆ ಸೇರಿದಂತೆ ಸಮೀಪದ ಇತರ ದೀಪಗಳಿಗೂ ಪ್ರವಾಸ ಮಾಡಬಹುದಾಗಿದೆ. 

ಮಾರಿಷಸ್

ಮಾರಿಷಸ್‌ಗೆ ಭಾರತೀಯರು ವೀಸಾ ರಹಿತ ಪ್ರವಾಸ ಮಾಡಬಹುದು. ಇಲ್ಲಿನ ಸುಂದರವಾದ ಕಡಲ ತೀರಗಳು, ಸ್ವಚ್ಛವಾದ ಸಮುದ್ರದ ನೀರು ಹಾಗೂ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.

ಸೀಶೆಲ್ಸ್

ಬಿಳಿ ಮರಳ ಕಡಲ ತೀರದಿಂದಲೇ ಪ್ರಸಿದ್ದಿ ಪಡೆದಿರುವ ಸೀಶೆಲ್ಸ್ ಸ್ವಚ್ಛವಾದ ಕಡಲ ತೀರ, ಉಷ್ಣವಲಯದ ಕಾಡುಗಳು ಹಾಗೂ ಹವಳ ದ್ವೀಪಗಳನ್ನು ಒಳಗೊಂಡಿದೆ. ಇದು 115 ದ್ವೀಪಗಳ ಸಮೂಹವಾಗಿದೆ. ಇಲ್ಲಿನ ಮಾಹೆ ದ್ವೀಪ ಹೆಚ್ಚು ಪ್ರಸಿದ್ಧಿ ಪಡೆದಿದೆ. 

ಭೂತಾನ್‌: 

ಭಾರತದ ನೆರೆ ರಾಷ್ಟವಾಗಿರುವ ಭೂತಾನ್‌ಗೆ ವೀಸಾ ರಹಿತ ಪ್ರಯಾಣ ಮಾಡಬಹುದಾಗಿದೆ. ಇಲ್ಲಿಗೆ ಸೆಪ್ಟೆಂಬರ್‌ನಿಂದ ಜೂನ್ ನಡುವೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ. ಇಲ್ಲಿನ ಬೌದ್ಧ ಸಂಸ್ಕೃತಿ, ಆಧ್ಯಾತ್ಮಿಕ ದೇವಾಲಯ ಹಾಗೂ ಹಿಮಾಲಯದ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಸಿದ್ಧ ಟೈಗರ್ಸ್ ನೆಸ್ಟ್ ಗೆ ಭೇಟಿ ನೀಡಬಹುದು.

ನೇಪಾಳ: 

ಭಾರತದ ಗಡಿ ಹಂಚಿಕೊಂಡಿರುವ ನೇಪಾಳ ಸುಂದರವಾದ ಭೂದೃಶ್ಯವುಳ್ಳ ಪ್ರವಾಸಿ ತಾಣವಾಗಿದೆ. ಧಾರ್ಮಿಕವಾಗಿಯೂ ಹೆಚ್ಚು ಪ್ರಸಿದ್ದಿ ಪಡೆದಿದೆ. ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯ ಹಾಗೂ ಸರೋವರಗಳು ಉತ್ತಮ ಅನುಭವ ನೀಡುತ್ತವೆ. ಭಾರತದಿಂದ ಆರಾಮವಾಗಿ ಕಡಿಮೆ ಖರ್ಚಿನಲ್ಲಿ ವೀಸಾ ರಹಿತವಾಗಿ ಇಲ್ಲಿಗೆ ಭೇಟಿ ನೀಡಬಹುದು.

ಶ್ರೀಲಂಕಾ: 

ಭಾರತ ಹಾಗೂ ಶ್ರೀಲಂಕಾಗೆ ಐತಿಹಾಸಿಕ ಹಿನ್ನೆಲೆ ಇದೆ. ದ್ವೀಪ ರಾಷ್ಟ್ರವಾಗಿರುವ ಶೀಲಂಕಾ ಸುಂದರ ಅರಣ್ಯ ಪ್ರದೇಶ, ಸಸ್ಯವರ್ಗ ಹಾಗೂ ಜಲಪಾತಗಳಿಗೆ ಪ್ರಸಿದ್ದಿ ಪಡೆದಿದೆ. ಇಲ್ಲಿ ಸುಂದರವಾದ ಚಹಾತೋಟ, ಕಡಲ ತೀರ ಹಾಗೂ ಪುರಾತನ ಕಾಲದ ಅವಶೇಷಗಳನ್ನು ನೋಡಬಹುದು. ವೀಸಾ ರಹಿತ ಪ್ರಯಾಣ ಮಾಡಬಹುದಾದ ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.