ADVERTISEMENT

ರಷ್ಯಾದಲ್ಲಿ ಬಿಳಿ ಕೋಟೆ

ಪಾಂಡುರಂಗ ಹೆಗಡೆ
Published 22 ಜನವರಿ 2020, 19:30 IST
Last Updated 22 ಜನವರಿ 2020, 19:30 IST
   
""

ಕ್ರೇಮಲಿನ್ ಅಂದರೆ ರಷ್ಯನ್ ಭಾಷೆಯಲ್ಲಿ ಕೋಟೆ ಎಂದರ್ಥ. ದೆಹಲಿಯಲ್ಲಿರುವ ಕೆಂಪು ಕೋಟೆಯ ಹಾಗೆ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಕೆಂಪು ಕೋಟೆ ಅಥವಾ ಕ್ರೇಮಲಿನ್ ಹೆಸರುವಾಸಿ. ಆದರೆ ನೀವು ಎಂದಾದರೂ ಬಿಳಿ ಕೋಟೆ ಇರುವುದರ ಬಗ್ಗೆ ಕೇಳಿದ್ದೀರಾ? ಕೇಳಿಲ್ಲವಾದರೆ, ಒಮ್ಮೆ ರಷ್ಯಾದ ಕಝಾನ್‌ಗೆ ಬನ್ನಿ. ಇಲ್ಲಿ ವಿಶ್ವದಲ್ಲೇ ಏಕಮೇವ ಎನ್ನುವಂತಹ ಬಿಳಿ ಕೋಟೆಯ ಸೊಬಗನ್ನು ಸವಿಯಬಹುದು. ಅಷ್ಟೇ ಅಲ್ಲ, ಈ ಐತಿಹಾಸಿಕ ನಗರದ ಆಧುನಿಕ ರೂಪವನ್ನು ಕಣ್ತುಂಬಿಕೊಳ್ಳಬಹುದು.

ರಷ್ಯಾ ದೇಶಕ್ಕೆ ಪ್ರವಾಸ ಹೋಗುವವರು, ಪ್ರಮುಖವಾಗಿ ಮಾಸ್ಕೊ ಮತ್ತು ಸೇಂಟ್‌ ಪೀಟರ್ಸ್‌ಬರ್ಗ್‌ಗೆ ಭೇಟಿ ನೀಡುತ್ತಾರೆ. ಆದರೆ ಮಾಸ್ಕೊ ನಗರಕ್ಕಿಂತ ಪುರಾತನವಾದ ಕಝಾನ್‍ಗೆ ಹೋಗುವುದು ಅಪರೂಪ. ಆದರೆ, ನನಗೆ ಈ ಹೆಸರು ಕೇಳಿದಾಗ ವಿಚಿತ್ರ ಮತ್ತು ಆಕರ್ಷಕ ಎನ್ನಿಸಿತು. ಅಲ್ಲಿನ ಬಿಳಿ ಕೋಟೆ ಬಗ್ಗೆ ಕೇಳಿದಾಗ ನೋಡಲೇಬೇಕೆಂಬ ತವಕ. ಜತೆಗೆ, ಜನಪ್ರಿಯ ತಾಣಗಳಿಗಿಂತ ಭಿನ್ನವಾದ ಸ್ಥಳ ನೋಡಬೇಕೆಂಬುದು ನನ್ನ ಇರಾದೆ. ಈ ಕಾರಣಗಳಿಂದಾಗಿ ಕಝಾನ್ ನೋಡಲು ಹೊರಟೇಬಿಟ್ಟೆ.

ನದಿಗಳ ಸಂಗಮದ ನಗರ

ADVERTISEMENT

ಕಝಾನಸ್ಕಾ ನದಿಯಿಂದ ತನ್ನ ಹೆಸರನ್ನು ಪಡೆದಿರುವ ಕಝಾನ್ ಯುರೋಪ್ ಖಂಡದ ಪ್ರಾಚೀನ ನಗರಗಳಲ್ಲಿ ಒಂದು. ರಷ್ಯಾದ ಎಥೆನ್ಸ್‌ ಎಂಬ ಬಿರುದನ್ನು ಪಡೆದಿರುವ ಈ ಪಟ್ಟಣವು ಇಲ್ಲಿನ ಪ್ರಸಿದ್ಧ ನದಿಗಳಾದ ಓಲ್ಗಾ ಮತ್ತು ಕಝಾನಸ್ಕಾದ ಸಂಗಮದಲ್ಲಿ ಸ್ಥಾಪನೆಯಾಗಿದೆ. ತುಂಬಿ ಹರಿಯುತ್ತಿರುವ ಈ ನದಿಗಳ ಮಧ್ಯೆ ಚಲಿಸುವ ದೋಣಿ/ಲಾಂಚ್‍ನಲ್ಲಿ ಕುಳಿತು ದೂರದ ಬಿಳಿ ಕೋಟೆಯ ಕಝಾನ್ ಅನ್ನು ನೋಡುವಾಗ ಆಗುವ ಅನುಭವ ವಿಶಿಷ್ಟವಾದದ್ದು!

ಟಟಾರಸ್ಥಾನ ರಷ್ಯಾದ ಸ್ವಾಯುತ್ತ ಕ್ಷೇತ್ರಗಳಲ್ಲಿ ಒಂದು. 1005ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಕಝಾನ್ ಟಟಾರಸ್ಥಾನದ ರಾಜಧಾನಿ. ಇದು ಮುಂಗೋಲಿಯನ್ನರ ಸಾಮ್ರಾಜ್ಯದ ಅಂಗವಾಗಿದ್ದು, ಚಂಗೇಝ ಖಾನ್‌ನ ಮೊಮ್ಮಗನ ಆಡಳಿತದಲ್ಲಿದ್ದ ಈ ಪಟ್ಟಣವನ್ನು 13ನೇ ಶತಮಾನದಲ್ಲಿ ದೊರೆ ಇವಾನ್ ದಿ ಟೆರಿಬಲ್ ತನ್ನ ವಶಕ್ಕೆ ತೆಗೆದುಕೊಂಡು ರಷ್ಯಾ ಸಾಮ್ರಾಜ್ಯದ ಭಾಗವನ್ನಾಗಿಸಿಕೊಂಡು, ಇಂದಿಗೂ ರಷ್ಯಾದ ಪ್ರಮುಖ ಪ್ರದೇಶದಲ್ಲಿ ಒಂದಾಗಿದೆ.

ಟಟಾರಸ್ಥಾನದಲ್ಲಿ ಟಟಾರ ಜನಾಂಗದವರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಟಟಾರ್ ಭಾಷೆ ಮಾತಾಡುತ್ತಾರೆ. ಇದು ಸ್ವಲ್ಪ ಅರೇಬಿಕ್ ಭಾಷೆಯನ್ನು ಹೋಲುತ್ತದೆ. ಅವರು ಮುಸ್ಲಿಂ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆಧುನಿಕ ರಷ್ಯಾದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದವರು ಒಂದೆಡೆಗೆ ಶಾಂತಿಯುತವಾಗಿ ವಾಸಿಸುತ್ತಿರುವ ಪ್ರಾಂತಗಳಲ್ಲಿ ಇದೂ ಒಂದು. ರಷ್ಯನ್ ಜನರಿಗಿಂತ ಭಿನ್ನವಾಗಿ ಕಾಣುವ ಟಟಾರ್ ಜನರು ತಮ್ಮದೇ ಆದ ಸಂಸ್ಕಾರವನ್ನು ಕಾಪಾಡಿಕೊಂಡು ಬಂದಿರುವುದು ಒಂದು ವಿಶೇಷ.

10ನೇ ಶತಮಾನದಲ್ಲಿ ನಿರ್ಮಾಣವಾದ ಬಿಳಿ ಕೋಟೆಯನ್ನು ರಷ್ಯಾದ ದೊರೆ ಸಂಪೂರ್ಣವಾಗಿ ಧ್ವಂಸಮಾಡಿದ್ದ. ಆದರೂ ಅದರ ಮೂಲ ಸ್ವರೂಪದಲ್ಲೇ ಕೋಟೆಯನ್ನು ಪಾರಂಪರಿಕ ರೀತಿಯ ಶೈಲಿಯಲ್ಲಿಯೇ ಪುನರ್ ನಿರ್ಮಾಣ ಮಾಡಲಾಗಿದೆ. ಅದು ಈಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಬಿಳಿ ಕೋಟೆಯ ಸುತ್ತ ವಿಶಾಲವಾಗಿ ಹರಡಿರುವ ಹಸಿರು ಹುಲ್ಲಿನ ಹಾಸಿಗೆ, ವಿವಿಧ ಬಣ್ಣಗಳ ಹೂವಿನ ಗಿಡಗಳಿಂದ ಅಲಂಕೃತವಾಗಿದ್ದು ಮೊದಲ ನೋಟದಲ್ಲೇ ಅಚ್ಚರಿ ಉಂಟುಮಾಡುತ್ತದೆ!

ಬಿಳಿ ಕೋಟೆಯ ಹಿಂದೆ ಎತ್ತರಕ್ಕೆ ಎದ್ದು ನಿಂತ ಬಿಳಿ-ನೀಲಿ ಬಣ್ಣದ ಕುಲ್ ಶರೀಫ್ ಮಸೀದಿಯ ದೃಶ್ಯ ಮನಮೋಹಕವಾಗಿದೆ. ನಾನು ಹೋದಾಗ ಹೊಸದಾಗಿ ಮದುವೆಯಾದ ಜೋಡಿಯೊಂದು ಬಿಳಿ ಕೋಟೆಯ ಹಿನ್ನೆಲೆಯಲ್ಲಿ, ಪಾರಂಪರಿಕ ಬಿಳಿ ಉಡುಗೆಯೊಂದಿಗೆ ‘ಫೋಟೊ ಸೆಶನ್’ ಮಾಡುತ್ತಿರುವ ದೃಶ್ಯ ಮನಮೋಹಕವಾಗಿತ್ತು.

ಹಳೆಯ– ಹೊಸ ಕಟ್ಟಡಗಳ ಸಮ್ಮಿಲನ

ನೂರಾರು ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಕಝಾನ್ ಕೋಟೆಯ ಒಳಗೆ ಹಳೆಯ ಮತ್ತು ಹೊಸ ಕಟ್ಟಡಗಳಿವೆ. ಟಟಾರಸ್ಥಾನ ಸರ್ಕಾರದ ವಿಧಾನಸೌಧ, ಪುರಾತನ ರಷ್ಯನ್ ಪರಂಪರೆಯ ಚರ್ಚ್‌ ಸಹ ಇದೆ. ಪ್ರವೇಶ ಶುಲ್ಕವಿಲ್ಲದೇ ಈ ಎಲ್ಲ ಪಾರಂಪರಿಕ ಕಟ್ಟಡಗಳಿಗೆ, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.

ಬಿಳಿ ಕೋಟೆಯ ಆವರಣದಲ್ಲಿಯೇ ತಾಸುಗಟ್ಟಲೆ ಕಳೆಯಬಹುದು. ಆದರೆ ಈ ಪುರಾತನ ಶಹರದಲ್ಲಿ ನೋಡಲು ಇನ್ನೂ ಹಲವು ವಿಶಿಷ್ಟ ಸ್ಥಳಗಳಿವೆ. 18ನೇ ಶತಮಾನದ ಟಟಾರ್ ಜನಜೀವನದ ಮರದ ಸುಂದರ ಕಟ್ಟಡಗಳು, ಮಸೀದಿಗಳು, ಮಾರುಕಟ್ಟೆಗಳ ಮನಮೋಹಕ ದೃಶ್ಯಗಳನ್ನು ನಡೆದಾಡುತ್ತಲೇ ನೋಡಬಹುದು. ನಡೆಯಲು ಸಾಧ್ಯವಾಗದವರು ಸಾರ್ವಜನಿಕ ಸಾರಿಗೆ ಮತ್ತು ಹತ್ತು ನಿಲ್ದಾಣಗಳಿರುವ ಭೂಗತ ಮೆಟ್ರೊ ರೈಲನ್ನು ಬಳಸಬಹುದು. ಒಟ್ಟಾರೆ ಕಡಿಮೆ ಖರ್ಚಿನಲ್ಲಿ ಕಝಾನ್‍ನ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು.

ಮಸೀದಿಯಲ್ಲಿ ಜೇನುತುಪ್ಪ

ಹಳೆಯ ಟಟಾರ್ ಪ್ರದೇಶದಲ್ಲಿರುವ ಮಸೀದಿಗೆ ಭೇಟಿ ನೀಡಿದ್ದೆ. ಮಸೀದಿ ಪ್ರವೇಶಿಸಿದಾಗ ಅಲ್ಲಿನ ಸ್ವಚ್ಛತೆ ಹಾಗೂ ಬಂದವರಿಗೆ ಮಾರಾಟ ಮಾಡಲು ಆಕರ್ಷವಾಗಿ ಪೇರಿಸಿಟ್ಟ ತಾಜಾ ಜೇನುತುಪ್ಪ ನನ್ನನ್ನು ಅಚ್ಚರಿಗೊಳಿಸಿತು. ‘ಮಸೀದಿಯಲ್ಲಿ ಯಾಕೆ ಜೇನುತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ’ ಎಂಬ ಕುತೂಹಲ.

ನಾನು ಉಳಿದುಕೊಂಡಿದ್ದ ಮನೆಯ ಒಡೆಯ ಇಲ್ಡಸ್ ಹೇಳಿದ್ದು ‘ಟಟಾರಸ್ಥಾನದ ಹಳ್ಳಿಗಳಲ್ಲಿ ಹಲವಾರು ಮುಸ್ಲಿಂ ಪರಿವಾರದವರು ಜೇನು ಸಾಕಣೆ ಮಾಡುತ್ತಾರೆ. ಇದು ರಷ್ಯಾದಲ್ಲಿಯೇ ಅತ್ಯುತ್ತಮ ಜೇನು. ಅದನ್ನು ಮಸೀದಿಗಳಲ್ಲಿ ಇಟ್ಟು ಮಾರಾಟ ಮಾಡುವುದು ಇಲ್ಲಿನ ಸಂಪ್ರದಾಯ’. ನಾನೂ ಮಸೀದಿಯಿಂದ ಚಿಕ್ಕ ಜೇನುತುಪ್ಪದ ಬಾಟಲಿಯನ್ನು ಖರೀದಿಸಿದೆ. ನಿಜವಾಗಿಯೂ ಉತ್ಕೃಷ್ಟ ಮತ್ತು ಅತ್ಯಂತ ರುಚಿಕರವಾಗಿತ್ತು!

ಕಝಾನ್‌ನ ಅಲ್ಲಲ್ಲಿ ಉದ್ಯಾನವನಗಳು, ಕ್ರೀಡಾಂಗಣಗಳು, ಕೇವಲ ಪ್ರವಾಸಿಗರಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ವಾಹನ ಮುಕ್ತ ರಸ್ತೆಗಳಿವೆ. ಈ ದೇಶ ಭಾರತಕ್ಕಿಂತ ತಡವಾಗಿ ತನ್ನನ್ನು ಪ್ರವಾಸಿ ಕ್ಷೇತ್ರಕ್ಕೆ ತೆರೆದುಕೊಂಡಿದೆ. ಆದರೂ ಒಂದು ತಾಣವನ್ನು ಹೇಗೆ ಮಾದರಿ ಪ್ರವಾಸಿ ಕ್ಷೇತ್ರವಾಗಿಸಬಹುದು ಎಂಬುದನ್ನು ನೋಡಲು ಈ ಕಝಾನ್‌ಗೆ ಬರಬೇಕು. ನನಗಂತೂ ರಷ್ಯಾ ಎಂದ ಕೂಡಲೇ ಕಝಾನ್‍ನ ಬಿಳಿ ಕೋಟೆಯ ನೆನಪು ಸದಾ ಕಾಡುತ್ತದೆ!

ಹೋಗುವುದು ಹೇಗೆ?

ದೆಹಲಿಯಿಂದ ರಷ್ಯಾದ ರಾಜಧಾನಿ ಮಾಸ್ಕೋಗೆ ನೇರ ವಿಮಾನ ಸೌಲಭ್ಯವಿದೆ. ಆಲ್ಲಿಂದ 800 ಕಿ.ಮೀ ದೂರದಲ್ಲಿದೆ ಕಝಾನ್‌. ಮಾಸ್ಕೊದಿಂದ ರೈಲು, ವಿಮಾನದ ಮೂಲಕ ನೇರವಾಗಿ ಕಝಾನ್ ತಲುಪಬಹುದು. ಪ್ರವಾಸಿಗರು ಇಲ್ಲಿ ರೈಲು ಪ್ರವಾಸ ಆಯ್ಕೆ ಮಾಡಿಕೊಂಡರೆ, ವಿಶಿಷ್ಟ ಅನುಭವ ಪಡೆಯಬಹುದು.

ಊಟ–ವಸತಿ

ಕಝಾನ್‌ ತಲುಪಿದ ನಂತರ ಉಳಿದುಕೊಳ್ಳಲು ಸ್ಟಾರ್‌ ಹೋಟೆಲ್‌ಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಏಕೆಂದರೆ, ಸುಲಭ ಹಾಗೂ ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲಿ ಶುಚಿಯಾದ ಹೋಟೆಲ್‌ಗಳು ಮತ್ತು ಹಾಸ್ಟೆಲ್‌ಗಳು ಸಾಕಷ್ಟು ಸಿಗುತ್ತವೆ.

ಟಟಾರ್‌ ಖಾದ್ಯ ಸೇವಿಸಿ

ಇಲ್ಲಿ ಎರಡು ಭಾರತೀಯ ರೆಸ್ಟೊರೆಂಟ್‌ಗಳಿವೆ. ಇದೆ. ಆದರೆ ಟಟಾರ್ ಖಾದ್ಯವನ್ನು ಕಝಾನ್‌ನಲ್ಲಿ ಸವಿಯುವುದನ್ನು ಮರೆಯಬೇಡಿ. ಅದರಲ್ಲಿಯೂ ಜೇನುತುಪ್ಪದಿಂದ ಮಾಡಿದ ’ಚಾಕ್-ಚಾಕ್’ ಎಂಬ ಸಿಹಿ ತಿಂದರೆ, ಖಂಡಿತಾ ನೀವು ಆ ತಿನಿಸಿಗೆ ಮರಳಾಗುತ್ಥೀರಿ.

ಕಝಾನ್‌ ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ತಲುಪಲು ಸಾರ್ವಜನಿಕ ಸಾರಿಗೆ, ಬಸ್, ಮೆಟ್ರೊ ಬಳಸಿ. ನಡಿಗೆಯಲ್ಲೇ ನಗರ ನೋಡುವುದು ಉತ್ತಮ. ಇದರಿಂದ ಪುರಾತನ ಪಟ್ಟಣ ಸುಲಭವಾಗಿ ಪರಿಚಯವಾಗುತ್ತದೆ.

ಚಿತ್ರಗಳು: ಲೇಖಕರವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.