ADVERTISEMENT

ಚಾರಣಿಗರ ನೆಚ್ಚಿನ ತಾಣ ಶಿವಾಜಿ ಮಹಾರಾಜರ ರಾಜಗಡ ಕೋಟೆಗೆ ಶೀಘ್ರದಲ್ಲೇ ರೋಪ್‌ವೇ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2021, 5:57 IST
Last Updated 13 ಜೂನ್ 2021, 5:57 IST
ರಾಜಗಡ ಕೋಟೆ
ರಾಜಗಡ ಕೋಟೆ   

ಮುಂಬೈ: ಮರಾಠ ಸಾಮ್ರಾಜ್ಯದ ಮಹಾರಾಜ ಛತ್ರಪತಿ ಶಿವಾಜಿ ಅವರ ಇತಿಹಾಸ ಪ್ರಸಿದ್ಧ ರಾಜಗಡ ಕೋಟೆಗೆ ಶೀಘ್ರದಲ್ಲೇ ರೋಪ್‌ವೇ ನಿರ್ಮಾಣಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪುಣೆಯಲ್ಲಿರುವ ಕೋಟೆಗೆ ರೋಪ್‌ವೇ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಲೋನಾವಾಲ ಪರ್ವತ ಪ್ರದೇಶದ ಸಮೀಪ ಕರ್ಲಾ ಎಂಬಲ್ಲಿರುವ ಶ್ರೀ ಏಕವೀರ ದೇವಿ ದೇವಸ್ಥಾನದಿಂದ ರೋಪ್‌ವೇ ಅಥವಾ ಫ್ಯೂನಿಕ್ಯುಲರ್‌ ರೈಲ್ವೆ ನಿರ್ಮಾಣಗೊಳ್ಳಲಿದೆ. ಈ ಕುರಿತು ಪ್ರವಾಸೋದ್ಯಮ ಸಚಿವಾಲಯವು ಇಂಡಿಯನ್‌ ಪೋರ್ಟ್‌ ರೈಲ್‌ & ರೋಪ್‌ವೇ ಕಾರ್ಪೊರೇಷನ್‌ ಲಿಮಿಟೆಡ್‌(ಐಪಿಆರ್‌ಸಿಎಲ್‌) ಜೊತೆ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.

ಪುಣೆಯಿಂದ 50 ಕಿ.ಮೀ. ದೂರದಲ್ಲಿರುವ ರಾಜಗಡ ಕೋಟೆಯು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ, ಸುಮಾರು 4,514 ಅಡಿ ಎತ್ತರದಲ್ಲಿರುವ ಮುರುಂಬ್‌ ದೇವಖ ಡೊಂಗರ್‌ ಎಂಬಲ್ಲಿದೆ.

ADVERTISEMENT

ರಾಜಗಡ ಕೋಟೆಯು ಚಾರಣ ಪ್ರೇಮಿಗಳ ಅತ್ಯಂತ ಅಚ್ಚುಮೆಚ್ಚಿನ ಸ್ಥಳವಾಗಿದ್ದು, ಇದೀಗ ಸಾಧಾರಣ ಪ್ರವಾಸಿಗರು ರೋಪ್‌ವೇ ಮೂಲಕ ಭೇಟಿ ನೀಡುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಖ್ಯವಾಗಿ ನೂತನ ರೋಪ್‌ವೇ ವ್ಯವಸ್ಥೆಯನ್ನು ಖಾಸಗಿ ಕಂಪನಿ ನಿಭಾಯಿಸಲಿದೆ.

ಶಿವಾಜಿ ಮಹಾರಾಜರು ಜೀವಿಸಿದ ರಾಜಗಡ ಕೋಟೆಯು ಮರಾಠರ ಕಾಲದ ಪ್ರಮುಖ ಕೋಟೆಯಾಗಿದೆ. ರಾಯ್‌ಗಡ ಕೋಟೆಗೆ ಮರಾಠರ ರಾಜಧಾನಿ ಸ್ಥಳಾಂತರಗೊಳ್ಳುವ ಮೊದಲು ಮರಾಠ ಸಮ್ರಾಜ್ಯದ ರಾಜಧಾನಿಯಾಗಿತ್ತು.

ಈಗಾಗಲೇ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಸಪ್ತಶೃಂಗಿ ದೇವಿ ಮಂದಿರ ಮತ್ತು ಪಾಲ್‌ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಜೀವದಾನಿ ಮಠ ದೇವಸ್ಥಾನದಲ್ಲಿ ಫ್ಯೂನಿಕ್ಯುಲರ್‌ ರೈಲ್ವೆ ವ್ಯವಸ್ಥೆ ಚಾಲ್ತಿಯಲ್ಲಿದೆ. ಥಾಣೆಯ ಕಲ್ಯಾಣ್‌ನಲ್ಲಿರುವ ಹಾಜಿ ಮಲಂಗ್‌ ಪುಣ್ಯಕ್ಷೇತ್ರಕ್ಕೂ ಫ್ಯೂನಿಕ್ಯುಲರ್‌ ರೈಲ್ವೆ ವ್ಯವಸ್ಥೆ ಬರಲಿದೆ.

ರೋಪ್‌ವೇ ನಿರ್ಮಾಣದಿಂದ ಪರಿಸರದ ಮೇಲೆ ಹಾನಿಯಾಗಲಿದೆ. ರೋಪ್‌ವೇ ಸಹಾಯದಿಂದ ಎಲ್ಲರೂ ಕೋಟೆಗೆ ಭೇಟಿ ನೀಡುವಂತಾದರೆ ಜನದಟ್ಟಣೆಯಿಂದ ಕಾಡಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂಬ ಪರಿಸರ ಮತ್ತು ಪ್ರಾಣಿ ಪ್ರಿಯರ ಅಳಲು ಅರಣ್ಯರೋಧನವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.